ಶ್ರೀ ಆದಿನಾಥ ಸ್ವಾಮಿ ಬಸದಿ, ಎಳನೀರು
ಶ್ರೀ ಆದಿನಾಥ ಸ್ವಾಮಿ ಬಸದಿಯು ದಕ್ಷಿಣ ಕನ್ನಡ ಜಿಲ್ಲೆಯ ಎಳನೀರಿನಲ್ಲಿದೆ. ಈ ಊರಿನಲ್ಲಿರುವ ಜೈನ ಮಂದಿರದ ಪೂರ್ತಿ ಹೆಸರು ಶ್ರೀ ಸಾವಿರದ ಎಂಟು ಆದಿನಾಥ ಜೈನ ಮಂದಿರ.ಎಳನೀರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮಕ್ಕೆ ಸೇರಿದೆ. ಜೈನ್ ಮಂದಿರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಇದೆ. ಉದಾಹರಣೆಗೆ ಕಾರ್ಕಳದಲ್ಲಿ ಆನೆಕೆರೆಯ ಮಧ್ಯದಲ್ಲಿ ನಿರ್ಮಾಣಗೊಂಡ ಕೆರೆ ಬಸದಿಯಂದೆ ಕರೆಯಲ್ಪಡುವ, ಚತುರ್ಮೂಖ ಬಸದಿ[೧]ಮತ್ತು ಕಾರ್ಕಳದ ಗ್ರಾಮವಾದ ವರಂಗದ ನೇಮಿನಾಥ ಬಸದಿ ಮತ್ತು ಚಂದ್ರನಾಥ ಬಸದಿ ಸೇರಿದಂತೆ ಇತರ ಜೈನ ದೇವಾಲಯಗಳಿಗೆ ನೆಲೆಯಾಗಿದೆ. ಈ ದೇವಾಲಯಗಳು ಜೈನ ಧರ್ಮದ ವಿಕಸನಕ್ಕೆ ಮೂಕ ಸಾಕ್ಷಿಗಳಾಗಿ ನಿಂತಿವೆ, ಇದರ ಬೇರುಗಳು ೭ ಅಥವಾ ೮ ನೇ ಶತಮಾನದಷ್ಟು ಹಿಂದಿನದು[೨]. ಶಿಮ್ಲಾದಲ್ಲಿರುವ (ಹಿಮಾಚಲ ಪ್ರದೇಶ) ಜೈನ ಬಸದಿಯಲ್ಲಿ ಹಿಂದು ಸಂಸ್ಕೃತಿಯ ಶಿಸ್ತು, ಸಜ್ಜನಿಕೆ ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿ ದೇಗುಲದ ಅಧಿಕಾರಿಗಳು ಶಿಮ್ಲಾದ ಶತಮಾನಗಳಷ್ಟು ಹಳೆಯದಾದ ಜೈನ ದೇವಾಲಯಕ್ಕೆ ಚಿಕ್ಕ-ಉದ್ದದ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ್ದಾರೆ.[೩]
ಮಾರ್ಗ
ಬದಲಾಯಿಸಿಇಲ್ಲಿಗೆ ಹೋಗಲು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮೂರು ಮಾರ್ಗಗಳಿವೆ.
- ಕುದುರೆಮುಖ ಮಾರ್ಗ : ಧರ್ಮಸ್ಥಳದಿಂದ ಬಜಗೋಳಿಗೆ ತಲುಪಿ, ನಂತರ ಕುದುರೆಮುಖದ ಮೂಲಕ ಸಂಸ್ಥೆಯನ್ನು ತಲುಪಿ ಅಲ್ಲಿಂದ ನಾಲ್ಕು ಕಿಲೋಮೀಟರ್ ಒಳದಾರಿಯಲ್ಲಿ ಕ್ರಮಿಸಿದರೆ ಎಳನೀರಿನ ಆದಿನಾಥ ಜೈನ ಮಂದಿರವನ್ನು ತಲುಪಬಹುದು. ಇದು ಇಲ್ಲಿಂದ ಸುಮಾರು ೧೧೦ ಕಿಲೋ ಮೀಟರ್ ದೂರವನ್ನು ಹೊಂದಿದೆ.
- ಕೊಟ್ಟಿಗೆಹಾರ ಮಾರ್ಗ : ಧರ್ಮಸ್ಥಳದಿಂದ ಕೊಟ್ಟಿಗೆಹಾರಕ್ಕೆ ಕಳಸವನ್ನು ತಲುಪಿ, ನಂತರ ಸಂಸ್ಥೆಯನ್ನು ತಲುಪಿ, ನಂತರ ಅದೇ ದಾರಿಯಲ್ಲಿ ನಾಲ್ಕು ಕಿಲೋಮೀಟರ್ ಒಳದಾರಿಯಲ್ಲಿ ಕ್ರಮಿಸಿದರೆ ಎಳನೀರಿನ ಆದಿನಾಥ ಜೈನಮಂದಿರವನ್ನು ತಲುಪಬಹುದಾಗಿದೆ. ಇದು ಸುಮಾರು ೧೨೦ ಕಿಲೋ ಮೀಟರ್ ದೂರವನ್ನು ಹೊಂದಿದೆ.
- ದಿಡುಪೆ (ಎಳನೀರು ಘಾಟಿ) ಮಾರ್ಗ : ಧರ್ಮಸ್ಥಳದಿಂದ ಎಳನೀರು ಘಾಟಿಯ ಮೂಲಕ ಎಳನೀರಿನ ಆದಿನಾಥ ಜೈನ ಮಂದಿರವನ್ನು ತಲುಪಬಹುದು. ಇದು ಅಂದಾಜು ೩೨ ಕಿಲೋಮೀಟರ್ ದೂರವನ್ನು ಹೊಂದಿದೆ.
ಇತಿಹಾಸ
ಬದಲಾಯಿಸಿಇಲ್ಲಿ ಪೂಜಿಸಲ್ಪಡುವ ಮೂಲನಾಯಕರು ಆದಿ ತೀರ್ಥಂಕರ ಭಗವಾನರು, ಇಲ್ಲಿನ ತೀರ್ಥಂಕರ ಮೂರ್ತಿ ಕಪ್ಪುಶಿಲೆಯದ್ದಾಗಿದ್ದು ಇದನ್ನು ನೆಲ್ಲಿಕಾರು ಶಿಲೆ ಎಂದು ಕರೆಯುತ್ತಾರೆ. ಗುರುಗಳು ತಿಳಿಸುವ ಪ್ರಕಾರ ಈ ಮೂರ್ತಿಯೂ ಸುಮಾರು ಎಂಟು ನೂರು ವರ್ಷ ಹಳೆಯದಾಗಿದೆ. ಈ ಮೂರ್ತಿ ಖಡ್ಗಾಸನದ ಭಂಗಿಯಲ್ಲಿದೆ. ಇದಕ್ಕೆ ಪದ್ಮ ಪೀಠವಿದ್ದು ಅದು ದೇವರ ಪಾದದ ಕೆಳಗೆ ಅರಳಿದ ತಾವರೆಯ ರೂಪದಲ್ಲಿದೆ, ಅದರಿಂದ ಕೆಳಗೆ ಅಭಿಷೇಕದ ನೀರು ಹೋಗುವ ದಾರಿಯಿದೆ.
ಮೂರ್ತಿ
ಬದಲಾಯಿಸಿ- ಗೋಮುಖಯಕ್ಷ : ಈ ಮೂರ್ತಿಯು ನಿಂತ ಭಂಗಿಯಲ್ಲಿದೆ. ಈ ಮೂರ್ತಿಯು ಆದಿನಾಥಸ್ವಾಮಿಯ ಪಾದದ ಬಲಭಾಗದ ಬಳಿಯಲ್ಲಿ ಈ ಮೂರ್ತಿಯಿದ್ದು ಒಂದೇ ಶಿಲೆಯಿಂದ ಕೆತ್ತಲಾಗಿದೆ. ಈ ಮೂರ್ತಿಯ ಮುಖವು ಗೋವಿನ ರೂಪದಲ್ಲಿದ್ದು , ದೇಹದ ಭಾಗವು ಮನುಷ್ಯನ ರೀತಿಯಲ್ಲಿದೆ. ಇದರ ಆಯುಧ ಗದೆ, ಶಂಖ, ಚಕ್ರ ಮತ್ತು ತೆಂಗಿನಕಾಯಿ.
- ಚಕ್ರೇಶ್ವರಿ : ಈ ಮೂರ್ತಿಯೂ ನಿಂತ ಭಂಗಿಯಲ್ಲಿದೆ. ಈ ಮೂರ್ತಿಯು ಆದಿನಾಥಸ್ವಾಮಿಯ ಪಾದದ ಎಡಭಾಗದ ಬಳಿಯಲ್ಲಿ ಈ ಮೂರ್ತಿಯಿದ್ದು ಇದನ್ನು ಕೂಡಾ ಏಕ ಶಿಲೆಯಲ್ಲಿ ಕೆತ್ತಲಾಗಿದೆ. ಈ ಮೂರ್ತಿಯು ಮನುಷ್ಯನ ರೂಪವನ್ನು ಹೊಂದಿದೆ. ಇದರ ಆಯುಧ ಗದೆ, ಶಂಖ, ಚಕ್ರ ಮತ್ತು ತೆಂಗಿನಕಾಯಿ.
- ಪದ್ಮಾವತಿ ಅಮ್ಮನವರ ಮೂರ್ತಿ : ಈ ಮೂರ್ತಿಯೂ ವಿಶೇಷ ಪೂಜೆಯನ್ನು ಪಡೆಯುತ್ತದೆ. ಈ ಮೂರ್ತಿಯು ಆದಿನಾಥಸ್ವಾಮಿಯ ಪಾದದ ಎತ್ತರಕ್ಕೆ ಪದ್ಮಾವತಿ ಅಮ್ಮನವರ ವಿಗ್ರಹದ ಶಂಖಚಕ್ರವಿದೆ. ಈ ವಿಗ್ರಹವನ್ನು ಆದಿನಾಥಸ್ವಾಮಿಯ ವಿಗ್ರಹದಿಂದ ೩ ಅಡಿ ೧ ಇಂಚು ಮುಂಭಾಗದಲ್ಲಿ ಇರಿಸಲಾಗಿದೆ. ಈ ಮೂರ್ತಿಯನ್ನು ತೀರ್ಥಂಕರ ಮಂಟಪದಲ್ಲಿ ಇರಿಸಲಾಗಿದೆ. ಇದರ ವಾಹನ ಕುಕ್ಕುಟ ಸರ್ಪ.
ವಿಶೇಷ ಮೂರ್ತಿಗಳು
ಬದಲಾಯಿಸಿ- ಈ ಬಸದಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಈ ಮೂರ್ತಿ ಶಿಲೆಯದ್ದಾಗಿದೆ. ಈ ಮೂರ್ತಿಯನ್ನು ಗಂಧಕುಟಿಯ ಮಧ್ಯದಲ್ಲಿರಿಸಲಾಗಿದೆ. ಮೂರ್ತಿಗೆ ಯಾವುದೇ ದೇವಕೋಷ್ಠ ಇಲ್ಲ. ಇವರ ಮುಖ ಪೂರ್ವದಿಕ್ಕಿಗಿದೆ. ಅಮ್ಮನವರ ಮೂರ್ತಿಗೆ ಸೀರೆ ಉಡಿಸಿ ಬಳೆ ಹಾಕಲಾಗುತ್ತದೆ. ಇಲ್ಲಿ ಹೂ ಹಾಕಿ ನೋಡುವ ಕ್ರಮ ಇದೆ. ಆದರೆ ಅದು ಅಪರೂಪದ ಪ್ರಕ್ರಿಯೆಯಾಗಿದೆ. ಅಮ್ಮನವರಿಗೆ ಚರು, ಫಲವಸ್ತು, ನೈವೇದ್ಯವನ್ನು ಸಮರ್ಪಿಸಲಾಗುತ್ತದೆ. ಅಮ್ಮನವರಲ್ಲಿ ವಿಶೇಷ ಹರಕೆಯನ್ನು ಹೇಳಿಕೊಳ್ಳಲಾಗುತ್ತದೆ. ವಿದ್ಯಾಭ್ಯಾಸ, ಮದುವೆ ಮುಂತಾದ ಕೋರಿಕೆ ಈಡೇರಿಕೆಗೆ ಇಲ್ಲಿ ಹರಕೆ ಹೇಳಿಕೊಳ್ಳಬಹುದು. ಈ ರೀತಿ ಹೇಳಿಕೊಂಡ ಹರಕೆಗಳು ನೆರವೇರಿದ ಅನೇಕ ಉದಾಹರಣೆಗಳಿವೆ. [೪]
- ಈ ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ. ಈ ಮೂರ್ತಿಯು ಕುದುರೆಯ ಮೇಲೆ ಕುಳಿತ ಭಂಗಿಯಲ್ಲಿದೆ. ಬ್ರಹ್ಮದೇವರ ಕೈಯಲ್ಲಿ ಖಡ್ಗವಿದೆ. ಬೇರೆ ಯಾವುದೇ ಆಕೃತಿಯೂ ಬ್ರಹ್ಮದೇವರ ಸಮೀಪದಲ್ಲಿಲ್ಲ. ಈ ಬಸದಿಯ ದೇವರಲ್ಲಿ ಈ ಬ್ರಹ್ಮದೇವರು ತುಂಬಾ ಕಾರಣಿಕ ಶಕ್ತಿಯ ದೇವರು. ಇಲ್ಲಿ ಬಂದು ಕೇಳಿಕೊಂಡ ಎಲ್ಲಾ ಒಳ್ಳೆಯ ಮನದಿಚ್ಛೆಗಳು ಈಡೇರಿವೆ. ಇದಕ್ಕೆ ಅದೆಷ್ಟೋ ಉದಾಹರಣೆಗಳಿವೆ. ಮಕ್ಕಳಿಲ್ಲದವರಿಗೆ ಮಕ್ಕಳಾಗಿವೆ, ವಿದ್ಯಾಭ್ಯಾಸದ ವಿಚಾರದಲ್ಲಿ ಕೇಳಿಕೊಂಡ ಹರಕೆ ನಿಜವಾಗಿದೆ. ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಳೆಯಿಂದ ತೊಂದರೆ ಉಂಟಾದಾಗ ಗ್ರಾಮಸ್ಥರು ಸೇರಿ ಬೇಡಿಕೊಂಡಾಗ ಆ ಕ್ಷೇತ್ರದಲ್ಲಿ ಮಾತ್ರ ಮಳೆ ನಿಂತ ಉದಾಹರಣೆಯಿದೆ. ಇಲ್ಲಿ ವೈಯಕ್ತಿಕ ಸಮಸ್ಯೆಗಿಂತ ಎಲ್ಲಾ ಜನರ ಸಮೂಹದ ಸಮಸ್ಯೆಗೆ ಹೆಚ್ಚು ಆದ್ಯತೆ. ಮತ್ತು ಯಾರ ಮೇಲೂ ಬ್ರಹ್ಮದೇವರ ದರ್ಶನ ಬರುವುದಿಲ್ಲ.
ವಿನ್ಯಾಸ
ಬದಲಾಯಿಸಿಈ ಮಂದಿರದಲ್ಲಿರುವ ತೀರ್ಥಂಕರರ ಮೂರ್ತಿಯ ಕೆಳಗಿನ ಲಾಂಛನ ಎತ್ತು. ತೀರ್ಥಂಕರರ ಮೂರ್ತಿಯ ಮುಖವು ಧ್ಯಾನಮುದ್ರೆಯಲ್ಲಿದೆ ಮತ್ತು ಮುಚ್ಚಿದ ಕಣ್ಣು ನಾಸಿಕದ ತುದಿಯನ್ನು ನೋಡುವ ದೃಷ್ಟಿಯನ್ನು ಹೊಂದಿದೆ. ಈ ಮೂರ್ತಿಯ ಬಳಿಯಲ್ಲಿ ಯಕ್ಷ, ಯಕ್ಷಿಯರು, ಮತ್ತು ತೀರ್ಥಂಕರರನ್ನು ಸ್ತುತಿಸುವ - ಶ್ಲೋಕವಿದೆ.
ಅಭಿಷೇಕ
ಬದಲಾಯಿಸಿತೀರ್ಥಂಕರ ಮೂರ್ತಿಗೆ ಐದು ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ. ಅವುಗಳೆಂದರೆ ಎಳನೀರು, ಹಾಲು, ಮೊಸರು, ತುಪ್ಪ, ಗಂಧ. ಪ್ರತಿದಿನ ಕಲಶಾಭಿಷೇಕ ಮಾಡುವಾಗ ಹಾಲು ಮತ್ತು ಗಂಧವನ್ನು ಬಳಸುತ್ತಾರೆ. ಹಬ್ಬ ಅಥವಾ ವಿಶೇಷ ಪೂಜೆಯ ದಿನಗಳಲ್ಲಿ ಪಂಚಾಮೃತ ಅಭಿಷೇಕ ಮಾಡುತ್ತಾರೆ. ಇಲ್ಲಿ ಓರ್ವ ಇಂದ್ರರಿದ್ದಾರೆ, ಅವರ ಹೆಸರು ಶ್ರೀ ಶಿಶಿರ್‌ಕುಮಾರ್. ಈ ಬಸದಿಯನ್ನು ಊರಿನವರು ಶ್ರೀ ಚೆನ್ನಪ್ಪಶೆಟ್ಟರ ಮುಂದಾಳುತ್ವದಲ್ಲಿ , ಜಿನಚಂದ್ರ ನಾಯಕರ ಭೂದಾನದಿಂದಾಗಿ ೧೮೯೮ ರಲ್ಲಿ ನಿರ್ಮಿಸಿದರು ಎಂದು ದಾಖಲೆಯ ಮೂಲಕ ತಿಳಿದುಬರುತ್ತದೆ.ಬಸದಿಯಲ್ಲಿ ಎರಡು ಹೊತ್ತು ( ಬೆಳಿಗ್ಗೆ ಮತ್ತು ಸಂಜೆ ) ಪೂಜೆಗಳು ನಡೆಯುತ್ತವೆ. ಬೆಳಿಗ್ಗೆ ಕ್ಷೀರಾಭಿಷೇಕ, ಸ್ತೋತ್ರ ಮತ್ತು ಆರತಿಯನ್ನು ಮಾಡಲಾಗುತ್ತದೆ. ಸಂಜೆ ಸ್ತೋತ್ರ ಮತ್ತು ಆರತಿಯನ್ನು ಮಾಡಲಾಗುತ್ತದೆ. ವಿಶೇಷ ದಿನಗಳಲ್ಲಿ ಪಂಚಾಮೃತ ಅಭಿಷೇಕ, ಆರತಿ, ಸ್ತೋತ್ರ ಮತ್ತು ಆರಾಧನೆ ನಡೆಯುತ್ತದೆ. ನವರಾತ್ರಿ, ನೂಲಶ್ರಾವಣ, ವಾರ್ಷಿಕೋತ್ಸವ, ಯುಗಾದಿ, ಆದಿತೀರ್ಥಂಕರರು ಹುಟ್ಟಿದ ದಿನ ( ಶಿವರಾತ್ರಿಯ ದಿನ ) ವಿಶೇಷ ಪೂಜೆ ನಡೆಯುತ್ತದೆ. ಇತರ ದಿನಗಳಲ್ಲಿ ಮುಂಚಿತವಾಗಿ ತಿಳಿಸಿ ವಿಶೇಷ ಪೂಜೆಯನ್ನು ನಡೆಸಬಹುದು.
ಗಂಧ ಕುಟಿ
ಬದಲಾಯಿಸಿಗಂಧ ಕುಟಿಯಲ್ಲಿ ಮೂರ್ತಿಗಳು ಇವೆ. ಇದನ್ನು ಬಸದಿಯ ವಾಸ್ತುವಿಗೆ ಅನುಸರಿಸಿ ನಿರ್ಮಿಸಲಾಗಿದೆ. ಗಂಧಕುಟಿಯನು ತೀರ್ಥಂಕರರ ಮಂಟಪವೆಂದೂ ಕರೆಯಲಾಗುತ್ತದೆ .ಇಲ್ಲಿಯ ಗಂಧಕುಟಿಯಲ್ಲಿ ೧೩ ಕೋಷ್ಟಗಳಿವೆ. ಮುಖ್ಯವಾಗಿ ಶ್ರೀ ಅನಂತನಾಥ ಸ್ವಾಮಿಯ ಮೂರ್ತಿಯಿದ್ದು ಅದರ ಸುತ್ತ ೧೩ ಜಿನ ಬಿಂಬಗಳಿವೆ. ಈ ೧೩ ಜಿನ ಬಿಂಬಗಳು ವೃಷಭ, ಅಜಿತ, ಶಂಭವ, ಅಭಿನಂದನ, ಸುಮತಿ, ಪದಪ್ರಭ , ಸುಪಾಶ್ರ್ವ , ಚಂದ್ರಪ್ರಭ, ಪುಷ್ಪದಂತ, ಶೀತಳ, ಶ್ರೇಯಾಂಸ , ವಾಸುಪೂಜ್ಯ ಮತ್ತು ಅನಂತನಾಥ. ಇಲ್ಲಿಯ ಗಂಧಕುಟಿಯಲ್ಲಿರುವ ಇತರ ಮೂರ್ತಿಗಳೆಂದರೆ ಚವ್ವೀಸ ತೀರ್ಥಂಕರರು ( ೨೪ ತೀರ್ಥಂಕರರು ಸೇರಿದ ಒಂದು ಮೂರ್ತಿ ), ಬ್ರಹ್ಮದೇವರು, ಪಾಶ್ರ್ವನಾಥಸ್ವಾಮಿ, ಚಂದ್ರನಾಥ ಸ್ವಾಮಿ, ಪಂಚಪರಮೇಷ್ಠಿ, ಗಣಧರ, ಅನಂತನಾಥಸ್ವಾಮಿ, ಪಾಶ್ರ್ವನಾಥ ಬಾಹುಬಲಿ, ಮಹಾವೀರ, ನಂದೀಶ್ವರ, ಅಜಿತ ತೀರ್ಥಂಕರರು, ಎರಡು ಸಿದ್ಧಶಿಲೆ, ಶಾಂತಿನಾಥ, ವಾಸುಪೂಜ್ಯ, ಚವ್ವೀಸ ತೀರ್ಥಂಕರರು, ಸರ್ವಾಜ್ಞ ಯಕ್ಷ ಪದ್ಮಾವತಿಯಕ್ಷಿ, ದ್ವಾದಶಾಂಗ ( ಶ್ರುತ ) ಮತ್ತು ಅನಂತನಾಥ ಸ್ವಾಮಿಯ ಮೂರ್ತಿ. ಇವುಗಳಲ್ಲಿ ಪಾಶ್ರ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ, ಚವ್ವೀಸ ತೀರ್ಥಂಕರರ ಮೂರ್ತಿಗಳು ಶಿಲೆಯದ್ದಾಗಿವೆ. ಎಲ್ಲಾ ಮೂರ್ತಿಗಳು ಗಾತ್ರದಲ್ಲಿ ಚಿಕ್ಕದಾಗಿವೆ. ಗಂಧಕುಟಿಯಲ್ಲಿರುವ ಮೂರ್ತಿಗಳ ಮೇಲೆ ಯಾವುದೇ ಬರವಣಿಗೆ ಇಲ್ಲ, ಬದಲಾಗಿ ಲಾಂಛನಗಳಿವೆ. ವಿಶೇಷ ಪೂಜೆಯ ಸಂದರ್ಭದಲ್ಲಿ ಚವ್ವೀಸ ದೇವರ ಮೂರ್ತಿಯನ್ನು ಮೂಲ ಮೂರ್ತಿಯ ಪಕ್ಕದಲ್ಲಿಟ್ಟು ಅಭಿಷೇಕ ಮಾಡಲಾಗುತ್ತದೆ. ಈ ಬಸದಿಯಲ್ಲಿ ಪ್ರಸ್ತುತ ನೋಂಪಿ ಮಾಡುತ್ತಿಲ್ಲ. ಆದರೆ ನೋಂಪಿ ಉದ್ಯಾಪನೆ ಮಾಡಿದ ಶ್ರೀ ಅನಂತನಾಥ ಸ್ವಾಮಿಯ ಮೂರ್ತಿ ಇಲ್ಲಿದೆ. ಗಂಧಕುಟಿಯಲ್ಲಿರುವ ಎಲ್ಲಾ ಮೂರ್ತಿಗಳು ಚಿಂತಾಮುಕ್ತಿಯಾಗಿ ಪ್ರಶಾಂತತೆಯಿಂದ ನಗುಮುಖವನ್ನು ಹೊಂದಿ ಧ್ಯಾನ ಭಂಗಿಯಲ್ಲಿರುವ ಪವಿತ್ರ ಮೂರ್ತಿಗಳಾಗಿವೆ.
ಗರ್ಭಗುಡಿ
ಬದಲಾಯಿಸಿಈ ಬಸದಿಯಲ್ಲಿ ಗರ್ಭಗುಡಿ, ಗಂಧಕುಟಿ, ಶುಕನಾಸ, ಪಂಟಾ ಮಂಟಪ ಮತ್ತು ಮುಖಮಂಟಪಗಳಿವೆ. ಗರ್ಭಗುಡಿಯಲ್ಲಿ ತೀರ್ಥಂಕರರ ಮೂರ್ತಿ ಇದೆ. ಮುಖ್ಯದೇವರನ್ನು ಬಿಟ್ಟು ಉಳಿದ ದೇವರನ್ನು ಗಂಧಕುಟಿಯಲ್ಲಿ ಇರಿಸಲಾಗಿದೆ. ಎಲ್ಲಾ ದೇವರುಗಳ ಮಧ್ಯೆ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿಯನ್ನು ಇರಿಸಲಾಗಿದೆ. ಮುಖಮಂಟಪವು ಬಸದಿಯ ಹೊರಾಂಗಣದಲ್ಲಿದ್ದು ಇಲ್ಲಿ ಯಾವುದೇ ಕಂಬಗಳಿಲ್ಲ ಮತ್ತು ಇಲ್ಲಿ ನೆಲಕ್ಕೆ ಟೈಲ್ಸ್ ಹಾಕಲಾಗಿದೆ. ದ್ವಾರಪಾಲಕರ ಶಿಲಾ ಮೂರ್ತಿಗಳಿವೆ, ಆದರೆ ಬಣ್ಣದ ಚಿತ್ರಗಳಿಲ್ಲ. ಬಸದಿಯ ಮುಂಭಾಗದಲ್ಲಿ ಗೋಪುರವಿದೆ, ಆದರೆ ಅದು ಗೋಡೆಗಳನ್ನು ಹೊಂದಿಲ್ಲ ಬದಲಾಗಿ ಕಂಬಗಳಿಂದ ಮಾಡಲಾಗಿದೆ. ಇಲ್ಲೂ ಯಾವುದೇ ಬಣ್ಣದ ಚಿತ್ರಗಳಿಲ್ಲ. ಈ ಗೋಪುರ ವಿಶೇಷ ಪೂಜೆಯ ಸಂದರ್ಭದಲ್ಲಿ ಬಂದ ಜನಸಮೂಹಕ್ಕೆ ನಿಲ್ಲಲು ಉಪಯೋಗವಾಗಲು ನಿರ್ಮಿಸಿದ್ದಾರೆ, ಬೇರೆ ಯಾವ ಉದ್ದೇಶಕ್ಕೂ ಈ ಗೋಪುರವನ್ನು ಉಪಯೋಗಿಸುವುದಿಲ್ಲ. ಈ ಗೋಪುರದ ಕಂಬಗಳು ಸಿಮೆಂಟ್‍ನಿಂದ ನಿರ್ಮಿಸಲಾಗಿದ್ದು ಕಂಬಗಳು ಯಾವುದೇ ಕಲಾಕೃತಿಯನ್ನು ಹೊಂದಿಲ್ಲ. ಈ ಬಸದಿಯು ನಾಲ್ಕು ದ್ವಾರವನ್ನು ಹೊಂದಿದ್ದು, ನಾಲ್ಕು ದ್ವಾರಗಳು ಶಿಲ್ಪಕಲೆಯನ್ನು ಹೊಂದಿವೆ. ಇವುಗಳನ್ನು ಕೂಡಾ ಕಲ್ಲಿಂದ ನಿರ್ಮಾಣ ಮಾಡಲಾಗಿದೆ. ಬಸದಿಯ ಗರ್ಭಗುಡಿಯ ಮೇಲ್ಭಾಗದಲ್ಲಿ ನಾಲ್ಕು ದರ್ಶನ ಮೂರ್ತಿಗಳಿವೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ, ಅದರ ಬದಲಾಗಿ ಗೋಡೆಯಲ್ಲಿ ದರ್ಶನ ಬಿಂಬ ಇಡಲಾಗಿದೆ. ಅವುಗಳಲ್ಲಿ ಎರಡು ಪಾಶ್ರ್ವನಾಥ ಮತ್ತು ಎರಡು ವರ್ಧಮಾನ ತೀರ್ಥಂಕರರ ಮೂರ್ತಿಗಳಿವೆ. ಬಸದಿಯು ಕಾರ್ಯಾಲಯವನ್ನು ಹೊಂದಿದ್ದು , ಅದು ಬಸದಿಯ ಮೇಲ್ಬಾಗದಲ್ಲಿದೆ.
ಉಲ್ಲೇಖ
ಬದಲಾಯಿಸಿ- ↑ https://newskarkala.com/2023/12/27/karkala-anekre-basadi/
- ↑ https://ddnews.gov.in/national/discover-india-floating-temple-karnataka
- ↑ https://www.ndtv.com/india-news/jain-temple-in-shimla-bans-entry-of-devotees-wearing-short-length-clothes-4130494
- ↑ ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೪೭.