ವೋಲ್ಟ್‌ಮೀಟರ್ ಎಂದರೆ ವಿಭವಾಂತರ ಅಥವಾ ವೋಲ್ಟೇಜ್ ಅಳೆಯಲು ಸಾಮಾನ್ಯವಾಗಿ ಬಳಸುವ ಸಾಧನ. ಸುರುಳಿಯೊಂದಿಗೆ ಶ್ರೇಣಿ ಜೋಡಣೆಯಲ್ಲಿ ಉಚ್ಚರೋಧವುಳ್ಳ ಗ್ಯಾಲ್ವನೊಮೀಟರ್ ಇದು. ವೋಲ್ಟೇಜನ್ನು ಅಳೆಯಲು ತಕ್ಕುದಾದ ರೀತಿಯಲ್ಲಿ ಕ್ರಮಾಂಕಿಸಿದ ಮಾನಕ (ಸ್ಕೇಲ್) ಇರುತ್ತದೆ. ವಿದ್ಯುನ್ಮಂಡಲದ ಎರಡು ಬಿಂದುಗಳಿಗೆ ಇದನ್ನು ಜೋಡಿಸಿದಾಗ ಅವುಗಳ ನಡುವಿನ ವಿಭವಾಂತರಕ್ಕೆ ಅನುಪಾತೀಯವಾದ ಅಲ್ಪ ಪ್ರಮಾಣದ ವಿದ್ಯುತ್ತು ಸುರುಳಿಯಲ್ಲಿ ಪ್ರವಹಿಸುತ್ತದೆ. ಅಳೆಯಬಹುದಾದ ವೋಲ್ಟೇಜಿನ ಗರಿಷ್ಠ ಮೌಲ್ಯ ಶ್ರೇಣಿಜೋಡಣೆಯಲ್ಲಿರುವ ರೋಧದ ಮೌಲ್ಯವನ್ನು ಅವಲಂಬಿಸಿದೆ. ವೋಲ್ಟೇಜಿನ ಪ್ರಮಾಣ, ಅಳತೆಯ ಅಪೇಕ್ಷಿತ ನಿಖರತೆ ಹಾಗೂ ವಿದ್ಯುತ್ಪ್ರವಾಹದ ಸ್ವರೂಪ (ಅರ್ಥಾತ್, ನೇರ ಅಥವಾ ಪರ್ಯಾಯಕ) ಇವನ್ನು ಆಧರಿಸಿ ವೋಲ್ಟ್‌ಮೀಟರ್ ರಚನೆಯಲ್ಲಿ ಯುಕ್ತ ಮಾರ್ಪಾಡು ಮಾಡುವುದುಂಟು. ಅತ್ಯಲ್ಪ ಪ್ರಮಾಣದ ವೋಲ್ಟೇಜುಗಳನ್ನು ಅಳೆಯಲೋಸುಗ ನಿರ್ವಾತ ನಳಿಕೆ (ವ್ಯಾಕ್ಯುಮ್ ಟ್ಯೂಬ್), ಟ್ರಾನ್ಸಿಸ್ಟರ್ ಹಾಗೂ ಎಲೆಕ್ಟ್ರಾನಿಕ್ ಮಂಡಲಗಳ ಬಳಕೆ ಇರುವ ವೋಲ್ಟ್‌ಮೀಟರುಗಳಿವೆ. ಕ್ಯಾಥೋಡ್ ಕಿರಣ ದೋಲದರ್ಶಕದ (ಆಸಿಲೊಸ್ಕೋಪ್) ನೆರವಿನಿಂದಲೂ ವೋಲ್ಟೇಜ್ ಅಳೆಯಲು ಸಾಧ್ಯ. ವೋಲ್ಟೇಜ್, ರೋಧ ಹಾಗೂ ನೇರ ವಿದ್ಯುತ್ಪ್ರವಾಹಗಳನ್ನು ನಿಖರವಾಗಿ ಅಳೆಯಲು ಪ್ರಯೋಗಾಲಯಗಳಲ್ಲಿ ವಿಭವಮಾಪಕದ (ಪೊಟೆನ್ಶಿಯೊ ಮೀಟರ್) ಬಳಕೆ ಇದೆ.

ಸದೃಶಿ ವೋಲ್ಟ್‌ಮೀಟರ್

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: