ಸಂಗನಕಲ್ಲು
ಸಂಗನಕಲ್ಲು ಬಳ್ಳಾರಿಯ ಬಳಿಯಲ್ಲಿರಿವ ಪ್ರಾಗೈತಿಹಾಸಿಕ ಸ್ಥಳ.
Sanganakallu
ಸಂಗನಕಲ್ಲು Sanganakal | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | Bellary district |
ತಾಲೂಕು | ಬಳ್ಳಾರಿ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
Vehicle registration | KA 34 |
ದಕ್ಷಿಣ ಭಾರತದ ಆದಿಮ ಮಾನವ ವಸತಿಗಳಲ್ಲಿ ಒಂದಾದ `ಸಂಗನಕಲ್ಲು' ಇಲ್ಲಿದೆ.
`ಸಂಗನಕಲ್ಲು', ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಜಾಗ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳಿನ್ನೂ ಮೂಡಿರದ, ಭಾಷೆ ಜಾತಿ ಮತ-ಧರ್ಮಗಳಿನ್ನೂ ಹುಟ್ಟಿರದ ಕಾಲಘಟ್ಟದಲ್ಲಿದ್ದ ಪೂರ್ವಜ ತಾಣವಿದು.
ಆದಿಮಾನವರು ಹಣ್ಣು ಹೆಕ್ಕಿ ತಿನ್ನುವ ಮತ್ತು ಪ್ರಾಣಿಬೇಟೆಯಾಡುವ ಹಂತದಿಂದ ಮುಂಚಲಿಸಿ, ಒಂದೆಡೆ ನೆಲೆನಿಂತು ಕೃಷಿ ಮಾಡುವ ಮತ್ತು ಪಶುಪಾಲನೆ ಮಾಡುವ ಹಂತಕ್ಕೆ ದಾಟಿದರು. ಆ ತಿರುವಿನ ಘಟ್ಟದಲ್ಲಿ ಉದಯಿಸಿದ ಜನವಸತಿಗಳಲ್ಲಿ ಸಂಗನಕಲ್ಲೂ ಒಂದು.
ನನಗೆ `ಸಂಗನಕಲ್ಲಿ'ನ ನಂಟು ತಗುಲಿದ್ದು ತೀರ ಆಕಸ್ಮಿಕವಾಗಿ. ನನಗೆ ಪ್ರಿಯರಾದ ಮೈಸೂರಿನ ಟಿ.ಎಸ್. ರಾಮಸ್ವಾಮಿ ಅವರು, `ಸಂಗನಕಲ್ಲಿ'ನ ಮೇಲೆ ದಶಕಗಳಿಂದ ಶೋಧ ಮಾಡುತ್ತಿರುವ, ತಮ್ಮ ಗೆಳೆಯರೂ ಆದ ಪುರಾತತ್ವಶಾಸ್ತ್ರ ವಿದ್ವಾಂಸರೂ ಆದ ಪ್ರೊ. ಕೋರಿಶೆಟ್ಟರ್ ಅವರ ಜತೆ ಕೆಲಸ ಮಾಡಲು ಹೇಳುತ್ತಿದ್ದರು. ನನ್ನದಲ್ಲದ ಕ್ಷೇತ್ರವೆಂದು ನಾನು ಉದಾಸೀನ ಮಾಡಿಕೊಂಡಿದ್ದೆ. ಒಮ್ಮೆ ಶೆಟ್ಟರ್ ಅವರು ಭೇಟಿಯಾಗಿ `ಸಂಗನಕಲ್' ಮ್ಯೂಸಿಯಂ ಕುರಿತ ತಮ್ಮ ಕನಸನ್ನು ಹಂಚಿಕೊಂಡ ಬಳಿಕ ಕುತೂಹಲ ಕೆರಳಿತು. `ಸಂಗನಕಲ್' ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಾಗಿತಿಹಾಸದ ಅವಶೇಷಗಳನ್ನು ನೋಡಲು ಬರುವ ಜನರಿಗೆ ಅರ್ಥವಾಗುವಂತೆ, ಕನ್ನಡದಲ್ಲಿ ವಿವರಣೆ ಬರಹಗಳನ್ನು ನಾನು ಬರೆದುಕೊಡಬೇಕೆಂಬುದು ಅವರ ಇರಾದೆ. ಒಪ್ಪಿದೆ. ಆದರೆ `ಸಂಗನಕಲ್ಲ'ನ್ನೇ ನೋಡದೆ ಬರೆಯುವುದಾದರೂ ಹೇಗೆ?
ಒಂದು ದಿನ, ಕೆಟ್ಟ ಬಿಸಿಲಿನಲ್ಲಿ ಕೋರಿಶೆಟ್ಟರ್ ಹಾಗೂ ಸ್ಥಳೀಯ ಪರಿಸರ ತಜ್ಞರಾದ ಸಂತೋಷ್ ಮಾರ್ಟಿನ್ ಅವರೊಡನೆ `ಸಂಗನಕಲ್ಲಿ'ಗೆ ಹೋದೆ. ಬಳ್ಳಾರಿಯಿಂದ ಮೋಕಾರಸ್ತೆಯಲ್ಲಿ 7 ಕಿ.ಮೀ ಫಾಸಲೆಯಲ್ಲಿ `ಸಂಗನಕಲ್' ಸಿಗುತ್ತದೆ. ಊರಹಿಂದೆ ಸಣ್ಣರಾಚಮ್ಮನ ಗುಡ್ಡ, ಸದಾಶಿವಗುಡ್ಡ, ಚೌಡಮ್ಮನಗುಡ್ಡ, ಸುದ್ದಲಮಟ್ಟಿಗುಡ್ಡ, ಹಿರೇಗುಡ್ಡ ಎಂಬ ಬೆಟ್ಟಗಳಿವೆ. ಬಂಡೆಗಲ್ಲಿನಿಂದ ಕೂಡಿದ ಹಸಿರಿನ ಕುರುಹಿಲ್ಲದ ಈ ಬೆಟ್ಟಗಳು ನನಗೆ ಬರಡಾಗಿ ಕಂಡವು. ಕೆಲವು ಕಡೆ ಬೇಕಾಬಿಟ್ಟಿ ಕ್ವಾರಿ ನಡೆದು ಅವುಗಳ ಮೈಯನ್ನು ಗೆಬರಿಹಾಕಲಾಗಿತ್ತು. ಬೆಟ್ಟಗಳಲ್ಲಿ ಸುತ್ತಾಡಿಸುತ್ತ, ಅಲ್ಲಿರುವ ಚಿತ್ರ, ಕೊಡಲಿ, ಮಸೆಬಂಡೆ, ಬೂದಿದಿಬ್ಬ, ಮನೆಬುನಾದಿಗಳ ಬಗ್ಗೆ ಪ್ರೊ. ಶೆಟ್ಟರ್ ವಿವರಿಸುತ್ತ ಹೋದರು. ಮಾತೆತ್ತಿದರೆ ಮೂರು ನಾಲ್ಕು ಸಾವಿರ ವರ್ಷಗಳ ಹಿಂದಿನ ಕಥನ. ಕೇಳುತ್ತ ಹೋದಂತೆ, ಈ ಬೆಟ್ಟಗಳು ತಮ್ಮ ಹೊಟ್ಟೆಯೊಳಗೆ ನಮ್ಮೆಲ್ಲರಿಗೂ ಪೂರ್ವಜರಾದವರ ವರ್ಣರಂಜಿತ ಚರಿತ್ರೆಯನ್ನು ಅಡಗಿಸಿಕೊಂಡಿರುವ ಸಂಪುಟಗಳಂತೆ ಭಾಸವಾದವು.
ಸಾಮಾನ್ಯವಾಗಿ `ಹಾಳು, `ಕಲ್ಲು' ಹೆಸರುಳ್ಳ ಊರುಗಳಿಗೆ ಪ್ರಾಚೀನ ಕಾಲದ ಇತಿಹಾಸ ಇರುತ್ತದೆ. ಇಂತಹ ಊರುಗಳು ಬಳ್ಳಾರಿ ಸೀಮೆಯಲ್ಲಿ ಹೇರಳ. ಉದಾಹರಣೆಗೆ- ಅಕ್ಕತಂಗೇರಹಾಳ, ಇಟ್ಟಗಿಹಾಳ, ಕುಡದರಹಾಳ, ಕೋಟಿಹಾಳು, ಬಂಡದರಹಾಳು, ಪೊಪ್ಪನಹಾಳು, ನಾಗರಹಾಳು, ಡೊಂಡೆಹಾಳು, ಗುಬ್ಬಿಹಾಳು, ಗೊಸಬಾಳು, ಮಂಜನಹಾಳು, ಹಾವಿನಹಾಳು, ಹಿರೇಹಾಳು, ಗೆಣಕಿಹಾಳು, ಜಾಲಿಹಾಳ, ತೆಗ್ಗಿನಬೂದಿಹಾಳ, ಅಂದ್ರಾಳು, ಪತ್ರಬೂದಿಹಾಳ, ಕಲ್ಲುಕುಟಿಗನಹಾಳ, ಗಜ್ಜಿನಹಾಳು, ಹಂದಿಹಾಳ, ಕ್ಯಾದಿಗಿಹಾಳ, ಬೊಮ್ಮನಹಾಳ, ಗೊನೆಹಾಳ, ಯತ್ತಿನಬೂದಿಹಾಳು, ಬೆಳಗಲ್ಲು, ಕಗ್ಗಲ್ಲು, ಕಪ್ಪಗಲ್ಲು ಬೆಣ್ಣಿಕಲ್ಲು, ಹಿರೇಕಲ್ಲು ಕರೇಕಲ್ಲು, ಕೊಳಗಲ್ಲು, ಸಂಗನಕಲ್ಲು ಇತ್ಯಾದಿ. ಇವುಗಳಲ್ಲೆಲ್ಲ ಹಗರಿಹೊಳೆ ಬಯಲಲ್ಲಿರುವ ಸಂಗನಕಲ್ಲು ಅತಿ ಪ್ರಾಚೀನವಾದುದು.
ಗತಕಾಲವನ್ನು ಭಾಷಿಕ ಪುರಾವೆ ಮೇಲೆ ಕಟ್ಟಿದ್ದರೆ ಅದು ಇತಿಹಾಸವೆಂದೂ, ಜನ ಬಳಕೆಯ ವಸ್ತುಗಳ ಆಧಾರದ ಮೇಲೆ ಕಟ್ಟಿದರೆ ಪ್ರಾಗಿತಿಹಾಸವೆಂದೂ ಕರೆಯುವುದು ವಾಡಿಕೆ. ಕರ್ನಾಟಕದ ಇತಿಹಾಸಯುಗ ಅಶೋಕನ ಶಾಸನಗಳಿಂದ (ಕ್ರಿ.ಪೂ. 3) ಶುರುವಾಗುತ್ತದೆ. `ಸಂಗನಕಲ್ಲು' ಅದಕ್ಕೂ ಹಿಂದಿನ ಕಾಲಘಟ್ಟದ್ದು. ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ `ಸಂಗನಕಲ್' ಬೆಟ್ಟಗಳಲ್ಲಿ ಆದಿಮಾನವ ಬದುಕಿನ ಅವಶೇಷಗಳಾದ ಕೈಗೊಡಲಿ, ಮಸೆಗಲ್ಲು, ಮಡಕೆ ಚೂರು, ಪ್ರಾಣಿಪಕ್ಷಿಗಳ ಎಲುಬು, ಬಂಡೆಚಿತ್ರ, ಬೂದಿದಿಬ್ಬ ಸಿಕ್ಕಿವೆ. ಪ್ರತಿ ಅವಶೇಷವೂ ಪೂರ್ವಜರ ಬಾಳಿನ ಒಂದೊಂದು ಮಜಲನ್ನು ನಿರೂಪಿಸುತ್ತವೆ. ಕಾರಂತರ `ಮೂಕಜ್ಜಿಯ ಕನಸುಗಳು' ಕಾದಂಬರಿಯ ಮೂಕಜ್ಜಿಯ ಹಾಗೆ ವರ್ತಮಾನದಲ್ಲಿ ಸಿಕ್ಕ ಅವಶೇಷವನ್ನು ಹಿಡಿದು, ಕಾಲಪ್ರವಾಹದಲ್ಲಿ ಸಹಸ್ರಾರು ವರ್ಷಗಳ ಹಿಂದಕ್ಕೆ ಹೋಗಿ, ಈ ಪೂರ್ವಿಕರು ನಡೆಸಿದ ಬಾಳಕಥೆಯನ್ನು ಕಲ್ಪಿಸಿಕೊಳ್ಳಬೇಕು, ಕಟ್ಟಿಕೊಳ್ಳಬೇಕು.
ಉದಾಹರಣೆಗೆ- ಕೊಡಲಿಯು ಯಾವ ಪ್ರಾಣಿಯ ಬೇಟೆಗೆ ಅಥವಾ ಯಾವ ಗಿಡದ ಕಡಿತಕ್ಕೆ ಬಳಕೆಯಾಗುತ್ತಿತ್ತು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇದರಂತೆ ಎಮ್ಮೆ, ದನ, ಕುರಿ, ಆಡು, ನಾಯಿ, ಕುದುರೆಯ ಎಲುಬುಗಳು ಇಲ್ಲಿದ್ದ ಪಶುಪಾಲನಾ ಪದ್ಧತಿಯ; ಚಿಗರೆಕೊಂಬು, ಹಂದಿಮೂಳೆಗಳು ಅವರು ಬೇಟೆಯಾಡುತ್ತಿದ್ದ ಪ್ರಾಣಿಗಳ ಕುರುಹುಗಳು; ಎಲುಬುಗಳ ಮೇಲಿರುವ ಕತ್ತರಿಸಿದ ಸುಟ್ಟ ಬೇಯಿಸಿದ ಗುರುತುಗಳು ಅವರ ಆಹಾರ ಪದ್ಧತಿಯನ್ನೂ; ಧಾನ್ಯದ ಅವಶೇಷಗಳು ಬೆಳೆ ಪದ್ಧತಿಯನ್ನೂ; ಕಾಳನ್ನು ಕುಟ್ಟುವ ಅರೆಯುವ ಉಪಕರಣಗಳು ಸಂಸ್ಕರಣ ವಿಧಾನವನ್ನೂ; ಮಡಕೆ ಚೂರಿನ ಮೇಲಿರುವ ನಕ್ಷೆಗಳು ಕಲೆಯನ್ನೂ; ಗೂಳಿಚಿತ್ರ ಹಾಗೂ ಬೂದಿದಿಬ್ಬಗಳು ಧಾರ್ಮಿಕ ರಿವಾಜುಗಳನ್ನೂ ಸೂಚಿಸುತ್ತವೆ.
ಆದಿಮಾನವರು ಕಲ್ಲಿನಿಂದ ಆಯುಧಗಳನ್ನು ಮಾಡುವ ಕಾಲಘಟ್ಟವನ್ನು ಶಿಲಾಯುಗವೆಂದೂ ಅದಿರನ್ನು ಕರಗಿಸಿ ಬಳಸತೊಡಗಿದ ಕಾಲಘಟ್ಟವನ್ನು ಲೋಹಯುಗವೆಂದೂ ಇತಿಹಾಸಕಾರರು ವಿಂಗಡಿಸಿದ್ದಾರೆ. `ಸಂಗನಕಲ್' ಶಿಲಾಯುಗಕ್ಕೆ ಸೇರಿದ್ದು. ಭಾರತದ ಪ್ರಾಗಿತಿಹಾಸದ ತಜ್ಞರು, ದಕ್ಷಿಣ ಭಾರತದ ಜನವಸತಿಗಳು ಈಚಿನವು ಎಂದೇ ತಿಳಿದಿದ್ದರು. ಆದರೆ `ಸಂಗನಕಲ್' ಅವಶೇಷಗಳು ಕ್ರಿಸ್ತಪೂರ್ವ ಎರಡು ಸಾವಿರದಿಂದ ಏಳನೇ ಶತಮಾನದ ಕಾಲಾವಧಿಯಲ್ಲಿ ನಾಗರಿಕತೆ ರೂಪುಗೊಂಡ ತಾಣವಿದು ಎಂಬುದನ್ನು ರುಜುವಾತುಪಡಿಸಿದವು. ಇಲ್ಲಿದ್ದ ಜನ ಕಲ್ಲನ್ನು ಚೂಪು ಮಾಡಿಕೊಳ್ಳುವುದಕ್ಕೆ ಚಕ್ಕೆಯೆಬ್ಬಿಸುವ ಹಂತದಿಂದ ಮಸೆದು ನಯಗೊಳಿಸುವ ಹಂತದವರೆಗೆ ಚಲಿಸಿದ್ದರು. ಬೇಟೆಯಾಡುತ್ತ ಹಸಿಮಾಂಸ ತಿನ್ನುತ್ತ ಅಲೆಮಾರಿಗಳಾಗಿದ್ದವರು, ಒಂದೆಡೆ ನೆಲೆನಿಂತು ಪಶುಪಾಲನೆ ಮತ್ತು ಕೃಷಿ ಆರಂಭಿಸಿದ್ದರು. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಬೆಟ್ಟಗಳಲ್ಲಿದ್ದ ಕಲ್ಲಾಸರೆ ಹಾಗೂ ಜಲಾಸರೆ. `ಸಂಗನಕಲ್ಲಿ'ನ ಬೆಟ್ಟಗಳಲ್ಲಿ ಈಗಲೂ ನೀರೊಸರುವ ಜಾಗಗಳಿವೆ.
ಕೋರಿಶೆಟ್ಟರ್ ಒಂದು ಸ್ವಾರಸ್ಯಕರ ಸಂಗತಿ ತಿಳಿಸಿದರು: ಭಾರತದ ಬಹುತೇಕ ನವಶಿಲಾಯುಗದ ತಾಣಗಳು ನದಿದಡದಲ್ಲಿವೆ. ದಕ್ಷಿಣ ಭಾರತದಲ್ಲಿ ಅವು ಹೆಚ್ಚಾಗಿ ಚಿಲುಮೆಗಳ ಬಳಿ ಮತ್ತು ಬೆಟ್ಟದ ಮೇಲಿವೆ. ಬೆಟ್ಟಗಳ ಮೇಲೆ ಜನ ನೆಲೆಸಲು ಕಾರಣ, ಅಂತರ್ಜಲ ಮಟ್ಟ ಮೇಲಿದ್ದ ಕಾರಣದಿಂದ ಸದಾ ಜೀವಂತವಾಗಿದ್ದ ಚಿಲುಮೆಗಳು. ಜತೆಗೆ ಈ ಬೆಟ್ಟಗಳಲ್ಲಿ ಮಾನವ ವಾಸಕ್ಕೆ ತಕ್ಕ ಗುಹೆಗಳಿರುತ್ತಿದ್ದವು. ಬೆಟ್ಟಗಳು ಕೊಡಲಿಗೆ ಬೇಕಾದ ಕಲ್ಲನ್ನು ಒದಗಿಸುತ್ತಿದ್ದವು; ಬಯಲಿಗಿಂತ ಹೆಚ್ಚಿನ ರಕ್ಷಣೆ ಕೊಡುತ್ತಿದ್ದವು; ಬೆಳೆದ ಹೊಲಗಳನ್ನು ಮೇಯುವ ದನಗಳನ್ನು ಬೆಟ್ಟಗಳ ಮೇಲಿಂದ ಪಕ್ಷಿನೋಟದಲ್ಲಿ ನೋಡಬಹುದಿತ್ತು. ಚಿತ್ರಕೊರೆಯಲು ಬೇಕಾದ ಬಂಡೆಭಿತ್ತಿಗಳಿದ್ದವು. ಕಲ್ಲು ಮತ್ತು ನೀರು ಅವರ ಸೃಜನಶೀಲತೆಯನ್ನು ಪುಟಿದೆಬ್ಬಿಸಿದ್ದವು. ನಾಲ್ಕು ವರ್ಷಗಳ ಹಿಂದಕ್ಕೆ ಮನಸ್ಸನ್ನು ಕಳಿಸಿ ಅಲ್ಲಿದ್ದಿರಬಹುದಾದ ಮಾನವ-ಪ್ರಾಣಿ ಜೀವನದ ಚಿತ್ರಗಳನ್ನು ಕಲ್ಪಿಸಿಕೊಳ್ಳಲು ಯತ್ನಿಸಿದೆ.
`ಸಂಗನಕಲ್ಲಿ'ನ ಪಕ್ಕದಲ್ಲಿ ಕಪ್ಪಗಲ್ಲು ಎಂಬ ಊರಿದೆ. ಈ ಹೆಸರು ಬರಲು ಕಾರಣ ಬಹುಶಃ ಇಲ್ಲಿನ ಗುಡ್ಡಗಳ ನೆತ್ತಿಯ ಮೇಲೆ ಗೋಡೆ ಕಟ್ಟಿದಂತಿರುವ ಕಪ್ಪುಗಲ್ಲುಗಳಿರಬೇಕು. ಈ ಕಪ್ಪುಗಲ್ಲುಗಳ ಜೋಡಣೆ ಡೈನೊಸೊರಸ್ಸಿನ ಬೆನ್ನಿನಂತೆ ಕಾಣುತ್ತವೆ. ಇವು ಬೆಟ್ಟದಲ್ಲಿರುವ ಮರಳಿನ ಬಣ್ಣದ ಮೂಲಬಂಡೆಗಳ ಎದೆ ಸೀಳಿಕೊಂಡು ಚಿಮ್ಮಿದ ಲಾವಾರಸದಿಂದ ಸೃಷ್ಟಿಯಾದವಂತೆ. ಕಬ್ಬಿಣದಂತೆ ಭಾರವಾಗಿರುವ ಈ ಕಪ್ಪುಗಲ್ಲುಗಳನ್ನೇ ಆದಿಮಾನವರು ಕೊಡಲಿ ಮಾಡಲು ಬಳಸಿದ್ದು. `ಸಂಗನಕಲ್ಲು' ಭಾರತದಲ್ಲೇ ಕಲ್ಗೊಡಲಿ ತಯಾರಿಸುವ ದೊಡ್ಡ ಕಾರ್ಖಾನೆಯಾಗಿತ್ತು ಎಂದು ಪ್ರಾಗಿತಿಹಾಸಕಾರರು ಭಾವಿಸಿದ್ದಾರೆ.
`ಕಾರ್ಖಾನೆ' ಎಂದು ಹೇಳುವುದಕ್ಕೆ ಸಾಕ್ಷಿಯಾಗಿ ಕೊಡಲಿ ತಯಾರಿಸುವಾಗ ಎದ್ದ ಚಕ್ಕೆಗಳ ರಾಶಿಯೇ ಬೆಟ್ಟದಲ್ಲಿತ್ತು; ಕಲ್ಗೊಡಲಿಯನ್ನು ಹರಿತಗೊಳಿಸಲು ಉಜ್ಜಿ ಉಜ್ಜಿ ಬಂಡೆಗಳ ಮೇಲೆ ಮೂಡಿರುವ ಗುರುತುಗಳೂ ಇದ್ದವು. ನನ್ನ ಕಣ್ಣುಗಳಂತೂ ಬಿದ್ದಕಲ್ಲುಗಳಲ್ಲಿ ಕೊಡಲಿಗಳನ್ನೇ ಕಾಣತೊಡಗಿದ್ದವು. ಅಷ್ಟರಲ್ಲಿ ಹಾದಿಬದಿಯಲ್ಲೇ ಬಿದ್ದಿದ್ದ ಒಂದು ಕಲ್ಗೊಡಲಿಯನ್ನು ಶೆಟ್ಟರ್ ಹೆಕ್ಕಿಕೊಟ್ಟರು. ಶಿಲಾಯುಗದ ಈ ಜನ ಇಷ್ಟೊಂದು ಕೊಡಲಿಗಳನ್ನು ತಯಾರಿಸಿ ಏನು ಮಾಡುತ್ತಿದ್ದರು ಎಂದು ಕೇಳಿದೆ. `ಕೊಡಲಿಗಳನ್ನು ಮರಕಡಿದು ವ್ಯವಸಾಯಕ್ಕೆ ಬೇಕಾದ ಭೂಮಿ ಪಡೆಯಲು, ಬೇಟೆಯಾಡಲು, ಪ್ರಾಣಿಗಳ ಮಾಂಸವನ್ನು ಕತ್ತರಿಸಲು ಬಳಸುತ್ತಿದ್ದರು. ಹೆಚ್ಚಿನವನ್ನು ಅಗತ್ಯವುಳ್ಳವರಿಗೆ ಮಾರಿ, ವಿನಿಮಯದಲ್ಲಿ ಹಣ್ಣು, ಮಾಂಸ, ದನ-ಧಾನ್ಯ ಪಡೆಯುತ್ತಿದ್ದರು. ಬಹುಶಃ ಬಳ್ಳಾರಿ ಮತ್ತು ರಾಯಲಸೀಮೆ ಇವರ ಮಾರುಕಟ್ಟೆಯಾಗಿತ್ತು. ಹೀಗಾಗಿ `ಸಂಗನಕಲ್' ಮಾನವರ ಚಟುವಟಿಕೆಗಳು ಬೇಟೆಗಾರಿಕೆಯಿಂದ ಶುರುವಾಗಿ ಪಶುಪಾಲನೆ, ಕೃಷಿ ವ್ಯಾಪಾರದ ತನಕ ಚಾಚಿಕೊಂಡಿದ್ದವು' ಎಂದು ಶೆಟ್ಟರ್ ವಿವರಿಸಿದರು.
`ಸಂಗನಕಲ್' ಗುಡ್ಡಗಳ ಕೆಳಗಿನ ಮೈದಾನದಲ್ಲಿ ಬೂದಿದಿಬ್ಬಗಳಿವೆ. ಅವು ವಿಭೂತಿರಾಶಿ ಕಲ್ಲಿನಾಕಾರ ಪಡೆದಂತೆ ಗಟ್ಟಿಯಾಗಿದ್ದವು. ವಾಸ್ತವವಾಗಿ ಅವು ಗುಡ್ಡೆಹಾಕಿದ ಸಗಣಿಯನ್ನು ಸುಟ್ಟಬಳಿಕ ಉಂಟಾದ ಕಿಟ್ಟಗಳಾಗಿದ್ದವು. ಆದಿಮಾನವರು ಯಾಕೆ ಸಗಣಿಗುಡ್ಡೆಗೆ ಬೆಂಕಿ ಕೊಡುತ್ತಿದ್ದರು ಎಂಬ ಸಂಗತಿ ನಿಗೂಢವಾಗಿಯೇ ಉಳಿದಿದೆ. ಇವು ಆದಿಮಾನವರ ಪಶುಪಾಲನಾ ಆರ್ಥಿಕತೆಯನ್ನು ಮಾತ್ರವಲ್ಲದೆ ಅವರ ಧಾರ್ಮಿಕ ಆಚರಣೆಯ ಕುರುಹು ಸಹ ಇರಬೇಕು ಎಂದು ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೂದಿದಿಬ್ಬಗಳಿಗೂ ಬಂಡೆಗಳಲ್ಲಿದ್ದ ಗೂಳಿಚಿತ್ರಗಳಿಗೂ ನಿಗೂಢವಾದ ಸಂಬಂಧವಿದೆ ಅನಿಸಿತು. ಎತ್ತರ ಹಿಣಿಲಿನ ಉದ್ದನೆ ಕೊಂಬಿನ ಬಲಿಷ್ಠ ಗೂಳಿಯು ಶಕ್ತಿ ಮತ್ತು ಅಧಿಕಾರದ ಸಂಕೇತವೆನಿಸಿ, ಪೂರ್ವಜರನ್ನು ವೃಷಭಾರಾಧನೆಗೆ ಪ್ರೇರೇಪಿಸಿರಬಹುದು. ಆದಿಮಾನವರು ತಮಗೆ ಉಪಯುಕ್ತವೆನಿಸಿದ ಪ್ರಾಣಿ, ಪಕ್ಷಿ, ಇಲ್ಲವೇ ಸಸ್ಯವನ್ನು ಆರಾಧಿಸುವುದು ಸಾಮಾನ್ಯ. ಇಲ್ಲಿನ ಬಂಡೆಚಿತ್ರಗಳಲ್ಲಿ ನವಿಲುಗಳಿದ್ದರೂ ಅತಿಹೆಚ್ಚು ಇರುವುದು ಗೂಳಿ.
ಹಿರೇಗುಡ್ಡದಿಂದ ಕೆಳಗೆ ಒಂದು ಮೈಲು ದೂರದಲ್ಲಿ, ಎರಡು ದೊಡ್ಡ ಬಂಡೆಗಳು ದಣಿದು ಒಂದರ ಹೆಗಲ ಮೇಲಿನ್ನೊಂದು ತಲೆಯಿಟ್ಟು ವಿಶ್ರಮಿಸುತ್ತಿರುವಂತೆ ನಿಂತಿರುವ ಬೀರಪ್ಪನ ಗುಡ್ಡವಿದೆ. ಇದರ ಕಲ್ಲಾಸರೆಯ ಒಳಗೋಡೆಗಳ ಮೇಲೆ ಕೆಂಬಣ್ಣದಲ್ಲಿ ಜಿಂಕೆ, ಸಾರಂಗ, ಕೀಟ, ಹಲ್ಲಿ, ಹಂದಿಯ ಚಿತ್ರಗಳಿವೆ. ಇವು ಶಿಲಾಯುಗದ ಮಾನವರಿಗೂ ಈ ಜೀವಿಗಳಿಗೂ ಇದ್ದ ಸಂಬಂಧ ಸೂಚಿಸುತ್ತವೆ. ಇಲ್ಲಿ ಸಿಕ್ಕಿರುವ ಕಪ್ಪು ಮತ್ತು ಕೆಂಪು ಮಡಕೆ ಚೂರುಗಳ ಮೇಲೆ ಚಿತ್ರಗಳಿವೆ. ಬಂಡೆ ಹಾಗೂ ಮಡಕೆ ಮೇಲಿನ ಚಿತ್ರಗಳು ಆದಿಮಾನವರ ಕಲ್ಪನೆ, ಭಾವನೆ, ಚಿಂತನೆಗಳ ಅಭಿವ್ಯಕ್ತಿಗಳು ಮಾತ್ರವಲ್ಲದೆ, ಅವರ ಆಹಾರ ಪದ್ಧತಿ, ಆರ್ಥಿಕತೆ ಮತ್ತು ಧಾರ್ಮಿಕ ನಂಬಿಕೆಗಳ ಸಂಕೇತಗಳೂ ಆಗಿವೆ.
ಹಿರೇಗುಡ್ಡದ ಒಂದು ವಿಶಾಲ ಬಂಡೆಯ ಮೇಲೆ ಜನ ಕೂರಲು ಲಾಳಾಕಾರದಲ್ಲಿ ಹಾಸಿರುವ ಕಲ್ಲಾಸನಗಳಿವೆ. ಇದು ಬಹುಶಃ ಆದಿಮಾನವರು ಚರ್ಚೆಗೆ ಸೇರುತ್ತಿದ್ದ ತಾಣವಿರಬೇಕು. ಸಾಮೂಹಿಕ ಕೊಡುಕೊಳೆಯ ಬದುಕು ಆರಂಭವಾಗಿದ್ದ ಸಂಕೇತವಿದೆಂದು ಶೆಟ್ಟರ್ ಹೇಳಿದರು. ನನಗೆ ನಮ್ಮ ಡೆಮಾಕ್ರಸಿಯ ಆದಿಮ ಪ್ರಯೋಗವಿರಬೇಕು ಎನಿಸಿತು.
ಮನುಷ್ಯ ನಾಗರಿಕತೆಯು ಚರಿತ್ರೆಯಲ್ಲಿ ಹಾದುಬಂದ ಹಣ್ಣುಸಂಗ್ರಹ, ಬೇಟೆ, ಪಶುಗಾಹಿಕೆ, ಒಕ್ಕಲುತನ, ವ್ಯಾಪಾರ ಎಂಬ ಐದೂ ಘಟ್ಟಗಳು `ಸಂಗನಕಲ್ಲಿ'ನಲ್ಲಿ ಇದ್ದುದಕ್ಕೆ ಬೇಕಾದ ಪುರಾವೆಗಳು ಈ ಬೆಟ್ಟಗಳಲ್ಲಿ ಸಿಕ್ಕುತ್ತವೆ. ಅದರಲ್ಲೂ ಬೇಸಾಯದ ವಿಷಯದಲ್ಲಿ `ಸಂಗನಕಲ್ಲಿ'ನ ಜನ ಅಪೂರ್ವವಾದ ಪ್ರಯೋಗಗಳನ್ನು ಮಾಡಿದಂತಿದೆ. ಇಲ್ಲಿ ಆಫ್ರಿಕಾ ಮೂಲದ ಹಲಸಂದಿ, ರಾಗಿ, ಜೋಳದ ಅವಶೇಷಗಳು ಸಿಕ್ಕುತ್ತಿವೆ. 3-4 ಸಾವಿರ ವರ್ಷಗಳ ಕಾಲಪ್ರವಾಹದಲ್ಲಿ ಕಾಳಿನ ಅವಶೇಷಗಳು ಉಳಿದುಬರುವುದುಂಟು ಎಂದು ನನಗೆ ಶಂಕೆ ಮೂಡಿತು. ಹುರಿಯುವಾಗ ಹೊತ್ತಿಹೋದ ಕಾಳನ್ನು ಆದಿಮಾನವರು ಬಿಸಾಡಿದ್ದಾರೆ. ಇದ್ದಿಲುರೂಪಕ್ಕೆ ಬಂದ ಆ ಕಾಳುಗಳು ಮಣ್ಣಿನಲ್ಲಿ ಕರಗದೆ ಸಹಸ್ರಾರು ವರ್ಷ ಉಳಿದುಬಂದಿವೆ. ರೇಡಿಯೊ ಕಾರ್ಬನ್ ಡೇಟಿಂಗ್ ಪ್ರಯೋಗದ ಮೂಲಕ ಅವುಗಳ ಕಾಲವನ್ನು ಖಚಿತವಾಗಿ ಕಂಡುಹಿಡಿಯಲಾಗುತ್ತದೆ ಎಂದು ಶೆಟ್ಟರ್ ವಿವರಿಸಿದರು.
ಇಂತಹ ಪ್ರಾಗೈತಿಹಾಸ ತಾಣಗಳು ಇತರ ಪ್ರವಾಸಿ ತಾಣಗಳ ಹಾಗೆ ಜನಪ್ರಿಯವಲ್ಲ. ಇವುಗಳ ಮೇಲೆ ಸ್ಥಳೀಯರಿಗೂ ಅರಿವು ಮತ್ತು ಆಸಕ್ತಿ ಕಡಿಮೆ. ನಿತ್ಯ ಬದುಕಿಗಾಗಿ ಹೋರಾಟ ಮಾಡಬೇಕಾದ ಪ್ರದೇಶಗಳಲ್ಲಿರುವ ಜನರಿಗೆ ಗತಕಾಲದ ಚರಿತ್ರೆಯ ಅವಶೇಷ ಕಟ್ಟಿಕೊಂಡು ಏನಾಗಬೇಕು? ಇವು ಮಹತ್ವದ ಸ್ಥಳಗಳೆಂದು ತಿಳಿದಿರುವ ಶಾಸ್ತ್ರಕ್ಕೆ ಜನರ ನಿತ್ಯ ಬದುಕಿನ ಹೋರಾಟದ ಬಗ್ಗೆ ಕುತೂಹಲವಿರುವುದಿಲ್ಲ. ಇನ್ನು ಕಲ್ಲುಮಣ್ಣು ಅದಿರು ಅಗೆದು ಮಾರಿಕೊಳ್ಳುವವರಿಗೆ ಇಂತಹ ಬೆಟ್ಟಗಳು ಹಣದಗುಡ್ಡೆಗಳಂತೆ ತೋರುತ್ತವೆ. ಪ್ರಾಗಿತಿಹಾಸದ ತಾಣಗಳಿಗೆ ಇತಿಹಾಸಯುಗದ ಅವಶೇಷಗಳಿಗಿರುವಂತೆ ಜನರ ಭಾವನಾತ್ಮಕ ಸಂಬಂಧಗಳೂ ಇರುವುದಿಲ್ಲ. ಯಾಕೆಂದರೆ, ಇಲ್ಲಿ ಚಿತ್ರ, ಕೊಡಲಿ, ಬೂದಿಗುಪ್ಪೆಗಳಿರುತ್ತವೆ; ಮಸೀದಿ, ಚರ್ಚು, ಗುಡಿಗಳಿರುವುದಿಲ್ಲ. ಧಾರ್ಮಿಕ ಸ್ಥಳವಾದರೆ ಅಥವಾ ಕೃಷ್ಣದೇವರಾಯ, ಟಿಪ್ಪು, ಶಿವಾಜಿ ಮುಂತಾದ ಇತಿಹಾಸ ಯುಗದ ವ್ಯಕ್ತಿಗಳಾದರೆ, ಹಕ್ಕುಸಾಧಿಸಲು ಜನ ಮುಗಿಬೀಳುತ್ತಾರೆ.
`ಸಂಗನಕಲ್' ಬೆಟ್ಟಗಳನ್ನು ಸುತ್ತಾಡಿ ಬಂದ ಬಳಿಕ: `ಸದ್ಯ ಚಾಲ್ತಿಯಲ್ಲಿರುವ ಯಾವುದೇ ಜಾತಿಮತಗಳಿಗೂ ಸೇರದ `ಸಂಗನಕಲ್ಲಿ'ನಲ್ಲಿರುವುದು ಜಗತ್ತಿನ ತಂದೆತಾಯಿಗಳಿಗೆ ಸಂಬಂಧಪಟ್ಟ ಪ್ರಾಗಿತಿಹಾಸ; ನಮ್ಮನ್ನೆಲ್ಲ ಜಾತಿ ಭಾಷೆ ಧರ್ಮ ಪ್ರದೇಶಾತೀತವಾದ ಕೊಂಡಿಯಲ್ಲಿ ಕೂಡಿಸಬಲ್ಲ ಮನುಕುಲದ ಕಥನ; ನಿಸರ್ಗದ ಜತೆ ಹೋರಾಡುತ್ತ ಕಲ್ಲಾಯುಧ ತಯಾರಿಸುವ, ಬೇಟೆಯಾಡುವ, ಬೇಸಾಯ ಮಾಡುವ, ಪ್ರಾಣಿಸಾಕುವ, ಚಿತ್ರಕೊರೆಯುವ, ಮಡಕೆ ಮಾಡುವ, ಮನೆಕಟ್ಟುವ ದಿಸೆಯಲ್ಲಿ ಮೊದಲ ಪ್ರಯೋಗಗಳನ್ನು ಮಾಡಿದ ಪೂರ್ವಿಕರ ಊರಿದು; ನಾಗರಿಕತೆಯ ಸುದೂರದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನು ಇಟ್ಟು ನಡೆದ ಈ ಪೂರ್ವಜರ ತಾಣವಿದು ಎಂದು ಅನಿಸಿ, ಅಭಿಮಾನ ಮೂಡಿತು.
`ಸಂಗನಕಲ್ಲಿ'ನ ಮಹತ್ವವನ್ನು ಜಗತ್ತಿಗೆ ಮೊದಲು ತಿಳಿಸಿದವನು ಭಾರತದ ಪ್ರಾಗಿತಿಹಾಸದ ಪಿತಾಮಹ ಎಂದು ಕರೆಯಲಾಗುವ ರಾಬರ್ಟ್ ಬ್ರೂಸ್‌ಫೂಟ್. ಈತ ಬಳ್ಳಾರಿಯಲ್ಲಿ (1885) ವಾಸವಾಗಿದ್ದನು. `ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ'ದ ಭೂವಿಜ್ಞಾನಿಯಾಗಿದ್ದ ಈತ ಮುಂದೆ ಮೈಸೂರು ಸರ್ಕಾರದ ಜಿಯಲಾಜಿಕಲ್ ಡಿಪಾರ್ಟ್‌ಮೆಂಟಿನ ಮುಖ್ಯಸ್ಥನಾಗಿಯೂ (1894-97) ಕೆಲಸ ಮಾಡಿದನು. ತಮಿಳುನಾಡಿನ ಪಲ್ಲಾವರಂ ಎಂಬಲ್ಲಿ ಕಸದಲ್ಲಿ ಬಿದ್ದಿದ ಶಿಲಾಯುಗಕ್ಕೆ ಸೇರಿದ ಒಂದು ಕಲ್ಗೊಡಲಿಯನ್ನು ಬಾಗಿ ಹೆಕ್ಕಿಕೊಂಡ ಗಳಿಗೆಯಿಂದ (1864) ಭಾರತದ ಪ್ರಾಗೈತಿಹಾಸದ ಅಧ್ಯಯನಗಳು ಶುರುವಾದವು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಶಾಸ್ತ್ರಕ್ಕೆ ಸರಿಯಾಗಿ 150 ವರ್ಷ ತುಂಬಿದವು. ಈ ಸಂದರ್ಭದಲ್ಲಿ ನಮ್ಮ ಪೂರ್ವಿಕರ ಚರಿತ್ರೆಯನ್ನು ಜನರಿಗೆ ಮುಟ್ಟಿಸಲು ಪ್ರೊ. ಕೋರಿಶೆಟ್ಟರ್ ಹಾಗೂ ಅವರ ಸಂಗಾತಿಗಳು ಬಹಳ ಕಷ್ಟವಹಿಸಿ, ಮುತುವರ್ಜಿಯಿಂದ ಮ್ಯೂಸಿಯಂ ಆರಂಭಿಸುತ್ತಿದ್ದಾರೆ. ಇದು ಬಿಸಿಲೂರು ಬಳ್ಳಾರಿಗೆ ಹೊಸ ಚಹರೆ ದೊರಕಿಸಿಕೊಡಲಿದೆ.