ಶಾಂತಿನಾಥ ಸ್ವಾಮಿ ಬಸದಿ ಬೈಪಾಡಿ

ಬೈಪಾಡಿ ಶ್ರೀ ಶಾಂತಿನಾಥ ಬಸದಿಯು ಬಂದಾರು ಗ್ರಾಮದ ಬೈಪಾಡಿ ಎಂಬ ಊರಿನಲ್ಲಿದೆ.

ಮಾರ್ಗ ಬದಲಾಯಿಸಿ

ಬಸದಿಯು ಬೆಳ್ತಂಗಡಿ ಕೊಯ್ಯೂರು ಬೈಪಾಡಿ ಬೆಳಾಲ್ ಉಜಿರೆ ಮಾರ್ಗದಲ್ಲಿ ಬೆಳ್ತಂಗಡಿಯಿಂದ ೧೫ ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಹೋಗಲು ಸಾರ್ವಜನಿಕ ವಾಹನ ವ್ಯವಸ್ಥೆ ಇದೆ.

ಪೂಜಾ ತೀರ್ಥಂಕರರು ಬದಲಾಯಿಸಿ

ಈ ಬಸದಿಯಲ್ಲಿ ಪೂಜೆಗೊಳ್ಳುವ ತೀರ್ಥಂಕರರೆಂದರೆ ಶ್ರೀ ಶಾಂತಿನಾಥ ಸ್ವಾಮಿ.ಈ ತೀರ್ಥಂಕರರ ಮೂರ್ತಿಯನ್ನು ಶಿಲೆಯಿಂದ ಮಾಡಲಾಗಿದೆ.ಆದರೆ ಪ್ರಭಾವಲಯ ಕಂಚು ಮತ್ತು ಶಿಲೆಯದ್ದಾಗಿದೆ.

ಮೂರ್ತಿಗಳ ವಿನ್ಯಾಸ ಬದಲಾಯಿಸಿ

ಇಲ್ಲಿ ಮಕರ ತೋರಣ ಇಲ್ಲ. ಸಿಂಹಪೀಠದ ಮೇಲೆ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ.ಅಕ್ಕಪಕ್ಕದಲ್ಲಿ ಗರುಡ ಯಕ್ಷ ಮತ್ತು ಮಹಾಮಾನಸಿ ಯಕ್ಷಿ ಇದ್ದಾರೆ. ಗರುಡ ಯಕ್ಷನ ಕೈಯಲ್ಲಿ ವಜ್ರ, ಪದ್ಮ, ಚಕ್ರ, ಫಲ ಇವೆ. ಅದೇ ರೀತಿ ಮಹಾಮಾನಸಿ ಯಕ್ಷಿಯ ಕೈಯಲ್ಲಿ ಫಲ, ಚಕ್ರ, ಖಡ್ಗ ಮತ್ತು ವರದ ಮುದ್ರೆಗಳಿವೆ. ಮೂರ್ತಿಯ ಕೆಳಗೆ ಜಿಂಕೆಯ ಲಾಂಛನ ಇದೆ. ತೀರ್ಥಂಕರರ ಮೂರ್ತಿಯ ಮುಖವು ಶಾಂತ ಮುದ್ರೆಯಲ್ಲಿ ತುಂಬಾ ಸುಂದರವಾಗಿ ಕಂಡುಬರುತ್ತದೆ. ನೋಂಪಿ ಉದ್ಯಾಪನೆ ಮಾಡಿ ಮೂರ್ತಿಗಳು ಇಲ್ಲ. ಇನ್ನೂ ಹೆಚ್ಚಾಗಿ ಇರುವ ಸುಂದರ ಮೂರ್ತಿಗಳು ಎಂದರೆ ಶ್ರೀ ನೇಮಿನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ. ಈ ಮೂರ್ತಿಗಳನ್ನು ಶಿಲೆಯಿಂದ ಮಾಡಲಾಗಿದೆ.[೧]

ಪೂಜಾ ವಿಧಾನ ಬದಲಾಯಿಸಿ

ಶ್ರೀ ಸ್ವಾಮಿಗೆ ಜಲ, ಗಂಧ, ಪಂಚಾಮೃತ, ಸಿಯಾಳ, ನಾಳಿಕೇರ ಇತ್ಯಾದಿಗಳ ಅಭಿಷೇಕವನ್ನು ಮಾಡುತ್ತಾರೆ.ಈ ಬಸದಿ ೮೦೦ ವರ್ಷಗಳ ಹಿಂದೆ ಅಂದರೆ ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ. ಇಲ್ಲಿ ದಿನಕ್ಕೆ ಬೆಳಗ್ಗೆ ಮತ್ತು ಸಂಜೆ ಹೀಗೆ ಎರಡು ಸಲ ಅಭಿಷೇಕ ಪೂಜೆಗಳು ನಡೆಯುತ್ತವೆ.ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರಪಾದ, ಚವ್ವೀಸ ತೀರ್ಥಂಕರರು ಸರ್ವಾಹ್ನ ಯಕ್ಷ ಇದ್ದಾರೆ.ಶ್ರೀ ಅಮ್ಮನವರ ಮೂರ್ತಿಯನ್ನು ದೇವಕೋಶದಲ್ಲಿ ಇಡಲಾಗಿದೆ. ಇದು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ. ಈ ಮೂರ್ತಿಗೆ ಸೀರೆ, ಬಳೆ ಇತ್ಯಾದಿಗಳನ್ನು ಜೋಡಿಸಲಾಗಿದೆ. ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ಹೂವು ಹಾಕಿ ನೋಡುವ ಕ್ರಮವಿದೆ. ಪೂಜೆಯಲ್ಲಿ ದೇವಿಗೆ ಫಲವಸ್ತುಗಳನ್ನು ಸಮರ್ಪಿಸಲಾಗುತ್ತದೆ. ವಿಶೇಷ ಹರಕೆ ಹೇಳಲಾಗುತ್ತದೆ.ಈವರೆಗೆ ಮದುವೆ ಜಾನುವಾರು ಕೃಷಿ ಇತ್ಯಾದಿಗಳ ಕುರಿತು ಹೇಳಿದ ಹರಕೆ ಈಡೇರಿದೆ.ಬ್ರಹ್ಮದೇವರ ಮೂರ್ತಿ ಇದೆ. ಅವರು ಕುದುರೆಯ ಮೇಲೆ ಕುಳಿತುಕೊಂಡ ಅಂಗಿಯಲ್ಲಿ ಇದ್ದಾರೆ. ಬಸದಿಯ ರಕ್ಷಣೆಗೆ ಬ್ರಹ್ಮದೇವರ ವಿಶಿಷ್ಟ ಶಕ್ತಿ ಕಾರಣ ಎಂಬುದು ದೃಢವಾದ ನಂಬಿಕೆ.

ವಿನ್ಯಾಸ ಬದಲಾಯಿಸಿ

ಬಸದಿಯ ಗರ್ಭಗೃಹದಿಂದ ಹೊರಗೆ ಬರುತ್ತಿರುವಂತೆ ಗಂಧಕುಟಿ, ಪ್ರಾರ್ಥನ ಮಂಟಪ, ತೀರ್ಥಮಂಟಪಗಳಿವೆ. ಈ ಎಲ್ಲಾ ಮಂಟಪಗಳಲ್ಲಿ ಸುಂದರವಾಗಿ ಕೆತ್ತಿದ ವಿವಿಧಾಲಂಕಾರದ ಶಿಲಾಸ್ತಂಭಗಳಿವೆ. ಇವುಗಳಲ್ಲಿ ಹೆಚ್ಚಿನವು ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಶಿಲಾಸ್ತಂಭಗಳನ್ನು ಹೋಲುತ್ತದೆ. ಅವುಗಳಲ್ಲಿ ಆನೆ, ನರಸಿಂಹ, ನವಿಲು, ಕಲಶ ಇತ್ಯಾದಿ ವಿವಿಧ ಆಕೃತಿಗಳನ್ನು ಬಿಡಿಸಲಾಗಿದೆ. ಗೋಡೆಗಳ ಮೇಲೆ ಪೈಂಟಿಂಗ್ ಇಲ್ಲ. ದ್ವಾರಗಳಲ್ಲಿ ಮತ್ತು ದ್ವಾರದ ಆಚೆ-ಈಚೆ ಗೋಡೆಗಳಲ್ಲಿ ಶ್ರೀ ನೇಮಿನಾಥ ಸ್ವಾಮಿಗೆ ಅಭಿಷೇಕ ಮಾಡುವ ಚಿತ್ರ ಇದೆ.ಇಲ್ಲಿಯ ಕೆಲವು ಕಂಬಗಳನ್ನು ಮರದಿಂದ ಮಾಡಲಾಗಿದೆ. ಗರ್ಭಗೃಹದ ಮೇಲೆ ಮೇಗಿನ ನೆಲ ಇದೆ.ಅಲ್ಲಿ ಭಗವಾನ್ ನೇಮಿ ಸ್ವಾಮಿಯ ಮೂರ್ತಿಯನ್ನು ಪೂಜಿಸಲಾಗುತ್ತದೆ.ಕೆಲವು ಮೂರ್ತಿಗಳುಳ್ಳ ಗಂಧಕುಟಿ ಇದೆ.ಗರ್ಭಗೃಹದ ಸುತ್ತಲೂ ಅಂಗಳ ಇದೆ. ಪರಿಸರದಲ್ಲಿ ಪಾರಿಜಾತ ಹೂವಿನ ಗಿಡ ಇದೆ. ಕ್ಷೇತ್ರಪಾಲನ ಸನ್ನಿಧಾನ ಇದೆ. ಅಲ್ಲಿ ನಾಗದೇವತೆಯ ಮೂರ್ತಿ ಇದೆ. ಕ್ಲಪ್ತ ಸ್ಥಳಗಳಲ್ಲಿ ಬಲಿಕಲ್ಲು, ಅಷ್ಟದಿಕ್ಪಾಲಕರ ಕಲ್ಲುಗಳಿವೆ. ಇಲ್ಲಿ ಶಿಲಾಶಾಸನ ಇದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೨೮-೨೩೦.