ಸಂತ ಅಲೋಶಿಯಸ್ ಗೊಂಜಾಗಾ - ಯುವ ಸ್ಫೂರ್ತಿ
ಅಲೋಶಿಯಸ್ ಗೊಂಜಾಗಾರವರು ಮಾರ್ಚ್ ೯, ೧೫೬೮ ರಲ್ಲಿ ಮಾಕ್ವಿಸ್ ಕಾಸ್ಟಿಗ್ಲಿಯೋನ್ ಎಂಬ ಶ್ರೀಮಂತ ಮನೆತನದಲ್ಲಿ ಹುಟ್ಟಿದರು. ಚಿಕ್ಕ ವಯಸ್ಸಿನವರಾಗಿರುವಾಗಲೇ ಯೇಸುಕ್ರಿಸ್ತನ ಮೇಲೆ ಆಳವಾದ ವೈಯಕ್ತಿಕ ಪ್ರೀತಿಯು ಆತನಲ್ಲಿ ಬೆಳೆದಿತ್ತು. ಆತನ ಮುಗ್ದತೆ ಹಾಗೂ ನಿಷ್ಟಾವಂತ ಜೀವನದಿಂದಾಗಿ ಗೆಳೆಯರು ಆತನನ್ನು 'ದೇವದೂತ' ಎಂದು ಕರೆದರು. ತಂದೆಯ ಘೋರ ನಿರ್ಧಾರದ ವಿರುದ್ಧ ಹೋರಾಡಿ 'ಯೇಸುಸಭೆ'ಗೆ ಸೇರಿದನು. ಹೀಗೆ ತನ್ನೆಲ್ಲಾ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ, ದೇವರ ಹಾಗೂ ಪರರ ಸೇವೆಗೆ ಮುಂದಾದನು.
ಯೇಸುಸಭೆಯಲ್ಲಿ ಆತನ ಜೀವನ ಎಲ್ಲರಿಗೂ ಸ್ಪೂರ್ತಿದಾಯಕವಾಗಿತ್ತು. ಆತನ ವಿಧೇಯತೆಯ ಗುಣವಂತೂ ವರ್ಣಿಸಲಸಾಧ್ಯವಾಗಿತ್ತು. ಓದುವುದರಲ್ಲಂತೂ ಆತನದು ಎತ್ತಿದ ಕೈ. ಮಾಡುವ ಎಲ್ಲಾ ಕೆಲಸಗಳಲ್ಲಿ ವಿಶೇಷ ಬುದ್ದಿವಂತಿಕೆ ಹಾಗೂ ಚಾಣಾಕ್ಷತೆ ತೋರಿಸಿದನು.
ದೇವರ ಮೇಲಿನ ಪ್ರೀತಿ ನಿಜವಾಗುವುದು, ಅದನ್ನು ಇತರರಲ್ಲಿ ಕಾರ್ಯರೂಪಕ್ಕೆ ತಂದಾಗ ಮಾತ್ರ. ಢಾಂಬಿಕ ಭಕ್ತರಿಗೆ ಈತನ ಜೀವನ ದೊಡ್ಡ ಸವಾಲಾಗಿಯೇ ಕಾಣಿಸುತಿತ್ತು ಅಲೋಶಿಯಸ್ ತನ್ನ ಸರ್ವಸ್ವವನ್ನೇ ದೇವರ ಹಾಗೂ ಇತರರ ಸೇವೆಗೆ ಮುಡಿಪಾಗಿಟ್ಟಿದ್ದನು. ಒಮ್ಮೆ ರೋಮ್ ನಗರದಲ್ಲಿ ಭೀಕರ ಪ್ಲೇಗ್ ರೋಗ ದಾಳಿಯಿಕ್ಕಿತು. ಅದರ ಪ್ರಭಾವ ಎಲ್ಲೆಡೆ ಹಬ್ಬಿ, ಜನ ನರಳಲಾರಂಭಿಸಿದರು. ಅಲೋಶಿಯಸ್ ಯಾವತ್ತೂ ಸಾವಿಗೆ ಹೆದರಿದವನಲ್ಲ. ಯಾವುದೇ ಭಯವಿಲ್ಲದೆ, ರೋಗಗ್ರಸ್ಥ ಜನರ ಸೇವೆ ಮಾಡಿದನು. ಇದರ ಪರಿಣಾಮವಾಗಿ ಆತನಿಗೂ ಪ್ಲೇಗ್ ರೋಗ ತಗುಲಿತು. ಹೀಗೆ ೧೫೯೧, ಜೂನ್ ೨೦ರ ನಡುರಾತ್ರಿ ಕೊನೆಯುಸಿರೆಳೆದನು.
ಇಂತಹ ಮಹಾನ್ ವ್ಯಕ್ತಿಯನ್ನು ಕ್ರೈಸ್ತರ ಜಗದ್ಗುರು ೧೩ ನೆಯ ಪೋಪ್ ಬೆನೆಡಿಕ್ಟ್ ರವರು ಸಂತರನ್ನಾಗಿ ಮಾಡಿದರು. ಸಂತ ಅಲೋಶಿಯಸ್ ಗೊಂಜಾಗಾರವರ ಜೀವನ ಶೈಲಿ ಎಲ್ಲಾ ಯುವಪೀಳಿಗೆಗೆ ಸ್ಪೂರ್ತಿದಾಯಕವಾದದ್ದರಿಂದ, ನಂತರ ಅವರನ್ನು ಕ್ರೈಸ್ತ ವಿದ್ಯಾರ್ಥಿಗಳ ಹಾಗೂ ಯುವಕರ ಪಾಲಕ ಸಂತರನ್ನಾಗಿ ಗೌರವಿಸಲಾಗುತ್ತಿದೆ.