ಶೆವಾಲಿಯರ್ ಜಾಕ್ಸನ್
ಶೆವಾಲಿಯರ್ ಜಾಕ್ಸನ್ - ಈ ಹೆಸರಿನವರು ಇಬ್ಬರು. ತಂದೆ ಮಕ್ಕಳು. ಇಬ್ಬರೂ ಅಮೆರಿಕದ ಬಲುಪ್ರಸಿದ್ಧ ಗಂಟಲುರೋಗ ವೈದ್ಯರು.
ಹಿರಿಯ ಶೆವಾಲಿಯರ್ ಜಾಕ್‍ಸನ್ನನು
ಬದಲಾಯಿಸಿಶೆವಾಲಿಯರ್ ಕ್ವಿಝೋಟ್ ಜಾಕ್‍ಸನ್ನನು ಪೆನ್ಸಿಲ್‍ವೇನಿಯದ ಪಿಟ್ಸ್‍ಬರ್ಗ್ ನಗರದಲ್ಲಿ 1865ನೆಯ ನವೆಂಬರ್ 4ನೆಯ ತಾರೀಖು ಜನಿಸಿದ. ಪೆನ್ಸಿಲ್‍ವೇನಿಯ ಪಶ್ಚಿಮ ವಿಶ್ವವಿದ್ಯಾಲಯದಲ್ಲಿ (ಈಗಿನ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ) 1879ರಿಂದ 1883ರವರೆಗೆ ವ್ಯಾಸಂಗ ಮಾಡಿ ಪೆನ್ಸಿಲ್‍ವೇನಿಯದ ಜೆಫರ್‍ಸನ್ ವೈದ್ಯಕೀಯ ಕಾಲೇಜಿನಿಂದ 1886ರಲ್ಲಿ ಎಂ.ಎ. ಡಿಗ್ರಿಯನ್ನು ಪಡೆದ. ಮುಂದೆ ಕೆಲಕಾಲ ಯೂರೋಪಿನಲ್ಲಿ ಉನ್ನತ ವ್ಯಾಸಂಗವನ್ನು ಮುಂದುವರಿಸಿ ಪಿಟ್ಸ್‍ಬರ್ಗಿನಲ್ಲಿ ಗಂಟಲುರೋಗಗಳ ತಜ್ಞನಾಗಿ ಖಾಸಗಿ ವೈದ್ಯವೃತ್ತಿಯನ್ನು ಪ್ರಾರಂಭಿಸಿದ. 1912ರಲ್ಲಿ ಪಿಟ್ಸ್‍ಬರ್ಗ್ ವೈದ್ಯಶಾಲೆಯಲ್ಲಿ ಗಂಟಲುರೋಗಗಳ ಪ್ರಾಧ್ಯಾಪಕನಾಗಿ ನೇಮಕಗೊಂಡ. ಬಾಯೊಳಗಿನಿಂದ ಗಂಟಲು, ಶ್ವಾಸನಾಳ, ಅನ್ನನಾಳ, ಜಠರ ಇವನ್ನು ಪರೀಕ್ಷಿಸಲು ಸಾಧ್ಯವಾಗುವಂಥ ಸಲಕರಣೆಗಳನ್ನು 50 ವರ್ಷಗಳ ಸುದೀರ್ಘ ವೈದ್ಯವೃತ್ತಿಯಲ್ಲಿ ಈತ ಉಪಜ್ಞಿಸಿದ ಹಾಗೂ ಅವನ್ನು ಉಪಯೋಗಿಸುವ ವಿಶಿಷ್ಟ ಮಾರ್ಗಗಳನ್ನು ರೂಪಿಸಿ ಆಚರಣೆಗೆ ತಂದ. ಅಕಸ್ಮಾತ್ ನುಂಗಿ ಅನ್ನನಾಳ ಜಠರದಲ್ಲಿ ಸಿಕ್ಕಿಹಾಕಿಕೊಂಡಂಥ ಅನ್ಯವಸ್ತುಗಳನ್ನು ಈಸೋಫೇಗೋಸ್ಕೋಪ್ ಎಂಬ ಸಲಕರಣೆಯ ಸಹಾಯದಿಂದಲೂ ಶ್ವಾಸನಾಳಗಳನ್ನು ಹೊಕ್ಕು ಉಸಿರಾಟಕ್ಕೆ ಅಡಚಣೆ ಮಾಡುವಂಥ ಅನ್ಯವಸ್ತುಗಳನ್ನು ಬ್ರಾಂಕೋಸ್ಕೋಪ್ ಎಂಬ ಸಲಕರಣೆಯ ಸಹಾಯದಿಂದಲೂ ತೆಗೆಯುವ ಕ್ರಮವನ್ನು ಈತ ಪರಿಪೂರ್ಣಗೊಳಿಸಿದ. ಪೆನ್ಸಿಲ್‍ವೇನಿಯದ ಜೆಫರ್‍ಸನ್ ಕಾಲೇಜಿನಲ್ಲಿಯೂ (1916) ಅನಂತರ ಪಿಟ್ಸ್‍ಬರ್ಗ್ ಮತ್ತು ಟೆಂಪಲ್ ವಿಶ್ವವಿದ್ಯಾಲಯಗಳಲ್ಲೂ ಈಸೋಫೇಗೋಸ್ಕೋಪ್ ಬ್ರಾಂಕೋಸ್ಕೋಪುಗಳ ಬಳಕೆಗೆ ಮೀಸಲಾದ ವೈದ್ಯವಿಭಾಗವನ್ನು ಸ್ಥಾಪಿಸಿದ ಕೀರ್ತಿಯೂ ಈತನದೇ. ಶೆವಾಲಯರ್ ಜಾಕ್‍ಸನ್ 1958ನೆಯ ಆಗಸ್ಟ್ 16ರಲ್ಲಿ ಫಿಲಡೆಲ್ಫಿಯದಲ್ಲಿ ನಿಧನಹೊಂದಿದ.
ಗಂಟಲು ಶ್ವಾಸನಾಳ ಇತ್ಯಾದಿ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡ ಅನ್ಯವಸ್ತುಗಳನ್ನು ತೆಗೆಯಲು ಅನುಕೂಲವಾಗುವಂತೆ ವ್ಯಕ್ತಿ ಒಂದು ವಿಶಿಷ್ಟ ಭಂಗಿಯಲ್ಲಿರಬೇಕೆಂಬುದನ್ನು ಈತ ಕಂಡುಕೊಂಡ. ಇಂಥ ಅನುಕೂಲ ಭಂಗಿಗೆ ಜಾಕ್‍ಸನ್ ಭಂಗಿ ಎಂದೇ ಹೆಸರು. ಸ್ವತಃ ತಾನೇ ಕಂಡುಹಿಡಿದ ಆ ಮಾರ್ಗದಲ್ಲಿ ಪಾರಂಗತನಾಗಿದ್ದರೂ ಹಿರಿಯ ಜಾಕ್‍ಸನ್ ವ್ಯಕ್ತಿಯ ಗಂಟಲು ಶ್ವಾಸನಾಳಗಳಲ್ಲಿ ಸಿಕ್ಕಿಹಾಕಿಕೊಂಡ ವಸ್ತುಗಳನ್ನು ಒಮ್ಮೆಗೇ ತೆಗೆಯಲು ಎಂದೂ ಪ್ರಯತ್ನಿಸುತ್ತಿರಲಿಲ್ಲ. ಪ್ಲಾಸ್ಟರಿನಲ್ಲಿ ಮಾಡಿಟ್ಟುಕೊಂಡಿದ್ದ ಅನೇಕ ಪ್ರತಿರೂಪಗಳಲ್ಲಿ ಕೃತಕವಾಗಿ ಒಂದು ವಸ್ತುವನ್ನು ಪೀಡಿತವ್ಯಕ್ತಿಯಲ್ಲಿ ಅನ್ಯವಸ್ತು ಯಾವ ಸ್ಥಳದಲ್ಲಿದೆ ಎಂದು ಶಂಕಿಸಲಾಗಿದೆಯೋ ಅದೇ ಸ್ಥಳದಲ್ಲಿ ಇಟ್ಟು, ವಿಶೇಷ ಸಲಕರಣೆಯಿಂದ ಅದನ್ನು ತೆಗೆದು ಅಭ್ಯಾಸ ಮಾಡಿಕೊಂಡು ಅನಂತರ ವ್ಯಕ್ತಿಯಲ್ಲಿ ಸಲಕರಣೆಯನ್ನು ಉಪಯೋಗಿಸುತ್ತಿದ್ದ. ಇಂಥ ಕ್ರಮಗಳಿಂದ ಸಾವಿರಕ್ಕೆ ಮೇಲ್ಪಟ್ಟ ಸಂಖ್ಯೆಯ ಮಕ್ಕಳಲ್ಲಿ ಅವರು ನುಂಗಿದ್ದ ಮೊಳೆ, ನಾಣ್ಯಗಳು ಮತ್ತು ಇತರ ವಸ್ತುಗಳನ್ನು ಹೊರತೆಗೆದು ಅವರನ್ನು ಬದುಕಿಸಿ ಜನತೆಯ ಕೃತಜ್ಞತೆಗೆ ಪಾತ್ರನಾದ. ಇವನ ಕೈಚಳಕವನ್ನು ಮೀರಿಸಿ ಬ್ರಾಂಕೋಸ್ಕೋಪನ್ನೂ, ಈಸೋಫೇಗೋಸ್ಕೋಪನ್ನೂ ಉಪಯೋಗಿಸಿದವರು ಇನ್ನೊಬ್ಬರಿಲ್ಲ. ಲೋಕವು ಹಿರಿಯ ಜಾಕ್‍ಸನ್ನನನ್ನು ಪ್ರಿನ್ಸ್ ಆಫ್ ಬ್ರಾಂಕೋಸ್ಕೋಪಿಸ್ಟ್ಸ್ ಎಂದು ಕರೆದು ಗೌರವಿಸಿದೆ.
ಮಗ ಶೆವಾಲಿಯರ್ ಜಾಕ್ಸನ್
ಬದಲಾಯಿಸಿಇವನ ಮಗ ಶೆವಾಲಿಯರ್ ಲಾರೆನ್ಸ್ ಜಾಕ್‍ಸನ್ನನೂ ಜನಿಸಿದ್ದು ಪಿಟ್ಸ್‍ಬರ್ಗ್‍ನಲ್ಲಿಯೇ (19-8-1900). 1922ರಲ್ಲಿ ಪೆನ್ಸಿಲ್‍ವೇನಿಯ ವಿಶ್ವವಿದ್ಯಾಲಯದ ಎ.ಬಿ. ಪದವಿಯನ್ನೂ 1926ರಲ್ಲಿ ಎಂ.ಡಿ. ಪದವಿಯನ್ನೂ 1927-28ರಲ್ಲಿ ಸ್ನಾತಕೋತ್ತರ ಎಂ.ಎಸ್. ಪದವಿಯನ್ನೂ ಪಡೆದ. ತಂದೆಯಂತೆಯೇ ಈತ ಕೂಡ ಗಂಟಲುರೋಗಗಳ ತಜ್ಞನಾಗಿ ಈಸೋಫೇಗೋಸ್ಕೋಪ್ ಮತ್ತು ಬ್ರಾಂಕೋಸ್ಕೋಪುಗಳ ಉಪಯುಕ್ತತೆಯನ್ನು ವೃದ್ಧಿಸಿದ. 1938ರಲ್ಲಿ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡು ಅನೇಕ ವೈದ್ಯಕೀಯ ಸಮ್ಮೇಳನಗಳಲ್ಲಿ, ವ್ಯಾಸಂಗ ಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಸಿದ್ಧನಾದ. ಕಿವಿ ಮೂಗು ಗಂಟಲು ರೋಗಶಾಸ್ತ್ರ ಡೈರೆಕ್ಟರಿಯ ಸಂಪಾದಕನಾಗಿದ್ದ. ತಂದೆಯೊಡನೆ ಕಿವಿ, ಮೂಗು ಗಂಟಲು ರೋಗಗಳ ವಿಷಯವಾಗಿ ಅನೇಕ ಪುಸ್ತಕಗಳನ್ನೂ (1938ರ ಅನಂತರ) ಬರೆದಿದ್ದಾನೆ.