ಸದಸ್ಯ:ಅಂಕುಶ್.ಬಿ/sandbox

ಕುಂಜಾರುಗಿರಿ

ಕುಂಜಾರಿನ ಗಿರಿದುರ್ಗೆ

ಬದಲಾಯಿಸಿ

ಶ್ರೀ ಕೃಷ್ಣನ ಕ್ಷೇತ್ರವಾದ ಉಡುಪಿಯಿಂದ ಆಗ್ನೇಯ ದಿಕ್ಕಿನಲ್ಲಿ , ಸುಮಾರು ಆರೇಳು ಮೈಲಿ (ಹನ್ನೊಂದು ಕಿಲೋ ಮೀಟರ್) ದೂರದಲ್ಲಿರುವ `ಕುಂಜಾರು’ ಕುರ್ಕಾಲು ಗ್ರಾಮಕ್ಕೆ ಸೇರಿದ ಒಂದು ಪುಟ್ಟ ಹಳ್ಳಿ. ಕುಂಜಾರಿನ ಬೆಟ್ಟದಲ್ಲಿ ನೆಲೆಸಿರುವ ಶ್ರೀ ದುರ್ಗಾದೇವಿಯ ಸನ್ನಿಧಾನದಿಂದಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಅದು ಒಂದು ವಿಶಿಷ್ಟ ಸ್ಥಾನವೆನಿಸಿದೆ.

ಇಲ್ಲಿರುವ ಎತ್ತರದ ಬೆಟ್ಟವು ದೂರದಿಂದ “ಕುಂಜರ” ದಂತೆ (ಆನೆಯಂತೆ) ಕಾಣುವುದರಿಂದ“ಕುಂಜರಗಿರಿ” ಅಥವಾ “ಕುಂಜಾರುಗಿರಿ” ಎಂಬ ಹೆಸರು ಬಂತೆಂದು ಐತಿಹ್ಯವಿದೆ.

ಪರಶುರಾಮ ದೇವರಿಂದ ಇಲ್ಲಿ ಶ್ರೀ ದುರ್ಗೆಯು ಪ್ರತಿಷ್ಠೆಯಾದಾಗ ದೇವತೆಗಳು ವಿಮಾನವನ್ನೇರಿ ಬಂದು ಹೂ ಮಳೆಗರೆದುದರಿಂದ ”ವಿಮಾನಗಿರಿ” ಎಂಬ ಹೆಸರೂ ಬಂದಿದೆ.

ಯೋಗಮಾಯ ರೂಪ

ಬದಲಾಯಿಸಿ

ಪ್ರಕೃತಿಯ ತಮೋಗುಣವನ್ನು ನಿಯಂತ್ರಿಸುವ ಲಕ್ಷ್ಮೀದೇವಿಯ ರೂಪವೇ `ದುರ್ಗಾ’ ಭಗವಂತನು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿದಾಗ ದುರ್ಗಾದೇವಿ ಭಗವಂತನ ಆದೇಶಾನುಸಾರವಾಗಿ `ಯೋಗಮಾಯಾ’ ಎಂಬ ರೂಪವನ್ನು ತಾಳಿದ್ದಳು. ದೇವಕಿಯ ಗರ್ಭದಲ್ಲಿ ಮೂರುತಿಂಗಳು ಇದ್ದ ಶೇಷನನ್ನು ರೋಹಿಣಿಯ ಗರ್ಭಕ್ಕೆ ವರ್ಗಾಯಿಸಿದ್ದ ಯೋಗ ಮಾಯೆ, ಭಗವಂತನು ದೇವಕಿಯಲ್ಲಿ ಕೃಷ್ಣನಾಗಿ ಅವತರಿಸಲು ನಂದಗೋಪನ ಪತ್ನಿ ಯಶೋದೆಯಲ್ಲಿ ದುರ್ಗಿಯಾಗಿ ತಾನೂ ಅವತರಿಸಿದ್ದಳು. ವಸುದೇವನು ಬಾಲಕೃಷ್ಣನನ್ನು ಕಾರಾಗೃಹದಿಂದ ನಂದವ್ರಜಕ್ಕೆ ಕೊಂಡೊಯ್ಯಲು ತೊಡಗಿದಾಗ ಕಂಸನ ಕಾವಲುಗಾರರೆಲ್ಲ ನಿದ್ರೆಗೊಳಗಾಗುವಂತೆ ಮಾಡಿದ್ದ ಯೋಗಮಾಯೆ ನಂದವ್ರಜದಿಂದ ದೇವಕಿಯಲ್ಲಿಗೆ ವಸುದೇವನಿಂದ ತರಲ್ಪಟ್ಟವಳಾಗಿ ಅದುವರೆಗೆ ನಿದ್ರೆಗೊಳಗಾಗಿದ್ದ ಕಂಸನ ಭೃತ್ಯರೆಲ್ಲ ಎಚ್ಚೆತ್ತುಕೊಳ್ಳುವಂತೆ ಧ್ವನಿ ಮಾಡಿದ್ದಳು. ನಿರ್ದಯನಾದ ಕಂಸ ಅವಳನ್ನು ಶಿಲೆಯ ಮೇಲೆ ಅಪ್ಪಳಿಸಬೇಕೆಂದಾಗ, ಅವನ ಕೈಯಿಂದ ತಪ್ಪಿಸಿಕೊಂಡು ಆಗಸದ ಮೇಲೆ ಏರಿದ್ದಳು. ಅಷ್ಟಭುಜಗಳ ಅಲೌಕಿಕ ರೂಪಧಾರಿಣಿಯಾಗಿ ಕಂಸನ ಶತ್ರು ಬೇರೊಂದೆಡೆ ಬೆಳೆಯುತ್ತಿದ್ದಾನೆಂದು ಎಚ್ಚರಿಸಿ ಅದೃಶ್ಯಳಾಗಿದ್ದಳು. ಮರೀಚಿಯ ಆರು ಮಕ್ಕಳು ದೇವಲರ ಶಾಪಕ್ಕೊಳಗಾಗಿ ಅಸುರಜನ್ಮವನ್ನು ಹೊಂದಿದವರಾಗಿ, ಚತುರ್ಮುಖನ ವರ ಹಾಗೂ ಹಿರಣ್ಯಕಶಿಪುವಿನ ಶಾಪಗಳಿಗನುಗುಣವಾಗಿ ಹತ್ತತ್ತು ತಿಂಗಳು ದೇವಕಿಯ ಗರ್ಭದಲ್ಲಿ ಬೆಳೆದು, ಕಂಸನಿಂದ ಕೊಲ್ಲಲ್ಪಟ್ಟವರಾಗಿ ಪುನಃ ಸುತಲದಲ್ಲಿ ಸುರಕ್ಷಿತವಾಗಿರಿಸಲ್ಪಟ್ಟಿದ್ದ ತಮ್ಮ ತಮ್ಮ ಹಿಂದಿನ ದೇಹದಲ್ಲಿ ಸೇರಿಕೊಳ್ಳುವಂತೆ ಮಾಡುವಲ್ಲಿಯೂ ಯೋಗಮಾಯೆ ತನ್ನ ಮಾಯೆಯನ್ನು ಮೆರೆದಳು.

ಹೀಗೆ ಕೃಷ್ಣಾವತಾರದ ಸಂದರ್ಭದಲ್ಲಿ ಶ್ರೀಕೃಷ್ಣನ ಅನುಜೆಯಾಗಿ ಅವನ ದುಷ್ಟಸಂಹಾರ ಹಾಗೂ ಶಿಷ್ಟಪರಿಪಾಲನ ಕಾರ್ಯಗಳಲ್ಲಿ ಸಹಭಾಗಿಯಾದ `ಯೋಗಮಾಯೆ’ ಯೇ ಕುಂಜಾರುಬೆಟ್ಟದ ದುರ್ಗಾಲಯದಲ್ಲಿ ವಿರಾಜಿಸುತ್ತಿರುವಳು. ಈ ಬಗ್ಗೆ ಗ್ರಾಂಥಿಕ ಉಲ್ಲೇಖ ದೊರಕುವುದಿಲ್ಲವಾದರೂ ಪ್ರಬಲವಾದ ಐತಿಹ್ಯ ಇದೆ.

ಪ್ರತಿಮೆಯ ಸಂಕೇತ=

ಬದಲಾಯಿಸಿ

ಕುಂಜಾರುಗಿರಿಯ ದುರ್ಗಾಲಯದಲ್ಲಿ ವಿರಾಜಮಾನಳಾದ ಯೋಗಮಾಯಾರೂಪದ ದುರ್ಗಾದೇವಿ ನಿಂತಿರುವ ಭಂಗಿಯ ಪ್ರತಿಮೆಯಲ್ಲಿ ಸನ್ನಿಹಿತಳಾಗಿದ್ದು, ‘ಶಿಷ್ಟರಿಗೆ ತೊಂದರೆ ಕೊಡುವ ದುಷ್ಟರನ್ನು ಸಂಹರಿಸಿ, ಶಿಷ್ಟರ ಇಷ್ಟಗಳನ್ನು ಪೂರೈಸುವುದರಲ್ಲಿ ತಾನು ಸದಾ ಸಿದ್ಧಳು’- ಎಂದು ಸಾರುತ್ತಿರುವಂತೆ ಕಾಣಿಸುವಳು. ಮೇಲಿನ ಎರಡು ಕೈಗಳಲ್ಲಿ ಧರಿಸಿರುವ ಶಂಖಚಕ್ರಗಳು ಶಿಷ್ಟರ ಇಷ್ಟಗಳ ಪೂರೈಕೆಯ ಸಂಕೇತವಾಗಿದ್ದರೆ, ಕೆಳಗಿನ ಎರಡೂ ಕೈಗಳಲ್ಲಿ ಧರಿಸಿರುವ ಬಿಲ್ಲು ಹಾಗೂ ತ್ರಿಶೂಲಗಳು ದುಷ್ಟ ಸಂಹಾರದ ಸಂಕೇತವಾಗಿದೆ. ಪಾದದಡಿಯಲ್ಲಿ ಬಿದ್ದಿರುವ ಮಹಿಷಾಸುರನ ಪ್ರತಿಮೆ ಇದಕ್ಕೆ ಪುಷ್ಟಿ ನೀಡುತ್ತದೆ. ಕೊಂಬುಗಳನ್ನು ಹೊಂದಿರುವ ಮಹಿಷಾಸುರ ಅಹಂಕಾರಕ್ಕೂ ಸಂಕೇತವೆನಿಸುತ್ತಿದ್ದು, ತಮೋಗುಣದ ಪರಿಣಾಮವಾಗಿ ಭಕ್ತರಲ್ಲೂ ಆಗಾಗ್ಗೆ ತಲೆದೋರಬಹುದಾದ ಅಹಂಕಾರವನ್ನು ಹತ್ತಿಕ್ಕಿ, ಭಕ್ತಿ, ಜ್ಞಾನಾದಿಗಳು ಸಮೃದ್ಧವಾಗುವಂತೆ ಮಾಡುವಲ್ಲಿಯೂ ಆಕೆಯ ಪಾತ್ರವನ್ನು ಆ ಭಂಗಿ ಸೂಚಿಸುತ್ತದೆ. ಸೌಮ್ಯಭಾವದ ಮುಖದ ಕಳೆ ಅಸುರನ ಸಂಹಾರದ ಸಂದರ್ಭದಲ್ಲೂ ಕ್ರೋಧಕ್ಕೆ ಒಳಗಾಗದ ದೇವಿಯ ಪ್ರಕೃತ್ಯತೀತವಾದ ವ್ಯಕ್ತಿತ್ವವನ್ನು ಸಾರುತ್ತಿದೆ.

ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖ

ಬದಲಾಯಿಸಿ

ಕುಂಜಾರುಗಿರಿಯ ಹಾಗೂ ಅದರಲ್ಲಿ ನೆಲೆಸಿರುವ ದುರ್ಗಾದೇವಿಯ ಉಲ್ಲೇಖ ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿರುವ ’ಸುಮಧ್ವವಿಜಯ’ದಲ್ಲಿಯೂ, ಶ್ರೀ ವಾದಿರಾಜ ತೀರ್ಥರು ನಿರ್ಮಿಸಿರುವ ’ತೀರ್ಥಪ್ರಬಂಧ’ ದಲ್ಲಿಯೂ ಬಂದಿದೆ. ಸುಮಧ್ವಯ ವಿಜಯದಲ್ಲಿ (೨-೧೧) ಶ್ರೀ ಮಧ್ವಾಚಾರ್ಯರ ಅವತಾರ ಭೂಮಿಯಾದ ಪಾಜಕಕ್ಷೇತ್ರದ ವೈಶಿಷ್ಟ್ಯವನ್ನು ತಿಳಿಸುತ್ತ - ’ವಿಮಾನಗಿರಿ’ ಎನಿಸುವ ದುರ್ಗಾಬೆಟ್ಟದಿಂದ ಶೋಭಿಸುತ್ತಿರುವಂತಹದ್ದು ಪಾಜಕ, ’ವಿಮಾನಗಿರಿ’ಯಾದರೂ ಶ್ರೀ ಕೃಷ್ಣನ ತಂಗಿಯಾದ ದುರ್ಗೆ ಎಂಬ ಶಿರೋನಾಮೆಯಿಂದ ವಿರಾಜಿಸುತ್ತಿದೆ. ಶ್ರೀ ಪರಶುರಾಮನೇ ದುರ್ಗೆಯನ್ನು ದುರ್ಗಾಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವನು ಎಂಬುದಾಗಿ ನಿರೂಪಿಸಲಾಗಿದೆ. ತೀರ್ಥ ಪ್ರಬಂಧದಲ್ಲಿ (ಪಶ್ಚಿಮ ಪ್ರಬಂಧ -೧೭..೨೦) ದುರ್ಗಾಬೆಟ್ಟದ ಪಕ್ಕದಲ್ಲಿಯೇ ಇರುವ ಪಾಜಕದಲ್ಲಿ ಅವತರಿಸಿರುವ ಶ್ರೀ ಮಧ್ವಾಚಾರ್ಯರು ದುರ್ಗಾದೇವಿಯ ಸಾಕ್ಷಾತ್‌ಪುತ್ರರಾಗಿದ್ದು, ಅಂತಹ ಪುತ್ರನ ಮೇಲಿನ ಪ್ರೀತಿಯಿಂದಲೋ ಎಂಬಂತೆ ದುರ್ಗಾಬೆಟ್ಟದಲ್ಲಿ ದುರ್ಗಾದೇವಿ ಸದಾ ಸನ್ನಿಹಿತಳಾಗಿರುವಳೆಂದು ತಿಳಿಸಲಾಗಿದೆ. ಅಲ್ಲದೆ, ತ್ರಿಶೂಲ ಧಾರಿಣಿಯಾದ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿರುವಳು; ಸಜ್ಜನರಿಗೆ ಅವರವರ ಯೋಗ್ಯತಾನುಸಾರವಾಗಿ ಸ್ವರ್ಗ, ಮೋಕ್ಷ ಮುಂತಾದವುಗಳನ್ನು ಅನುಗ್ರಹಿಸುವವಳೆಂದು ಸ್ತುತಿಸಲಾಗಿದೆ. ದುರ್ಗಾದೇವಿಯು ಚತುರ್ಮುಖನೇ ಮುಂತಾದ ದೇವತೆಗಳಿಂದಲೂ ಸಮಗ್ರವಾಗಿ ತಿಳಿಯಲ್ಪಡದವಳು. ದುರ್ಜನರಿಗೆ ದುಃಖವನ್ನು ನೀಡುವವಳು. ದುರ್ಜನರಿಂದ ಹೊಂದಲು ಅಸಾಧ್ಯಳಾದವಳು. ಸಜ್ಜನರಿಗೆ ಅಭಯದಾತೆಯಾಗಿರುವವಳು. ನಿಯಾಮಕಳಾಗಿ ಎಲ್ಲರ ಹೃದಯಗುಹೆಯಲ್ಲಿ ನೆಲೆಸಿರುವವಳು. ಈ ಎಲ್ಲ ಕಾರಣಗಳಿಂದಾಗಿ `ದುರ್ಗಾ’-ಎಂದು ಅನ್ವರ್ಥಕವಾಗಿ ಕರೆಸಿಕೊಳ್ಪಲ್ಪಡುವವಳು ನೀನು – ಎಂಬುದಾಗಿ ದುರ್ಗಾದೇವಿಯನ್ನು ಸಂಬೋಧಿಸಿ ನಿವೇದಿಸಿಕೊಳ್ಳಲಾಗಿದೆ.

ಪರಶುರಾಮನಿಂದ ಪ್ರತಿಷ್ಠೆ

ಬದಲಾಯಿಸಿ

ಸಾಮಾನ್ಯವಾಗಿ ವ್ಯಕ್ತಿಗಳು ತಮಗಿಂತ ಶ್ರೇಷ್ಠರಾದ ದೇವತೆಗಳ ಪ್ರತಿಷ್ಠೆಯನ್ನು ಮಾಡುವರು. ಈ ಸಾಮಾನ್ಯ ನಿಯಮಕ್ಕೆ ಅಪವಾದವಾಗಿ ಕುಂಜಾರು ದುರ್ಗೆ ಅವಳಿಗಿಂತ ಅನಂತಪಟ್ಟು ಶ್ರೇಷ್ಠರಾದ ಪರಶುರಾಮನಿಂದ ಪ್ರತಿಷ್ಠಿತಳಾಗಿರುವಳು. ಭಗವಂತನ ಸಾಕ್ಷಾದವತಾರ ಪರಶುರಾಮನ ಅಮೃತ ಹಸ್ತದಿಂದ ಪ್ರತಿಷ್ಠೆ ನಡೆದಿದೆ ಎಂದರೆ ಆ ಪ್ರತಿಮೆಯಲ್ಲಿ ಸದಾ ಸನ್ನಿದಾನ- ಎಂಬುದು ಸ್ಪಷ್ಟ.

ಜಗನ್ನಾಥ ಜಗದ್ಗುರುಗಳ ಸಾಮೀಪ್ಯ

ಬದಲಾಯಿಸಿ

ಕುಂಜಾರಿನ ದುರ್ಗಾಲಯದ ಪಶ್ಚಿಮದ ಮಗ್ಗುಲಲ್ಲಿ ಶ್ರೀ ಪರಶುರಾಮನಿಂದ ಅಧಿಷ್ಠಿತವಾದ ಪರಶುರಾಮ ಬೆಟ್ಟ ವಿರಾಜಿಸುತ್ತಿದ್ದರೆ, ಪೂರ್ವದಿಕ್ಕಿನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಅವತರಿಸಿರುವ ಹಾಗೂ ತಮ್ಮ ಬಾಲ್ಯವನ್ನು ಕಳೆದಿರುವ `ಪಾಜಕ’ ಮೆರೆಯುತ್ತಿದೆ. ಪರಶುರಾಮಬೆಟ್ಟ ಕುಂಜಾರುಗಿರಿಯ ದೇವಿಗೆ ಜಗನ್ನಾಥನಾದ ಶ್ರೀ ಪರಶುರಾಮನ ಅನುಗ್ರಹವನ್ನೂ, ಪಾಜಕ ಜಗದ್ಗುರು ಶ್ರೀ ಮಧ್ವಾಚಾರ್ಯರ ಕುರಿತಾಗಿ ಇರುವ ಕುಂಜಾರು ಗಿರಿಯ ದೇವಿಯ ಆದರಾತಿಶಯವನ್ನೂ ಅನುಗ್ರಹಾತಿಶಯವನ್ನೂ ಮೌನವಾಗಿ ಸಾರುತ್ತಿದೆ.

ಬಾಣತೀರ್ಥ, ಗದಾತೀರ್ಥ ಹಾಗೂ ಪರಶುರಾಮ ಗುಹೆ

ಬದಲಾಯಿಸಿ

ದುರ್ಗಾಬೆಟ್ಟದ ಪೂರ್ವದಿಕ್ಕಿನಲ್ಲಿ ಪರಶುರಾಮ ನಿರ್ಮಿತವಾದ ಬಾಣತೀರ್ಥ ಇದ್ದರೆ, ಪಶ್ಚಿಮ ದಿಕ್ಕಿನಲ್ಲಿ ಗದಾತೀರ್ಥ ಇದೆ. ಪೂರ್ವಬದಿಯಲ್ಲಿಯೇ ಸ್ವಲ್ಪ ಕೆಳಗೆ ಇರುವ ಪರಶುರಾಮಗುಹೆ,ಬಾಣ ತೀರ್ಥ, ಗದಾತೀರ್ಥಗಳೊಂದಿಗೆ ದುರ್ಗಾಬೆಟ್ಟಕ್ಕೆ ಪರಶುರಾಮನ ಸಂಪರ್ಕವನ್ನು ದೃಡೀಕರಿಸುತ್ತಿದೆ. ಪರಶುರಾಮ ಗುಹೆಯಲ್ಲಿ ಇಂದಿಗೂ ಶ್ರೀ ಪರಶುರಾಮ ಸನ್ನಿಹಿತನಾಗಿರುವನೆಂಬ ನಂಬಿಕೆ ಇದೆ.

ಎತ್ತರದ ಸ್ಥಾನ

ಬದಲಾಯಿಸಿ

ದುರ್ಗಾ ಎಂದು ಅನ್ವರ್ಥಕವಾಗಿ ಕರೆಸಿಕೊಳ್ಳಲ್ಪಡುವ ತಾನು ಸಾಕಷ್ಟು ಪರಿಶ್ರಮಪಟ್ಟವರಿಗಷ್ಟೇ ರಮ್ಯಳಾಗಿರುವವಳೆಂದು ಸೂಚಿಸಿಕೊಡುವುದಕ್ಕಾಗಿಯೋ ಎಂಬಂತೆ ಕುಂಜಾರಿನ ದುರ್ಗಾದೇವಿ ೨೫೭ ಮೆಟ್ಟಿಲುಗಳನ್ನು ಹೊಂದಿರುವಷ್ಟು ಎತ್ತರದ ಕುಂಜಾರುಬೆಟ್ಟದ ಮೇಲೆ ನೆಲೆಸಿರುವಳು. ಬೆಟ್ಟದ ನಾಲ್ಕು ಮಗ್ಗಲುಗಳಲ್ಲಿಯೂ ಮೇಲೆ ಏರಲು ದಾರಿಗಳಿವೆಯಾದರೂ ದಕ್ಷಿಣ , ಪಶ್ಚಿಮ ಬದಿಯಲ್ಲಿ ಕಾಲ್ನಡಿಗೆಯಿಂದ ಮೇಲೇರಲು ಅನುಕೂಲವಾಗುವಂತೆ ಮೆಟ್ಟಿಲುಗಳಿವೆ. ಪಶ್ಚಿಮ ದಿಕ್ಕಿನಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾದ ದಾರಿ ಇದೆ.

ಪ್ರಶಾಂತ ವಾತವರಣ

ಬದಲಾಯಿಸಿ

ದುರ್ಗಾಬೆಟ್ಟದ ಸುತ್ತಲೂ ಹಬ್ಬಿ ನಿಂತಿರುವ ಹಸಿರಾದ ಕಾನನ. ಅದರ ಮಧ್ಯದ ದೇವಾಲಯದಲ್ಲಿ ಶೋಭಾಯಮಾನಳಾಗಿ ನಿಂತಿರುವ ದುರ್ಗೆ ‘ವನದುರ್ಗೆ’ – ಎಂದೆನಿಸುವಂತೆ ಮಾಡಿದೆ. ಹಿಂದೆ ಹುಲಿಗಳು ನೆಲೆಯಾಗಿದ್ದ ದಟ್ಟ ವನ ಈಗ ನವಿಲು, ನರಿ, ಕೋತಿಗಳಿಗಷ್ಟೇ ಆಶ್ರಯ ನೀಡುವಷ್ಟು ಸೊರಗಿ ಹೋಗಿದೆಯಾದರೂ ಪ್ರಶಾಂತ ವಾತಾವರಣವನ್ನು ಸೃಷ್ಟಿಸಿದೆ. ಸುತ್ತ ಬೆಳೆದ ಗಿಡಮರಗಳ ಹಚ್ಚಹಸುರು ಕಣ್ಣುಗಳಿಗೆ ಮುದವನ್ನೀಡುತ್ತಿದ್ದರೆ, ಆಗಾಗ್ಯೆ ಬೀಸುವ ತಂಗಾಳಿ ಮೈಮನಗಳಿಗೆ ತಂಪನ್ನೀಡುತ್ತದೆ. ಇದರಿಂದಾಗಿ ಅಂತಃಕರಣ ಪ್ರಶಾಂತವಾಗಿ ಒಳಮುಖವಾಗುತ್ತಿರುತ್ತದೆ.

ಭೂಮಟ್ಟಕ್ಕಿಂತ ಸುಮಾರು ೧೦೦ ಅಡಿಗಳಿಗಿಂತಲೂ ಎತ್ತರದಲ್ಲಿರುವ ಈ ದುರ್ಗಾಲಯದ ಹೊರಾಂಗಣ ಆಸುಪಾಸಿನ ಎಲ್ಲಾ ದೃಶ್ಯಗಳ ವಿಹಂಗಮ ನೋಟಕ್ಕೆ ಅನುವು ಮಾಡಿಕೊಡುವುದರ ಮೂಲಕ ದುರ್ಗಾದೇವಿಯ ಸನ್ನಿಧಾನದಿಂದಾಗಿ ಸಾಂಸಾರಿಕ ಪ್ರಪಂಚದಿಂದ ಸ್ವಲ್ಪ ಮೇಲಕ್ಕೇರಿದ ವಿನೂತನ ಅನುಭವ ತಂದುಕೊಡುವುದು.

ಸಂಧ್ಯಾಕಾಲದಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ಮುಳುಗುವ ದೃಶ್ಯದ ಸೊಬಗನ್ನು ಸವಿಯುವ ಅಪೂರ್ವ ಅವಕಾಶ ಇಲ್ಲಿ ದೊರಕಬಲ್ಲುದು. ಆಗಸ ಮೇಘಾದಿಗಳಿಂದ ಕಲುಷಿತವಾಗದೆ ಶುಭ್ರವಾಗಿದ್ದಾಗ ಪಶ್ಚಿಮ ಸಮುದ್ರದ ತರಂಗಗಳೂ ಇಲ್ಲಿ ಕಾಣಿಸುವವು.

ಹೀಗೆ ಪ್ರಕೃತಿ ಮಾತೆಯ ಅದ್ಭುತಗಳನ್ನು ಆಸ್ವಾದಿಸಲು ಬೇಕಾದ ಎತ್ತರದ ದೊಡ್ಡಸ್ತಿಕೆ ದುರ್ಗಾಬೆಟ್ಟದಲ್ಲಿದೆ

ಹೊರಾಂಗಣದಲ್ಲೇ ದೇವಿಯ ದರ್ಶನ

ಬದಲಾಯಿಸಿ

ಹೊರಾಂಗಣದಲ್ಲೇ ದೇವಿಯ ದರ್ಶನ ದುರ್ಗಾಲಯದ ಹೊರಾಂಗಣಕ್ಕಿಂತ ಸುಮಾರು ಮೂರು ಅಡಿಗಳಷ್ಟು ಎತ್ತರ ಒಳಾಂಗಣ ಇದ್ದರೆ, ಒಳಾಂಗಣದಲ್ಲಿಯೂ ಸುಮಾರು ಮೂರು ಅಡಿಗಳಷ್ಟು ಎತ್ತರದಲ್ಲಿ ದೇವಿಯ ಪ್ರತಿಮೆ ಪ್ರತಿಷ್ಠಪಿಸಲ್ಪಟ್ಟಿರುವುದರಿಂದ ಹೊರಾಂಗಣದಲ್ಲಿದ್ದುಕೊಂಡೇ ದೇವಿಯ ದರ್ಶನ ಪಡೆಯಬಹುದಾದ ವೈಶಿಷ್ಟ್ಯ ಇಲ್ಲಿಯ ವಾಸ್ತುವಿಗೆ ಇದೆ.

ನಿರ್ಮಾಲ್ಯ ದೇವತೆಯ ವಿಗ್ರಹ

ಬದಲಾಯಿಸಿ

ದೇವಾಲಯಗಳಲ್ಲಿ ಆಯಾ ದೇವಾಲಯಕ್ಕೆ ಸಂಬಂಧಪಡುವ ’ನಿರ್ಮಾಲ್ಯದೇವತೆ’ ಯ ವಿಗ್ರಹ ಒಂದು ಬೋಳು ಕಲ್ಲಿನ ರೂಪದಲ್ಲಿದ್ದರೆ, ಈ ದುರ್ಗಾಲಯದ ನಿರ್ಮಾಲ್ಯ ದೇವತೆಯಾದ ‘ಮುಂಡಿನಿ’ ದೇವಿಯ ಎಡಮಗ್ಗುಲಲ್ಲಿ, ಒಳಾಂಗಣದಲ್ಲಿ ಒಂದು ಕಾಲನ್ನು ಮಡಚಿ ಕುಳಿತಿರುವ ವಿಗ್ರಹ ರೂಪದಲ್ಲಿದೆ. ಈ ದೃಶ್ಯ ಬಹಳ ವಿರಳ.

ಕೆಳಗಿನಿಂದ ನೀರು ಹೊರುವಿಕೆ

ಬದಲಾಯಿಸಿ

ಕುಂಜಾರುಬೆಟ್ಟದ ದುರ್ಗಾಲಯದ ವಠಾರದಲ್ಲಿ ಬಾವಿ ಇಲ್ಲ. ಈಗ ನಳ್ಳಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯಾದರೂ ದೇವಿಯ ಪೂಜೆ, ನೈವೇದ್ಯಾದಿಗಳಿಗೆ ನಲ್ಲಿ ನೀರನ್ನು ಬಳಸುವಂತಿಲ್ಲ. ಆದುದರಿಂದ ಕೆಳಗಿನ ಬಾಣತೀರ್ಥ ಹಾಗೂ ಗದಾತೀರ್ಥದಿಂದ ದುರ್ಗಾಲಯಕ್ಕೆ ನೀರನ್ನು ಹೊತ್ತು ತರಬೇಕು. ಸಾಮಾನ್ಯಕೊಡಕ್ಕಿಂತ ಸುಮಾರು ಎರಡೂವರೆಪಟ್ಟಿನಷ್ಟು ದೊಡ್ಡದಾದ ಕೊಡದಲ್ಲಿ ನಿರ್ಮಾಲ್ಯವಿಸರ್ಜನೆಗಾಗಿ ಒಂದು ಕೊಡ ನೀರು, ಅಭಿಷೇಕಕ್ಕಾಗಿ ನಾಲ್ಕುಕೊಡ ನೀರು, ನೈವೇದ್ಯಕ್ಕಾಗಿ ಒಂದುಕೊಡ ನೀರು – ಹೀಗೆ ಒಟ್ಟು ಆರು ಕೊಡ ನೀರು ಪ್ರತ್ತಿನಿತ್ಯದ ಪೂಜೆಗೆ ಅತ್ಯಾವಶಕ. ದೊಡ್ಡ ಗಾತ್ರದ ಕೊಡವನ್ನು ತಲೆಯಲ್ಲಿ ಹೊತ್ತುಕೊಂಡು ಮೇಲೇರಲಾಗುವುದು. ರೂಢಿಯಾದ ವ್ಯಕ್ತಿಗೆ ದುರ್ಗಾಲಯದಿಂದ ಕೆಳಗಿಳಿದು ಒಂದು ದೊಡ್ಡ ಕೊಡ ನೀರನ್ನು ಮೇಲೆ ಒಯ್ಯುವುದಕ್ಕೆ ಸುಮಾರು ಎಂಟು ನಿಮಿಷಗಳು ಬೇಕಾಗುವವು. ಹೀಗೆ ಕೆಳಗಿನಿಂದ ನೀರನ್ನು ಒಯ್ಯುವುದು ಇಲ್ಲಿಯ ಒಂದು ಸಾಹಸದ ಚಟುವಟಿಕೆಯೇ ಸರಿ.

ದುರ್ಗಾಲಯದ ವ್ಯಾಪ್ತಿ

ಬದಲಾಯಿಸಿ

ಕುಂಜರುಗಿರಿಯ ದುರ್ಗಾಲಯ ’ಬಳಿಸಾಗರ ಮಾಗಣೆ’ಯ ದೇವಸ್ಥಾನ ಎನಿಸಿದ್ದು, ಹನ್ನೆರಡು ಮಾಗಣೆಗಳ ಭಕ್ತರನ್ನು ಹೊಂದಿರುವಷ್ಟು ವ್ಯಾಪಕವೆನಿಸಿದೆ. ಕನ್ನರಾಡಿ, ಉಂಡಾರು, ಇನ್ನಂಜೆ, ಕಲ್ಮಂಜೆ, ಪಳ್ಳಿ, ಬೆಳ್ಳೆ, ಬಿಳ್ಯಾರು, ಪಾಜೈ – ಮುಂತಾದ ಊರುಗಳಿಂದೆಲ್ಲ ಭಕ್ತರು ಈ ದುರ್ಗಾಲಯಕ್ಕೆ ಬರುತ್ತಿರುತ್ತಾರೆ.

ಪರಶುರಾಮನಿಂದ ಪ್ರತಿಷ್ಠಿತಳಾಗಿರುವ ಇಲ್ಲಿಯ ದೇವಿ ಪರಶುರಾಮನ ತಂದೆ ಜಮದಗ್ನಿ ಋಷಿ ಸಂಬಂಧಿಸಿದ ಗೋತ್ರದವರಿಗೆಲ್ಲ ಕುಲದೇವತೆಯಾಗಿರುವಳು. ಕುಂದಾಪುರದ ಐತಾಳರು, ಅಡಿಗರು, ಶಾಸ್ತ್ರಿಗಳು, ಸೋಮಯಾಜಿಗಳು ಕುಂಜಾರಿನ ದುರ್ಗೆಯನ್ನೇ ಕುಲದೇವತೆಯನ್ನಾಗಿ ಹೊಂದಿದ ಮತ್ತೆ ಕೆಲವರು.

ಉಡುಪಿಗೂ ಕುಂಜಾರಿಗೂ ವಿಶಿಷ್ಠವಾದ ನಂಟು. ಉಡುಪಿ ಶ್ರೀ ಕೃಷ್ಣನ ಸಂದರ್ಶನಕ್ಕೆ ಬಂದ ಹೆಚ್ಚಿನ ಯಾತ್ರಿಕರು ಕುಂಜಾರಿನ ದುರ್ಗೆಯ ದರ್ಶನ ಪಡೆಯದೆ ಇರುವುದಿಲ್ಲ.

ಉಡುಪಿ ಶ್ರೀಕೃಷ್ಣನ ಪೂಜೆಯ ಪರ್ಯಾಯ ಪೀಠವನ್ನೇರಲಿರುವ ಶ್ರೀಪಾದರು ಪರ್ಯಾಯ ಪೀಠಾರೋಹಣಕ್ಕಿಂತ ಮುಂಚೆ ಸಂದರ್ಶಿಸಬೇಕೆಂದಿರುವ ಅನೇಕ ದೇವಾಲಯಗಳಲ್ಲಿ ಕುಂಜಾರಿನ ದುರ್ಗಾಲಯವೂ ಒಂದು. ಕುಂಜಾರಿನ ದುರ್ಗೆಯ ಸಂದರ್ಶನ ಪಡೆದು ಮುಂದೆ ತಮ್ಮ ಪರ್ಯಾಯಾವಧಿಯಲ್ಲಿ ಯಾವುದೇ ಬಗೆಯ ಅನಿಷ್ಟ ಸಂಭವಿಸದಂತೆ ಪ್ರಾರ್ಥಿಸಿಕೊಳ್ಳುವುದು ನಡೆದುಬಂದಿರುವ ಸಂಪ್ರದಾಯ.

ಕುಂಜಾರಿನ ಸುತ್ತಮುತ್ತಲ ಊರುಗಳಾದ ಅಚ್ಚಡ, ಬಿಳಿಯಾರು, ಬೆಳ್ಳೆ, ಎಡನೀರು, ಪಾಚೈ, ಕುರ್ಕಾಲು – ಇವುಗಳಲ್ಲಿ ಭೂತಗಳ ಕೋಲ ನಡೆಯಬೇಕಾದರೆ ಅದರ ಅಂಗವಾಗಿ ಕುಂಜಾರಿನ ದುರ್ಗಾಲಯದಲ್ಲಿ ಸಮಾರಾಧನೆ ನಡೆಯಲೇ ಬೇಕೆಂಬುದು ಆಯಾ ಊರುಗಳಿಗೆ ಈ ದುರ್ಗಾಲಯದ ಜೊತೆಗೆ ಇರುವ ಗಾಢವಾದ ನಂಟನ್ನು ಸಾರುತ್ತಿದೆ.

ಹೀಗೆ ಕುಂಜಾರಿನ ದುರ್ಗಾಲಯ ವಿವಿಧ ಬಗೆಯ ವೈಶಿಷ್ಟ್ಯದಿಂದಾಗಿ ಅಸಾಧಾರಣ ವೈಭವದಿಂದ ಮೆರೆಯುತ್ತಿದೆ.

ವರವಿಮಾನಗಿರಾವಪಿ ಚಂಡಿಕಾ ಶಿಶುಮಹೋ ಜನನೀ ತಮಲಾಲಯತ್ | ಅಪರಥಾ ಪರಿತುಷ್ಟಮನಾಃ ಕಥಂ ಚಿರಮಿಹೈವ ವಸೇದ್ವಿಸಹಾಯಕಃ || - ಸುಮಧ್ವಿವಿಜಯ ಬೆಟ್ಟದ ಮೇಲೆ ಇರುವ ದುರ್ಗೆಯು ಬಾಲಕನಾದ ವಾಸುದೇವನನ್ನು (ಮಧ್ವರನ್ನು) ರಕ್ಷಿಸುತ್ತಿದ್ದಳು. ಆಲ್ಲದಿದ್ದರೆ ಈ ಮಗು ಹೇಗೆ ತಾನೆ ನೆಮ್ಮದಿಯಿಂದ ಇದ್ದೀತು? ತಾಯಿಯಾದ ದುರ್ಗೆಯೇ ಈ ವಾಸುದೇವನನ್ನು ರಕ್ಷಿಸುತ್ತಿದ್ದಳು ಎಂಬ ಅಭಿಪ್ರಾಯ. ಪರಶ್ವಧಧನುರ್ಬಾಣ ಗದಾತೀರ್ಥೋಪಶೋಭಿತೇ| ಗಿರೌ ಯತ್ರ ಸುತಪ್ರೇಮ್ಣೇವ ಆಸ್ತೇ ನಿತ್ಯಂ ಹರಿಸ್ವಸಾ ||

-ತೀರ್ಥಪ್ರಬಂಧ

ಕೊಡಲಿ, ಧನಸ್ಸು, ಬಾಣ, ಗದೆಗಳೆಂಬ ತೀರ್ಥಗಳಿಂದ ಶೋಭಿತವಾದ ಈ ಬೆಟ್ಟದಲ್ಲಿ ದುರ್ಗೆಯು ತನ್ನ ಮಗನಾದ ವಾಸುದೇವನಲ್ಲಿ (ಮಧ್ವರಲ್ಲಿ) ಪ್ರೀತಿಯಿಂದಲೋ ಎಂಬಂತೆ ನೆಲೆಸಿದ್ದಾಳೆ.