ದೀಪಾವಳಿ ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಆಚರಿಸುವ ದಿನಗಳು

   ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ, ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ.
 
 ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. ೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.

ಆಚರಣೆ

   ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
   ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
   ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
   ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

Start a discussion about ಸದಸ್ಯ:Bharath kavoor/sandbox

Start a discussion
Return to the user page of "Bharath kavoor/sandbox".