1905-71. ಚಿತ್ರಕಲಾವಿದರು ಹಾಗೂ ಲೇಖಕರು.

ಆರಂಭಿಕ ಬದುಕುಸಂಪಾದಿಸಿ

1905 ಜುಲೈ 7ರಂದು ಕಲಬುರ್ಗಿಯ ಸರಾಫ್ ಮನೆತನದಲ್ಲಿ ಜನಿಸಿದರು. ತಂದೆ ನಾರಾಯಣರಾವ್, ತಾಯಿ ಚಂದುಬಾಯಿ. ಬಾಲ್ಯದಲ್ಲೇ ಇವರ ಕಲಾಸಕ್ತಿಯನ್ನು ಗುರುತಿಸಿ, ಚಿತ್ರಕಲಾ ಶಿಕ್ಷಕ ಜೋಶಿ ಎಂಬುವವರ ಒತ್ತಾಯದಿಂದ ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ರ್ಸ್ ಶಾಲೆ ಸೇರಿದರು. ಅಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂದು ಹೆಸರು ಗಳಿಸಿದರು. ಆನಂತರ ಮುಂಬಯಿಯ ವಿವಿಧ ಕಲಾಶಾಲೆಗಳಲ್ಲಿ ಕಲಾ ಶಿಕ್ಷಕರಾಗಿ ದುಡಿದರು. ಕಲಬುರ್ಗಿಗೆ ಹಿಂದಿರುಗಿ ನೂತನ ವಿದ್ಯಾಲಯದಲ್ಲಿ 150 ರೂಪಾಯಿ ಸಂಬಳದ ಮೇಲೆ ಕಲಾಶಿಕ್ಷಕರಾಗಿ ಸೇರಿದರು (1924). ಚಿತ್ರಕಲೆಯ ಪುನರುಜ್ಜೀವನಕ್ಕಾಗಿ ಪ್ರಯತ್ನಿಸಿದರು. ತಮ್ಮ ಸಮಸ್ತ ಬದುಕನ್ನೇ ಕಲಾಸಾಧನೆಗೆ ಸಮರ್ಪಿಸಿಕೊಂಡರು. ಚಿತ್ರಗಳ ಬ್ಯಾನರ್, ಭಿತ್ತಿ ಚಿತ್ರಗಳನ್ನು ಸಿದ್ಧಪಡಿಸುವುದು, ನಾಟಕ ಪರದೆ, ವೇಷ ಭೂಷಣ ತಯಾರಿಸುವುದರಲ್ಲಿ ನಿರತರಾದರು. ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸದೆ 40ನೆಯ ವಯಸ್ಸಿನಲ್ಲಿಯೆ ಕ್ಷಯರೋಗ ಮತ್ತು ಮೂಲವ್ಯಾದಿಗೆ ತುತ್ತಾದರು. ಆದರೂ ಕಲಾಕೃತಿಗಳ ರಚನೆ, ಕಲಾಚಿಂತನೆ ನಡೆಸಿದರು. ತಮ್ಮ ಶಿಷ್ಯ ಎಸ್.ಎಮ್.ಪಂಡಿತ ರನ್ನು ಪ್ರೋತ್ಸಾಹಿಸಿ ಮುಂಬಯಿಗೆ ಕಳುಹಿಸಿ, ಶ್ರೇಷ್ಠ ಕಲಾವಿದರನ್ನಾಗಿ ಮಾಡಿದರು. ಈ ಪಂಡಿತರು ತಮ್ಮ ಗುರುಗಳನ್ನು ಧ್ರುವತಾರೆ ಎಂದು ಕರೆದಿದ್ದಾರೆ

ಸಾಹಿತ್ಯ , ಸಂಗೀತ , ಕಲೆಗಳಲ್ಲಿ ಸಾಧನೆಸಂಪಾದಿಸಿ

ಆಳಂದಕರರಿಗೆ ಶಾಸ್ತ್ರೀಯ ಸಂಗೀತದಲ್ಲೂ ಪಿಯಾನೋ ಮತ್ತು ಗಿಟಾರ್ ನುಡಿಸುವುದರಲ್ಲೂ ವಿಶೇಷ ಆಸಕ್ತಿಯಿತ್ತು. ಸಾಹಿತ್ಯದಲ್ಲೂ ಪ್ರೀತಿ. ಕವಿ ರವೀಂದ್ರರ ಅನೇಕ ಶ್ರೇಷವಿ ಚಿತ್ರಭಂಗಿಗಳನ್ನು ರಚಿಸಿದ್ದಾರೆ. ನಿಜಾಮರ ಆಳ್ವಿಕೆಯಲ್ಲಿ ಹೈದರಾಬಾದ್ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಇವರು ಕಲಾವಿದರಾಗಿ ಕೆಲಸ ಮಾಡಿದರು. ಆ ವೇಳೆಯಲ್ಲಿ ಮಹತ್ತ್ವದ ಕಲಾಕೃತಿಗಳನ್ನು ರಚಿಸಿಕೊಟ್ಟರು. ನಿಜಾಮರ ಪೂರ್ವಜ ಅಸಫಜಹಾ ಅವರ ಸಮಗ್ರ ಜೀವನ ಕಲ್ಪನೆಯನ್ನು ಪ್ರತಿಬಿಂಬಿಸುವ ಬೃಹತ್ ಚಿತ್ರಗಳ ಹೊತ್ತಗೆ ತಯಾರಿಸಿ ನಿಜಾಮರ ಕೃಪೆಗೆ ಪಾತ್ರರಾದರು. ಕರ್ನಾಟಕ ವಿಧಾನಸಭಾ ಸಭಾಂಗಣದಲ್ಲಿ ಹಾಕಲು ಜವಾಹರಲಾಲ್ ನೆಹರು ಅವರ ಪೂರ್ಣ ಕೃತಿಯ ತೈಲಚಿತ್ರವನ್ನು ಇವರು ಬರೆದುಕೊಟ್ಟರು. ಈ ಕಲಾಕೃತಿ ಜನರ ಮೆಚ್ಚುಗೆ ಪಡೆಯಿತು. ಇದಲ್ಲದೆ ರಾಷ್ಟ್ರಾಭಿಮಾನವನ್ನು ಪ್ರೇರೇಪಿಸುವ ಲಿವಿಂಗ್ ಕೋಹಿನೂರ್ ಎಂಬ ಮಹತ್ತ್ವಪೂರ್ಣ ಚಿತ್ರಮಾಲಿಕೆಯ ಎರಡು ಸಂಪುಟಗಳನ್ನು ಸಿದ್ಧಪಡಿಸಿದ್ದಾರೆ.

ಆಳಂದಕರರು 1956ರಲ್ಲಿ ತಮ್ಮ ಸೇವೆಯನ್ನು ವರ್ಗಾಯಿಸಿಕೊಂಡು ಬೆಂಗಳೂರಿಗೆ ಬಂದರು. ಆನಂತರ ಅನಾರೋಗ್ಯದಿಂದ ಗುಲ್ಬರ್ಗದಲ್ಲೇ ಉಳಿದರು. ಶರಣ ಬಸವೇಶ್ವರ, ಪುರಂದರದಾಸ, ಕನಕದಾಸ, ಕುಮಾರವ್ಯಾಸ, ರಾಘವೇಂದ್ರಸ್ವಾಮಿ ಮೊದಲಾದ ಆಧ್ಯಾತ್ಮಿಕ ಪ್ರಪಂಚದ ಮಹಾಪುರುಷರ ತೈಲಚಿತ್ರಗಳನ್ನು ರಚಿಸಿ ಕನ್ನಡಿಗರ ಗೌರವಕ್ಕೆ ಪಾತ್ರರಾದರು. ಅಖಿಲ ಭಾರತ ಕಲಾ ಸಂಘದ ಸದಸ್ಯರಾಗಿ (1951-57), ರಾಜ್ಯದ ಪ್ರಮುಖ ಕಲಾ ಶೈಕ್ಷಣಿಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ತಮ್ಮ ಚಿತ್ರಕಲಾ ಬದುಕಿನಲ್ಲಿ ಇವರು ಒಂದು ಸಾವಿರಕ್ಕೂ ಹೆಚ್ಚು ಚಿತ್ರ ರಚಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ (1965-66). ಇವರು ತಮ್ಮ ಜೀವಿತದ ಕೊನೆಯನ್ನು ಭಗವದ್ಗೀತೆಯ ಮೇರುಕೃತಿ ನಿರ್ಮಿಸುವಲ್ಲಿ ತೊಡಗಿಸಿಕೊಂಡರು.

ಒಬ್ಬ ಆದರ್ಶ ಶಿಕ್ಷಕರೂ ಕಲಾತಪಸ್ವಿಯೂ ಕಲಾಪ್ರಪಂಚಕ್ಕೆ ಅಪೂರ್ವ ಕೊಡುಗೆ ನೀಡಿದ ಶ್ರದ್ಧಾವಂತರೂ ಆಗಿದ್ದ ಇವರು 1971 ಮೇ 31ರಂದು ನಿಧನರಾದರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: