ಸದಸ್ಯ:122.179.88.249/sandbox
ಓ ಮಧುರ ಬಾಲ್ಯ ನೀ ಮರಳಿ ಬರುವೆಯ ಹುಟ್ಟು ಸಾವುಗಳೆಂಬ ಬಾಳಿನ ಎರಡು ದಡಗಳ ನಡುವೆ ಹರಿಯುವ ನೀರಿನಲ್ಲಿ ಈಜಾಡುತ್ತಿರುವವರು ಮನುಜರು, ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ಸಹಜ ಎಂಬ ಕಟುಸತ್ಯವನ್ನು ನಾವು ತಿಳಿದರೆ ಆದರೂ ನಮ್ಮ ಬದುಕಿನಲ್ಲಿ ನಾವು ತಲುಪುವ ಘಟ್ಟಗಳು ನಮ್ಮಲ್ಲಿ ಮಹತ್ತರ ಬದಲಾವಣೆ ತರುತ್ತದೆ. ಅದರಲ್ಲಿ ಬಾಲ್ಯ ಜೀವನ ಎಲ್ಲರ ಮನದಲ್ಲಿ ಸಂತಸ ನೀಡುವ ಚೇತೋಹಾರಿ ಚಿಲುಮೆ. ಸ್ವಚ್ಛ ಮನಸಿನ ಸಮಸ್ಯೆ ಇಲ್ಲದ ಮುಗ್ಧ ಸುಮನಸಿನ ಜೀವನ. ವಯಸ್ಸಾದಂತೆ ಎಲ್ಲರಿಗೂ ಮಧುರ ಬಾಲ್ಯದ ನೆನಪುಗಳು ಹ್ರುದಯಾಂತರಾಳದಿಂದ ಹಾಡುತ್ತಿರುತ್ತವೆ. ಎಷ್ಟೊಂದು ಸುಂದರ ಆ ದಿನಗಳು, ಸಮಸ್ಯೆ ಏನೆಂಬುದೇ ಗೊತ್ತಿಲ್ಲ, ನೋವು ನಲಿವಿನ ಅರಿವಿಲ್ಲ, ಬಡವ ಬಲ್ಲಿದ, ಶ್ರೀಮಂತ ಎಂಬ ಬೇಧ ಭಾವ ಇಲ್ಲ, ಪರಿಶುದ್ಧ ಬಟ್ಟೆಯೇ ಬೇಕಾಗಿಲ್ಲ, ತಾರತಮ್ಯ, ದ್ವೇಷ, ಕಿಚ್ಚು, ಯಾವುದೂ ಇಲ್ಲದ ಸ್ಪುಟ ಮನಸ್ಸು ನಮ್ಮದಾಗಿರುವ ಸಮಯವೇ ಇದು. ಹೊಟ್ಟೆ ತುಂಬಾ ಊಟ, ಮಣ್ಣಿನಲ್ಲಿ ಆಟ, ಕೆರೆ, ನದಿಯಲ್ಲಿ ಈಜಾಟ, ಸ್ನೇಹಿತರ ಜಂಜಾಟ, ಅಮ್ಮನಲ್ಲಿ ಹಠ, ಮೇಷ್ಟ್ರ ಪಾಠ, ಪರೀಕ್ಷೆಯ ಕಾಟ, ಎಷ್ಟೊಂದು ಮಧುರ ಆ ಜೀವನ. ಬೆಳಗಾಗುತ್ತಿದ್ದಂತೆ ಎದ್ದು ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ ಹುಮ್ಮಸ್ಸು, ಸಂಜೆ ಮಣ್ಣಿನೊಂದಿಗೆ ಹೊರಳಾಡಿ ಬರುವ ಪರಿಪಾಠ, ಅಮ್ಮನ ಬೈಗುಳ, ಅಪ್ಪನ ಏಟು, ಅಜ್ಜ-ಅಜ್ಜಿಯರ ಮಧ್ಯಪ್ರವೇಶ ನೆನಪಿಸಿದಾಗ ಕಣ್ಣು ತೇವವಾಗುತ್ತಿವೆ. ಅದರಲ್ಲೂ ಊರಿನ ಜಾತ್ರೆಗೆ ಒಂದು ತಿಂಗಳ ಮುಂಚೆಯೇ ತಯಾರಿ, ಜಾತ್ರೆ ಬಂತೆಂದರೆ ಅದೇನೋ ಉಲ್ಲಾಸ, ಅದೇನೋ ಉತ್ಸಾಹ, ಲವಲವಿಕೆ, ಸಂತೆಯಲ್ಲಿ ಹಗ್ಗ-ಮಗ್ಗದ ವಸ್ತುಗಳ ಖರೀದಿ, ತಂಟೆ, ಕೀಟಲೆಗಳು, ಸವಾರಿಗಳು ಎಷ್ಟೊಂದು ಅವಿಸ್ಮರಣೀಯ. ಹುಂಡಿಯಲ್ಲಿ ಚಿಲ್ಲರೆ ಹಣ ಕೂಡಿಡುವ ಪ್ರವ್ರುತ್ತಿ, ಸಿಹಿತಿಂಡಿಗಾಗಿ ತವಕ ಈಗ ಎಲ್ಲಾ ಮರೀಚಿಕೆಯಾದಂತಿದೆ. ಆ ದಿನಗಳಲ್ಲಿ ಟಿ.ವಿ, ಮೊಬೈಲ್ ಗಳ ಅಗತ್ಯ ನಮಗಿರಲಿಲ್ಲ. ಬದುಕಿನಲ್ಲಿ ಧ್ಯೇಯ, ಗುರಿ, ಚಿಂತನೆಯ ಅರಿವೆಯಿಲ್ಲ. ಎಲ್ಲೆಂದರಲ್ಲಿ ಓಡಾಡುವ ಹುಚ್ಚು ಮನಸ್ಸು, ಪೆಚ್ಚು ಬುದ್ಧಿ, ಕಾಲಕಳೆದಂತೆ ಎಲ್ಲಾ ಮಾಯವಾಗಿ ಹೋಯಿತು. ಅಜ್ಜಿಮನೆಯಲ್ಲಿ ಬೆಸುಗೆ ರಜೆಯ ಸಂಭ್ರಮ, ಅಜ್ಜ-ಅಜ್ಜಿಯರ ತುಟುಕು ಕಥೆ, ಮಮತೆ ಎಲ್ಲವೂ ಇಂದು ನೆನಪಾಗಿ ಹೋಯಿತು. ಸಂಬಂಧಗಳ ಮಹತ್ವ : ಮಾಮ-ಮಾಮಿಗಳು, ಚಿಕ್ಕಪ್ಪ-ದೊಡ್ಡಪ್ಪರ ಆಗಮನಕ್ಕಾಗಿ ಕಾಯುವ ಮನಸ್ಸು, ನನ್ನದು-ನಿನ್ನದು ಎಂದು ಬೇಧವಿಲ್ಲದ ನಾಳೆ ಎಂಬುದರ ಅರಿವೆ ಇಲ್ಲದ ಮನಸ್ಸು ಕಾಲ ಕಳೆದಂತೆ ಕಲ್ಲಾಗುತ್ತಾ ಬಂತು. ಅದರಲ್ಲೂ ದೀಪಾವಳಿ ಬಂತೆಂದರೆ ಸಡಗರವೇ ಬೇರೆ. ಗದ್ದೆಯಲ್ಲಿ ಪೂಜೆ, ಗೋವುಗಳ ಪೂಜೆ, ಪಟಾಕಿಗಳ ಸಂಭ್ರಮ, ನೆಂಟರ ಆಗಮನ, ಪಟಾಕಿಗಾಗಿ ಕೂಡಿಡುವ ಪುಡಿಕಾಸು, ಸವಿಯುವ ದೀಪಾವಳಿಯ ಸಿಹಿ ತಿನಿಸು ಎಷ್ಟೊಂದು ಮನಸೋಲ್ಲಾಸ ನೀಡುತ್ತವೆ. ಈಗ ಇದು ಯಾವುದರ ಆನಂದ ನಮಗಿಲ್ಲ. ಎಂದು ರಜೆ ಸಿಗುತ್ತದೋ ಎಂದು ಕಾಯುವ ಮುಗ್ಢ ಮನಸ್ಸುಗಳು, ಶಾಲೆಯ ವಾರ್ಷಿಕೋತ್ಸವದ ಸಂಭ್ರಮ, ಹೊಸಬಟ್ಟಯ ರಾಜಠೀವಿ, ಬಹುಮಾನದ ಹೆಮ್ಮೆ, ಬಸ್ಸಿನಲ್ಲಿ ಕಿಟಕಿ ಬದಿಯ ಸೀಟಿಗಾಗಿ ತವಕಿಸುವ ಮನಸ್ಸು, ಡ್ರೈವರ್ ಕಂಡಕ್ಟರ್ ಆಗಬೇಕೆಂಬ ಕನಸು ಚೆಂಡು-ದಾಂಡು ಆಟ, ಸ್ನೇಹಿತರೊಂದಿಗೆ ಒಡೆದಾಟ ಎಲ್ಲವೂ ಈಗ ತಡೆಯಾಗಿ ಹೋಯಿತು ಇಂದಿಗೆ. ಕಾಲ ಕಳೆದಂತೆ ಮುಖದಲ್ಲಿ ಮೀಸೆ ಚಿಗುರಿದಂತೆ ನಮ್ಮ ದ್ರಷ್ಟಿಕೋನ ವೈಚಾರಿಕತೆ ಎಲ್ಲವೂ ಬದಲಾಗುತ್ತಾ ಹೋಯಿತಲ್ಲ. ಹುಚ್ಚು ಪ್ರೀತಿಗಾಗಿ ತವಕಿಸುವ ಪೆಚ್ಚು ಮನಸ್ಸು, ಸಿನೆಮಾ, ನ್ರತ್ಯಗಳತ್ತ ಆಕರ್ಷಿಸುವ ವಯಸ್ಸು, ಸಂಬಂಧಗಳಿಗೆ ಬೆಲೆ ಕೊಡಲು ಸಮಯವಿಲ್ಲದ ಮನಸ್ಸು ನಮ್ಮದಾಗುತ್ತಾ ಬಂತು. ನಾನು ಬದಲಾಗುತ್ತಿದೇನೋ, ಪ್ರಪಂಚ ಬದಲಾಗುತ್ತಿದೆಯೋ, ಕಾಲಕಳೆದಂತೆ ಎಷ್ಟೋ ಬದಲಾಗುತ್ತಾ ಬಂದೆ ನಾನು. ಬದುಕಿನ ಪುಟದಲ್ಲಿ ಇದ್ದ ಆ ಮಧುರ ಬಾಲ್ಯ ಮರಳಿ ಬರುವ ಹಾಗಿದ್ದರೆ ಎಷ್ಟು ಸೊಗಸಲ್ಲವೇ? ಅರಿವಿರದ ಕತ್ತಲೆಯ ಬದುಕಿಗಿಂತ ನೂರ್ಮಡಿ ಲೇಸು ಎಂದು ಮನಸ್ಸು ತವಕಿಸುತ್ತಿದೆ. ಓ ದೇವರೆ ಮರಳಿ ಕರುಣಿಸುವೆಯಾ ಆ ಮಧುರ ಬಾಲ್ಯವ ಎನಗೆ. ವಿದ್ಯಾಧಿದೇವತೆಯ ಅಮಲಾಭರಣದಂತಿರುವ ಚಿಂತನ ಚೇತನ ಶಿಖರಪ್ರಾಯದಂತಿರುವ ಪ್ರಾಥಮಿಕ ಶಾಲೆಯ ದಿನವ ಎನಗೆ ಸಮಯವಿಲ್ಲದ ಬದುಕು, ಪ್ರೀತಿ, ಮಮಕಾರವಿಲ್ಲದ ಬದುಕು, ದುಡ್ಡಿಗಾಗಿ ಪರಿತಪಿಸುವ ಜನರ ಬದಲು ಮುಗ್ಧ ಮನಸ್ಸಿನ ಬಾಲ್ಯ ಮರಳಿ ನೀಡುತ್ತಿದ್ದರೆ ಎಷ್ಟೊಂದು ಸುಂದರ ಸುಮಧುರ ಮನಸ್ಸಿನ ಬದುಕು ಪಡೆಯಬಹುದಲ್ಲವೆ? ಓ ದೇವರೆ ಕೊಡುವುದಾದರೆ ಕೊಟ್ಟು ಬಿಡು, ಪರಿತಪಿಸುತ್ತಿವೆ ಹ್ರದಯ ಆ ಸ್ವಚ್ಚಂದ ಬದುಕಿಗಾಗಿ, ನಾನು ನನ್ನದು ಎಂದು ಹೇಳದ ಬದುಕಿಗಾಗಿ. ಓ ಮಧುರ ಬಾಲ್ಯವೇ ನಿನಗಾಗಿ ಕಾಯುತ್ತಿದೆ ಮತ್ತೊಮ್ಮೆ ಮರಳಿ ಬಾ ನನ್ನ ಜೀವನದಲ್ಲಿ ನಿನಗಾಗಿ ಕಾಯುತ್ತಿರುವೆ ನಾನು ಹಗಲು-ಇರುಳು.