ಸಂತ ಆಂಡ್ರೂಸ್ ಚರ್ಚ್
ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿ ಸಾಂಪ್ರದಾಯಿಕ ಪ್ರೆಸ್ಬಿಟೇರಿಯನ್ ಸ್ಕಾಟಿಶ್ ಕಟ್ಟಡ ವಿನ್ಯಾಸ ಹೊಂದಿರುವ ಈ ಚರ್ಚು ಡಣಡಣವೆನ್ನುವ ಗಡಿಯಾರದ ಗೋಪುರ ಹೊಂದಿದ್ದು ಸ್ಕಾಟ್‌ಲೆಂಡ್ ಪಾಲಕರಾದ ಸಂತ ಆಂಡ್ರೂ ಹೆಸರನ್ನು ಹೊತ್ತಿದೆ. ಪ್ರೆಸ್ಬಿಟೇರಿಯನ್ ಹಿನ್ನೆಲೆಯ ಸ್ಕಾಟಿಷ್ ಯೋಧರು ಮತ್ತು ಜನಸಾಮಾನ್ಯರ ಆಸಕ್ತಿಯ ಫಲವಾಗಿ ಈ ಚರ್ಚು ಮೈದಳೆಯಿತು. ಮೊದಲಿಗೆ ಈ ಗುಂಪು ದಂಡುಪ್ರದೇಶದ ಮನೆಯೊಂದರಲ್ಲಿ ಸೇರುತ್ತಿತ್ತು. ಬ್ರಿಟಿಷ್ ಆಯುಧಾಗಾರದ ಲೆಫ್ಟಿನೆಂಟ್ ಜನರಲ್ ಆಗಿದ್ದ ಸರ್ ಹೋಪ್ ಗ್ರ್ಯಾಂಟ್ ಅವರ ಶ್ರೀಮತಿಯವರಿಂದ ೧೮೬೪ ನವೆಂಬರ್ ೨೨ಕ್ಕೆ ಅಸ್ತಿಭಾರ ಬಿದ್ದು ೧೮೬೬ ಮೇ ವೇಳೆಗೆ ೪೫೦೦೦ರೂಪಾಯಿಗಳ ವೆಚ್ಚದಲ್ಲಿ ಈ ಗುಡಿ ಸಿದ್ಧವಾಯಿತು. ೧೦೫ ಅಡಿ ಉದ್ದ ೫೭ ಅಡಿ ಅಗಲ ಹಾಗೂ ೪೩ಅಡಿ ಎತ್ತರವಿರುವ ಈ ದೇವಾಲಯದ ಮುಖ್ಯ ಗೋಪುರದ ಎತ್ತರ ೯೦ಅಡಿಗಳು. ಕಿಟಕಿಗಳ ಗಾಜುಗಳಲ್ಲಿ ಬಣ್ಣದ ಚಿತ್ತಾರವಿದೆ. ಅದರಲ್ಲೂ ಪೀಠದ ಹಿಂದಿನ ೨೫ ಅಡಿಗಳೆತ್ತರದ ಚಿತ್ತಾರವಂತೂ ಮನಮೋಹಕವಾಗಿದೆ. ಬೋಧನಾ ಕಟಕಟೆಯು ತೇಗದಿಂದಾಗಿದ್ದು ಒಳ್ಳೆಯ ಕೆತ್ತನೆ ಹೊಂದಿದೆ. ಹೆಚ್ಚಿನ ಪಾಲು ಯೋಧರೇ ಇದರ ಸದಸ್ಯರಾಗಿದ್ದ ಕಾರಣದಿಂದ ಚರ್ಚಿನ ಗೋಡೆಗಳ ತುಂಬೆಲ್ಲ ಹಿತ್ತಾಳೆಯ ವೀರಪದಕಗಳೇ ತೂಗುತ್ತಿವೆ. ಈ ಚರ್ಚಿನ ಹೊರಗೋಡೆಗಳಿಗೆ ಅಚ್ಚಕೆಂಪು ಬಣ್ಣವನ್ನು ಬಳಿಯಲಾಗಿದ್ದು ಬೆಂಗಳೂರಿನ ಹೈಕೋರ್ಟು, ಶೇಷಾದ್ರಿ ಮೆಮೋರಿಯಲ್ ಹಾಲ್ ಹಾಗೂ ಸೆಂಟ್ ಜಾನ್ ಚರ್ಚ್ಗಳು ಕೂಡಾ ಇದೇ ಬಣ್ಣ ಹೊಂದಿವೆಯೆಂಬುದು ಕುತೂಹಲಕಾರಿಯಾಗಿದೆ. ಈ ಚರ್ಚಿನಲ್ಲಿ ೧೮೮೧ರಲ್ಲಿ ಅಳವಡಿಸಲಾದ ಪೈಪ್ ಆರ್ಗನ್ ಎಂಬ ವಾದ್ಯ ಹಾಗೂ ಗೋಪುರದಲ್ಲಿ ಶೋಭಿಸುತ್ತಿರುವ ೧೮೯೩ರಲ್ಲಿ ಅಳವಡಿಸಿದ ಬೃಹತ್ ಗಡಿಯಾರಗಳು ಇನ್ನೂ ಸುಸ್ಥಿತಿಯಲ್ಲಿವೆ. ಚರ್ಚಿನೊಳಗಡೆ ಸ್ಕಾಟ್ಲೆಂಡಿನ್ ಅಲೆಕ್ಸ್ ಬಲ್ಲಾಂಟೈನ್ ಅವರು ರಚಿಸಿದ ಅಬ್ರಹಾಂ, ಮೋಸೆಸ್, ದಾವಿದ್ ರಾಜ, ಪ್ರವಾದಿ ಯೆಶಾಯ, ಪ್ರೇಷಿತ ಆಂಡ್ರೂ, ಪೀಟರ್, ಪೌಲ್ ಮತ್ತು ಜಾನ್ ಅವರ ಚಿತ್ರಗಳು, ಉರಿವ ಪೊದೆ, ಚರ್ಚಿನ ಲಾಂಛನವಾದ ಆಲ್ಫಾ ಮತ್ತು ಒಮೇಗ ಹಾಗೂ ಅದರ ಮೇಲುಗಡೆ ಯೇಸುಕ್ರಿಸ್ತನ ಚಿತ್ರಗಳು ಮನಸೆಳೆಯತ್ತವೆ. ೧೯೫೯ ಸೆಪ್ಟೆಂಬರಿನಲ್ಲಿ ಈ ಚರ್ಚು ಸಿಎಸ್‌ಐ ಧರ್ಮಮಂಡಲಿಯ ಬಗಲಿಗೆ ಬಂತು.