ಸದಸ್ಯರ ಚರ್ಚೆಪುಟ:HK Sridevi/ನನ್ನ ಪ್ರಯೋಗಪುಟ

ಅನುಭೋಗಿಯ ಅಧಿಕ ತೃಪ್ತಿ

ಅನುಭೋಗಿಯ ಅಧಿಕ ತ್ರುಪ್ತಿಯ ಅರ್ಥ

ಬದಲಾಯಿಸಿ
 
Alfred Marshall

ಆಧುನಿಕ ಆರ್ಥಿಕ ವಿಶ್ಲೇಷಣೆಯಲ್ಲಿ 'ಅನುಭೋಗಿಯ ಅಧಿಕ ತೃಪ್ತಿ' ಪರಿಭಾವನೆಯು ಪ್ರಾಶಸ್ತ್ಯದ ಪಾತ್ರವನ್ನು ನಿರ್ವಹಿಸುತ್ತದೆ. ಈ ಕಲ್ಪನೆಯನ್ನು ಮೊದಲು ಹೇಳಿದವನು(೧೮೮೪ ರಲ್ಲಿ) ಎ.ಜೆ.ಡ್ಯೂಪಿ ಎಂಬ ಫ್ರಾನ್ಸ್ನ ಇಂಜಿನಿಯರ್. ಆದರೆ ಅದಕ್ಕೆ ಸ್ಪಷ್ಟ ರೂಪವನ್ನು ನೀಡಿ ಆರ್ಥಿಕ ವಿಶ್ಲೇಷಣೆಗೆ ಅಳವಡಿಸಿಕೊಂಡ ಕೀರ್ತಿ ಆಲ್ಫ್ರೆಡ್ ಮಾರ್ಷಲ್ಗೆ ಸಲ್ಲುತ್ತದೆ. ಆರ್ಥಿಕ ಸಿದ್ಧಾಂತಕ್ಕೆ ಮಾರ್ಷಲ್ ನೀಡಿದ ಮಹತ್ವದ ಕೊಡುಗೆಗಳಲ್ಲಿ ಇದೂ ಒಂದು. ಅವನ 'ಅರ್ಥಶಾಸ್ತ್ರದ ತತ್ವಗಳು' ಗ್ರಂಥದಲ್ಲಿ ಈ ಪರಿಭಾವನೆಗೆ ವೈಜ್ಞಾನಿಕವಾದ ವಿಶ್ಲೇಷಣೆ ದೊರೆತಿದೆ. ಅನುಭೋಗಿಯ ಅಧಿಕ ತೃಪ್ತಿಯು ದೈನಂದಿನ ಕೊಳ್ಳುವಿಕೆಯಲ್ಲಿ ಅನುಭವಕ್ಕೆ ಬರುವ ಒಂದು ಸಂಗತಿಯಾಗಿದೆ. ತೃಪ್ತಿಯನ್ನು ಪಡೆಯುವುದಕ್ಕಾಗಿ ಅನುಭೋಗಿಯು ವಸ್ತುವನ್ನು ಸೇವಿಸುತ್ತಾನೆ. ವಸ್ತುವನ್ನು ಕೊಳ್ಳಬೇಕಾದರೆ ಅವನು ಬೆಲೆ ಕೊಡಬೇಕಾಗುತ್ತದೆ. ದೈನಂದಿನ ಜೀವನದಲ್ಲಿ ಕಂಡುಬರುವಂತೆ ಕೆಲವು ವಸ್ತುಗಳಿಂದ ದೊರೆಯುವ ತೃಪ್ತಿಯು ಆ ವಸ್ತುಗಳಿಗೆ ಅನುಭೋಗಿಗಳು ಕೊಡಲು ಸಿದ್ಧರಿರುವ ಬೆಲೆಗಿಂತ ಜಾಸ್ತಿ ಇರುತ್ತದೆ. ವಸ್ತುವಿಗೆ ಅನುಭೋಗಿಯು ಕೊಡುವ ಬೆಲೆ ಮತ್ತು ಅದರಿಂದ ದೊರೆಯುವ ತೃಪ್ತಿಯ ನಡುವಣ ವ್ಯತ್ಯಾಸವೇ ಅನುಭೋಗಿಯ ಹೆಚ್ಚಳ. ಅನುಭೋಗಿಯು ಪಡೆಯುವ ತೃಪ್ತಿಯು ಅವನು ಕೊಡುವ ಬೆಲೆಗಿಂತ ಅಧಿಕವಾಗಿರುವುದರಿಂದ ಇದನ್ನು 'ಅನುಭೋಗಿಯ ಅಧಿಕ ತೃಪ್ತಿ' ಅಥವಾ 'ಅನುಭೋಗಿಯ ಮಿಗುತೆ' ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇದು ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮದಿಂದ ನೇರವಾಗಿ ಹೊರಹೊಮ್ಮಿದ ತತ್ವವಾಗಿದೆ. ಅನುಭೋಗಿಯ ಹೆಚ್ಚಳವನ್ನು ಮಾರ್ಷಲ್ ಹೀಗೆ ವಿವರಿಸಿದ್ದಾನೆ,"ಅನುಭೋಗಿಯು ಒಂದು ವಸ್ತುವನ್ನು ಪೂರ್ತಿಯಾಗಿ ತ್ಯಜಿಸುವುದರ ಬದಲು, ಅದನ್ನು ಪಡೆಯುವುದಕ್ಕಾಗಿ ಕೊಡಲು ಸಿದ್ಧನಾಗಿರುವ ಬೆಲೆಯು, ವಾಸ್ತವವಾಗಿ ಅದಕ್ಕೆ ಕೊಡುವ ಬೆಲೆಗಿಂತಲೂ ಅಧಿಕವಾಗಿರುತ್ತದೆ.ಈ ಅಧಿಕಾಂಶವೇ ಅನುಭೋಗಿಯ ಅಧಿಕ ತೃಪ್ತಿಯ ಆರ್ಥಿಕ ಅಳತೆಗೋಲು". ಇನ್ನೂ ಕೆಲವು ಅರ್ಥಶಾಸ್ತ್ರಜ್ಞರು ಈ ಪರಿಭಾವನೆಗೆ ವ್ಯಾಖ್ಯಾನ ನೀಡಿದ್ದಾರೆ. ಜೆ.ಆರ್.ಹಿಕ್ಸ್[]ಪ್ರಕಾರ, "ಒಂದು ಘಟಕ ವಸ್ತುವಿನ ಸೀಮಾಂತ ಮೌಲ್ಯ ಮತ್ತು ಅದಕ್ಕೆ ನೀಡಿದ ಬೆಲೆಯ ನಡುವಿನ ವ್ಯತ್ಯಾಸವೇ ಅನುಭೋಗಿಯ ಹೆಚ್ಚಳ". ಟಾಸಿಗ್[]ಎಂಬ ಲೇಖಕನ ಅಭಿಪ್ರಾಯದಲ್ಲಿ "ವಸ್ತುವಿನ ಸೌಪ್ತ ಬೆಲೆ ಮತ್ತು ವಾಸ್ತವ ಬೆಲೆಯ ನಡುವಣ ವ್ಯತ್ಯಾಸವೇ ಅನುಭೋಗಿಯ ಮಿಗುತೆ". ಅನುಭೋಗಿಯ ಅಧಿಕ ತೃಪ್ತಿಯೂ ಸಾಮಾನ್ಯವಾಗಿ ಕಡಿಮೆ ಬೆಲೆಯ ಮತ್ತು ಅತ್ಯಾವಶ್ಯಕ ವಸ್ತುಗಳ ಕೊಳ್ಳುವಿಕೆಯಲ್ಲಿ ಗಮನಕ್ಕೆ ಬರುತ್ತದೆ. ಉದಾ: ಉಪ್ಪು,ಬೆಂಕಿಪೊಟ್ಟಣ,ಸೀಮೆಎಣ್ಣೆ, ಅಂಚೆಯ ಕಾರ್ಡು ಮೊದಲಾದ ವಸ್ತುಗಳಲ್ಲಿ ಇದನ್ನು ಕಾಣಬಹುದು. ಇಂತಹ ವಸ್ತುಗಳಿಗೆ ನಾವು ವಾಸ್ತವ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಕೊಡಲು ಸಿದ್ಧರಾಗಿರುತ್ತೇವೆ. ಏಕೆಂದರೆ ಇವುಗಳು ಅತ್ಯಾವಶ್ಯಕವಾಗಿ ಬೇಕಾಗಿರುತ್ತವೆ. ಮತ್ತು ಇವುಗಳಿಂದ ದೊರೆಯುವ ತೃಪ್ತಿಯೂ ಹೆಚ್ಚಾಗಿರುತ್ತದೆ. ಈ ವಸ್ತುಗಳನ್ನು ತೊರೆದು ಜೀವಿಸಲು ಸಾಧ್ಯವೇ ಇಲ್ಲದಂತಾಗಿರುತ್ತದೆ. ಆದರೆ ನಾವು ಅವುಗಳಿಗೆ ನೀಡಬೇಕಾಗಿರುವ ಬೆಲೆ ಬಹಳ ಕಡಿಮೆ. ಉದಾ: ಅನುಭೋಗಿಯು ಒಂದು ಬೆಂಕಿ ಪೊಟ್ಟಣಕ್ಕೆ ೨ ರೂಪಾಯಿಗಳನ್ನು ಬೇಕಾದರೂ ಕೊಡಲು ಸಿದ್ಧನಿರುತ್ತಾನೆ. ಆದರೆ ಅದು ಅವನಿಗೆ ೪೦ ಪೈಸೆಯಲ್ಲಿಯೇ ಸಿಗುತ್ತದೆ. ಈ ಉದಾಹರಣೆಯಲ್ಲಿ ಅನುಭೋಗಿಯ ಹೆಚ್ಚಳ ಒಂದು ರೂಪಾಯಿ ಅರವತ್ತು ಪೈಸೆಗಳಷ್ಟಾಗಿದೆ. ಉಪ್ಪು ದಿನಬಳಕೆಯ ಮತ್ತು ಅತ್ಯಾವಶ್ಯಕ ವಸ್ತುವಾಗಿರುವುದರಿಂದ ಅನುಭೋಗಿಯು ಒಂದು ಕಿಲೋ ಉಪ್ಪಿಗೆ ೫ ರೂಪಾಯಿಗಳನ್ನು ಬೇಕಾದರೂ ಕೊಡಲು ಸಿದ್ಧನಾಗಿರುತ್ತಾನೆ. ಆದರೆ ಇದಕ್ಕೆ ಅವನು ನೀಡುವ ಬೆಲೆ ಒಂದು ರೂಪಾಯಿ ೫೦ ಪೈಸೆಗಳು ಮಾತ್ರ. ಈ ಉದಾಹರಣೆಯಲ್ಲಿ ಅನುಭೋಗಿಗೆ ಮೂರು ರೂಪಾಯಿ ೫೦ ಪೈಸೆಗಳ ಅಧಿಕ ತೃಪ್ತಿ ದೊರೆಯುತ್ತದೆ. ಆ ಮೇರೆಗೆ ಅನುಭೋಗಿಯ ಅಧಿಕ ತೃಪ್ತಿಯನ್ನು ಹಣದ ರೂಪದಲ್ಲಿ ಅಳತೆ ಮಾಡಲಾಗುತ್ತದೆ.

ಅನುಭೋಗಿಯ ಅಧಿಕ ತೃಪ್ತಿ ತತ್ವದ ಕಲ್ಪನೆಗಳು:

ಬದಲಾಯಿಸಿ

೧) ವಸ್ತುಗಳ ತುಷ್ಟಿಗುಣವನ್ನು ಅಳತೆ ಮಾಡಬಹುದು.

೨) ಹಣದ ಸೀಮಾಂತ ತುಷ್ಟಿಗುಣ ಸ್ಥಿರವಾಗಿರುತ್ತದೆ.

೩) ಬೆಲೆಯೊಂದನ್ನು ಬಿಟ್ಟು ಇತರ ಅಂಶಗಳಲ್ಲಿ ಬದಲಾವಣೆಗಳು ಇರುವುದಿಲ್ಲ.

೪) ತುಷ್ಟಿಗುಣ ಮತ್ತು ತೃಪ್ತಿಯ ನಡುವೆ ಖಚಿತವಾದ ಸಂಬಂಧವಿದೆ. ನಿರೀಕ್ಷಿತ ತೃಪ್ತಿಯು ನಿಜವಾಗಿ ಪಡೆದ ತೃಪ್ತಿಗೆ ಸಮನಾಗಿರುತ್ತದೆ.

೫) ಯಾವುದೋ ಒಂದು ವಸ್ತುವಿಗೆ ಬದಲಿ ವಸ್ತುಗಳು ಲಭ್ಯವಿರುವುದಿಲ್ಲ.

೬) ಪ್ರತಿಯೊಂದು ವಸ್ತುವು ಸ್ವತಂತ್ರ ವಸ್ತುವಾಗಿರುತ್ತದೆ. ಆದ್ದರಿಂದ ಯಾವುದೇ ಒಂದು ವಸ್ತುವಿನ ತುಷ್ಟಿಗುಣವು ಅದರೊಂದರ ಪ್ರಮಾಣದಿಂದ ಮಾತ್ರ ನಿರ್ಧಾರವಾಗುತ್ತದೆ.

೭) ವಸ್ತುಗಳ ಸೀಮಾಂತ ತುಷ್ಟಿಗುಣ ಇಳಿಮುಖ ವಾಗಿರುತ್ತದೆ.

ಟೀಕೆಗಳು:

ಬದಲಾಯಿಸಿ

ಅನುಭೋಗಿಯ ಅಧಿಕ ತೃಪ್ತಿಯ ತತ್ವವು ಹಲವು ಟೀಕೆಗಳಿಗೆ ಒಳಗಾಗಿದೆ. ಕ್ಯಾನನ್, ನಿಕೋಲ್ಸನ್,ಡೇವನ್ ಪೋರ್ಟ್, ರಾಬಿನ್ಸನ್ ಮುಂತಾದ ಅರ್ಥಶಾಸ್ತ್ರಜ್ಞರು ಇದನ್ನು ಕಟುವಾಗಿ ಟೀಕಿಸಿದ್ದಾರೆ.

೧) ಅವಶ್ಯಕ ವಸ್ತುಗಳಿಗೆ ಅನ್ವಯಿಸುವುದಿಲ್ಲ

ಜೀವನಾವಶ್ಯಕ ವಸ್ತುಗಳ ವಿಷಯದಲ್ಲಿ ಅನುಭೋಗಿಯ ಮಿಗುತೆಯನ್ನು ಅಳೆಯುವುದು ಹಾಸ್ಯಾಸ್ಪದವಾಗುತ್ತದೆ. ಏಕೆಂದರೆ ಇಂತಹ ವಸ್ತುಗಳಿಗೆ ಎಷ್ಟು ಬೆಲೆಯನ್ನು ಬೇಕಾದರೂ ಕೊಡಲು ಸಿದ್ಧರಿರುತ್ತೇವೆ. ಆದರೆ ಅವುಗಳ ಬೆಲೆ ಬಹಳ ಕಡಿಮೆ ಇರುತ್ತದೆ.ಉದಾಹರಣೆಗೆ: ಮರಳುಭೂಮಿಯಲ್ಲಿ ಕುಡಿಯಲು ನೀರು ಸಿಗದೆ ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿ ಒಂದು ಲೋಟ ನೀರಿಗೆ ಸಾವಿರ ರೂಪಾಯಿ ಕೊಡಲು ಸಿದ್ಧನಿರಬಹುದು. ಆದರೆ ಒಂದು ಲೋಟ ನೀರಿನ ಬೆಲೆ ಹೆಚ್ಚೆಂದರೆ ಹತ್ತು ಪೈಸೆ ಎಂದು ಭಾವಿಸೋಣ. ಇಂತಹ ಸಂದರ್ಭದಲ್ಲಿ ಅನುಭೋಗಿಯ ಮಿಗುತೆ ₹999 ಮತ್ತು 90 ಪೈಸೆಗಳು ಎಂದು ಹೇಳಿದರೆ ಅರ್ಥಹೀನವಾದ ಮತ್ತು ಮಾನಸಿಕ ವೈಪರೀತ್ಯದ ವಿಷಯವಾಗುತ್ತದೆ.

೨) ತುಷ್ಟಿಗುಣದ ಅಳತೆ ಅಸಾಧ್ಯ

ತುಷ್ಟಿಗುಣವನ್ನು ಅಳೆಯಬಹುದು ಎಂದು ಮಾರ್ಷಲ್ ಭಾವಿಸಿದ್ದಾನೆ. ಆದರೆ ತುಷ್ಟಿಗುಣವು ಒಂದು ಮಾನಸಿಕ ಭಾವನೆ ಆದುದರಿಂದ ಅದರ ಅಳತೆ ಅಸಾಧ್ಯವಾದುದು.

೩) ಹಣದ ಸೀಮಾಂತ ತುಷ್ಟಿಗುಣ ಸ್ಥಿರವಾಗಿರುವುದಿಲ್ಲ

ಹಣದ ಸೀಮಾಂತ ತುಷ್ಟಿಗುಣ ಸ್ಥಿರವಾಗಿರುತ್ತದೆ ಎಂಬ ಮಾರ್ಷಲ್ನ ಕಲ್ಪನೆ ಅಸಂಗತವಾದುದು. ಯಾವುದೇ ಒಂದು ವಸ್ತುವಿನ ಸಂಗ್ರಹ ಕಡಿಮೆ ಇದ್ದಾಗ ಅದರ ಸೀಮಾಂತ ತುಷ್ಟಿಗುಣ ಹೆಚ್ಚಿರುತ್ತದೆ ಎಂಬುದು ಸರಳ ವಿಚಾರ. ಅನುಭೋಗಿಯ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಕೊಂಡಂತೆ ಅವನ ಬಳಿ ಹಣದ ಸಂಗ್ರಹ ಕಡಿಮೆಯಾಗುವುದರಿಂದ ಅದರ ಸೀಮಾಂತ ತುಷ್ಟಿಗುಣ ಹೆಚ್ಚುತ್ತದೆ.

೪) ಇತರ ಅಂಶಗಳ ಸ್ಥಿರತೆಯ ಕಲ್ಪನೆ ದೋಷಪೂರಿತವಾದುದು

ಬೆಲೆಯೊಂದನ್ನು ಉಳಿದು ಇತರ ಅಂಶಗಳಲ್ಲಿ ಸ್ಥಿರತೆ ಇರುತ್ತದೆ ಎಂಬುದು ಈ ತತ್ವದ ಒಂದು ಪ್ರಮುಖ ಕಲ್ಪನೆ. ಆದರೆ ಮಾರುಕಟ್ಟೆಯಲ್ಲಿ ಅಸಂಖ್ಯಾತ ಅನುಭೋಗಿಗಳಿದ್ದು ಅವರ ಆದಾಯ, ಅಭಿರುಚಿ, ಒಲವು ಹವ್ಯಾಸಗಳು ವಿಧವಿಧವಾಗಿ ಇರುತ್ತವೆ. ಅನುಭೋಗಿಗಳು ವಿವಿಧ ಆರ್ಥಿಕ ಸನ್ನಿವೇಶಗಳಲ್ಲಿ ವಿಭಿನ್ನ ರೀತಿಗಳಲ್ಲಿ ವರ್ತಿಸುತ್ತಾರೆ.

೫) ಕಾಲ್ಪನಿಕವಾಗಿದೆ

ಇದು ಕೇವಲ ಒಂದು ಕಾಲ್ಪನಿಕ ಪರಿಭಾವನೆ ಎಂದರೆ ತಪ್ಪಾಗುವುದಿಲ್ಲ. ಪ್ರತಿಯೊಬ್ಬ ಅನುಭೋಗಿಯ ವಸ್ತುವನ್ನು ಕೊಳ್ಳುವಾಗ ಇಂತಿಷ್ಟು ಬೆಲೆಯನ್ನು ಕೊಡಲು ಸಿದ್ಧನಿದ್ದಾನೆ. ಮತ್ತು ಅದರಿಂದ ಅವನಿಗೆ ಇಂತಿಷ್ಟು ಅಧಿಕ ತೃಪ್ತಿ ದೊರೆಯಿತು ಎಂದು ಹೇಳುವುದು ತೀರಾ ಸಹಜವಾದ ವಿಚಾರವಾಗುತ್ತದೆ. ಅನುಭೋಗಿಯು ಒಂದು ವಸ್ತುವನ್ನು ತ್ಯಜಿಸುವ ಬದಲು ಅದಕ್ಕೆ ಎಷ್ಟು ಬೆಲೆ ಕೊಡಲು ಸಿದ್ದನಿದ್ದಾನೆ ಎಂಬುದನ್ನು ಕಲ್ಪಿಸಿಕೊಳ್ಳಬಹುದು ಅಷ್ಟೇ.

೬) ಯಾವ ವಸ್ತುವೂ ಸ್ವತಂತ್ರವಾಗಿ ಇರುವುದಿಲ್ಲ

ಪ್ರತಿಯೊಂದು ವಸ್ತುವು ಸ್ವತಂತ್ರವಾಗಿರುತ್ತದೆ. ಮತ್ತು ಅದರ ತುಷ್ಟಿಗುಣವು ಅದರೊಂದರ ಪ್ರಮಾಣ ದಿಂದಲೇ ನಿರ್ಧಾರವಾಗುತ್ತದೆ ಎಂಬ ಮಾರ್ಷಲ್ ನ ಭಾವನೆ ಗಂಭೀರ ಟೀಕೆಗೆ ಒಳಗಾಗಿದೆ. ಯಾವುದೋ ಒಂದು ವಸ್ತುವಿನ ತುಷ್ಟಿಗುಣವು ಅದರ ಪ್ರಮಾಣದಿಂದ ಮಾತ್ರವಲ್ಲದೆ, ಸಂಬಂಧಿಸಿದ ವಸ್ತುಗಳ ಪೂರೈಕೆ ಇಂದಲೂ ನಿರ್ಧಾರವಾಗುತ್ತದೆ. ಯಾವ ವಸ್ತುವನ್ನು ಸಂಪೂರ್ಣವಾಗಿ ಸ್ವತಂತ್ರ ವೆಂದು ಭಾವಿಸುವುದು ತಪ್ಪು.

೭) ಬದಲಿ ವಸ್ತುಗಳ ಅಸ್ತಿತ್ವವಿರುತ್ತದೆ

ಯಾವುದೊಂದು ವಸ್ತುವಿಗೆ ಬದಲಿ ವಸ್ತುಗಳು ಇರುವುದಿಲ್ಲ ಎಂದು ಮಾರ್ಷಲ್ ಕಲ್ಪಿಸಿಕೊಂಡಿದ್ದಾನೆ. ಅದಕ್ಕಾಗಿ ಅವನು "ವಸ್ತುವನ್ನು ತ್ಯಜಿಸುವುದರ ಬದಲು" ಎಂಬ ಕಲ್ಪನೆಯ ಮೇಲೆ ತನ್ನ ಸಿದ್ಧಾಂತವನ್ನು ಬೆಳೆಸಿದ್ದಾನೆ. ಆದರೆ ವಾಸ್ತವವಾಗಿ ಬದಲಿ ವಸ್ತುಗಳೇ ಲಭ್ಯವಿಲ್ಲದಿರುವ ಯಾವುದೇ ಒಂದು ವಸ್ತು ಅಸ್ತಿತ್ವದಲ್ಲಿರುವುದು ತೀರಾ ವಿರಳ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.

೮) ಅಮೂಲ್ಯವಾದ ವಸ್ತುಗಳಿಗೆ ಅನುಭೋಗಿಯ ಹೆಚ್ಚಳವಿಲ್ಲ

ಉತ್ಕೃಷ್ಟವಾದ ವಸ್ತುಗಳಾದ ವಜ್ರ,ಹರಳು,ಚಿನ್ನ ಮುಂತಾದ ವಸ್ತುಗಳ ಉದಾಹರಣೆಯಲ್ಲಿ ಅನುಭೋಗಿಯ ಹೆಚ್ಚಳವನ್ನು ಅಳೆಯುವುದು ಅಸಂಬದ್ಧವಾಗುತ್ತದೆ. ಏಕೆಂದರೆ ಇಂತಹ ವಸ್ತುಗಳ ಬೆಲೆಗೂ ಅವು ನೀಡುವ ಅಧಿಕ ತೃಪ್ತಿಗೂ ಸಂಬಂಧವೇ ಇಲ್ಲವಾಗುತ್ತದೆ.


ಪ್ರಾಯೋಗಿಕ ಮಹತ್ವ:

ಬದಲಾಯಿಸಿ

ಅನುಭೋಗಿಯ ಹೆಚ್ಚಳದ ಅಳತೆ ಕಷ್ಟಕರವಾಗಿದ್ದರೂ ಈ ಪರಿಭಾವನೆಯು ಆರ್ಥಿಕ ವಿಶ್ಲೇಷಣೆ ಮತ್ತು ನೀತಿಗಳ ಸೂತ್ರೀಕರಣದಲ್ಲಿ ತುಂಬಾ ಪ್ರಾಶಸ್ತ್ಯವನ್ನು ಪಡೆದಿದೆ.

೧) ವಿವಿಧ ಸ್ಥಳಗಳಲ್ಲಿನ ಸೌಲಭ್ಯಗಳ ಹೋಲಿಕೆ

ಅನುಭೋಗಿಯ ಹೆಚ್ಚಳವು ವಿವಿಧ ಸ್ಥಳಗಳಲ್ಲಿ ದೊರೆಯುವ ಜೀವನ ಸೌಲಭ್ಯಗಳನ್ನು ಹೋಲಿಕೆ ಮಾಡಲು ಸಹಾಯಕವಾಗಿದೆ. ಉದಾಹರಣೆ: ಸಾವಿರ ರೂಪಾಯಿ ಆದಾಯವಿರುವ ಒಬ್ಬ ವ್ಯಕ್ತಿ ಪಟ್ಟಣದಲ್ಲಿ ಹಲವಾರು ವಿಧದ ಜೀವನ ಸೌಲಭ್ಯಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಅದಕ್ಕಿಂತ ಹೆಚ್ಚಿನ ಆದಾಯವಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಎಷ್ಟೋ ಸೌಲಭ್ಯಗಳು ದೊರೆಯುವುದೇ ಇಲ್ಲ.

೨) ತೆರಿಗೆ ನೀತಿಯಲ್ಲಿ

ತೆರಿಗೆ ನೀತಿಯ[] ಸೂತ್ರೀಕರಣದಲ್ಲಿ ಹಣಕಾಸಿನ ಸಚಿವರಿಗೆ ಈ ಪರಿಭಾವನೆಯು ಮಹತ್ವಪೂರ್ಣವಾಗಿ ನೆರವಾಗುತ್ತದೆ. ಅನುಭೋಗಿಯ ಹೆಚ್ಚಳ ಅಧಿಕವಾಗಿರುವ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ವಿಧಿಸಬಹುದು.

೩) ಏಕಸ್ವಾಮ್ಯ ಬೆಲೆ ನಿರ್ಧಾರದಲ್ಲಿ

ಏಕಸ್ವಾಮ್ಯ ಮಾರುಕಟ್ಟೆಯಲ್ಲಿ ವ್ಯಾಪಾರಿಯು ಅನುಭೋಗಿಯ ಮಿಗುತೆ ಅಧಿಕವಾಗಿರುವ ವಸ್ತುಗಳನ್ನು ಅಂದಾಜು ಮಾಡಿ ಅವುಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಬಹುದು. ಆಗ ಬೇಡಿಕೆಯು ಕುಸಿಯುವುದಿಲ್ಲ ಮತ್ತು ಅನುಭೋಗಿಗಳ ಅಸಂತುಷ್ಟ ಇಲ್ಲದೆ ಹೆಚ್ಚಿನ ಲಾಭ ಗಳಿಸಬಹುದು.

೪) ಅಂತರರಾಷ್ಟ್ರೀಯ ವ್ಯಾಪಾರದಲ್ಲಿ

ಅನುಭೋಗಿಯ ಹೆಚ್ಚಳದ ಆಧಾರದಲ್ಲಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ. ವಿದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಆಮದು ಮಾಡಿಕೊಂಡು, ಸ್ವದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾದ ವಸ್ತುಗಳನ್ನು ರಫ್ತು ಮಾಡಬಹುದು. ಆಗ ವ್ಯಾಪಾರದ ಮೂಲಕ ಕಡಿಮೆ ಬೆಲೆಯಲ್ಲಿ ಅಧಿಕ ತೃಪ್ತಿ ಪಡೆದಂತಾಗುತ್ತದೆ. ವ್ಯಾಪಾರ ಏರ್ಪಡುವ ಮೊದಲು ಸ್ವದೇಶದಲ್ಲಿ ಹೆಚ್ಚಿನ ಬೆಲೆಯಲ್ಲಿಯೇ ವಸ್ತುಗಳನ್ನು ಉತ್ಪಾದಿಸಬೇಕಾಗಿರುತ್ತಿದ್ದ ರಿಂದ ಅನುಭೋಗಿಯ ಮಿಗುತೆಗೆ ಅವಕಾಶವಿರುತ್ತಿಲಿಲ್ಲ. ಈ ಪರಿಭಾವನೆಯ ಮೂಲಕ ಅಂತರರಾಷ್ಟ್ರೀಯ ವ್ಯಾಪಾರದಿಂದ ದೊರೆಯುವ ಪ್ರಯೋಜನಗಳನ್ನು ಅಳೆಯಬಹುದು ಎಂದು ಮಾರ್ಷಲ್ ವಾದಿಸಿದ್ದಾನೆ.

೫) ಉಪಯುಕ್ತತೆ ಮೌಲ್ಯ ಮತ್ತು ವಿನಿಮಯ ಮೌಲ್ಯವನ್ನು ಪ್ರತ್ಯೇಕಿಸುತ್ತದೆ

ಉಪ್ಪು,ಬೆಂಕಿಪೊಟ್ಟಣ ಇತ್ಯಾದಿ ಅತ್ಯಾವಶ್ಯಕ ವಸ್ತುಗಳಿಗೆ ಬಹಳ ಉಪಯುಕ್ತತಾ ಮೌಲ್ಯವಿರುತ್ತದೆ. ಅಂದರೆ ಅವುಗಳ ತುಷ್ಟಿಗುಣ ಅಧಿಕ. ಆದರೆ ಅವುಗಳ ವಿನಿಮಯ ಮೌಲ್ಯ ಅಂದರೆ ಬೆಲೆ ಕಡಿಮೆ. ಆದರೆ ವಜ್ರ,ಚಿನ್ನ ಮೊದಲಾದ ವಸ್ತುಗಳು ಅಷ್ಟೊಂದು ಉಪಯುಕ್ತತಾ ಮೌಲ್ಯವನ್ನು ಪಡೆದಿದ್ದರೂ ಅಧಿಕ ವಿನಿಮಯ ಮೌಲ್ಯವನ್ನು ಹೊಂದಿವೆ. ಅನುಭೋಗಿಯ ಹೆಚ್ಚಳವು ಬೆಲೆ ಮತ್ತು ತುಷ್ಟಿಗುಣದ ನಡುವಿನ ವ್ಯತ್ಯಾಸವಾಗಿರುವುದರಿಂದ ಅದು ಉಪಯುಕ್ತತಾ ಮೌಲ್ಯ ಮತ್ತು ವಿನಿಮಯ ಮೌಲ್ಯವನ್ನು ಪ್ರತ್ಯೇಕಿಸಿ ವಿವರಿಸುತ್ತದೆ.

೬) ಯೋಗಕ್ಷೇಮ ಅರ್ಥಶಾಸ್ತ್ರದಲ್ಲಿ

ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವಂತಹ ಲೋಕೋಪಯೋಗಿ ಕೆಲಸಗಳಾದ ರಸ್ತೆ,ರೈಲು,ಸಂಪರ್ಕ, ಸೇತುವೆಗಳು ಮೊದಲಾದವುಗಳ ನಿರ್ಮಾಣದಲ್ಲಿ ಈ ತತ್ವವನ್ನು ಅನ್ವಯಿಸಬಹುದು. ಅನುಭೋಗಿಯ ಮಿಗುತೆ ಅಧಿಕವಾಗಿರುವ ಕಾಮಗಾರಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಮತ್ತು ಬಹುಸಂಖ್ಯೆಯ ಜನರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತವೆ ಎಂದರ್ಥ. ಅಂತಹವುಗಳ ಮೇಲೆ ಹೆಚ್ಚು ಪ್ರಮಾಣದ ಹಣವನ್ನು ವಿನಿಯೋಗಿಸಿ,ಸೌಲಭ್ಯಗಳನ್ನು ವಿಸ್ತರಿಸಬಹುದು.

ಆ ಮೇರೆಗೆ ಅನುಭೋಗಿಯ ಹೆಚ್ಚಳದ ಪರಿಭಾವನೆಯು ಸೈದ್ಧಾಂತಿಕ ಆಸಕ್ತಿಯನ್ನು ಕೆರಳಿಸುವುದು ಮಾತ್ರವಲ್ಲದೆ ಪ್ರಾಯೋಗಿಕ ಮಹತ್ವವನ್ನೂ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org › wiki › John_Hicks
  2. https://en.wikipedia.org › wiki › Frank_William_Taussig
  3. https://en.wikipedia.org › wiki › Taxation_in_India


Return to the user page of "HK Sridevi/ನನ್ನ ಪ್ರಯೋಗಪುಟ".