ಭಾಷೆಯ ಒಂದು ಪ್ರಭೇದ. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಒಬ್ಬ ವ್ಯಕ್ತಿ ಯಾವುದಾದರೊಂದು ಭಾಷಾರೂಪವನ್ನಾಡುವ ಪ್ರಕ್ರಿಯೆ(ಈಡಿಯೊಲೆಕ್ಟ್). ಒಬ್ಬ ವ್ಯಕ್ತಿ ಎಲ್ಲ ಕಾಲದಲ್ಲಿಯೂ ಒಂದೇ ರೀತಿ ಮಾತನಾಡುವುದಿಲ್ಲ; ಸನ್ನಿವೇಶಕ್ಕನುಗುಣವಾಗಿ ಅವನ ಮಾತು ಬದಲಾಗುತ್ತಿರುತ್ತದೆ.[]

ವ್ಯಾಖ್ಯೆ

ಬದಲಾಯಿಸಿ

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹುಟ್ಟಿದಂದಿನಿಂದ ಸಾಯುವ ತನಕ ಆಡುವ ಭಾಷೆಯ ರೀತಿಯನ್ನು ವ್ಯಕ್ತಿಭಾಷೆ ಎಂದು ಪರಿಗಣಿಸಲಾಗುತ್ತದೆ. ಇದು ಸಂಕೀರ್ಣ ಸ್ವರೂಪದಲ್ಲಿರುತ್ತದೆ, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಹೊಂದುತ್ತದೆ.

ವಾಲ್ಷ್ ವ್ಯಾಖ್ಯೆ

ಬದಲಾಯಿಸಿ

ವ್ಯಕ್ತಿಯೊಬ್ಬ ತಾನೇ ಆಯ್ಕೆ ಮಾಡಿದ ಪದಗಳನ್ನೂ ಮತ್ತು ಭಾಷಿಕರೂಢಿಗಳನ್ನೂ ಸ್ವಂತ ಉಪಯೋಗಕ್ಕಾಗಿ ಬಳಸಿಕೊಳ್ಳುವ ಮತ್ತು ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸಮಯದಲ್ಲಿ ಆಡಿದ ಭಾಷಿಕರೂಢಿಗಳ ಮೊತ್ತವೇ ವ್ಯಕ್ತಿಭಾಷೆಯೆಂದು ವಾಲ್ಷ್ ಅಭಿಪ್ರಾಯಪಟ್ಟಿದ್ದಾನೆ.

ಡೇವಿಡ್ ಕ್ರಿಸ್ಟೆಲ್ಲ್ ವ್ಯಾಖ್ಯೆ

ಬದಲಾಯಿಸಿ

ವ್ಯಕ್ತಿಭಾಷೆ ಎಂದರೆ ಒಬ್ಬ ವ್ಯಕ್ತಿಯ ಭಾಷಿಕ ಪದ್ಧತಿ ಅಥವಾ ಅವನ ಸ್ವಂತ ಉಪಭಾಷೆ ಎಂಬುದು ಡೇವಿಡ್ ಕ್ರಿಸ್ಟಲ್ಲನ ಅಭಿಮತ. ಅಂತೆಯೇ ಒಂದು ಭಾಷಾ ಸಮುದಾಯವನ್ನು ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೇ ಸೂಕ್ಷ್ಮವಾಗಿ ವ್ಯಾಖ್ಯಾನಿಸಿದರೂ ಅದನ್ನು ಆಡುವವರ ಮಾತಿನ ರೂಪದಲ್ಲಿ ಒಂದು ನಿಶ್ಚಿತ ಹಂತದ ವ್ಯವಸ್ಥಿತ ಭಿನ್ನತೆ ಕಂಡುಬರುತ್ತದೆ.

ಜಾನ್ ಲಯನ್ಸ್ ವ್ಯಾಖ್ಯೆ

ಬದಲಾಯಿಸಿ

ಪ್ರತಿಯೊಂದು ಭಾಷಾ ಸಮುದಾಯದವನ್ನೂ ಸ್ವಲ್ಪ ಭಿನ್ನವಾಗಿರುವ ಉಪಭಾಷೆಯನ್ನು ಮಾತನಾಡುತ್ತಾನೆ ಮತ್ತು ಅದು ಅವನ ವ್ಯಕ್ತಿ ಭಾಷೆಯಾಗಿರುತ್ತದೆ ಎಂಬುದು ಜಾನ್ ಲಯನ್ಸನ ಅಭಿಪ್ರಾಯ. ವ್ಯಕ್ತಿಭಾಷೆಗಳಲ್ಲಿ ಕೆಲವು ಸಾಮ್ಯವನ್ನೂ ಗುರುತಿಸಬಹುದು.

ಉಪ ಭಾಷಾರೂಪ

ಬದಲಾಯಿಸಿ

ಅದು ಒಂದು ನಿರ್ದಿಷ್ಟ ಗುಂಪಿಗೆ ಅಥವಾ ಒಂದು ಊರಿಗೆ ಸೇರಿದ ಭಾಷೆಯಾ ಗಿರಬಹುದು. ಇವನ್ನೇ ಭಾಷಾಪ್ರಭೇದಗಳು ಎಂದು ಕರೆಯಲಾಗಿದೆ. ಇಂತಹ ಅನೇಕ ಪ್ರಭೇದಗಳ ಮೊತ್ತವೇ ಉಪಭಾಷೆ. ವ್ಯಕ್ತಿಭಾಷೆ ಮತ್ತು ಉಪಭಾಷೆಗಳ ನಡುವಿನ ಭಾಷಾರೂಪಗಳೇ ಉಪಭಾಷಾರೂಪಗಳು. ಪರಸ್ಪರ ಅರಿವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಬೇರೆ ಬೇರೆ ಉಪಭಾಷೆಗಳನ್ನಾಡುವ ವ್ಯಕ್ತಿಗಳಲ್ಲಿ ಸರಾಸರಿ ಅರಿವಿನ ಅಂಶ ಕಡಮೆ ಇದ್ದರೂ ಸಂವಹನದಲ್ಲಿ ತೊಂದರೆಯಾಗುವುದಿಲ್ಲ.

ಪ್ರತಿಯೊಬ್ಬ ವ್ಯಕ್ತಿಯ ಮಾತೂ (ವ್ಯಕ್ತಿ ಭಾಷೆ) ಇನ್ನೊಬ್ಬ ವ್ಯಕ್ತಿಯ ಮಾತಿನಿಂದ ಭಿನ್ನವಾಗಿರುತ್ತದೆ. ಆ ವ್ಯತ್ಯಾಸಗಳು ಎಷ್ಟೇ ಇದ್ದರೂ ಸ್ಥೂಲವಾಗಿ ಹೇಳುವುದಾದರೆ ಒಂದು ಭಾಗದಲ್ಲಿ ವಾಸಿಸುವ ಜನರ ಮಾತುಗಳೆಲ್ಲ ಒಂದೇ ರೀತಿಯಾಗಿ ಕೇಳಿಸುತ್ತವೆ. ಒಬ್ಬ ವ್ಯಕ್ತಿಯ ಮಾತಿನಿಂದ ಆತ ಇಂಥ ಪ್ರದೇಶದವನೆಂದು ಸುಲಭವಾಗಿ ಗುರುತಿಸಬಹುದು, ಎಂದರೆ ಒಂದು ಪ್ರದೇಶದ ಜನರ ವ್ಯಕ್ತಿಭಾಷೆಗಳು ಸದೃಶವಾಗಿರುತ್ತವೆ. ಅವರಲ್ಲಿ ಪರಸ್ಪರ ಅರಿವಿನ ಶೇಕಡಾವಾರು ನೂರಕ್ಕೆ ನೂರು ಅಥವಾ ನೂರಕ್ಕೆ ತೊಂಬತ್ತೈದು ಇರಬಹುದು. ಒಂದು ಪ್ರದೇಶದ ವ್ಯಕ್ತಿಯ ಮತ್ತು ಇನ್ನೊಂದು ಪ್ರದೇಶದ ವ್ಯಕ್ತಿಯ ಪರಸ್ಪರ ಅರಿವಿನ ಶೇಕಡಾವಾರು ಸಂಖ್ಯೆ ಅರವತ್ತಕ್ಕಿಂತ ಮಿಗಿಲಾಗಿದ್ದರೆ ಅವರಿಬ್ಬರೂ ಒಂದೇ ಭಾಷೆಯ ಎರಡು ಉಪಭಾಷೆ ಗಳನ್ನು ಮಾತಾಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ (ಈ ವಿವರಣೆಯನ್ನು ನಿರ್ಣಾಯಕ ಎಂದು ಭಾವಿಸಬಾರದು. ಏಕೆಂದರೆ ಒಂದು ಭಾಷೆಯ ಸಾಮಾನ್ಯ ಉಪಭಾಷೆಗೂ ಭೌತವಿಜ್ಞಾನದಂಥ ತಾಂತ್ರಿಕ ಉಪಭಾಷೆಗೂ ಪರಸ್ಪರ ಅರಿವಿನ ಶೇಕಡಾವಾರು ಸಂಖ್ಯೆ ಐದಕ್ಕಿಂತ ಹೆಚ್ಚಿರಲಾರದು). ಒಂದು ಉಪಭಾಷಾಪ್ರದೇಶದ ವ್ಯಕ್ತಿಭಾಷೆ, ಇನ್ನೊಂದು ಉಪಭಾಷಾಪ್ರದೇಶದ ವ್ಯಕ್ತಿಭಾಷೆಗಳಿಗಿಂತ ಹೆಚ್ಚು ಸದೃಶವಾಗಿರುತ್ತವೆ. ಒಂದು ಉಪಭಾಷೆಗೂ ಇನ್ನೊಂದು ಉಪಭಾಷೆಗೂ ಉಚ್ಚಾರಣೆ ಪದಗಳಲ್ಲಿ, ವ್ಯಾಕರಣದಲ್ಲಿ ಕೂಡ ವ್ಯತ್ಯಾಸಗಳಿರ ಬಹುದು ಹಾಗೂ ಭಾಷೆಯನ್ನು ವಿಶ್ಲೇಷಿಸಿ ನೋಡಿದಾಗ ಅದು ಅನೇಕ ಉಪಭಾಷೆಗಳ ಮೊತ್ತವೆಂದು ಗೊತ್ತಾಗುತ್ತದೆ. ಹಾಗೆಯೇ ಒಂದೊಂದು ಉಪಭಾಷೆಯ ಸದೃಶ ವ್ಯಕ್ತಿಭಾಷೆಗಳ ಮೊತ್ತವೆಂದೂ ತಿಳಿದುಬರುತ್ತದೆ.

ಬರೆಹದ ಭಾಷೆ ಅಥವಾ ಶಿಷ್ಟಭಾಷೆ

ಬದಲಾಯಿಸಿ

ಆದರೆ ಭಾಷೆಯೆಂದರೆ ಕೆಲವರ ಪ್ರಕಾರ ಬರೆಹದ ಭಾಷೆ ಅಥವಾ ಶಿಷ್ಟಭಾಷೆ. ಈ ಪಂಗಡದವರು ಉಪಭಾಷೆಗಳನ್ನು ಬರಹದ ಭಾಷೆಯ ಅಥವಾ ಶಿಷ್ಟಭಾಷೆಯ ವಿಕೃತಿಗಳೆಂದು ಪರಿಗಣಿಸುತ್ತಾರೆ, ಬರಹದ ಭಾಷೆಯ ವಿಚಾರ ಇಲ್ಲಿ ಅಪ್ರಸ್ತುತ. ಆದರೆ ಯಾವುದನ್ನು ಶಿಷ್ಟಭಾಷೆಯೆಂದು ಕರೆಯುತ್ತೇವೆಯೋ ಅದು ಒಂದಾನೊಂದು ಕಾಲದಲ್ಲಿ ಇತರ ಉಪಭಾಷೆಗಳಂತೆಯೇ ಇದ್ದು, ವಿಶೇಷ ಕಾರಣಗಳಿಂದಾಗಿ ಉನ್ನತಸ್ಥಾನವನ್ನು ಪಡೆಯುತ್ತವೆ ಎಂಬ ವಿಷಯ ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಪ್ರಾಚೀನ ಗ್ರೀಸ್ನಲ್ಲಿ ಇದ್ದ ನಾಲ್ಕು ಉಪಭಾಷೆಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಅಥೆನ್ಸಿನ ಭಾಷೆ ಪ್ರಬಲವಾಗಿ, ಶಿಷ್ಟಭಾಷೆಯೆನಿಸಿಕೊಂಡಿತು. ಈಗಿನ ಇಟಾಲಿಯನ್ ಭಾಷೆ ಹಿಂದೆ ರೋಮ್ ನಗರದ ಸುತ್ತ ಮುತ್ತ ಆಡುತ್ತಿದ್ದ ಲ್ಯಾಟಿನ್ನಿನ ಒಂದು ಉಪಭಾಷೆಯೇ ಆಗಿತ್ತು. ಇಂಗ್ಲೆಂಡಿನಲ್ಲಿ ಲಂಡನ್ ಮತ್ತು ಆಕ್ಸಫರ್ಡ್ ಇಂಗ್ಲಿಷ್ ಭಾಷೆಯೇ ಶಿಷ್ಟಭಾಷೆಯೆನಿಸಿಕೊಂಡಿದೆ. ಹೀಗೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದಾಗಿ ಒಂದು ಪ್ರದೇಶದ ಭಾಷೆ ಮೇಲ್ಮೆಯನ್ನು ಪಡೆಯುತ್ತದೆ. ಇದರ ಫಲವಾಗಿ ಜನಪ್ರಿಯವಲ್ಲದ ಉಪಭಾಷೆಗಳು ನಾಶವಾದ ನಿದರ್ಶನಗಳೂ ಇವೆ. ಈಗ ಕನ್ನಡ ನಾಡಿನಲ್ಲಿ ಶಿಷ್ಟಭಾಷೆ ಯಾವುದೇ ಆಗಿರಲಿ, ಪ್ರಾಚೀನ ಕರ್ನಾಟಕದಲ್ಲಿ ಈಗಿನ ಗದಗ್, ಕೊಪ್ಪಳ, ಲಕ್ಷ್ಮೇಶ್ವರ, ಐಹೊಳೆ, ಪಟ್ಟದಕಲ್ಲುಗಳ ಸುತ್ತಮುತ್ತಣ ಭಾಗದ ಕನ್ನಡಕ್ಕೆ ವಿಶೇಷ ಪ್ರಾಶಸ್ತ್ಯ ಸಂದಿತ್ತು. ಇದು ಕವಿರಾಜಮಾರ್ಗಕಾರ, ಪಂಪ, ರನ್ನರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಹೀಗೆ ಆ ಪ್ರದೇಶದ ಕನ್ನಡ ಆ ಕಾಲದ ಶಿಷ್ಟಭಾಷೆಯಾಗಿ ಪರಿಣಮಿಸಲು ಮೇಲೆ ಹೇಳಿದಂತೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿರಬೇಕು. ಹಾಗೆಯೇ 9-10ನೆಯ ಶತಮಾನಗಳಲ್ಲಿ ಕನ್ನಡದಲ್ಲಿ ಉಪಭಾಷೆಗಳಿದ್ದಿರಬೇಕು ಎಂಬ ಊಹೆಗೆ ಕವಿರಾಜಮಾರ್ಗಕಾರ ಪುಷ್ಟಿ ನೀಡಿದ್ದಾನೆ. ಅವನು ಹೇಳುವ ದಕ್ಷಿಣ, ಉತ್ತರ, ಉತ್ತರೋತ್ತರ ಮಾರ್ಗಗಳು ಆ ಕಾಲದ ಮೂರು ಮುಖ್ಯ ಉಪಭಾಷೆಗಳೇ ಆಗಿವೆ. ಹಾಗೆಯೇ ಪಂಪನೂ ಜನಪದಪರ ನುಡಿಯ ತಂಪನ್ನು ವರ್ಣಿಸುವಲ್ಲಿ ಪಟ್ಟಣಿಗರ ಮತ್ತು ಹಳ್ಳಿಯವರ ನುಡಿಯ ತಂಪನ್ನು ವರ್ಣಿಸುವಲ್ಲಿ, ಪಟ್ಟಣಿಗರ ಮತ್ತು ಹಳ್ಳಿಯವರ ಉಪಭಾಷೆಗಳನ್ನು ಸೂಚಿಸುತ್ತಿದ್ದಾನೆ ಎಂದು ಹೇಳಬಹುದು.

ಭಾಷೆ ಎಂದರೇನು?

ಬದಲಾಯಿಸಿ

ಭಾಷೆ ಪ್ರಕಟವಾಗುವುದು ಸಾರ್ಥಕ್ಯ ಕಂಡುಕೊಳ್ಳುವುದು ವ್ಯಕ್ತಿಭಾಷೆಯ ಮೂಲಕವೇ ಎಂಬುದು ಭಾಷಾವಿಜ್ಞಾನಿಗಳ ಅಭಿಮತ. ಆದ್ದರಿಂದ ವಿಭಜಿಸಿ ನೋಡಿದರೆ ಭಾಷೆ ಅನೇಕ ವ್ಯಕ್ತಿಭಾಷೆಗಳ ಮೊತ್ತ ಎನ್ನುತ್ತಾನೆ ಸಿ.ಎಫ್. ಹಾಕೆಟ್. ಒಂದು ಭಾಷಾಸಮಾಜದ ಎಲ್ಲ ಜನರ ವ್ಯಕ್ತಿಭಾಷೆಗಳಲ್ಲಿರುವ ಸಮಾನ ಅಂಶಗಳನ್ನು ಬೇರ್ಪಡಿಸಿ ಒಂದು ವ್ಯವಸ್ಥೆಗೆ ತಂದರೆ ಅದೇ ಭಾಷೆ ಎಂದ ಕೆರೋಲ್. ವ್ಯಕ್ತಿ ಭಾಷೆಗಳ ಮೂಲಕ ಸಂವಹನ ಮಾಧ್ಯಮವಾದ ಭಾಷೆಯ ಪ್ರಕಟಣೆ ಭಾಷೆ ಮತ್ತು ಉಪಭಾಷೆಗಳಿಗಿರುವ ಸಾದೃಶ್ಯ ಮತ್ತು ವೈದೃಶ್ಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ.

ಬಾಹ್ಯ ಕೊಂಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. http://linguafranca.mirror.theinfo.org/9807/crain.html
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: