ಶಿವಯೋಗಿ ಸಿದ್ಧರಾಮೇಶ್ವರ

ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಈತನ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ (ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಈತನ ಜನ್ಮಸ್ಥಳ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ. ತಂದೆ ತಾಯಿ ಇಟ್ಟ ಹೆಸರು ಧೂಳಿಮಾಕಾಳ. ಅನಂತರ ನಾಥಸಿದ್ಧ ಸಂಪ್ರದಾಯದವನಾಗುವಲ್ಲಿ ಸಿದ್ಧರಾಮನೆಂದು ಪ್ರಸಿದ್ಧನಾದ. ಬಾಲ್ಯದಲ್ಲಿ ಮುಗ್ಧಭಕ್ತ. ಮೇಷ ಪಾಲನ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ. ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ 'ಯೋಗ ರಮಣೀಯ ಕ್ಷೇತ್ರ'ವೆಂದು ಹೆಸರಿಸಿದ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ. ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ.

ವಚನ ಸಾಹಿತ್ಯ

ಬದಲಾಯಿಸಿ

ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾನೆ. ವಚನ ಮತ್ತು ಸ್ವರವಚನಗಳಲ್ಲಿ 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ 'ಯೋಗಿನಾಥ' ಅಂಕಿತವಿದೆ. ಸದ್ಯ ಈತನ ೧೧೬೨ ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ.

ಬಸವಣ್ಣನೇ ತಾಯಿ
ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ.

ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ, ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ
ಇನ್ನೆನಗತಿಶಯವೇನೂ ಇಲ್ಲ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ದಮಲ್ಲಿಕಾರ್ಜುನ ನೋಡಾ!

ಲಿಂಗೈಕ್ಯ

ಬದಲಾಯಿಸಿ

ಕಲ್ಯಾಣಕ್ರಾಂತಿಯ ನಂತರ (ಸೊಲ್ಲಾಪುರ) ಸೊನ್ನಲಿಗೆಗೆ ಬಂದು ಅಲ್ಲಿಯೇ ಐಕ್ಯನಾದ.


ಇವನ್ನೂ ನೋಡಿ

ಬದಲಾಯಿಸಿ

ಅಕ್ಕಮಹಾದೇವಿ

ಅಲ್ಲಮ ಪ್ರಭು

ಬಾಹ್ಯ ಸಂಪರ್ಕಗಳು

ಬದಲಾಯಿಸಿ