ಸಂತೆ

ವಾರ ಸಂತೆಯ ಕುರಿತು ಉಪಸಂಹಾರ

ಸಂತೆ ಎಂದರೆ ಜನಪದರು ವಾರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಒಟ್ಟುಗೂಡಿ ತಮ್ಮ ಗ್ರಾಮೀಣ ಹುಟ್ಟುವಳಿಗಳನ್ನು ವಿನಿಮಯ ಮಾಡಿಕೊಳ್ಳುವ ಆರ್ಥಿಕ ವ್ಯವಸ್ಥೆ (ಸ್ಯಾಂಡಿ). ಗ್ರಾಮೀಣ ಸಂಸ್ಕೃತಿಯ ಹಂತದಲ್ಲಿ ಹುಟ್ಟಿಕೊಂಡ ಒಂದು ವ್ಯಾಪಾರ ವ್ಯವಸ್ಥೆಯಿದು. ವ್ಯಾವಹಾರಿಕ ಬೆಳೆವಣಿಗೆಯ ಇತಿಹಾಸ ಮಾನವನ ನಾಗರಿಕತೆಯ ಇತಿಹಾಸದಂತೆಯೇ ಪ್ರಾಚೀನವಾದುದು. ಮಾನವ ಸಮಾಜ ಬೆಳೆದಂತೆ ವ್ಯಾಪಾರ-ವ್ಯವಹಾರ ವ್ಯವಸ್ಥೆಯೂ ಹಂತ ಹಂತವಾಗಿ ಬದಲಾವಣೆ ಹೊಂದುತ್ತ ಸರಳ ಘಟ್ಟದಿಂದ ಸಂಕೀರ್ಣ ಘಟ್ಟವನ್ನು ಮುಟ್ಟಿದೆ. ಪ್ರಾಚೀನಕಾಲದಲ್ಲಿ ಆದಿಮಾನವ ತನ್ನ ಮೂಲಭೂತ ಬೇಡಿಕೆಗಳನ್ನು ತಾನೇ ನೇರವಾಗಿ ತೃಪ್ತಿಪಡಿಸಿಕೊಳ್ಳುತ್ತಿದ್ದ. ಕಾಲಾನಂತರದಲ್ಲಿ ಒಂದೆಡೆ ನೆಲೆಯಾಗಿ ನಿಂತು ಪಶುಪಾಲನೆ, ಬೇಸಾಯಗಳೆರಡನ್ನೂ ತನ್ನ ಜೀವನ ಮಾರ್ಗಕ್ಕೆ ಪೂರಕವಾಗಿ ಬಳಸಿಕೊಳ್ಳಲು ಕಂಡುಕೊಂಡ. ತರುವಾಯ ಗುಂಪು ಜೀವನ ಗ್ರಾಮಗಳ ಸ್ಥಾಪನೆಗೆ ನಾಂದಿಯಾಯಿತು. ಪ್ರಾರಂಭದಲ್ಲಿ ಪ್ರತಿಯೊಂದು ಕುಟುಂಬಗಳೂ ಉತ್ಪಾದನಾ ಘಟಕಗಳಾಗಿದ್ದುವು. ಪ್ರತಿಯೊಂದು ಗ್ರಾಮವೂ ಸ್ವಯಂಪೂರ್ಣವಾಗಿತ್ತು. ಜನಜೀವನ ತುಂಬ ಸರಳವಾಗಿತ್ತು. ಮಾನವನ ಬದುಕಿನಲ್ಲಿ ಸಂಸ್ಕøತಿಯ ಪ್ರವೇಶವಾದಂತೆ ಕ್ರಮೇಣ ಅವನ ಮನೋಭಾವಗಳೂ ಬಯಕೆಗಳೂ ವಿಶಿಷ್ಟವಾಗಿ ಬೆಳೆಯಲಾರಂಭಿಸಿದುವು. ಜೀವನ ಸಂಕೀರ್ಣವಾಯಿತು. ಇದರಿಂದ ವೃತ್ತಿ ಸಮಾಜ ರೂಪುಗೊಂಡಿತು. ಕಸಬುಗಳು ಹುಟ್ಟಿಕೊಂಡವು. ಒಂದು ಗ್ರಾಮದಲ್ಲಿ ಎಲ್ಲ ಕಸಬುದಾರರೂ ಇರುತ್ತಿದ್ದರು. ತಮ್ಮಲ್ಲಿಯ ವಸ್ತುಗಳನ್ನು ಇತರರಿಗೆ ಕೊಟ್ಟು ತಮಗೆ ಬೇಕಾದುದನ್ನು ಇತರರಿಂದ ಪಡೆದುಕೊಳ್ಳುತ್ತಿದ್ದರು. ಸೇವಾವಿನಿಮಯ ವ್ಯವಹಾರಗಳು ಆ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದುವು. ಗ್ರಾಮದಲ್ಲಿ ವಾಸಿಸುವ ಜನ ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಹೆಚ್ಚು ಹೆಚ್ಚು ಉತ್ಪಾದಿಸಿ ತಮಗೆ ಹೆಚ್ಚಾದುದನ್ನು, ವಸ್ತು ಕೊರತೆ ಇರುವ ಹಾಗೂ ಅಗತ್ಯವಿರುವ ವಸ್ತುವನ್ನು ಬಯಸುವ ಜನರಿಗೆ ಕೊಟ್ಟು ತಮಗೆ ಬೇಕಾದ ವಸ್ತುವನ್ನು ಪಡೆಯುವ ವಿಧಾನವನ್ನು ಕಂಡುಕೊಂಡರು. ಇದನ್ನು ಸಾಟಿ ವ್ಯವಹಾರ ಅಥವಾ ಚಾಟಿ ವ್ಯವಹಾರ (ಬಾರ್ಟರ್ ಸಿಸ್ಟಮ್) ಎಂದು ಕರೆಯಲಾಗುತ್ತದೆ.

ಸಾಟಿ ವ್ಯವಹಾರಕ್ಕೆ ಯಾವುದೇ ನಿರ್ದಿಷ್ಟವಾದ ಸ್ಥಳವಿರಲಿಲ್ಲ. ತಮಗೆ ಬೇಕಾದುದನ್ನು ಪಡೆಯುವ ಸಲುವಾಗಿ ತಮ್ಮಲ್ಲಿರುವ ವಸ್ತುವನ್ನು ಹೊತ್ತುಕೊಂಡೋ ಗಾಡಿ ಅಥವಾ ಪ್ರಾಣಿಗಳ ಮೇಲೆ ಹೇರಿಕೊಂಡೋ ಹೋಗಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೆ ವಸ್ತು ವಿನಿಮಯದ ಮೂಲಕ ನಡೆಯುತ್ತಿದ್ದ ಸಾಟಿ ವ್ಯವಹಾರ ಸಮಯ ಸಂದರ್ಭಗಳ ಖಚಿತತೆಯಿಲ್ಲದೆ ತೊಡಕಿನದಾಗಿತ್ತು. ಹಾಗಾಗಿ ಸ್ಥಳೀಯ ವಾಗಿ, ಒಂದು ಗೊತ್ತಾದ ಸ್ಥಳದಲ್ಲಿ, ಎಲ್ಲರಿಗೂ ಅನುಕೂಲಕರವಾದ ದಿನದಲ್ಲಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವವರು ಮತ್ತು ಕೊಳ್ಳುವವರು ಒಂದುಗೂಡುವ ವ್ಯವಸ್ಥೆ ಹುಟ್ಟಿ ಕೊಳ್ಳುವುದು ಅನಿವಾರ್ಯವಾಯಿತು. ಈ ವ್ಯವಸ್ಥೆಯೇ ಸಂತೆ ಎಂಬ ಹೆಸರು ಪಡೆದುಕೊಂಡಿತು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂತೆ ಜರುಗುತ್ತಿದ್ದುವೆಂಬುದಕ್ಕೆ ಶಾಸನಾಧಾರಗಳಿವೆ. ಕರ್ನಾಟಕದಲ್ಲಿ ಸೊಂದಿ ಎಂಬಲ್ಲಿ ಭಾನುವಾರದ ಸಂತೆ ನಡೆಯುತ್ತಿತ್ತೆಂದು ಶಾಸನ ವೊಂದರಿಂದ ತಿಳಿದುಬರುತ್ತದೆ. ವಿಜಯನಗರದ ಕಾಲದಲ್ಲಿ ಒಂದೊಂದು ವಸ್ತುವಿಗೂ ಒಂದೊಂದು ಸಂತೆಗಳಿದ್ದವೆಂದು ರಾಬರ್ಟ್ ಸೀವೆಲ್ ಫರ್‍ಗಾಟನ್ ಎಂಪೈರ್ ಕೃತಿಯಲ್ಲಿ ದಾಖಲಿಸಿದ್ದಾನೆ. ಸಂತೆ ಎಂಬುದಕ್ಕೆ ಸಮಾನವಾಗಿ ಮಾರುಕಟ್ಟೆ (ಮಾರ್ಕೆಟ್) ಎಂಬ ಪದವನ್ನು ಪ್ರಪಂಚಾದ್ಯಂತ ಬಳಸುತ್ತಾರೆ. ಸಂತೆಯ ವ್ಯವಸ್ಥೆ ವಿಶ್ವದ ಎಲ್ಲ ಕಡೆಗಳಲ್ಲಿಯೂ ಒಂದಲ್ಲ ಒಂದು ರೂಪದಲ್ಲಿ ಇತ್ತೆಂಬುದಕ್ಕೆ ಅನೇಕ ನಿದರ್ಶನಗಳಿವೆ. ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ ಮೊದಲಾದೆಡೆಗಳಲ್ಲಿ ನಡೆಯುತ್ತಿದ್ದ ನಿಯತಕಾಲಿಕ ಪರಿಷೆಗಳು ಶಾಶ್ವತವಾದ, ನಿರಂತರವಾದ ವ್ಯಾಪಾರದ ಮೊದಲ ಹಂತಗಳಾಗಿದ್ದುವು. ಹಿಂದೆ ಸಂತೆಗಳನ್ನು ನಡೆಸಲು ಗ್ರಾಮೀಣರು ಆಡಳಿತ ನಡೆಸುವವರ ಅನುಮತಿ ಪಡೆದುಕೊಳ್ಳಬೇಕಾಗುತ್ತಿತ್ತು. ಸಂತೆ ತೆರ ನೀಡಬೇಕಾಗುತ್ತಿತ್ತು. ಫ್ರಾನ್ಸಿನ ಪಾಯ್ ಎಂಬಲ್ಲಿಯ ಜನ ವಾರಕ್ಕೊಂದು ಸಂತೆಯನ್ನೂ ವರ್ಷಕ್ಕೆರಡು ಪರಿಷೆಗಳನ್ನೂ ನಡೆಸಲು ರಾಜನ ಒಪ್ಪಿಗೆ ಪಡೆದುಕೊಳ್ಳುತ್ತಿದ್ದರೆಂದು ತಿಳಿದುಬರುತ್ತದೆ.

ಯಾವುದೇ ಊರಿನಲ್ಲಿ ನಡೆಯುವ ಸಂತೆಯಾಗಲಿ ಅದಕ್ಕೆ ಒಂದು ನಿರ್ದಿಷ್ಟ ಸ್ಥಳವಿರುತ್ತದೆ. ಇದನ್ನು ಸಂತೆಮಾಳ ಎಂದು ಕರೆಯಲಾಗುತ್ತದೆ. ಊರಿನ ಹೊರವಲಯದ ಬೋರೆಯ ಮೇಲೊ ಅಥವಾ ಊರಿನ ಮುಖ್ಯ ದೇವಸ್ಥಾನದ ಬದಿಯಲ್ಲಿ ಬೆಳೆಸಿದ ದೊಡ್ಡ ದೊಡ್ಡ ಮರಗಳ ನೆರಳಿನಲ್ಲೊ ಸಂತೆ ಸೇರುವುದು ವಾಡಿಕೆ. ಎಲ್ಲ ತರಹದ ಸಾಮಾನು ಸರಂಜಾಮುಗಳು ಸಂತೆಗೆ ಬರುತ್ತವೆ. ಅವುಗಳನ್ನು ಆಯಾಯಾ ಸರಕುಗಳಿಗೆ ತಕ್ಕಂತೆ ಆಸರ ಅಥವಾ ಆಸ್ರ ಎಂದು ವಿಭಾಗಿಸಿಕೊಂಡು ಗೊತ್ತಾದ ಸ್ಥಳಗಳಲ್ಲಿಟ್ಟುಕೊಂಡು ವ್ಯಾಪಾರಮಾಡುವ ವ್ಯವಸ್ಥೆ ಕಂಡುಬರುತ್ತದೆ. ಉದಾಹರಣೆಗೆ ದಿನಸಿ ಆಸ್ರ, ಬೆಲ್ಲದ ಆಸ್ರ, ಎಲೆ ಆಸ್ರ, ಕಾಯಿ ಆಸ್ರ, ದನಿನಾಸ್ರ ಇತ್ಯಾದಿ.

ಸಂತೆ ಎಲ್ಲ ಬಗೆಯ ಜನರು ಒಂದೆಡೆ ಸೇರುವ ಒಂದು ಸಂಕೀರ್ಣ ನೆಲೆ. ಸಂತೆ ಎಂದಮೇಲೆ ಇಲ್ಲಿ ಜನಜಂಗುಳಿ - ಸದ್ದುಗದ್ದಲ ಸಾಮಾನ್ಯ. ಮಾರುವವರು ತಮ್ಮ ವಸ್ತುವಿನ ಬೆಲೆ ಹಾಗೂ ಗುಣಮಟ್ಟವನ್ನು ಕೂಗಿ ಜಾಹಿರಾತುಪಡಿಸಿ ಜನರ ಗಮನಸೆಳೆಯಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ ಸಂತೆಯಲ್ಲಿ ಗದ್ದಲ ಅತಿಯಾಗಿರುತ್ತದೆ. ಹೀಗೆಯೇ ವಿವಿಧ ಜನಪದ ಮನರಂಜಕರು ಹೊಟ್ಟೆಪಾಡಿಗಾಗಿ ವಿಚಿತ್ರ ವೇಷಭೂಷಣಗಳನ್ನು ತೊಟ್ಟು ವಾದ್ಯ ಬಾರಿಸಿಕೊಂಡು ಕುಣಿಯುತ್ತ ವ್ಯಾಪಾರ ನಡೆಯುವ ಅಂಗಡಿ ಮುಗ್ಗಟ್ಟುಗಳ ಮುಂದೆ ಹೋಗಿ ದಾನ ಬೇಡುತ್ತಿರುತ್ತಾರೆ. ಇವರ ಜೊತೆಗೆ ಸಂತೆಯಲ್ಲಿ ಹೊಂಚುಹಾಕುವ ನಯವಂಚಕರು, ಗಂಟುಕಳ್ಳರು, ಸಂತೆ ಸೇರುವುದಕ್ಕೆ ಮೊದಲೇ ಆಯಕಟ್ಟಿನ ಸ್ಥಳ ಸೇರಿ, ಹಣ ಲಪಟಾಯಿಸಲು ಹೊಂಚುಹಾಕುತ್ತಿರುವುದೂ ಉಂಟು. ಆದ್ದರಿಂದಲೇ ಸಂತೆಗೆ ಸಂಬಂಧಪಟ್ಟಂತೆ ಜನಪದ ಸಾಹಿತ್ಯದಲ್ಲಿ ಹಲವು ಅನುಭವದ ಮಾತುಗಳು ಕಂಡುಬರುತ್ತವೆ. ಸಂತೆ ನೆರೆಯುವುದಕ್ಕಿಂತ ಮುಂಚೆ ಗಂಟುಕಳ್ಳರು ನೆರೆದರು, ಕಳ್ಳಕಳ್ಳರು ಕೂಡಿ ಸಂತೆ ಕಟ್ಟಿದ ಹಾಗೆ, ಸಂತೆ ಸೂಳೆ ನೆಚ್ಚಿ ಮನೆ ಹೆಂಡತಿ ಬಿಟ್ರು, ಸಂತೇಲಿ ಏನು ಅಗ್ಗ ಅಂದರೆ ಕದ್ದರೆ ಗುದ್ದು ಅಗ್ಗ, ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ, ಚಿಂತಿಲ್ಲದ ಮುಕ್ಕನಿಗೆ ಸಂತೇಲಿ ನಿದ್ದೆ ಬಂತು-ಈ ಮೊದಲಾದ ಗಾದೆಗಳು ಹುಟ್ಟಿಕೊಂಡಿವೆ. ಜನಪದ ಸಾಹಿತ್ಯದಲ್ಲಿ ಸಂತೆಯನ್ನು ಕುರಿತು ಹಲವು ಒಗಟುಗಳನ್ನೂ ಕಾಣಬಹುದು : ಸಂತೆ ಜನಕೆಲ್ಲ ಒಂದೇ ಹಾಸಿಗೆ ಒಂದೇ ಹೊದಿಕೆ (ಭೂಮಿ-ಆಕಾಶ), ಸಂತೆಗೆ ಹೋಗೋನ ತಿಕ ತಲೆಕೆಳಗು (ಕೋಳಿ), ಸಂತೆ ಹೋಗ್ತಾ ಚಿಂತೆ ಮಾಡ್ತಾ ಬೆನ್ನು ತಟ್ತಾ ಬೆಲೆ ಮಾಡ್ತಾ (ಮಡಿಕೆ), ಸಂತೆ ದಾರೀಲಿ ಕೆಂಪವ್ವ ಕೂತವಳೆ (ತಂಬುಲ), ಸಂತ್ಯಾಗ್ ತರ್ತಾರೆ ಮನ್ಯಾಗ್ ಅಳ್ತಾರೆ (ಈರುಳ್ಳಿ).

ಸಂತೆಗಳು ಒಂದು ಗೊತ್ತಾದ ವ್ಯಾಪ್ತಿಯ ಸುತ್ತುಮುತ್ತಲಿನ ಜನರ ಅನುಕೂಲಕ್ಕೆ ತಕ್ಕಂತೆ ನಡೆಯುತ್ತವೆ. ಸಂತೆಗೆ ಅಂಗಡಿ ಹಾಕುವ ಜನ ಆ ಪ್ರದೇಶದ ಸುತ್ತಲೂ ಸದಾ ಹೇರಿನೊಂದಿಗೆ ಸುತ್ತುತ್ತಿರುತ್ತಾರೆ. ಹೀಗೆ ಊರಿಂದ ಊರಿಗೆ ಹೋಗುವ ಅಂಗಡಿ ಮಾಲೀಕರು ಎಲ್ಲರಿಗೂ ಚಿರಪರಿಚಿತರಾಗಿರುತ್ತಾರೆ. ಭಾನುವಾರ-ಗೊರೂರಿನಲ್ಲಿ, ಸೋಮವಾರ-ಹೊಳೆನರಸೀಪುರದಲ್ಲಿ, ಮಂಗಳವಾರ-ಹಾಸನದಲ್ಲಿ, ಬುಧವಾರ-ಆಲೂರಿನಲ್ಲಿ, ಗುರುವಾರ-ಗಂಡಸಿಯಲ್ಲಿ, ಶುಕ್ರವಾರ-ಮೊಸಳೆ ಹೊಸಳ್ಳಿಯಲ್ಲಿ, ಶನಿವಾರ-ದುದ್ದದಲ್ಲಿ - ಹೀಗೆ ಜನರ ಅನುಕೂಲಕ್ಕೆ ತಕ್ಕಂತೆ ವಾರಸಂತೆಗಳಿರುತ್ತವೆ. ಸಂತೆ ನಡೆಯುವ ದಿನಗಳ ಹೆಸರುಗಳು ಸ್ಥಳನಾಮಗಳೂ ಆಗಿವೆ. ಸೋಮವಾರಪೇಟೆ, ಶನಿವಾರಸಂತೆ, ಸಂತೆಬೆನ್ನೂರು, ಸಂತೆಮಾರೂರು, ಸಂತೆಬಾಚಳ್ಳಿ, ಸಂತೆ ಬನ್ನೂರು, ಬಾರೆಸಂತೆ ಮುಂತಾದ ಸ್ಥಳಗಳು ಸಂತೆಯಿಂದಾಗಿಯೇ ಈ ಹೆಸರುಗಳನ್ನು ಪಡೆದಿವೆ. ಇಂದಿನ ಆಧುನಿಕ ಯುಗದಲ್ಲಿಯೂ ಸಂತೆಯ ಪ್ರಾಮುಖ್ಯಕ್ಕೆ ಕುಂದುಬಂದಿಲ್ಲ. ಇಂದಿಗೂ ಗ್ರಾಮೀಣರ ಬಹುಪಾಲು ಅಗತ್ಯಗಳನ್ನು ಸಂತೆಗಳು ಪೂರೈಸುತ್ತಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಂತೆ&oldid=1201717" ಇಂದ ಪಡೆಯಲ್ಪಟ್ಟಿದೆ