ಕೊಡಗಿನ ಹುತ್ತರಿ

ಬದಲಾಯಿಸಿ

ರಾತ್ರಿ ಎಂಟೂವರೆಯ ಸಮಯ, ಹುಣ್ಣಿಮೆ ಬೆಳದಿಂಗಳು ಎಲ್ಲೆಲ್ಲೂ ಹರಡಿದ ತಣ್ಣನೆಯ ವಾತಾವರಣ. ಡಿಸೆಂಬರ್ ತಿಂಗಳ ಕೊರೆ ಬೀಳುವ ಕಾಲ. ಕೊಡಗಿನಲ್ಲಿ ಭತ್ತದ ಹೊಲಗಳು ಹಾಲುದುಂಬಿ ತೆನೆಗಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ. ಕೊಡವರಿಗೆ ಹುತ್ತರಿ ದೀಪಾವಳಿಗಿಂತಲೂ ಮಿಗಿಲಾದ ಹಬ್ಬ. ಬಯಲು ಸೀಮೆಯವರಿಗೆ ಸಂಕ್ರಾಂತಿ ಸುಗ್ಗಿಯ ಆಚರಣೆಯಾದರೆ ಹುತ್ತರಿ ಕೊಡವರಿಗೆ ಸುಗ್ಗಿಯ ಕ್ಷಣ. ಕೊಡವರಿಗೆ ಹುತ್ತರಿ ಹಬ್ಬ ಬಂತೆಂದರೆ ಹೊಸ ಸೊಸೆ ಮನೆ ತುಂಬಿದಷ್ಟೇ ಸಂಭ್ರಮ. ಹುಣ್ಣಿಮೆಯ ಪರಿಶುಭ್ರ ಬೆಳಕಿನಲ್ಲಿ, ಶುಭ ಸಂದರ್ಭವನ್ನು ನೋಡಿ ಈಡು ಹಾರಿಸುತ್ತಾ, ಪಟಾಕಿ ಸಿಡಿಸುತ್ತಾ ಭತ್ತದ ಕದಿರು ಕೊಯ್ಯುವುದರೊಂದಿಗೆ ಆಚರಿಸಲಾಗುವ ಹುತ್ತರಿ ಕೊಡವರ ಕೌಟುಂಬಿಕ ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತ. ಹುತ್ತರಿ ಕೊಡವರ ನಾಡಹಬ್ಬವೆಂದೇ ಪ್ರಚಲಿತ. ಚಿಕ್ಕ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪಾಲ್ಗೊಂಡು ಆಚರಿಸಲ್ಪಡುವ ಹುತ್ತರಿ ಕ್ಯಾಲೆಂಡರುಗಳಲ್ಲಿ ಸ್ಥಾನ ಪಡೆದಿರುವ ಬೆರಳೆಣಿಕೆಯ ಆಚರಣೆಗಳಲ್ಲೊಂದು. ಎಲ್ಲಾ ಪ್ರಮುಖ ಕ್ಯಾಲೆಂಡರುಗಳಲ್ಲಿ ಹುತ್ತರಿ ನಡೆಯುವ ದಿನಾಂಕವನ್ನು ಗಮನಿಸಬಹುದು. (ಡಿಸೆಂಬರ್ ತಿಂಗಳಿನಲ್ಲಿ) ಕೊಡವ ಭಾಷೆಯಲ್ಲಿ ಪುತ್ತರಿ (ಪುದಿಯ -ಅಕ್ಕಿ- ಹೊಸ ಅಕ್ಕಿ) ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಕನ್ನಡದಲ್ಲಿ ಹುತ್ತರಿ ಎಂದು ಕರೆಯುತ್ತಾರೆ. ಹಾಗೆಂದರೆ ಈಗಾಗಲೇ ಹೇಳಿದಂತೆ ಹೊಸ ಅಕ್ಕಿ ಎಂದರ್ಥ. ಹುತ್ತರಿ ಹಬ್ಬವು ಧಾನ್ಯ ಲಕ್ಷ್ಮಿಯನು ಮನೆಗೆ ಬರಮಾಡಿಕೊಳ್ಳುವ ಒಂದು ವಿಧಾನ. ಅಂದರೆ ಭತ್ತದ ಕದಿರುಗಳನ್ನು ಕಡಿದು ತಂದು ಶಾಸ್ತ್ರೋಕ್ತವಾಗಿ ಮನೆತುಂಬಿಸಿಕೊಳ್ಳಲಾಗುತ್ತದೆ. ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆ-ಮನೆಯ ಕಿಟಕಿ ಬಾಗಿಲುಗಳು ಮಾವಿನ ತೋರಣ, ಚೆಂಡು ಹೂವಿನ ಮಾಲೆಗಳಿಂದ ಅಲಂಕೃತಗೊಳ್ಳುತ್ತವೆ. ಸಂಜೆ ಪೂರ್ವ ದಿಕ್ಕಿನಲ್ಲಿ ಚಂದ್ರ ಉದಯವಾಗುತ್ತಿದ್ದಂತೆ ಹುತ್ತರಿಯ ಆಚರಣೆಗೆ ರಂಗೇರುತ್ತದೆ. ನೆಲ್ಲಕ್ಕಿ ಬಾಡೆಯಿಂದ ಇದು ಪ್ರಾರಂಭವಾಗುತ್ತದೆ. ಕದಿರು ಕಡಿಯಲು ಹೋಗುವ ಈ ಸಂದರ್ಭದಲ್ಲಿ ಕುಲ ದೇವರಾದ ಇಗ್ಗುತಪ್ಪನಿಗೆ ನಮಿಸಿ ಈ ಶುಭ ಕಾರ್ಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಕಾಪಾಡು ಎಂದು ಬೇಡಿಕೊಳ್ಳಲಾಗುತ್ತದೆ.

ಈ ಹಬ್ಬದ ಆಚರಣೆಗೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಅ ಉಡುಪಿನ ಜೊತೆಗೆ ಸೊಂಟಕ್ಕೆ ರೇಷ್ಮೆಯ ನಡುಪಟ್ಟಿ ಕಟ್ಟಿ ಅದರೊಳಕ್ಕೆ ಕತ್ತಿ ಸಿಗಿಸಿ ಮನೆಯ ಯಜಮಾನರಾದವರು ನೆಲ್ಲಕ್ಕಿ ಬಾಡೆಯಲ್ಲಿರುವ ಬೆಳಗುವ ದೀಪಕ್ಕೆ ಕೈಜೋಡಿಸಿ ನಮಿಸುತ್ತಾರೆ. ನಂತರ ಗುಂಪು-ಗುಂಪಾಗಿ ಭತ್ತದ ತಾಕಿನ ಕಡೆಗೆ ಸಾಗುತ್ತದೆ ಮೆರವಣಿಗೆ. ಡೋಲು ವಾದ್ಯಗಳು, ಕೋಲಾಟದ ತಂಡಗಳು ಜೊತೆಗೂಡುವುದರಿಂದ ಮೆರವಣಿಗೆ ಮತ್ತಷ್ಟು ಖದರು ಪಡೆಯುತ್ತದೆ.

ಗದ್ದೆಯ ಬಳಿ ತೆರಳಿ ಅಲ್ಲಿ ನಿಗದಿಪಡಿಸಿದ ಒಂದು ತಾಕಿನಲ್ಲಿ ಎಲ್ಲರೂ ಒಟ್ಟುಗೂಡಿ, ಹಾಲು-ಜೇನು ಹಾಗೂ ಹಣ್ಣು-ಕಾಯಿಯನ್ನು ಇಟ್ಟು, ಎಡೆಯನ್ನು ಭತ್ತದ ಪೈರಿನಡಿಗೆ ಸುರಿದು, ಸಾಂಬ್ರಾಣಿಯ ಹೊಗೆ ಕೊಟ್ಟು ಒಂದು ಹಿಡಿಯಷ್ಟು ಭತ್ತದ ಪೈರಿನ ಬುಡವನ್ನು ಕಟ್ಟಿ ಬಂದೂಕಿನಿಂದ ಗುಂಡು ಹಾರಿಸುತ್ತಾರೆ. ಬಳಿಕ ಮನೆ ಹಿರಿಯರು ಸುಬ್ರಹ್ಮಣ್ಯನನ್ನು ನೆನೆದು ಕದಿರು ಕೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪೊಲಿ ಪೊಲಿದೇವ ಪೊಲಿಯೇ ಬಾ ಎಂಬ ಕೂಗು ಮುಗಿಲು ಮುಟ್ಟುತ್ತದೆ, ಈ ಆಚರಣೆಯ ವಿಶೇಷ ತಿಂಡಿಗಳಾದ ತಂಬಿಟ್ಟು, ಏಳಕ್ಕಿಪುಟ್‌ಗಳನ್ನು ಎಲ್ಲರಿಗೂ ಹಂಚಲಾಗುತ್ತದೆ. ನಂತರ ಕೊಯ್ದ ಭತ್ತದ ಕದಿರುಗಳನ್ನು ತಂದು ಮನೆತುಂಬಿಸಿಕೊಳ್ಳಲಾಗುತ್ತದೆ.

ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೋಪಕ ಪುತ್ತರಿ ಎಣ್ಣತೆ ಪೋಚ್ ದಮ್ಮಯ್ಯ ಪುತ್ತರಿ ಒಮ್ಮೆಲು ಪೋತೆ ಎಂಬ ಹಾಡನ್ನು ಹಬ್ಬದ ಕೊನೆಯಲ್ಲಿ ಹಾಡಲಾಗುತ್ತದೆ. ಈ ಹಾಡಿನ ಅರ್ಥ; ಬರುವಾಗ ಹುತ್ತರಿ ಸಡಗರದಿಂದ ಬಂತು, ಹೋಗುವಾಗ ಹುತ್ತರಿ ಯಾರಿಗೂ ಹೇಳದೆ ಹೋಯಿತು, ಆದರೆ ಹುತ್ತರಿ ನೀನು ಒಮ್ಮೆಯೂ ಹೋಗದಿರು. ಹುತ್ತರಿಯಂದು ವಿಶೇಷ ಅಡುಗೆಗಳನ್ನು ಮಾಡಲಾಗುತ್ತದೆ. ಆಗ ತಾನೇ ಗದ್ದೆಯಿಂದ ಕುಯ್ದು ತಂದ ಭತ್ತದ ಕಾಳನ್ನು ಸುಲಿದು ಅಕ್ಕಿಯನ್ನು ಪಾಯಸಕ್ಕೆ ಸೇರಿಸಲಾಗುತ್ತದೆ. ಇದು ಹೊಸ ಅಕ್ಕಿ ಪಾಯಸ. ಇದನ್ನು ಬೇಯಿಸುವಾಗ ಐದಾರು ಪುಟ್ಟ-ಪುಟ್ಟ ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಊಟಕ್ಕೆ ಕುಳಿತಾಗ ಯಾರಿಗೆ ಈ ಕಲ್ಲಿನ ಚೂರುಗಳು ಸಿಗುತ್ತವೋ ಅವರಿಗೆ ಕಲ್ಲಾಯುಷ್ಯ (ಧೀರ್ಘಾಯುಷ್ಯ) ಲಭಿಸುತ್ತದೆನ್ನುವ ನಂಬಿಕೆ ಇದೆ. ಪಾಯಸದ ಜೊತೆಗೆ ಬಾಳೆ ಹಣ್ಣಿನಿಂದ ತಯಾರಿಸಿದ ತಂಬಿಟ್ಟು, ಘಮಘಮಿಸುವ ಏಲಕ್ಕಿ ಪೂಟ್, ವಿವಿಧ ರೀತಿಯ ಎಣ್ಣೆ ಖಾದ್ಯಗಳ ಸತ್ಕಾರ ನಡೆಯುತ್ತದೆ.

ಸಾಂಪ್ರದಾಯಿಕ ನೃತ್ಯಗಳು ಹಾಗೂ ಕ್ರೀಡೆಗಳ ಪ್ರದರ್ಶನ ಹುತ್ತರಿಯ ಮತ್ತೊಂದು ಆಕರ್ಷಣೆ. ಕೊಡವ ರೈತಾಪಿಗಳು ವಾರಗಟ್ಟಳೆ ಇದರಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಮತ್ತು ಶೌರ್ಯ ಮೆರೆಯುತ್ತಾರೆ. ಮುಂಚೆ ಕ್ರೀಡಾ ಪ್ರದರ್ಶನಕ್ಕಾಗಿಯೇ ಊರ ಹೊರಗೆ ಕ್ರೀಡಾಂಗಣವೊಂದನ್ನು ಮಾಡಲಾಗುತ್ತಿತ್ತು. ಅದಕ್ಕೆ ಮಂದ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಊರ ಎಲ್ಲರೂ ಸೇರಿ ಜನಪದ ಗೀತೆಗಳನ್ನಾಡುತ್ತಾ ಗುಂಪಾಗಿ ಕೂಡಿ ಎರಡೂ ಕೈಗಳಲ್ಲಿ ಬೆತ್ತದ ಬಾರುಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಲಯಬದ್ಧವಾಗಿ ತಿರುವುತ್ತಾ, ಬೀಸುತ್ತಾ ಕುಣಿಯುವ ಪರಿ ನೋಡಲು ಅದ್ಭುತ. ಇದಕ್ಕೆ ಹುತ್ತರಿ ಕೋಲಾಟ ಎಂದೇ ಕರೆಯಲಾಗುತ್ತದೆ. ಕೊಡವ ನೃತ್ಯಗಳಲ್ಲಿ ಇದು ಅತ್ಯಂತ ಜನಪ್ರಿಯ. ಹುತ್ತರಿಯ ಮತ್ತೊಂದು ಆಕರ್ಷಣೆ ಹೆಣ್ಣುಮಕ್ಕಳು ಭಾಗವಹಿಸುವ ಉಮ್ಮತ್ತಾಟ್ ನೃತ್ಯ.

ಕೃಷಿ ಆಚರಣೆಗಳಲ್ಲಿ ಕೊಡಗಿನ ಹುತ್ತರಿಗೆ ವಿಶಿಷ್ಟ ಸ್ಥಾನವಿದೆ. ಸುಗ್ಗಿಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಾಗೂ ತಮ್ಮ ಜಾನಪದ ನೃತ್ಯ ಸಂಗೀತಗಳನ್ನು ತಲೆಮಾರಿನಿಂದ ತಲೆಮಾರಿಗೆ ಒಯ್ಯುವ ಸಾಧನವಾಗಿಯೂ ಸಹ ಈ ಆಚರಣೆ ಬಳಕೆಯಾಗುತ್ತಿರುವುದು ಮಹತ್ವದ ಸಂಗತಿ. ಆದರೆ ಕೊಡಗಿನಲ್ಲಿ ಸಾಂಪ್ರದಾಯಿಕ ಬೆಳೆಯಾದ ಭತ್ತದ ಸ್ಥಾನವನ್ನು ನಿಧಾನಕ್ಕೆ ವಾಣಿಜ್ಯ ಬೆಳೆಗಳಾದ ಶುಂಠಿ ಮುಂತಾದವು ಆಕ್ರಮಿಸುತ್ತಿವೆ. ಇದು ಹುತ್ತರಿಗೆ ಶಾಶ್ವತ ಕುತ್ತು ತರುವ ಬದಲಾವಣೆಯಾಗಿದೆ. ಒಂದು ಬೆಳೆಯ ಬದಲಾವಣೆ ಸಮಗ್ರವಾಗಿ ನೋಡಿದರೆ ಚಿಕ್ಕ ಕ್ರಿಯೆಯಂತೆ ಕಂಡರೂ ಸಹ ಅದು ಒಂದು ಶ್ರೀಮಂತ ಕೃಷಿ ಸಂಸ್ಸೃತಿಯ ಕೊಂಡಿಯನ್ನೇ ಕಳಚಿ ಹಾಕುತ್ತಿರುವ ರೀತಿ ಭಯ ಹುಟ್ಟಿಸುವಂತಹುದು.

Return to the user page of "Amarnath100/sandbox".