ಸದಸ್ಯರ ಚರ್ಚೆಪುಟ:Madhusarthij1940352/ನನ್ನ ಪ್ರಯೋಗಪುಟ

ನನ್ನ ಹೆಸರು ಮಧು ಸಾರ್ಥಿ ಜೆ ನಾನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ದಿನಾ೦ಕ ೧೫-೦೬-೨೦೦೧ ರ೦ದು ಜನಿಸಿದೆ. ನನ್ನ ತ೦ದೆ ಜಗದೀಶ ತಾಯಿ ಲೀಲಾವತಿ. ನನ್ನ ಊರಿನ ಪ್ರಸಿದ್ದ ಸ್ಥಳಗಳಲ್ಲಿ ಜೊಗ ಜಲಪಾತ ಒ೦ದು.





ಜಲಪಾತ ವಿವರಣೆ; ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ೧೬ ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲೂ, ಹೊನ್ನಾವರದಿಂದ ೫೬ ಕಿಮೀ ದೂರದಲ್ಲೂ ಇದೆ. ಇಲ್ಲಿ ಶರಾವತಿ ನದಿ ೨೫೨.೭ ಮೀ (೮೨೯ ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (೨೪೦೦ ಅಡಿ), ಎವಾನ್ಸನ್ (೧೨೦೦ ಅಡಿ) ಮತ್ತು ಆರ್ವೆ (೧೧೦೦ ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (೧೬೪ ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ ೨೫೦ ಗಜಗಳಷ್ಟು ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದು. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನು ಉಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧರೆಗಳ ಮೇಲಿನ ಕಾಮನಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವುವು : ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಗೇರುಸೊಪ್ಪೆ ಜಲಪಾತದ ಮಾಹಿತಿ ಗಳನ್ನು ಸಂಗ್ರಹಿಸಲು ಮಾರ್ಚ್ ೧೮೫೬ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ- ಪ್ರಪಾತದ ಆಳ ೮೨೯ ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ ೧೩೯ ಅಡಿಗಳು. ನದಿಯ ಆಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ ೨೧೩೦ ಅಡಿಗಳು. ೧೮೬೯ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ- ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಜಲಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುವುದುಂಟು.

Start a discussion about ಸದಸ್ಯ:Madhusarthij1940352/ನನ್ನ ಪ್ರಯೋಗಪುಟ

Start a discussion
Return to the user page of "Madhusarthij1940352/ನನ್ನ ಪ್ರಯೋಗಪುಟ".