ಗೌರಿ ಮತ್ತು ಗಣೇಶನ ಹಬ್ಬ

ಬದಲಾಯಿಸಿ

ಗೌರಿ ಮತ್ತು ಗಣೇಶನ ಹಬ್ಬ ಮುಖ್ಯವಾಗಿ ಭೂಮಿ ಮತ್ತು ಜಲ ಸಂಬಂಧದ ಆಚರಣೆಗಳನ್ನು ಹೊಂದಿವೆ. ಹೊಲಗದ್ದೆಗಳಲ್ಲಿ ಪೈರು ಮೊಳೆತು ಬೆಳೆ ಏಳುವುದರ ಆರಂಭಕಾಲದಲ್ಲಿ ಗೌರಿ-ಗಣೇಶ ಹಬ್ಬ ಕಾಲೂರುತ್ತದೆ. ಇದು ಹುಬ್ಬೆ-ಉತ್ತರೆ ಮಳೆಗಳ ತುಂಬು ಮಳೆಗಾಲ. ಬಯಲು ಸೀಮೆಯಲ್ಲಿ ರಾಗಿ, ಶೇಂಗಾ ಕಳೆ ತೆಗೆಯುವ ಹಂತದಲ್ಲಿರುತ್ತವೆ. ಈಗ ನಡೆಯುತ್ತಿರುವ ಆಬ್ಬರದ, ಆರ್ಭಟದ ಹಬ್ಬಕ್ಕೂ ಸಾಂಪ್ರದಾಯಿಕವಾದ ಹಬ್ಬಕ್ಕೂ ಅಜಗಜಂತರ ವ್ಯತ್ಯಾಸವಿದೆ. ಕೃಷಿಕರ ಗೌರಿ-ಗಣೇಶ ಆಚರಣೆಯ ಆಶಯವೇ ಬೇರೆ. ಗಣೇಶನ ಇನ್ನೊಂದು ಹೆಸರು ವಿಘ್ನೇಶ್ವರ ಎಂಬುದು ನಮಗೆಲ್ಲ ತಿಳಿದಿದೆ. ಬಹಳ ಹಿಂದೆ ರೈತರು ಹೊಲಗದ್ದೆಗಳ ಕಡೆಯಿಂದಲೇ ಮರಳು ಮಿಶ್ರಿತ ಕೆಂಪು ಮಣ್ಣನ್ನು ತಂದು, ಅದರಿಂದಲೇ ಗಣೇಶನನ್ನು ನಿರ್ಮಿಸಿ ಪೂಜಿಸುತ್ತಿದ್ದರು. ಪೂಜಾ ಸಾಮಗ್ರಿಯಲ್ಲಿ ಮುಖ್ಯವಾದುದು ಗರಿಕೆ. ತೋಟಗಳಲ್ಲಿ ಬೆಳೆಗೆ ತೊಂದರೆ ಕೊಡುವ ಮುಖ್ಯ ಕಳೆ ಗರಿಕೆ. ಈ ಗರಿಕೆಯ ಜತೆಗೆ ಧಾನ್ಯ ಶತ್ರು ಇಲಿಯೂ ಇರುತ್ತದೆ. ಗಣೇಶನ ಕಾಲ ಅಡಿಯಲ್ಲಿ ಇಲಿ, ಗಣೇಶನ ಒಂದು ಕೈಯಲ್ಲಿ ಧಾನ್ಯದ ತೆನೆ, ಇನ್ನೊಂದು ಕೈಯಲ್ಲಿ ಅದೇ ಧಾನ್ಯದಿಂದ ತಯಾರಿಸಿದ ಕಡುಬು ಇರುತ್ತದೆ. ಜನಪದ ಗೀತೆಗಳಲ್ಲಿ ಭೂಮಿಯನ್ನು ಸ್ತುತಿಸುವಾಗ ಎಳ್ಳು ಬೆಳೆಯುವ ಭೂಮಿ ಎಂದು ಹೇಳಲಾಗುತ್ತದೆ. ಈ ಎಳ್ಳಿನಿಂದ ತಯಾರಿಸಿದ ಉಂಡೆ ಗಣೇಶನಿಗೆ ಪ್ರಿಯ. ಇದರ ಜತೆಗೆ ಗಣೇಶನು ಚೆನ್ನಾಗಿ ಊಟ ಮಾಡಿದ್ದರಿಂದ ಆತನ ಹೊಟ್ಟೆ ದಪ್ಪವಾಗಿ, ಆ ಹೊಟ್ಟೆ ಒಡೆಯಬಾರದೆಂದು ಹಾವು ಸುತ್ತಿಕೊಂಡಿರುತ್ತಾನೆ ಎಂದು ಕಥೆ ಪ್ರಚಲಿತದಲ್ಲಿರುವುದು ಎಲ್ಲರೂ ತಿಳಿದ ವಿಷಯ. ಒಟ್ಟಾರೆ ಇಡೀ ಗಣೇಶನಲ್ಲಿ ಪ್ರಕ್ರಿತಿಯ ವಿವಿಧ ಅಂಗಗಳಿರುವುದನ್ನು ಗುರುತಿಸಬಹುದು.

ಗಣೇಶನ ಸಮೃದ್ಧಿಯ ಊಟ, ಒಂದು ಕೈಯ ತೆನೆ, ಇನ್ನೊಂದು ಕೈಯ ಕಡುಬು, ಕಾಲ ಕೆಳಗಿನ ಗರಿಕೆ ಮತ್ತು ಇಲಿ ಹಾಗೂ ಈ ಹಬ್ಬ ಬೆಳೆಗಳೆಲ್ಲಾ ಬೆಳವಣಿಗೆ ಹಂತದಲ್ಲಿರುವಾಗ ಬರುವುದು, ಇದೆಲ್ಲಾ ಭೂಮಿಯ ಮತ್ತು ಮಣ್ಣಿನ ವ್ಯವಸಾಯ ಸಂಬಂಧದ ಆಚರಣೆಯಾಗಿ ಕಾಣಿಸುತ್ತದೆ. ಆದರೆ ಕಾಲಕ್ರಮೇಣ ಗಣೇಶನ ರೂಪ ಮತ್ತು ಇನ್ನಿತರ ವಿವರಗಳ ಮೇಲೆ ಬೇರೆ ಬೇರೆ ಕಥೆಗಳು ಹುಟ್ಟಿಕೊಂಡು ಪ್ರಚಾರಕ್ಕೆ ಬಂದವು.

ಗಣೇಶನ ಹಬ್ಬ ಭೂಮಿ ಮತ್ತು ಪ್ರಕೃತಿ ಪ್ರಜ್ಞೆಯನ್ನು ಸಂಕೇತಿಸಿದರೆ, ಇದರೊಡನೆ ಹೊಂದಿಕೊಂಡು ಬರುವ ಗೌರಿಹಬ್ಬ ನೀರಿನ ಪೂಜೆಯನ್ನು ಕುರಿತು ಹೇಳುತ್ತದೆ. ಗಣೆಶನ ಹಬ್ಬಕ್ಕಿಂತ ಒಂದು ದಿನ ಮುಂಚೆ ಗೌರಿ ಹಬ್ಬ ಬರುತ್ತದೆ. ಇದಕ್ಕೆ ಹಳ್ಳಿಗರು ನೀಡುವ ಕಾರಣ. ತವರು ಮನೆಗೆ ಬರುವ ಗೌರಮ್ಮನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಮಗನಾದ ಗಣೇಶ ಒಂದು ದಿನ ತಡೆದು ಬರುತ್ತಾನೆ.

ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆಯ ಹೆಂಗಸರು ನೀರು ತುಂಬಿರುವ ಕೆರೆ, ಬಾವಿ ಅಥವಾ ಹರಿಯುವ ತೊರೆ ಕಡೆಗೆ ಹೋಗಿ ಆ ನೀರನ್ನು ಪೂಜಿಸಿ, ನೀರಿನೊಳಗೆ ಕೈಯಿಟ್ಟು ಒಂದು ಹಿಡಿ ಮರಳು ತರುತ್ತಾರೆ, ಅದನ್ನು ಮರಳು ಗೌರಮ್ಮ ಎಂದು ಕರೆಯುತ್ತಾರೆ. ಮತ್ತೆ ಕೆಲವೆಡೆ ಅರಿಷಿಣದ ಹುಂಡಿಯಿಂದ ತಯಾರಿಸಿದ ಮೂರ್ತಿಯನ್ನು ಗೌರಿಯೆಂದು ಮನೆಗೆ ತರುತ್ತಾರೆ. ವಾಸ್ತವವಾಗಿ ಇದು ಜಲಪೂಜೆಯೇ. ಈ ಗೌರಿ ಗಣೇಶನ ತಾಯಿಯೆಂದು ಹೆಸರಿಸಲಾಗಿದೆ. ಎಂದರೆ ಧಾನ್ಯ ದೇವತೆ ಗಣೇಶನಿಗೆ ಜಲದೇವತೆಯನ್ನು ತಾಯಿಯಾಗಿ ಕಲ್ಪಿಸಲಾಗಿದೆ.

ಮನೆಯಲ್ಲಿ ಗೌರಮ್ಮನನ್ನು ಕೂರಿಸಿ (ಪ್ರತಿಷ್ಠಾಪಿಸಿ) ಬಾಗಿನ ಕೊಡುತ್ತಾರೆ. ಈ ಬಾಗಿನದಲ್ಲಿ ಕಾರೆ ಹಣ್ಣು, ಯಲಚಿ ಹಣ್ಣು (ಬೋರೆ ಹಣ್ಣು) ಬಿಕ್ಕೆ ಹಣ್ಣು, ಹಸಿ ಅಕ್ಕಿ ತಂಬಿಟ್ಟು, ಎಳ್ಳಿನ ಚಿಗುಳಿ ಪ್ರಮುಖವಾಗಿರುತ್ತವೆ. ಹೊಸದಾಗಿ ಮದುವೆಯಾದವರು ಗೌರಮ್ಮನಿಗೆ ಪೂಜಿಸಿ ಬಾಗಿನ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಡ್ಡಾಯವಾಗಿ ತವರಿಗೆ ಬರುತ್ತಾರೆ. ಮರು ದಿವಸ ಗೌರಮ್ಮನ ಪಕ್ದಲ್ಲಿಯೇ ಗಣೆಶನ ವಿಗ್ರಹವನ್ನು ಕೂಡಿಸಿ ಕಡುಬಿನ ವಿಶೇಷ ಅಡುಗೆ ಮಾಡಿ ಅದರ ಮರುದಿನ ಇಬ್ಬರನ್ನೂ ನೀರಿಗೆ ಬಿಟ್ಟು ಬರುತ್ತಾರೆ. ಭೂಮಿ ಮತ್ತು ಜಲ ಪೂಜೆಯ ಆಚರಣೆ ಹೊಂದಿರುವ ಗೌರಿ- ಗಣೇಶನ ಈ ಹಬ್ಬ ಇಂದು ತನ್ನ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ.

Return to the user page of "Gautham100/sandbox".