ಶ್ರೀಮತಿ ಮಹಾಕಾಳಮ್ಮ ಅಕ್ಕದಾಸ

ವಿಧವಾ ವಿವಾಹವಾದ ಪ್ರಥಮ ಮಹಿಳೆ

ಬದಲಾಯಿಸಿ

ಶ್ರೀಮತಿ ಮಹಾಕಾಳಮ್ಮ ಅಕದಾಸರು ವಿಧವಾ ವಿವಾಹ ಪ್ರಚಾರಕರಾದ ಗಣಪತಿ ಭಟ್ಟರನ್ನು ವಿಧವಾ ಪುನರ್ವಿವಾಹದಿಂದ ಲಗ್ನವಾದ ದಿಟ್ಟ ಮಹಿಳೆ. ಅಕದಾಸರ ಸಮಾಜ ಸೇವಾ ಕಾರ್ಯದಲ್ಲಿ ಅವರ ಬಲಗೈಯಾಗಿ ದುಡಿದು ಬಾಲ ವಿಧವೆಯರ ಸಮಸ್ಯೆಯನ್ನು ಬಗೆಹರಿಸಲು ವಿಧವಾ ಪುನರ್ವಿವಾಹ ಅಗತ್ಯವೆಂಬುದನ್ನು ಅವರು ಪ್ರತಿಪಾದಿಸಿದರು. ನೂರಾರು ಮಂದಿ ಹತಭಾಗ್ಯ ವಿಧವೆಯರ ಬರಡು ಬಾಳನ್ನು ಹಸಿರು ಮಾಡಿ ಜೀವನವನ್ನು ಸಾರ್ಥಕಗೊಳಿಸಿದ ಮಹಿಳೆ ಈಕೆ. ಮಹಾಕಾಳಮ್ಮನವರು ತವರು ಸಾಗರ ತಾಲೂಕಿನ ನಂದಿತಳೆ. ಇವರ ತಂದೆ ಅಂಚೆ ತಿಮ್ಮಯ್ಯನವರು ಮೈಸೂರು ಅರಸರ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಮಹಾಕಾಳಮ್ಮ ವಿಶೇಷ ಕಲಿತವರಲ್ಲ. ಮನೆಯಲ್ಲಿಯೇ ಅವರ ಚಿಕ್ಕಪ್ಪ ಕೆಲಮಟ್ಟಿನ ಓದು ಬರಹ ಕಲಿಸಿದ್ದರು. ಮನೆಯಲ್ಲಿ ಎಲ್ಲ ಧಾರ್ಮಿಕ ಕಟ್ಟಳೆಗೆ ಒಳಪಟ್ಟ ಜನ ೮-೧೦ ವರ್ಷದ ಹುಡುಗಿಯರು ಮನೆಯಿಂದ ಹೊರಗೆ ಹೋಗಲು ನಿರ್ಬಂಧವಿದ್ದ ಕಾಲವದು. ಹೆಣ್ಣು ಮಕ್ಕಳಿಗೆ ಹತ್ತು ವರ್ಷದೊಳಗಾಗಿಯೇ ಮದುವೆಯ ಅನಿವಾರ್ಯ ಬಂಧನ ಕಾದಿರುತ್ತಿತ್ತು. ಮಹಾಕಾಳಮ್ಮನವರ ಮದುವೆಯಾದದ್ದು ಆಕೆಯ ಹತ್ತನೇ ವರ್ಷದಲ್ಲಿ. ಆಕೆಯ ಬಾಳಿಗೆ ಬರಸಿಡಿಲೆರಗಿದ್ದು ಅದೇ ವರ್ಷ ಮದುವೆಯಾದ ಮೂರು ತಿಂಗಳಿಗೇ ಆಕೆಯ ಪತಿ ರೇಷ್ಮಿ ಕಾಯಿಲೆಯಿಂದ ಮರಣ ಹೊಂದಿದಾಗ ಇನ್ನೂ ಎಳೆವಯದ ಬಾಲೆ ವಿಧವೆಯ ಪಟ್ಟವೇರಬೇಕಾಯಿತು. ಬಾಲ್ಯದಲ್ಲಿ ತಾನೋರ್ವ ವಿಧವೆಯೆಂದೂ, ತನ್ನ ಬಾಳು ನಿರರ್ಥಕವೆಂದೂ ಆಕೆಗೆ ಅನಿಸಲಿಲ್ಲ. ಆದರೆ ಪ್ರಾಪ್ತ ವಯಸ್ಸಿಗೆ ಬಂದ ಮಹಾಕಾಳಮ್ಮನಿಗೆ ನಿಜ ಸ್ಥಿತಿಯ ಅರಿವಾದಾಗ ಆಕೆಗೆ ಆಘಾತವುಂಟಾಗದೇ ಇರಲಿಲ್ಲ. ಭಾಗವತ, ರಾಮಾಯಣ, ಭಕ್ತಿ ವಿಜಯ, ಮನೆಗೆ ಬರುತ್ತಿದ್ದ ಒಂದೆರಡು ಮಾಸ ಪತ್ರಿಕೆಗಳನ್ನು, ಅದರಲ್ಲೂ ಆರ್. ಕಲ್ಯಾಣಮ್ಮನವರು ಸಂಪಾದಿಸಿದ `ಸರಸ್ವತಿ' ಮಾಸ ಪತ್ರಿಕೆಯನ್ನು ಓದುತ್ತ ತಮ್ಮ ಮನೋವೇದನೆಯನ್ನು ಮರೆಯಲು ಯತ್ನಿಸುತ್ತಿದ್ದರು. ಒಟ್ಟಾರೆ ಮಹಾಕಾಳಮ್ಮನವರಿಗೆ ವಿಧವೆಯ ಬದುಕಿನ ಬರ್ಬರತೆ ಅರಿವಾಗತೊಡಗಿತ್ತು. ಆದರೆ ಆ ವೇಳೆಗೆ ಸಾಮಾಜಿಕವಾಗಿ ಜಾಗೃತಿಯಾಗತೊಡಗಿತು. ಬಾಲ ವಿಧವೆಯರ ಬಾಳು ಬೆಳಗಿಸಲು, ಆ ಬಗೆಗಿನ ಅಡ್ಡಿ ಆತಂಕಗಳನ್ನು ನಿವಾರಿಸಲು ಅನೇಕ ಹಿರಿ-ಕಿರಿಯ ಸಮಾಜ ಸೇವಕರು ಮುಂದೆ ಬರತೊಡಗಿದ್ದರು. ವಿಧವಾ ವಿವಾಹದ ಬಗೆಗೆ ಆಗಲೇ ಕಾರ್ಯ ಪ್ರವರ್ತಕರಾಗಿದ್ದ ಸಿರಸಿಯ ಅಕದಾಸ ಗಣಪತಿ ಭಟ್ಟರ ಬಗೆಗೆ ಕೇಳಿ ಬಲ್ಲವಳಾಗಿದ್ದಳು. ಕ್ರಮೇಣ ಅವರ ಪರಿಚಯಯವೂ ಆಯಿತು. ವಿಧವಾ ವಿವಾಹದ ಅಗತ್ಯತೆಯ ಬಗೆಗೆ ಅವರ ನಡುವೆ ಸಾಕಷ್ಟು ಚರ್ಚೆಯೂ ನಡೆಯಿತು. ಮುಂದೆ ಅವರು ಅಕದಾಸರ ಸಹಧರ್ಮಿಣಿಯಾಗಿ ವಿಧವಾ ವಿವಾಹದ ಆಂದೋಲನಕ್ಕೆ ಹೊಸ ತಿರುವು ನೀಡಿದ್ದರು.