ಶಾಂತೇಶ್ವರ ಸ್ವಾಮಿ ಜೈನ ಬಸದಿ ಬಸದಿಗದ್ದೆ ಉಳ್ಳೂರುಮಠ
ಶ್ರೀ ಶಾಂತೇಶ್ವರ ಸ್ವಾಮಿ ಜೈನ ಬಸದಿ ಬಸದಿಗದ್ದೆ, ಹೆಗಡೆ ಹೊಸಳ್ಳಿ, ಉಳ್ಳೂರುಮಠ
ಸ್ಥಳ
ಬದಲಾಯಿಸಿಕುಮಟಾ-ಸಿದ್ಧಾಪುರ ರಸ್ತೆಯಲ್ಲಿ ಕುಮಟಾದಿಂದ ೨೧ ಕಿಲೋಮೀಟರ್ ಹೋದಾಗ ಸಿಗುವ ಉಳ್ಳೂರು ಮಠ ಕ್ರಾಸ್‌ನಿಂದ ಆ ಮಠದ ರಸ್ತೆಯಲ್ಲಿ ೪ ಕಿಲೋಮೀಟರ್ ಮುಂದುವರಿದಾಗ ಈ ಹೆಗಡೆ ಹೊಸಳ್ಳಿಯು ಸಿಗುತ್ತದೆ. ಇಲ್ಲಿಯ ಬಸದಿಗದ್ದೆ ಎಂಬಲ್ಲಿ ರಸ್ತೆಯ ಸುಮಾರು ೨೦೦ ಮೀಟರ್ ದೂರದಲ್ಲಿ ಈ ಬಸದಿ ಇದೆ. ಈ ಕುಮಟಾದಿಂದ ಬಸಿದಿಗೆ ೨೫ ಕಿಲೋಮೀಟರ್ ದೂರ. ಹಳದೀಪುರದಿಂದಲೂ ಗ್ರಾಮಾಂತರ ಪ್ರದೇಶದ ಮೂಲಕ ಹೋಗುವ ಹತ್ತಿರದ ರಸ್ತೆಯೂ ಇದೆ.
ಹಿನ್ನಲೆ
ಬದಲಾಯಿಸಿಜೈನ ಬಸದಿಯು ಬಹು ಪ್ರಾಚೀನತೆಯನ್ನು ಹೊಂದಿದ್ದು, ಇತ್ತೀಚಿಗೆ ಸುಮಾರು ೪ ವರ್ಷಗಳ ಹಿಂದೆ ಶ್ರೀ ಜಿನದತ್ತ ದೀಪಣ್ಣ ಶೆಟ್ಟಿಯವರಿಂದ ಪುನರ್‌ನಿರ್ಮಾಣಗೊಂಡು ಜಿನಬಿಂಬವು ಪ್ರತಿಷ್ಠಾಪನೆಗೊಂಡಿದೆ. ಆದರೆ ಪಂಚಕಲ್ಯಾಣವು ನಡೆದಿಲ್ಲ. ಸುಮಾರು ೧೫ ವರ್ಷಗಳ ಹಿಂದೆ ಇಲ್ಲಿಗಾಗಮಿಸಿದ್ದ ಕ್ಷುಲ್ಲಕ ಶ್ರೀ ಮಲ್ಲಿಸಾಗರರು ಇಲ್ಲಿ ಬಸದಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದರಂತೆ. ಅದರ ಅನುಸಾರ ಬಸದಿಯೇನೋ ನಿರ್ಮಾಣವಾಗಿದೆ.[೧]
ಪೂಜಾ ವಿಧಾನ
ಬದಲಾಯಿಸಿಬಸದಿಯಲ್ಲಿ ನಿತ್ಯ ಪೂಜಾ ವಿಧಿಗಳು ನಡೆಯುವುದಿಲ್ಲ. ಪರಿಸರ ದಲ್ಲಿ ಜೈನರ ಮನೆಗಳೂ ಇಲ್ಲ. ಪರಿಣಾಮವಾಗಿ ಜೈನೇತರ ರಾದ ಸ್ಥಳೀಯ ಶ್ರೀ ನಾರಾಯಣ ರಾಮ ಗೌಡ ಹಾಗೂ ಅವರ ಸಹೋದರ ಶ್ರೀ ಮಂಜುನಾಥ ರಾಮ ಗೌಡರು ಇಲ್ಲಿ ಕೆಲವೊಮ್ಮೆ ಪೂಜೆಗಳನ್ನು ನಡೆಸುತ್ತಾರೆ. ವಿಧ್ಯುಕ್ತ ವಿಧಿವಿಧಾನ, ಅಭಿಷೇಕ, ಪೂಜೆ, ಉತ್ಸವಗಳು ಯಾವುದೂ ಇಲ್ಲ. ಇದರಿಂದ ಮೂಲನಾಯಕ ಶಿಲಾ ವಿಗ್ರಹವು ತನ್ನ ಕಾಂತಿಯನ್ನು ಕಳೆದುಕೊಂಡು ಬೂದು ಬಣ್ಣವನ್ನು ಪಡೆದಿದೆ.
ಶಿಲಾ ವಿನ್ಯಾಸ
ಬದಲಾಯಿಸಿಸುಮಾರು ೪ ಅಡಿ ಎತ್ತರವಿರುವ ಈ ಖಡ್ಗಾಸನ ಭಂಗಿಯ ಮೂರ್ತಿಯು ಮಂಕಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಮೂಲನಾಯಕ ವಿಗ್ರಹವನ್ನೇ ಹೋಲುತ್ತದೆ. ಕಾಲುಗಳು ಪ್ರಮಾಣಕ್ಕಿಂತ ಸಪುರವಾಗಿವೆ. ಮುಖವೂ ಅಷ್ಟು ಸ್ಪಷ್ಟವಾಗಿಲ್ಲ, ಸವೆದುಹೋಗಿರುವಂತೆ ಕಾಣುತ್ತದೆ. ಆದರೆ ಪ್ರದೇಶದಲ್ಲಿರುವ ಯಕ್ಷ-ಯಕ್ಷಿಯರ ಶಿಲ್ಪಗಳು ಸ್ಪಷ್ಟವಾಗಿವೆ. ಮಕರ ಮೃಗ ಸ್ಪಷ್ಟವಾಗಿದ್ದರೂ ಮಕರ ತೋರಣ ಮತ್ತು ಕೀರ್ತಿ ಮುಖವು ವ್ಯವಸ್ಥಿತವಾಗಿರುವಂತೆ ಕಂಡುಬರುವುದಿಲ್ಲ. ಮುಕ್ಕೊಡೆ ಬಹು ಸ್ಪಷ್ಟವಾಗಿದೆ. ಮೂಲನಾಯಕ ಮೂರ್ತಿಯ ಕಾಲ ಬಳಿಯಲ್ಲಿ ಕೆಲವು ಲೋಹದ ಮೂರ್ತಿಗಳನ್ನು ಇಡಲಾಗಿದೆ.
ವಿಶೇಷತೆ
ಬದಲಾಯಿಸಿನೈಋತ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಕಲ್ಲು ಇದೆ. ಇದಕ್ಕೆ ಶದ್ಧೆಯಿಂದ ಇಲ್ಲಿಯವರು ಪೂಜೆ ಸಲ್ಲಿಸುತ್ತಾರೆ. ಬಸದಿಯ ಎದುರಗಡೆಯಲ್ಲಿ ಬೃಹದಾಕಾರದ ಒಂದು ಅಶ್ವತ್ಥ ಮರವಿದೆ. ಬಸದಿಯಿಂದ ಅನತಿದೂರಲ್ಲಿ ಪ್ರಸಿದ್ಧವಾದ ಉಳ್ಳೂರು ಮಠವಿದೆ. ಅಲ್ಲಿ ಗಣಪತಿ ದೇವಸ್ಥಾನವಿದೆ. ಕೆಲವೊಮ್ಮೆ ಈ ಜೈನ ಬಸದಿಯನ್ನು ಕೂಡಾ ಉಳ್ಳೂರಿನ ಜೈನಬಸದಿಯೆಂದು ಕರೆಯುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೪೦೩.