ಶಿಶುಪ್ರಾಸಗಳು
ಶಿಶುಪ್ರಾಸಗಳು ಮಾತು ಬರುವ ಮಕ್ಕಳು ಪರಸ್ಪರ ಕಲಿತು ಹೇಳಿ ಕೊಳ್ಳುವಂತಹ ಪದ್ಯರೂಪದ ಜ್ಞಾನಶಾಖೆಗಳು. ಇದೊಂದು ಕಂಠಸ್ಥ ಸಂಪ್ರದಾಯದ ಪಳೆಯುಳಿಕೆ. ಮಕ್ಕಳಿಗೆ ಸಂಬಂಧಿಸಿದ ಪರಂಪರಾಗತ ಜ್ಞಾನವು ಪದ್ಯರೂಪದಲ್ಲಿ ಹೊರಹೊಮ್ಮಿ ಗೀತೆಗಳಂತೆ ಕಂಡು ಬಂದಿರುವುದರಿಂದ ಇವನ್ನು ಶಿಶುಗೀತೆ, ಮಕ್ಕಳಹಾಡು ಎಂದು ಕರೆಯುತ್ತಾರೆ.
ಶಿಶುಪ್ರಾಸಗಳ ಉಗಮ
ಬದಲಾಯಿಸಿಜನಪದ ಗೀತಾತ್ಮಕ ಭಾಗ ಜೀವನದ ನಾನಾ ಹಂತಗಳಲ್ಲಿ, ನಾನಾ ಘಟ್ಟಗಳಲ್ಲಿ ಹರಡಿರುವಂತಹುದು. ಇದೊಂದು ಕಂಠಸ್ಥ ಸಂಪ್ರದಾಯದ ಪಳೆಯುಳಿಕೆ. ಶಿಶುಪ್ರಾಸಗಳು ಮಾತು ಬರುವ ಮಕ್ಕಳು ಪರಸ್ಪರ ಕಲಿತು ಹೇಳಿ ಕೊಳ್ಳುವಂತಹ ಪದ್ಯರೂಪದ ಜ್ಞಾನಶಾಖೆಗಳು. ಭಾಷೆಯಲ್ಲಿನ ಅತ್ಯಂತ ವಿನೋದದ ಪದ್ಯಭಾಗವೇ ಶಿಶುಪ್ರಾಸಗಳಾಗಿವೆ. ಇಂಗ್ಲೀಷಿನ 'ನರ್ಸರಿ ರೈಮ್ಸ್ 'ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ 'ಶಿಶುಪ್ರಾಸಗಳು' ಎಂಬ ಪದವನ್ನು ಮೊದಲಿಗೆ ಬಳಸಿದವರು ಡಾ.ಹಾ.ನಾಯಕ್ ಅವರು. ಇವರು ತಮ್ಮ 'ವಿಲಿಯಂ ಥಾಂಸ್ ಮತ್ತು ಫೋಕ್ ಲೋರ್ ' ಎಂಬ ಲೇಖನದಲ್ಲಿ ಈ ಪದವನ್ನು ಬಳಸಿದ್ದಾರೆ. ಮಕ್ಕಳಿಗೆ ಸಂಬಂಧಿಸಿದ ಪರಂಪರಾಗತ ಜ್ಞಾನವು ಪದ್ಯರೂಪದಲ್ಲಿ ಹೊರಹೊಮ್ಮಿ ಗೀತೆಗಳಂತೆ ಕಂಡು ಬಂದಿರುವುದರಿಂದ ಇವನ್ನು ಶಿಶುಗೀತೆ, ಮಕ್ಕಳಹಾಡು ಎಂದು ಕರೆಯುತ್ತಾರೆ. ಆದರಿಲ್ಲಿ ಶಿಶುಪ್ರಾಸಗಳು ಎಂಬ ಹೆಸರಿರುವುದಕ್ಕೆ ಮುಖ್ಯ ಕಾರಣವೆಂದರೆ ಈ ಪದ್ಯದಲ್ಲಿ ಅರ್ಥ ಬಹುತೇಕ ಗೌಣವಾಗಿರುತ್ತದೆ. ಸಾಲುಗಳು ಕ್ರಮಬದ್ಧವಾಗಿ ಇರುವುದಿಲ್ಲ. ಪ್ರಾಸ, ಯಮಕಾದಿಗಳು ಶಿಶುಪ್ರಾಸಗಳನ್ನು ಮುನ್ನಡೆಸುತ್ತವೆ. ಹಾಡುವುದರೊಂದಿಗೆ ಇವು ವಿಸ್ತೃತ ಮನೋರಂಜನೆಯನ್ನು ಒದಗಿಸುತ್ತವೆ. ಇಂತಹ ಪ್ರಾಸಗಳಲ್ಲಿ ಎರಡು ಬಗೆಗಳಿವೆ. ೧)ಶಿಶುಪ್ರಾಸಗಳು, ೨)ಶಾಲಾಪ್ರಾಸಗಳು. ಇವುಗಳ ವಸ್ತು ಮತ್ತು ಸ್ವರಗತಿಗಳೆರಡರಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಜೊತೆಗೆ ಈ ಗೀತೆಗಳ ವಾಹಕತ್ವ ಕೂಡ ಭಿನ್ನ ರೀತಿಯಲ್ಲಿದೆ. ಅನುರಣಿತ ಧ್ವನಿ ಸಂಯೋಜನೆಯೇ ಈ ಪದ್ಯ ರಚನೆಯ ಪ್ರಧಾನ ಲಕ್ಷಣ. ಅಣಕ, ಅಸಂಬದ್ದತೆ, ಅನೌಚಿತ್ಯ, ವಿಡಂಬನೆ, ಹಾಸ್ಯ, ಚಮತ್ಕಾರ ಮೊದಲಾದ ರಂಜನೀಯ ವಿಷಯಗಳೆಲ್ಲ ಶಿಶುಪ್ರಾಸಗಳ ವಸ್ತುಗಳಾಗಿವೆ. ಮಕ್ಕಳ ಇಂತಹ ಪ್ರಾಸಗಳಿಗೆ ಒಂದು ಅವಿಚ್ಛಿನ್ನತೆ ಇರುತ್ತದೆ. ಇವು ಎರಡು ಸಾಲಿನ ಪದ್ಯದಿಂದಿಡಿದು ೧೫ಸಾಲಿನ ಪದ್ಯದವರೆಗೂ ಕಂಡು ಬರುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ಶಿಶುಪ್ರಾಸಗಳು
ಬದಲಾಯಿಸಿಶಿಶುಪ್ರಾಸಗಳು ಜನಪದರ ಆಕಸ್ಮಿಕ ಸೃಷ್ಟಿಯಲ್ಲ. ಇವುಗಳ ಹಿಂದೆ ನಿರ್ಧಿಷ್ಟ ಕಾರಣಗಳಿರುವಂತೆ ಭಾಸವಾಗುತ್ತದೆ. ಇವು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಇವುಗಳಲ್ಲಿ ಕೆಲವು ಪ್ರಾಚೀನ ರಚನೆಗಳನ್ನು ಉಳಿಸಿ ಕೊಂಡಿವೆ. ಉಳಿದವು ಭಾಷೆಯಿಂದ ಭಾಷೆಗೆ, ಪ್ರದೇಶದಿಂದ ಪ್ರದೇಶಕ್ಕೆ ವರ್ಗಾಯಿಸಲ್ಪಟ್ಟಿವೆ. ಶಿಶುಪ್ರಾಸಗಳು ಪದಗಳ ಅನುರಣ ಸಂಬಂಧದಿಂದಾಗಿ ಆರ್ಥಾಂತರ ಪಡೆಯುತ್ತವೆ. ಈಗಿನ ಮಕ್ಕಳ ಮನಸ್ಥಿತಿ, ಕಾರ್ಯಚಟುವಟಿಕೆಗಳು ಬೇರೆ ತೆರನಾಗಿ ಇರುವುದರಿಂದ ಇಂದು ಶಿಶುಪ್ರಾಸಗಳು ಕಮರಿ ಹೋಗುವ ಹಂತದಲ್ಲಿವೆ. ಹೀಗಾದರೆ ಮುಂದೊಂದು ದಿನ ಅವುಗಳ ಅವಶೇಷಗಳು ಮಾತ್ರ ಉಳಿಯಬಹುದು.
ಶಿಶುಪ್ರಾಸಗಳು
ಬದಲಾಯಿಸಿ- ೧.ಗಣೇಶ ಬಂದ ಕಾಯಿ ಕಡುಬು ತಿಂದ
ಚಿಕ್ಕೇರೆಲಿ ಬಿದ್ದ, ದೊಡ್ಕೆರೆಲಿ ಎದ್ದ
- ೨.ಸಿದ್ದ ಗೊದ್ದ ಬಾವಿಲಿ ಬಿದ್ದ
ಎತ್ತಕೊದ್ರೆ ಕಚ್ಚಕ್ಕ ಬಂದ
ಬೆಲ್ಲ ಕೊಟ್ರೆ ಬ್ಯಾಡ ಅಂದ
ಗೊಣ್ಣೆ ಕೊಟ್ರೆ ಗೊಳಕ್ಕನೆ ನುಂಕೊಂಡ
- ೩.ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೇತೋಟಕೆ ನೀರಿಲ್ಲ
- ೪.ಚಂದಕ್ಕಿ ಮಾವ ಚಕ್ಕುಲಿ ಮಾವ
ಚಂದಮಾಮ ಓಡಿ ಬಾ
ಚಂದದಿಂದ ಹಾಡು ಬಾ
ಸಕ್ಕರೆ ಕಡ್ಡಿ ತರ್ತೀನಿ
ನೀಂಗೂ ಸ್ವಲ್ಪ ಕೊಡ್ತಿನಿ
ಮಿಕ್ಕಿದ್ದನ್ನೇಲ್ಲ ತಿಂತಿನಿ
- ೫.ರತ್ತೋ ರತ್ತೋ ರಾಯನ ಮಗಳೆ
ಬಿತ್ತೋ ಬಿತ್ತೋ ಭೀಮನ ಮಗಳೆ
ಹದಿನಾರಮ್ಮೆ ಕಾಯಿಸಲಾರೆ ಕರೆಯಲಾರೆ
ಕುಕ್ಕನೆ ಕುತ್ಕೋ ಕೂರೆ ಬಸ್ವಿ
- ೬.ಅಚ್ಚಚ್ಚು ಬೆಲ್ಲದಚ್ಚು
ಅಲ್ಲಿ ನೋಡು ಇಲ್ಲಿ ನೋಡು
ಸಂಪಂಗಿ ಮರದಲಿ ಗುಂಪು ನೋಡು
ಯಾವ ಗಂಪು ?
ಕಾಗೆ ಗುಂಪು
ಯಾವ ಕಾಗೆ ?
ಕಪ್ಪು ಕಾಗೆ
ಯಾವ ಕಪ್ಪು ?
ಮಡಕೆ ಕಪ್ಪು
ಯಾವ ಮಡಕೆ ?
ಅನ್ನದ ಮಡಕೆ
ಯಾವ ಅನ್ನ ?
ಭತ್ತದ ಅನ್ನ
ಯಾವ ಭತ್ತ ?
ಹೊಲದ ಭತ್ತ
ಯಾವ ಹೊಲ ?
ರೈತನ ಹೊಲ
ಯಾವ ರೈತ ?
ನಮ್ಮ ಅನ್ನದಾತ
- ೭.ಕಪ್ಪೆ ಕರಕರ ತುಪ್ಪ ಜನಿಜನಿ
ಮಾವಿನ ವಾಟೆ ಮರದಲಿ ತೊಗಟೆ
ಹದ್ದಿ ನ್ ಕೈಲಿ ಸುದ್ದಿ ತರ್ಸೀ
ಕಾಗೆ ಕೈಲಿ ಕಂಕಣ ಕಟ್ಸೀ
ಗೂಗೆ ಕೈಲಿ ಗುಂಬ ತರ್ಸೀ
ಸೊಳ್ಳೆ ಕೈಲಿ ಸೋಬಾನ ಹೇಳ್ಸೀ
ನಳ್ಳಿ ಕೈಲಿ ನಗಾರಿ ಹೊಡ್ಸೀ
ಸಣ್ಣೀ ಮದ್ವೆ ಶನ್ ವಾರ
ಊಟಕ್ಕೆ ಬನ್ನಿ ಭಾನ್ ವಾರ
- ೮.ಕಾಗೆ ಕಾಗೆ ಕೌವ್ವ
ಯಾರ್ಬತ್ತನವ್ವ ?
ಮಾವ ಬರ್ತಾನವ್ವ
ಮಾವನ್ಗೇನೂಟ ?
ಮಾವಿನ ಕಾಯ್ನೂಟ
ಹಾರಿ ಹಾರಿ ಬರ್ತಾನೆ
ಆರು ಮುದ್ದೆ ಉಣ್ತಾನೆ
ಕಪ್ಪೆ ಚಿಪ್ಪಲ್ ಮಡಗಿವ್ನಿ
ಊಟ ಉಣ್ಣೋ ಬಾವಾಜಿ
ಗುಡಾರದಲ್ಲಿ ಚಾಪೆ ಹಾಸಿವ್ನಿ
ಉಂಡ್ಕಂಡ್ ಬಿದ್ಕೋ ಬಾವಾಜಿ
- ೯.ಸುಶೀಲಕ್ಕ ಸುಶೀಲಕ್ಕ
ನಿನ್ ಗಂಡ ಎಲ್ಗೋದ ?
ಮಣ್ ತರಕ್ಕೆ
ಮಣ್ ಯಾತಿಕ್ಕಾ?
ಮಡಕೆ ಮಾಡೋಕೆ
ಮಡಕೆ ಯಾತಕ್ಕಾ?
ದುಡ್ಡು ತುಂಬೋಕೆ
ದುಡ್ಡು ಯಾತಕ್ಕಾ?
ಹಸು ತರಕ್ಕೆ
ಹಸು ಯಾತಕ್ಕಾ?
ಹಾಲು ಕರೆಯೋಕೆ
ತೊಪ್ಪೆ ಇಕ್ಸೋಕೆ
ತೊಪ್ಪೆ ಯಾತಕ್ಕಾ?
ಮನೆ ತಾರ್ಸೋಕೆ
ಮನೆ ಯಾತಕ್ಕಾ ?
ಮಕ್ಳು ಮರಿ ಮಾಡಾಕೆ
- ೧೦.ಸೊಂಟ ನೋಡು ಸೊಂಟ ನೋಡು ಯಜಮಾನ
ಸೊಂಟಕ್ಕೊಂದು ಡಾಬಿಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಕೈ ನೋಡು ಕೈ ನೋಡು ಯಜಮಾನ
ಕೈಗೊಂದು ಬಳೆಯಿಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಕಾಲ್ನೋಡು ಕಾಲ್ನೋಡು ಯಜಮಾನ
ಕಾಲ್ಗೋಂದು ಚೈನಿಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಕಿವಿ ನೋಡು ಕಿವಿ ನೋಡು ಯಜಮಾನ
ಕಿವಿಗೊಂದು ವಾಲೆ ಇಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಕತ್ನೋಡು ಕತ್ನೋಡು ಯಜಮಾನ
ಕತ್ಕೊಂದು ತಾಲಿ ಇಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಮೈನೋಡು ಮೈನೋಡು ಯಜಮಾನ
ಮೈಗೊಂದು ಸೀರೆಯಿಲ್ಲ ಯಜಮಾನ
ಊರ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು
ಅತ್ತೆ ಮುಂದೆ ಮಾನ ಕಳ್ದರೆ ಡಿಂಗ್ ಡಾಂಗು!
ಶಾಲಾಶಿಶುಪ್ರಾಸಗಳು
ಬದಲಾಯಿಸಿ- ೧.ಅವಲಕಿ ಪವಲಕಿ
ಕಾಂಚಿನ ಮಿಣಿಮಿಣಿ
ಡಾಂ ಡೂಂ ಡಸ್ಸ ಪಿಸ್ಸ
ಕೊಯ್ಯ್ ಕೊಟಾರ್
- ೨.ಆನೆ ಬಂತೊಂದಾನೆ
ಯಾವ ಪುರದಾನೆ ?
ದಿಡ್ಡಪುರದಾನೆ
ಇಲ್ಲಿಗ್ಯಾಕ್ ಬಂತು ?
ಮಕ್ಕಳ್ ನೋಡಾಕ್ ಬಂತು
ಹಾದಿಲೊಂದು ಕಾಸು
ಬೀದಿಲೊಂದು ಕಾಸು
ಕಾಸ್ನೆಲ್ಲಾ ಸೇರ್ಸಿ
ಸೇರು ಪುರಿ ತರ್ಸಿ
ಮಕ್ಕಳ್ಗೆಲ್ಲಾ ಹಂಚ್ಸೀ
ತಾನ್ ಸ್ವಲ್ಪ ತಿಂದು ಓಡೋಯ್ತ್
- ೩.ಚೆಂಗೂಲಾಬಿ ಹೂವೇ
ಬಿಸಿಲಲಿ ಕುಳಿತು
ಒಣಗುವೆ ಏಕೆ ?
ಎದ್ದೇಳು ಮ್ಯಾಕೆ
ಹಿಂದೆ ಮುಂದೆ ತಿರುಗು
ಕಣ್ಣೀರ್ನೇಲ್ಲಾ ಒರೆಸು
ನಿಂಗ್ ಇಷ್ಟ ಬಂದೋರ್ನೇಲ್ಲಾ ಕರೆಸು
- ೪.ಕಣ್ಣೇ ಮುಚ್ಚೇ ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ದು ಕೊಳ್ಳಿ
ನಿಮ್ಮನೇಲಿ ಏನ್ ಸಿಹಿ?
ಪಾಯ್ಸ
ಪಾಯ್ಸ ದ್ಗೋಳ್ಗೇನು?
ನೊಣ ಬಿದ್ದದೆ
ನೊಣ ಬಿಟ್ಟು ಜನ ಬಡ್ಕೊ ಬಾ
- ೫.ಚಪಾತಿ ಚಪ್ ಚಪ್
ಜೀಲೇಬಿ ಜಿಂ ಜಿಂ
ಹಾಲು ಕಾಫಿ ಗೊಟಗೊಟ
ಕಳ್ಳೇಕಾಯಿ ಪಟಪಟ
ಉಪ್ಪಿನಕಾಯಿ ಲೊಚಲೊಚ
ಅನ್ನ-ಸಾರು ಸೊರಸೊರ
ಹೊಟ್ಟೆ ತುಂಬ್ತು ಬರಬರ
ನಿದ್ದೆ ಮಾಡು ಸರಸರ
- ೬.ಟೋಪಿ ಬೇಕೆ ಟೋಪಿ ?
ಎಂಥಾ ಟೋಪಿ?
ಚಿನ್ನದ ಟೋಪಿ
ಎಷ್ಟು ರೂಪಾಯಿ?
ನೂರು ರೂಪಾಯಿ
ಕೊಡು ಕೊಡು ಮಂತೆ
ತಕೋ ತಕೋ ಮಂತೆ
- ೭.ಜಯಮ್ಮ ಜಯಮ್ಮ ಜಾಕೇಟು
ಜಯಮ್ಮನ ಗಂಡ ಪಾಕೇಟು
ಆಡೋದೆಲ್ಲಾ ಇಸ್ಪೀಟು
ಸೇದೋದೆಲ್ಲಾ ಸಿಗರೇಟು
ನೆಗೆದು ಬಿದ್ದು ನೆಲ್ಲಿಕಾಯಾಗೋದ
- ೮.ಡಮರೆ ಡಮರೆ ಡಂ
ಮನೆ ಸುಟ್ಟೋಯ್ತು
ಯಾರ ಮನೆ ?
ಪೂಜಾರಿ ಮನೆ
ಯಾವ ಪೂಜಾರಿ ?
ಜುಟ್ಟು ಪೂಜಾರಿ
ಯಾವ ಜುಟ್ಟು ?
ಬಾತು ಜುಟ್ಟು
ಯಾವ ಬಾತು ?
ತಿನ್ನೋ ಬಾತು
ಯಾವ ತಿನ್ನು ?
ಏಟು ತಿನ್ನು
ಯಾವ ಏಟು ?
ದಪ್ಪ ಏಟು
ಯಾವ ದಪ್ಪ ?
ದೊಣ್ಣೆ ದಪ್ಪ
ಯಾವ ದೊಣ್ಣೆ ?
ತಾತನ ದೊಣ್ಣೆ
- ೯.ಗುಂಡ ಗುಂಡ ಗುಂಡ
ಹೊಸ ಮನೆಗೋದ
ಹೊಸಬಟ್ಟೆ ಸಿಕ್ತು
ಹಳೆ ಮನೆಗೋದ
ಹಳೇ ಬಟ್ಟೆ ಸಿಕ್ತು
ನಡು ಮನೆಗೋದ
ನಡ ಮುರ್ಕೊಂಡು ಬಂದ
- ೧೦.ಹಾವ್ ಹಾವ್ ಮಲರೆ
ಗೌರಿ ಕಡ್ಡಿ ಮಲರೆ
ತಿಮ್ಮರಾಯಪ್ಪ ಬಿದ್ದ
ಬಿದ್ದವ್ನ ಕೈಲಿ ಬಿಲ್ಲು
ಎದ್ದವ್ನ ಕೈಲು ಎಳ್ಳು
ಕಾಡೇ ಗೌಡನ ಕಟ್ಟೆ
ಗುಡುಗಾಡಕ್ಕಿ ಮೊಟ್ಟೆ
ಆಚೆಕಲ್ಲು ಈಚೆಗೆ
ಆಕರ ಗ್ರಂಥ
ಬದಲಾಯಿಸಿ- ಜಾನಪದ ತತ್ವಾರ್ಥ ಪ್ರವೇಶ -ರಾಗೌ
- ಜಾನಪದ ಸಿರಿ-ಡಾ.ಎಂ.ನಂಜಯ್ಯ ಹೊಂಗನೂರು
ಉಲ್ಲೇಖಗಳು
ಬದಲಾಯಿಸಿ
- ↑ http://nandondmatu.blogspot.in/2009/05/blog-post_27.html
- ↑ http://ladaiprakashanabasu.blogspot.in/2013/10/blog-post_27.html
- ↑ http://kannada.oneindia.com/literature/poem/2005/290905praasa.html
- ↑ https://books.google.co.in/books?id=G1CYAwAAQBAJ&pg=PA13&lpg=PA13&dq=%E0%B2%B6%E0%B2%BF%E0%B2%B6%E0%B3%81%E0%B2%AA%E0%B3%8D%E0%B2%B0%E0%B2%BE%E0%B2%B8%E0%B2%97%E0%B2%B3%E0%B3%81&source=bl&ots=aQhpemUn5o&sig=1qa8xyw05Q99fKX5B0NOK50u1YI&hl=en&sa=X&ei=sN5qVZniO4GVuATc-IDQBg&ved=0CFQQ6AEwCA#v=onepage&q=%E0%B2%B6%E0%B2%BF%E0%B2%B6%E0%B3%81%E0%B2%AA%E0%B3%8D%E0%B2%B0%E0%B2%BE%E0%B2%B8%E0%B2%97%E0%B2%B3%E0%B3%81&f=false