ಶಿವ ಸ್ವರೋದಯ ಪ್ರಾಚೀನ ಸಂಸ್ಕೃತ ತಾಂತ್ರಿಕ ಪಠ್ಯವಾಗಿದೆ. ಇದನ್ನು ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆಯಾಗಿ ಬರೆಯಲಾಗಿದೆ.[] ಮತ್ತು ಈ ಪ್ರಾಚೀನ ಗ್ರಂಥವು 395 ಸೂತ್ರಗಳನ್ನು ಹೊಂದಿದೆ. 1983ರಲ್ಲಿ ಸ್ವಾಮೀ ಸತ್ಯಾನಂದ ಸರಸ್ವತಿ ಅವರಿಂದ ಸ್ವರ ಯೋಗ ಎಂದು ಕರೆಯಲ್ಪಡುವ ಒಂದು ವ್ಯಾಖ್ಯಾನ ಮತ್ತು ಅನುವಾದವನ್ನು ಮಾಡಲಾಗಿದೆ. ಇದನ್ನು "ಧ್ವನಿ ಜ್ಯೋತಿಷ್ಯ" ಅಥವಾ "ಉಸಿರಾಟದ ಧ್ವನಿ" ಎಂದು ಸಹ ಕರೆಯಲಾಗುತ್ತದೆ.[]

ಶಿವ ಮತ್ತು ಪಾರ್ವತಿ

ಪಾರ್ವತಿ ಮತ್ತು ಶಿವನ ನಡುವಿನ ಸಂಭಾಷಣೆಯೊಂದಿಗೆ ಗ್ರಂಥ ಪ್ರಾರಂಭವಾಗುತ್ತದೆ. ಅಲ್ಲಿ ಶಿವನು ಸೂತ್ರಗಳನ್ನು ಪರಿಚಯಿಸಲು ಪ್ರಾರಂಭಿಸುತ್ತಾನೆ. ರಹಸ್ಯವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ವಿವರಿಸುತ್ತಾನೆ ಮತ್ತು ಪಠ್ಯದ ಜ್ಯೋತಿಷ್ಯ ಮೌಲ್ಯವನ್ನು ವಿವರಿಸುತ್ತಾನೆ.[]

"ಸ್ವರ ಯೋಗ" (ವಿಶೇಷ ವಿಶ್ಲೇಷಣೆ ಮತ್ತು ಉಸಿರಾಟದ ಅಭ್ಯಾಸ) ಅಭ್ಯಾಸದ ಮೂಲಕ ಉಸಿರಾಟವನ್ನು ವೈಶ್ವಿಕ ಪ್ರಾಣಶಕ್ತಿಯ ಮಾಧ್ಯಮವೆಂದು ಅರಿತುಕೊಳ್ಳುವುದು ಇದರ ಮೂಲಭೂತ ಅನ್ವಯವಾಗಿದೆ. ಸ್ವಾಮೀ ಮುಕ್ತಿಬೋಧಾನಂದರ ಪ್ರಕಾರ, ಈ ಪುಸ್ತಕವು ಉಸಿರಾಟದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮತ್ತು ದೇಹದ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಏಕೆಂದರೆ ಉಸಿರಾಟದ ವಿವಿಧ ವಿಧಾನಗಳು ವಿಭಿನ್ನ ರೀತಿಯ ಅಂದರೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ರಿಯೆಗಳಿಗೆ ಕಾರಣವಾಗುತ್ತವೆ.[] ಗುರೂಜಿ ಪ್ರೇಮನಿರ್ಮಲರವರ ಪ್ರಕಾರ ಸ್ವರಯೋಗವು ಪ್ರಾಚೀನ ವಿಜ್ಞಾನವಾಗಿದ್ದು ಅದು ಉಸಿರಾಟದೊಂದಿಗೆ ಸೂರ್ಯ, ಚಂದ್ರ ಮತ್ತು ಪಂಚ ಮಹಾಭೂತಗಳ ಸಂಬಂಧವನ್ನು ಜೋಡಿಸುತ್ತದೆ. ಅದು ಮನಸ್ಥಿತಿಯನ್ನು ನಿಯಂತ್ರಿಸಲು, ಕಾಯಿಲೆಗಳನ್ನು ಗುಣಪಡಿಸಲು ಮತ್ತು ವೈಶ್ವಿಕ ಲಯಕ್ಕೆ ಹೊಂದಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.[]

ಸ್ವರಗಳ ಪರಿಚಯ ಮತ್ತು ಅವುಗಳ ಪರಿಣಾಮಗಳು

ಬದಲಾಯಿಸಿ

ಸ್ವಾಮೀ ಮುಕ್ತಿಬೋಧಾನಂದರ ಸಂಶೋಧನೆಗಳ ಪ್ರಕಾರ, ಎರಡನೆಯ ಭಾಗವು ನಾಡಿಗಳಿಂದ ಉಂಟಾಗುವ ಸ್ವರಗಳ ಪ್ರಕಾರಗಳನ್ನು ಪರಿಚಯಿಸುತ್ತದೆ. ಇಲ್ಲಿ ಮೂರು ರೀತಿಯ ಸ್ವರಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಮತ್ತು ಸ್ವರಗಳ ಪ್ರತಿಯೊಂದು ಫಲಿತಾಂಶವನ್ನು ಸಹ ಇಲ್ಲಿ ಗುರುತಿಸಲಾಗಿದೆ.[] ಸ್ವರೋದಯ ವಿವರಿಸುವ ಈ 'ಯೋಗ' ಮೂರು ವಿಧದ ಉಸಿರಾಟದ ವ್ಯವಸ್ಥೆಗಳನ್ನು ಹೊಂದಿದೆ- ಇಡಾ (ನಮ್ಮ ಮೂಗಿನ ಹೊಳ್ಳೆಗಳ ಎಡಭಾಗದಿಂದ ಉಸಿರಾಡುವುದು ಮತ್ತು ಬಿಡುವುದು), ಪಿಂಗಳ (ನಮ್ಮ ಮೂಗಿನ ಹೊಳ್ಳೆಗಳ ಬಲಭಾಗದಿಂದ ಉಸಿರಾಡುವುದು ಮತ್ತು ಬಿಡುವುದು) ಮತ್ತು ಸುಷುಮ್ನಾ (ಮೂಗಿನ ಹೊಳ್ಳೆಗಳ ಎರಡೂ ಬದಿಗಳಿಂದ ಉಸಿರಾಡುವುದು ಮತ್ತು ಬಿಡುವುದು). ನಾವು ಹೆಚ್ಚಾಗಿ ಇಡಾ ಅಥವಾ ಪಿಂಗಳಾದಿಂದ ಉಸಿರಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರಾಡುತ್ತೇವೆ.

ವಾತ, ಪಿತ್ತ ಮತ್ತು ಕಫ ದೋಷಗಳ ಅಸಮತೋಲನ ರೋಗಗಳನ್ನು ಉಂಟುಮಾಡುತ್ತದೆ ಮತ್ತು ಇದನ್ನು ಸ್ವರಯೋಗದ ಮೂಲಕ ಸಮತೋಲನಗೊಳಿಸಬಹುದು.

ಸ್ವರಗಳ ನಿರ್ದಿಷ್ಟ ಹರಿವಿನ ಸಮಯದಲ್ಲಿ ಶಿಫಾರಸು ಮಾಡಲಾದ ಕಾರ್ಯಗಳು

ಬದಲಾಯಿಸಿ

ಸ್ವಾಮೀ ಸತ್ಯಾನಂದ ಸರಸ್ವತಿಯವರು ಬರೆದ ಪುಸ್ತಕ ಪ್ರತಿಯೊಂದು ಸ್ವರವೂ ನಿರ್ದಿಷ್ಟ ಹೊಂದಾಣಿಕೆಯ ಚಟುವಟಿಕೆಗಳಿಗೆ ಸೂಕ್ತವೆಂದು ಸೂಚಿಸುತ್ತದೆ. ಉಸಿರಾಟದ ಮೂರು ವಿಧಾನಗಳಿವೆ, ಅಂದರೆ ಎಡ ಮೂಗಿನ ಹೊಳ್ಳೆಯಿಂದ ಹರಿವು, ಬಲ ಮೂಗಿನ ಹೊಳ್ಳೆಯಿಂದ ಹರಿವು ಮತ್ತು ಎರಡೂ ಮೂಗಿನ ಹೊಳ್ಳೆಗಳಿಂದ ಹರಿವು. ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಉಸಿರಾಟ ಬದಲಾಗುವಾಗ ಕೊನೆಯ ರೀತಿಯ ಉಸಿರಾಟದ ವಿಧಾನವು ನೆಡೆಯುತ್ತದೆ ಹಾಗೂ ಇದು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿರುತ್ತದೆ. ಉಸಿರಾಡುವಾಗ ಗಾಳಿಯ ಹರಿವನ್ನು ಪರೀಕ್ಷಿಸುವ ಮೂಲಕ ಉಸಿರಾಟದ ವಿಧಾನವನ್ನು ಪರಿಶೀಲಿಸಬಹುದು. ನಮ್ಮ ಎಲ್ಲಾ ಕ್ರಿಯೆಗಳನ್ನು ಮೂರು ಮುಖ್ಯ ವರ್ಗಗಳಾಗಿ ವರ್ಗೀಕರಿಸಬಹುದು- ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ. ಇವುಗಳು ಕ್ರಮವಾಗಿ ಮೇಲಿನ ಮೂರು ಉಸಿರಾಟದ ವಿಧಾನಗಳಿಂದ ನಿರ್ವಹಣೆಗೊಳ್ಳುತ್ತವೆ.

ಎಡ ಅಥವಾ ಬಲ ಮೂಗಿನ ಹೊಳ್ಳೆಗಳು ಸಕ್ರಿಯವಾಗಿರುವಾಗ ಪ್ರಾರಂಭಿಸಬೇಕಾದ ಕೆಲವು ನಿರ್ದಿಷ್ಟ ಚಟುವಟಿಕೆಗಳನ್ನು ಕೆಳಗೆ ನೀಡಲಾಗಿದೆ. ಕೆಲವು ಚಟುವಟಿಕೆಗಳನ್ನು ಎರಡೂ ವಿಧಾನಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ವ್ಯಕ್ತಿಯೊಬ್ಬ ಆಯಾಯಾ ಚಟುವಟಿಕೆಯ ಕ್ರಿಯಾತ್ಮಕತೆ ಅಥವಾ ಧಾರ್ಮಿಕತೆಯ ಆಧಾರದ ಮೇಲೆ ವಿಧಾನವನ್ನು ಆಯ್ಕೆ ಮಾಡಬಹುದು. ಸಾಮಾನ್ಯವಾಗಿ ಧಾರ್ಮಿಕ ಚಟುವಟಿಕೆಗಳನ್ನು ಎಡ ಮೂಗಿನ ಹೊಳ್ಳೆಯಲ್ಲಿ ಉಸಿರು ಹರಿಯುವ ಸಮಯದಲ್ಲಿ ಪ್ರಾರಂಭಿಸಲಾಗುತ್ತದೆ. ನಿರ್ದಿಷ್ಟ ಅಪೇಕ್ಷಿತ ಚಟುವಟಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಉಸಿರಾಟದ ವಿಧಾನವನ್ನು ಸೂಕ್ತವಾಗಿ ಬದಲಾಯಿಸಬೇಕು. ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರು ಹರಿಯುತ್ತಿರುವ ಸಮಯವು ಪೂಜೆ ಮತ್ತು ಭಕ್ತಿಯ ಚಟುವಟಿಕೆಗಳಿಗೆ ಮಾತ್ರ ಪ್ರಯೋಜನಕಾರಿಯಾಗಿದೆ; ಆದರೆ ಇತರ ಯಾವುದೇ ಚಟುವಟಿಕೆಗಳನ್ನು ಪ್ರಾರಂಭಿಸಬಾರದು. ಹೆಚ್ಚಿನ ಅಭ್ಯಾಸ ಮಾಡುವ ಜ್ಯೋತಿಷಿಗಳು 'ಸ್ವರ ಶಾಸ್ತ್ರ'ಗಳ ಅನುಸರಣೆ ಶಕುನಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಗಮನಿಸಿದ್ದಾರೆ ಮತ್ತು ಜ್ಯೋತಿಷ್ಯದ ಮೂಲಕ ಸೂಕ್ತವಾದ ಸಮಯವನ್ನು ಸಹ ಆಯ್ಕೆ ಮಾಡುತ್ತಾರೆ.

ಎಡ ಮೂಗಿನ ಹೊಳ್ಳೆಯ ಚಾಲನೆಯಲ್ಲಿಶಿಫಾರಸುಮಾಡಲಾದ ಚಟುವಟಿಕೆಗಳು:

ಬದಲಾಯಿಸಿ

ದೂರದ ಪ್ರಯಾಣ, ದಾನ, ಬಟ್ಟೆ ಮತ್ತು ಆಭರಣಗಳನ್ನು ಧರಿಸುವುದು, ಒಪ್ಪಂದ, ವಿಗ್ರಹ ಸ್ಥಾಪನೆ, ಯೋಗವನ್ನು ಅಭ್ಯಾಸ ಮಾಡುವುದು, ಶಾಂತಿಗಾಗಿ ನೆಡೆಸುವ ಹವನಗಳು, ಪೂಜೆ ಮಾಡುವುದು, ಪವಿತ್ರ ಪುಸ್ತಕಗಳ ಪಠಣ, ಮಂತ್ರಗಳ ದೀಕ್ಷೆ, ಭವಿಷ್ಯದ ಜ್ಞಾನದ ಒಲವು, ಮದುವೆ, ಔಷಧವನ್ನುನೀಡುವುದು, ಕಷ್ಟಕರವಾದ ರೋಗಗಳಿಗೆ ಚಿಕಿತ್ಸೆ, ವಿಷವನ್ನು ತೆಗೆದುಹಾಕುವುದು, ಶಿಕ್ಷಣ-ಗಾಯನ-ನೃತ್ಯ-ಸಂಗೀತ ವಾದ್ಯಗಳ ಪ್ರಾರಂಭ, ನಾಟಕ - ನೃತ್ಯದ ಬಗ್ಗೆ ಚರ್ಚೆ, ಸ್ಥಾಯಿ ಮತ್ತು ಸ್ಥಿರ ಕಾರ್ಯಗಳು, ಮಾನಸಿಕ ಮತ್ತು ಸೃಜನಶೀಲ ಕಾರ್ಯಗಳು, ಮನೆ- ನಗರ – ಹಳ್ಳಿಯೊಳಗೆ ಪ್ರವೇಶಿಸುವುದು, ಪಟ್ಟಾಭಿಷೇಕ, ರಾಜನನ್ನು(ಉನ್ನತ ಅಧಿಕಾರಿ, ಮಾಸ್ಟರ್, ಉದ್ಯೋಗದಾತ) ನೋಡುವುದು, ಮಧುರ ಹಾಗೂ ಸ್ನೇಹಪರ ಚಟುವಟಿಕೆಗಳು, ಸ್ನೇಹ, ಮಹಿಳೆಯರು ಲೈಂಗಿಕ ಸಂಬಂಧಗಳಲ್ಲಿ ಭಾಗವಹಿಸಲು, ಶುಭ ಕಾರ್ಯಗಳು, ಬೋಧನೆಗಳು, ಸಂಪತ್ತು ಮತ್ತು ಧಾನ್ಯಗಳು ಮೊದಲಾದ ಗೃಹೋಪಯೋಗಿ ವಸ್ತುಗಳ ಸಂಗ್ರಹ, ಆಭರಣ ಖರೀದಿ, ನೀರಿನ ತೊಟ್ಟಿ-ಕೆರೆ-ಬಾವಿ ಆರಂಭ, ಶಾಂತಿಯ ಮತ್ತು ಅಭಿವೃದ್ಧಿಯ ಕಾರ್ಯಗಳು, ವ್ಯಾಪಾರ (ಉಸಿರಾಟ ನೆಡೆಯುತ್ತಿರುವ ಕಡೆಯ ಕೈಯಿಂದ ನೀಡಿ ಮತ್ತು ತೆಗೆದುಕೊಳ್ಳಿ), ಕೃಷಿಕೆಲಸಗಳು, ಬೀಜ ಬಿತ್ತನೆ, ಕೃಷಿಭೂಮಿ ಖರೀದಿ, ನೀರು ಕುಡಿಯಲು ಎಡ ಮೂಗಿನ ಹೊಳ್ಳೆಯ ಉಸಿರಿನ ಹರಿವು ಪ್ರಯೋಜನಕಾರಿ ಅಥವಾ ಮಂಗಳಕರವೆನ್ನಲಾಗಿದೆ.

ಬಲ ಮೂಗಿನ ಹೊಳ್ಳೆಯ ಚಾಲನೆಯಲ್ಲಿ ಶಿಫಾರಸು ಮಾಡಲಾದ ಚಟುವಟಿಕೆಗಳು:

ಬದಲಾಯಿಸಿ

ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರಿನ ಹರಿಯುವಿಕೆಯು ನಿಖರವಾದ ಮತ್ತು ಕಷ್ಟಕರವಾದ ಅಥವಾ ಕಠಿಣವಾದ ಕೆಲಸಗಳನ್ನು ಮಾಡಲು ಮಂಗಳಕರ ಅಥವಾ ಪ್ರಯೋಜನಕಾರಿಯಾಗಿದೆ. ಅಕ್ಷರಗಳನ್ನು ಬರೆಯುವುದು, ಶಸ್ತ್ರಾಸ್ತ್ರಗಳ ಬಳಕೆಯನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು, ಶತ್ರುಗಳ ಮೇಲೆ ಯುದ್ಧ- ದಾಳಿ- ನಾಶ, ಹಗೆತನ, ಶಿಕ್ಷೆ ವಿಧಿಸುವುದು, ಮುರಿಯುವುದು ಅಥವಾ ವಿಭಜಿಸುವುದು, ಜೂಜು, ಸ್ನಾನ, ಆಹಾರವನ್ನು ಸ್ವೀಕರಿಸುವುದು, ಮಲಗುವುದು, ಪುರುಷರ ಲೈಂಗಿಕತೆ, ಮಹಿಳೆಯರು ಮತ್ತು ವೇಶ್ಯೆಯರನ್ನು ಭೇಟಿಮಾಡುವುದು, ಸ್ತ್ರೀಯರನ್ನು ಮೋಡಿ ಮಾಡುವುದು, ಇತರರನ್ನು ಆಕರ್ಷಿಸುವುದು, ಭಯವನ್ನು ಸೃಷ್ಟಿಸುವುದು, ಕ್ರೂರ ಕಾರ್ಯಗಳು, ಕಡಿಮೆ ದೂರದ ಪ್ರಯಾಣ, ಮನೆಯೊಳಗೆ ಪ್ರವೇಶ, ಹಡಗು ಅಥವಾ ದೊಡ್ಡ ದೋಣಿಯನ್ನು ಏರುವುದು, ಅಮಲು ಪದಾರ್ಥಗಳನ್ನು ಕುಡಿಯುವುದು, ವಿಷದ ತಯಾರಿಕೆ, ವಿಷವನ್ನು ತೆಗೆಯುವುದು, ಮಂತ್ರಗಳ ಬಳಕೆ, ಪವಿತ್ರ ಪುಸ್ತಕಗಳ ಅಧ್ಯಯನ, ಪರ್ವತಗಳು ಮತ್ತು ಕೋಟೆಗಳನ್ನು ಹತ್ತುವ ಶಾಸ್ತ್ರದ ಕಷ್ಟಕರ ಮತ್ತು ವಿನಾಶಕಾರಿ ಶಾಖೆಗಳ ಅಧ್ಯಯನ ಮತ್ತು ಬೋಧನೆ, ಅಪಾಯಕಾರಿ ಮತ್ತು ವೀರತನದ ಸಾಹಸಗಳು, ಕುದುರೆ ಅಥವಾ ಆನೆಯ ಸವಾರಿ ಮತ್ತು ಸಾರಿಗೆ, ದೈಹಿಕ ವ್ಯಾಯಾಮ, ಪ್ರಾಣಿಗಳ ಮಾರಾಟ, ಕೃಷಿ, ಕೊಳ-ನದಿ ದಾಟುವುದು, ಔಷಧಿ ತೆಗೆದುಕೊಳ್ಳುವುದು, ದೇಣಿಗೆ ನೀಡುವುದು, ಮಾರಾಟ-ಖರೀದಿ, ಇಟ್ಟಿಗೆಗಳು-ಕಲ್ಲುಗಳು-ಮರ-ಲೋಹಗಳನ್ನು ಅರೆಯುವುದು, ಹೊಡೆಯುವುದು, ಆಕರ್ಷಿಸುವುದು, ಅಡ್ಡಿಪಡಿಸುವುದು, ದ್ವೇಷಿಸುವುದು, ಕಿರಿಕಿರಿ ಮಾಡುವುದು ಮತ್ತು ನಿಗ್ರಹಿಸುವುದು- ಹೀಗೆ ಷಟ್ಕರ್ಮಗಳನ್ನು ನಿರ್ವಹಿಸಲು ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರು ಹರಿಯುವ ಸಮಯ ಪ್ರಯೋಜನಕರವಾಗಿದೆ.[]

ಮುಂಬರುವ ಸಾವಿನ ಚಿಹ್ನೆಗಳು

ಬದಲಾಯಿಸಿ

ಪುಸ್ತಕದ ಕೊನೆಯಲ್ಲಿ, ದೇಹ ಮತ್ತು ಸ್ವಪ್ನಗಳಲ್ಲಿ ಸ್ವರಗಳ ನಡವಳಿಕೆಯನ್ನು ತಿಳಿಸುವ ಮುಂಬರುವ ಸಾವಿನ ಚಿಹ್ನೆಗಳೊಂದಿಗೆ ಗ್ರಂಥವು ವ್ಯವಹರಿಸುತ್ತದೆ.[]

References

  1. Satyananda Saraswati, 1999 Swara Yoga, Nesma Books India P 5-10
  2. Mukti Bodhananda, 1999 'Swara Yoga', Nesma Books India
  3. Mukti Bodhananda, 1984, "Swara yoga: the tantric science of brain breathing", Bihar School of Yoga, p 100–150
  4. Mukti Bodhananda, 1984, "Swara yoga: the tantric science of brain breathing", Bihar School of Yoga
  5. "The Almighty Breath | Life Positive".
  6. Mukti Bodhananda, 1984 "Swara yoga: the tantric science of brain breathing",Bihar School of YogaP 120-180
  7. Satyananda Saraswati, 1999 Swara Yoga, Nesma Books India P 176
  8. Satyananda Saraswati, 1999 "Swara Yoga", Nesma Books IndiaP -198