ವೈಶಂಪಾಯನ ಸರೋವರದ ವರ್ಣನೆ ಸಾಹಸಭೀಮ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಬರುತ್ತದೆ. ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ ಹದಿನಾರನೇ ದಿನ ಭೀಷ್ಮರ ಅಣತಿಯಂತೆ ದುರ್ಯೋಧನ ಒಂದು ರಾತ್ರಿಯ ಮಟ್ಟಿಗೆ ಕಾಲವಂಚನೆ ಮಾಡುವ ಸಂದರ್ಭದಲ್ಲಿ ಈ ಸರೋವರದ ಪ್ರಸ್ತಾಪ ಬರುತ್ತದೆ.

ವಿಕ್ರಮಾರ್ಜುನ ವಿಜಯ/ಪಂಪಭಾರತದಲ್ಲಿ ವೈಶಂಪಾಯನ ಸರೋವರದ ವರ್ಣನೆ

ಬದಲಾಯಿಸಿ

ಹದಿನೇಳು ದಿನಗಳವರೆಗಿನ ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ ಮಾರನೇ ದಿನದ ಯುದ್ಧಕ್ಕೆ ಹೊರಡುವ ಮುನ್ನ ಭೀಷ್ಮರ ಬಳಿಗೆ ಆಶೀರ್ವಾದ ಪಡೆಯಲು ಹೋಗುತ್ತಾನೆ. ಆಗ ಭೀಷ್ಮರು ಅವನಿಗೆ ಒಂದು ದಿನದ ಮಟ್ಟಿಗೆ ಪಾಂಡವರಿಗೆ ಕಾಣದ ಹಾಗೆ ಅಡಗಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಛಲವಾದಿಯಾದ ದುರ್ಯೋಧನ ಈ ಸಲಹೆಯನ್ನು ಒಪ್ಪಿಕೊಂಡು ಜಲಸ್ತಂಭನ ಮಂತ್ರ ಬಲದಿಂದ ನೀರಿನಲ್ಲಿ ಅಡಗಿಕೊಳ್ಳಲು ಸರೋವರವೊಂದಕ್ಕೆ ಹೋಗುತ್ತಾನೆ. ಅ ಸರೋವರವೇ ವೈಶಂಪಾಯನ ಸರೋವರ. ಸರೋವರದಲ್ಲಿ ಅಡಗಲು ಬಂದಿದ್ದ ದುರ್ಯೋಧನನ ಸ್ಥಿತಿಯನ್ನು ಲೇಖಕರು ಹಿಡಿದಿಟ್ಟಿದ್ದಾರೆ. ರಾಗ-ದ್ವೇಷಗಳಿಂದ ಕೂಡಿ ಜರ್ಜರಿತನಾಗಿರುವ ದುರ್ಯೋಧನನನ್ನು ಕೊಳದಲ್ಲಿ ಮುಳುಗಿಸಲಿರುವ ಪಂಪನು ನಾಗವರ್ಮನಂತೆ ಚಿತ್ರಿಸಲು ಸಾಧ್ಯವೇ? ಏಕೆಂದರೆ ಪಂಪನಿಗೆ ನಾಗವರ್ಮನಂತೆ ಕೊಳದ ಚೆಲುವನ್ನು ಆಶ್ಚರ್ಯವಾಗಿ, ಭೌವ್ಯವಾಗಿ ವiುಂತಾಗಿ ಕಾಣುವ ಅವಕಾಶವೇ ಒದಗಿ ಬಂದಿಲ್ಲ. ಅವನು ಕೊಳವನ್ನು ಕಾಣುವ ಪರಿಯೇ ಬೇರೆ. ಅಲ್ಲಿ ಅವನು ಕಂಡದ್ದು ಪ್ರಶಾಂತತೆಯನ್ನಲ್ಲ. ಕ್ಷೋಭೆಯನ್ನು! ದುರ್ಯೋಧನ ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನೇಲ್ಲಾ ಕಳೆದುಕೊಂಡು ಹತಾಶ ಸ್ಥಿಯಲ್ಲಿ ಇರುವಾಗ ಮಗನನ್ನು ಕಾಣಲು ಬಂದ ಧೃತರಾಷ್ಟ-ಗಾಂಧಾರಿಯರು ಮಗನಿಗೆ ತಿಳುವಳಿಕೆ ಹೇಳಲು ವಿಫಲರಾಗಿ, ಕಡೆಗೆ ಭೀಷ್ಮಾಚಾರ್ಯರಲ್ಲಿಗಾದರೂ ಹೋಗಿ ಅವರ ಆಶೀರ್ವಾದ ಪಡೆದುಕೊಳ್ಳ ಬೇಕೆಂದು ತಿಳಿಸಿದಾಗ ಹೆತ್ತವರ ಮಾತಿನ ಗೌರವಕ್ಕಾಗಿ ದುರ್ಯೋಧನ ಸಂಜಯನೊಡನೆ ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮರ ಬಳಿಗೆ ಬಂದು ಅವರ ಹಿತವಚನದಂತೆ ವೈಶಂಪಾಯನ ಸರೋವರದಲ್ಲಿ ಆ ಒಂದು ರಾತ್ರಿ ಅಡಗಿ ಕುಳಿತುಕೊಳ್ಳಲು ನಿಶ್ಚಯಿಸುತ್ತಾನೆ. ಅವನು ಸರೋವರದಲ್ಲಿ ಅಡಗಿ ಕುಳಿತುಕೊಳ್ಳಲು ಬರುವಾಗ ವೈಶಂಪಾಯನ ಸರೋವರ ಅವನ ಕಣ್ಣಿಗೆ ಕಂಡ ರೀತಿಯನ್ನು ಪಂಪ ವಿಶಿಷ್ಟ ರೀತಿಯಲ್ಲಿ ವರ್ಣಿಸಿದ್ದಾನೆ.

೧.ಇದು ಪಾತಾಳ ಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆರತಲ್ತಿದುಗ್ರ ಲಯ ಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚ ಮೇಚಕ ಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿರ್ದಿತ್ತು ಸರೋವರ ಬಕ ಬಳಾಕಾನೀಕ ರಾವಾಕುಳಂ||

೨.ಬೆಳಗಿ ಸಮಸ್ತ ಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿಚಳಿತೆಯ್ದಿ ಬಳಲ್ವಪರಾಂಬು ರಾಶಿಯೋಳ್
ಮುಳುಗುವ ತೀವ್ರ ದಿಧಿತಿವೊಲಾ ಕೊಳದೊಳ್ ಫಣಿರಾಜ ಕೇತನಂ
ಮುಳುಗಿದನಾರ್ಗಮೇಂ ಬಿದಿಯ ಕಟ್ಟಿದುದು ಕಳೆಯಲ್ಕೆ ತೀರ್ಗುಮೆ||

ಇದನ್ನು ಕುವೆಂಪು ಅವರು ಹೀಗೆ ಹೇಳುತ್ತಾರೆ: “ಪಂಪನು ಕೊಳವನ್ನು ವರ್ಣಿಸಲು ಉಪಯೋಗಿಸಿರುವ ರೂಪಕಗಳು ದುರ್ಯೋಧನನ ಅಂತಃಸ್ಥಿತಿಗೆ ಕೆತ್ತಿದ ಪ್ರತಿಮೆಯಂತಿದೆ”

ಗದಾಯುದ್ಧದಲ್ಲಿ ವೈಶಂಪಾಯನ ಸರೋವರದ ವರ್ಣನೆ

ಬದಲಾಯಿಸಿ

ದುರ್ಯೋಧನ ವೈಶಂಪಾಯನ ಸರೋವರವನ್ನು ಹಿಂದು ಹಿಂದಾಗಿ ಹೊಕ್ಕನೆಂದು ರನ್ನ ತನ್ನ ಗದಾಯುದ್ಧದಲ್ಲಿ ಹೇಳಿದ್ದಾನೆ. ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳಲು ಬರುವಾಗ ವೈಶಂಪಾಯನ ಸರೋವರ ಅವನ ಕಣ್ಣಿಗೆ ಕಂಡ ರೀತಿಯನ್ನು ರನ್ನ ವರ್ಣಿಸಿರುವ ರೀತಿಯು ವಿಶಿಷ್ಟವಾಗಿದೆ.

ಗಗನಂ ಬಿಳ್ದಿದೊ ಮೇಣ್ ನೆಲಕ್ಕೆ ನೆಲನೇಂ ಪುಟ್ಟಿತ್ತೊ ಮೇಣಿಲ್ಲಿ ಪ
ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಷ್ಟದಿಗ್ಬಾಗ ರಾ
ಜಿಗೆ ಮೆಯ್ಗರ್ಚಿಕೊಳ್ಳಲ್ಕಜಂ ಸಮೆದ ತೋಯೋದ್ದೇಶಮೋ ಸಂದೆಯಂ
ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ||

ಕರ್ಣಾಟ ಭಾರತ ಕಥಾಮಂಜರಿಯಲ್ಲಿ ವೈಶಂಪಾಯನ ಸರೋವರದ ವರ್ಣನೆ

ಬದಲಾಯಿಸಿ

ವೈಶಂಪಾಯನ ಸರೋವರ ವರ್ಣನೆ. ನಾರಣಪ್ಪ ತನ್ನ ದುರ್ಯೋಧನನಿಗೆ ಸರೋವರ ಪ್ರವೇಶಕ್ಕೆ ಮೊದಲು ಭೀಷ್ಮ ಸಂದರ್ಶನ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ರಣರಂಗದಲ್ಲಿ ನಡೆಯುತ್ತಾ ಸಂಜಯನಿಗೆ ತನ್ನ ನಿರ್ಧಾರವನ್ನು ತಿಳಿಸುತ್ತಾನೆ. ಮುಂದೆ ಕವಿ ಕೌರವೇಂದ್ರನು ಸರೋವರದ ಬಳಿಗೆ ಬಂದುದನ್ನು ತಿಳಿಸುತ್ತಾನೆ, ಒಂದು ಪದ್ಯದಲ್ಲಿ: ವರ್ಣಿಸುತ್ತಾನೆ, ಒಂದೇ ಪದ್ಯದಲ್ಲಿ:

ವಿನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ |
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನಱೆದನು ತನ್ನ ಗುಪ್ತಸ್ಥಾನ ಸಂಗತಿಯ ||

ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯಱರ |
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆಱೆದುದಾ ಸರಸಿ ||
(ಗದಾಪರ್ವ ಸಂ. ೩-೩೭, ೩೮)

ಕುಮಾರವ್ಯಾಸನ ಪದರಚನೆ, ಪದಮೈತ್ರಿ, ಶೈಲಿ, ಶಯ್ಯೆ, ಭಾಮಿನಿಯಾದರೂ ಭೀಮಗಮನವಾದ ಷಟ್ಪದಿಗಳ ಛಂದೋವಿನ್ಯಾಸ-ಇವುಗಳ ಫಣಾರತ್ನ ಮೋಹಕ್ಕೆ ಸಿಲುಕಿ ನಾವು ಮರುಳಾಗದಿದ್ದರೆ ಮೇಲೆ ಉದಾಹರಿಸಿರುವ ಎರಡು ಪದ್ಯಗಳ ಸಾಧಾರಣತೆಗೆ ನಮ್ಮ ಪ್ರಜ್ಞೋದಯವಾಗದಿರುವುದಿಲ್ಲ.

ಆಕರ ಕೃತಿಗಳು

ಬದಲಾಯಿಸಿ
  1. ಪಂಪಭಾರತ/ವಿಕ್ರಮಾರ್ಜುನ ವಿಜಯ - ಪಂಪ
  2. ಗದಾಯುದ್ಧ/ಸಾಹಸಭೀಮವಿಜಯ - ರನ್ನ

ಉಲ್ಲೇಖಗಳು

ಬದಲಾಯಿಸಿ


[] [] [] []

ಬಾಹ್ಯಕೊಂಡಿಗಳು

ಬದಲಾಯಿಸಿ
  1. ಅಚ್ಛೋದ ಮತ್ತು ವೈಶಂಪಾಯನ ಸರೋವರದ ವಿಶ್ಲೇಷಣೆ
  2. http://lekhaki.blogspot.in/2013/11/blog-post_23.html
  3. ತಪೋನಂದನ : ಸರೋವರದ ಸಿರಿಗನ್ನಡಿಯಲ್ಲಿ
  4. "ಆರ್ಕೈವ್ ನಕಲು". Archived from the original on 2016-03-06. Retrieved 2015-06-22.