ವೆಂಕಟಕೃಷ್ಣಯ್ಯ
ಎಂ.ವೆಂಕಟಕೃಷ್ಣಯ್ಯನವರು ೧೮೪೪ ಸೆಪ್ಟೆಂಬರ್ ೫ ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸುಬ್ಬಯ್ಯ.ಎಂ.ವೆಂಕಟಕೃಷ್ಣಯ್ಯನವರು ಪತ್ರಿಕಾಪ್ರಪಂಚದ ಭಿಷ್ಮಾಚಾರ್ಯರು. ಮೈಸೂರು ತಾತಯ್ಯ ಎಂದೇ ಇವರು ಪ್ರಸಿದ್ಧರಾಗಿದ್ದರು.
ಪತ್ರಿಕೋದ್ಯಮ
ಬದಲಾಯಿಸಿಸಾಧ್ವಿ , ಸಂಪದಭ್ಯುದಯ, ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಗ್ರಾಮಜೀವನ, ವಿದ್ಯಾದಾಯಿನಿ, ಪೌರ ಸಾಮಾಜಿಕ ಪತ್ರಿಕೆ ಮೊದಲಾದ ಕನ್ನಡ ಪತ್ರಿಕೆಗಳನ್ನಲ್ಲದೆ, ನೇಚರ್ ಕ್ಯೂರ್, ಮೈಸೋರ್ ಪೇಟ್ರಿಯಾಟ್, ವೆಲ್ಥ ಆಫ್ ಮೈಸೋರ್ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಸಹ ಹಲವು ವರ್ಷ ನಡೆಯಿಸುತ್ತಿದ್ದರು.
ಪತ್ರಿಕೋದ್ಯಮವು ವಿಶ್ವವಿದ್ಯಾನಿಲಯದಲ್ಲಿ ಪಠ್ಯವಾಗಲೆಂಬ ಉದ್ದೇಶದಿಂದ, ೨೦೦೦ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿ, ಪತ್ರಿಕೋದ್ಯಮದ ಶ್ರೇಷ್ಠ ವಿದ್ಯಾರ್ಥಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದರು.
ಕೃತಿ
ಬದಲಾಯಿಸಿಕಾದಂಬರಿ
ಬದಲಾಯಿಸಿ- ಚೋರಗ್ರಹಣ ತಂತ್ರ
- ಪರಂತಪ ವಿಜಯ
ವ್ಯಕ್ತಿ ಪರಿಚಯ
ಬದಲಾಯಿಸಿ- ಬೂಕರ್ ಟಿ.ವಾಷಿಂಗ್ಟನ್ ಚರಿತ್ರೆ
ಇತರ
ಬದಲಾಯಿಸಿ- ಆರೋಗ್ಯ ಸಾಧನ ಪ್ರಕಾಶಿಕೆ
- ಹರಿಶ್ಚಂದ್ರ ಚರಿತ್ರೆ
- ಟೆಲಿಮ್ಯಾಕ್ಸನ ಸಾಹಸ ಚರಿತ್ರೆ
- ವಿದ್ಯಾರ್ಥಿ ಕರಭೂಷಣ
- ಧನಾರ್ಜನೆಯ ಕ್ರಮ
ಮೈಸೂರು ರಾಜ್ಯದಲ್ಲಿ ವೃತ್ತಪತ್ರಿಕೆಯ ಆದಿಋಷಿ ಎಂದು ಗುರುತಿಸಲ್ಪಟ್ಟವರು ತಾತಯ್ಯ ಎಂದೇ ಹೆಸರಾದ ವೆಂಕಟಕೃಷ್ಣಯ್ಯನವರು. ಮೈಸೂರು ರಾಜ್ಯದ ರಾಜಕೀಯವನ್ನು ಪತ್ರಿಕೆಗಳ ಮೂಲಕ ನಿರ್ಧರಿಸಬಹುದೆಂದು ಅವರು ಬಲವಾಗಿ ನಂಬಿದ್ದರು. ಅದೇ ಕಾರಣದಿಂದ ರಾಜಕೀಯ ಹಾಗೂ ಪತ್ರಿಕೋದ್ಯಮಗಳೆರಡನ್ನೂ ಏಕಕಾಲಕ್ಕೆ ನಿಭಾಯಿಸಿದರು. ಇಂಗ್ಲಿಷಿನವರು ಮೈಸೂರು ಆಡಳಿತವನ್ನು ವಹಿಸಿಕೊಂಡು ಕಮೀಷನರ್ ಮೂಲಕ ದರ್ಬಾರು ನಡೆಸುತ್ತಿದ್ದ ಕಾಲವದು. ಮಹಾರಾಜರಿಗೆ ರಾಜ್ಯಾಧಿಕಾರವನ್ನು ಹಿಂದಕ್ಕೆ ಕೊಡಬೇಕು ಎಂಬ ಆಂದೋಲನ ಮೈಸೂರಿನಲ್ಲಿ ಆರಂಭವಾಗಿತ್ತು. ಇದರ ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಚಾಮರಾಜ ಒಡೆಯರ್ ಅವರಿಗೆ ರಾಜ್ಯಾಡಳಿತವನ್ನು ಒಪ್ಪಿಸಿತು. ಆಗ ಮೊದಲ ದಿವಾನರಾಗಿ ನಿಯುಕ್ತಿಗೊಂಡವರು ಸಿ.ರಂಗಾಚಾರ್ಲು. ಇಂಗ್ಲೆಂಡ್ನಲ್ಲಿರುವಂಥ ಪ್ರಜಾಪ್ರಭುತ್ವವನ್ನು ಮೈಸೂರು ರಾಜ್ಯಕ್ಕೆ ತರಬೇಕೆನ್ನುವ ಸದುದ್ದೇಶದಿಂದ ರಂಗಾಚಾರ್ಲು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದರು.
ರಾಜ್ಯದಲ್ಲಿ ಕೇವಲ ಪಾದ್ರಿಗಳು ಮಾತ್ರ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದರು. ಆ ಸಮಯದಲ್ಲಿ ದಿವಾನರ ಬೆಂಬಲದಿಂದ ವೆಂಕಟಕೃಷ್ಣಯ್ಯನವರು ಮರಿಮಲ್ಲಪ್ಪ ಶಾಲೆಯನ್ನು ಸ್ಥಾಪಿಸಿ ಇಂಗ್ಲಿಷ್ ಶಿಕ್ಷಣವನ್ನು ಆರಂಭಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಯ ಜವಾಬ್ದಾರಿಯ ಜತೆಗೆ ವೃತ್ತಾಂತ ಚಿಂತಾಮಣಿ ಎಂಬ ಕನ್ನಡ ವಾರಪತ್ರಿಕೆಯ ಹೊಣೆಗಾರಿಕೆಯೂ ವೆಂಕಟಕೃಷ್ಣಯ್ಯನವರದಾಯಿತು. ಜನಾಭಿಪ್ರಾಯವನ್ನು ನಿರ್ಭಯವಾಗಿ ಪ್ರಕಟಿಸುವ ರಾಜಕೀಯ ವೃತ್ತಾಂತ ಪತ್ರಿಕೆ ಎಂಬ ಹೆಸರು ಆ ಪತ್ರಿಕೆಯದಾಯಿತು. ರಂಗಾಚಾರ್ಲು ಅಧಿಕಾರ ವಹಿಸಿಕೊಂಡ ಎರಡು ವರ್ಷಗಳಲ್ಲೇ ದೈವಾಧೀನರಾದರು.
ಈ ಸಮಯದಲ್ಲಿ ಮಹಾರಾಜರು ಮದ್ರಾಸ್ನಿಂದ ಸರ್.ಕೆ.ಶೇಷಾದ್ರಿ ಅಯ್ಯರ್ ಅವರನ್ನು ದಿವಾನ ಹುದ್ದೆಗೆ ಕರೆತಂದರು. ಪ್ರಜಾಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ದೊಡ್ಡ ಕೋಲಾಹಲವೆದ್ದಿತು. ಮೈಸೂರು ರಾಜ್ಯದ ಆಡಳಿತ ಮೈಸೂರಿನವರಿಗೆ ಎಂಬ ಹೋರಾಟ ಆರಂಭವಾಯಿತು. ಅದರ ನೇತೃತ್ವ ವೆಂಕಟಕೃಷ್ಣಯ್ಯನವರದಾಗಿತ್ತು. ಸಮರ್ಥ ಆಡಳಿತಗಾರರಾಗಿದ್ದ ಶೇಷಾದ್ರಿ ಅಯ್ಯರ್ ಮಹಾರಾಜರಿಗೆ ಆಪ್ತರಾಗಿ, ಹದಿನೆಂಟು ವರ್ಷಗಳ ಕಾಲ ದಿವಾನರ ಹುದ್ದೆಯಲ್ಲಿದ್ದರು. ಆ ಸುದೀರ್ಘ ಅವಧಿಯಲ್ಲಿ ವೆಂಕಟಕೃಷ್ಣಯ್ಯನವರು ಪತ್ರಿಕೆ ಹಾಗೂ ಪ್ರಜಾಪ್ರತಿನಿಧಿ ಸಭೆಯ ಮೂಲಕ ಶೇಷಾದ್ರಿ ಅಯ್ಯರ್ ಅವರನ್ನು ಎದುರಿಸಿ ನಿಂತರು. ನಂತರ ಅಧಿಕಾರ ವಹಿಸಿಕೊಂಡ ಸರ್.ಪಿ.ಎನ್.ಕೃಷ್ಣಮೂರ್ತಿ ಕನ್ನಡಿಗರು. ಹಾಗಿದ್ದ ಮಾತ್ರಕ್ಕೆ ವೆಂಕಟಕೃಷ್ಣಯ್ಯನವರ ಪತ್ರಿಕೆ ಅವರ ಬಗ್ಗೆ ಮೃದು ಧೋರಣೆಯನ್ನೇನೂ ತೋರಲಿಲ್ಲ. ಅವರ ನಂತರ ವಿ.ಪಿ.ಮಾಧವರಾಯರು ದಿವಾನರಾಗಿ ನೇಮಕಗೊಂಡರು. ಅವರ ಅಧಿಕಾರಾವಧಿಯಲ್ಲಿ ಹಲವಾರು ಪತ್ರಿಕೆಗಳು ಆರಂಭವಾದವು. ಅವುಗಳ್ಯಾವೂ ವೃತ್ತಾಂತ ಚಿಂತಾಮಣಿಯಷ್ಟು ಪ್ರಭಾವಶಾಲಿಯಾಗಲಿಲ್ಲ.
ಪತ್ರಿಕೆಗಳ ಟೀಕಾಪ್ರಹಾರದಿಂದ ವಿಚಲಿತರಾದ ಮಾಧವರಾಯರು ಪ್ರೆಸ್ ಕಾನೂನು ಒಂದನ್ನು ಜಾರಿಗೆ ತಂದರು. ಪತ್ರಿಕೆಗಳ ಹುಟ್ಟಡಗಿಸುವ ಅವರ ನಿರ್ಧಾರದಿಂದ ಅನೇಕ ಪತ್ರಿಕೆಗಳು ಮುಚ್ಚಿಹೋದವು. ಆದರೆ ವೆಂಕಟಕೃಷ್ಣಯ್ಯನವರ ಪತ್ರಿಕೆ ಅಬಾಧಿತವಾಗಿ ಮುಂದುವರಿಯಿತು. ನಂತರ ಅಧಿಕಾರಕ್ಕೆ ಬಂದ ಆನಂದರಾವ್ ಅವರ ಆಡಳಿತಾವಧಿಯಲ್ಲಿ ಪ್ರಜಾಪ್ರತಿನಿಧಿಗಳೊಂದಿಗೆ ಘರ್ಷಣೆಗಳಾಗಲಿಲ್ಲ. ಹೀಗಾಗಿ ಆಂದೋಲನಗಳು ಹೆಚ್ಚು ನಡೆಯಲಿಲ್ಲ.
ಮುಂದಿನ ದಿವಾನರಾಗಿ ಸರ್.ಎಂ.ವಿಶ್ವೇಶ್ವರಯ್ಯ ನೇಮಕಗೊಂಡ ನಂತರ ಪ್ರಜಾಪ್ರತಿನಿಧಿಗಳು ಮತ್ತು ದಿವಾನರ ನಡುವೆ ಅತ್ಯಂತ ಸೌಹಾರ್ದಯುತ ಸಂಬಂಧ ಏರ್ಪಟ್ಟಿತು. ವೆಂಕಟಕೃಷ್ಣಯ್ಯ ಹಾಗೂ ವಿಶ್ವೇಶ್ವರಯ್ಯನವರ ಪರಸ್ಪರ ಗೌರವ ನಡವಳಿಕೆ ಬೆರಗು ಹುಟ್ಟಿಸುವಂಥದಾಗಿತ್ತು. ಹಾಗೆಂದ ಮಾತ್ರಕ್ಕೆ ವಿಶ್ವೇಶ್ವರಯ್ಯನವರ ಆಡಳಿತದ ವಿರುದ್ಧ ವೆಂಕಟಕೃಷ್ಣಯ್ಯನವರ ಟೀಕೆಗಳಿರಲಿಲ್ಲವೆಂದಲ್ಲ. ತಮ್ಮ ಸಾಧ್ವಿ ಹಾಗೂ ಸಂಪದಭ್ಯುದಯ ಪತ್ರಿಕೆಗಳಲ್ಲಿ ಸರ್ಕಾರದ ಲೋಪದೋಷಗಳ ಬಗ್ಗೆ ಚರ್ಚಿಸುತ್ತಿದ್ದರು. ವಿಶ್ವೇಶ್ವರಯ್ಯನವರೂ ವಿಶಾಲ ಹೃದಯದಿಂದ ಆ ಟೀಕೆಗಳನ್ನು ಸ್ವಾಗತಿಸಿ, ಆಡಳಿತವನ್ನು ಚುರುಕುಗೊಳಿಸುತ್ತಿದ್ದರು.
ವಿಶ್ವೇಶ್ವರಯ್ಯನವರ ನಂತರ ಅಧಿಕಾರಕ್ಕೆ ಬಂದ ಸರ್.ಕಾಂತರಾಜೇ ಅರಸ್ರವರು ನಿರಂಕುಶ ಪ್ರವೃತ್ತಿಯವರು. ದಿವಾನರ ಹಾಗೂ ವೆಂಕಟಕೃಷ್ಣಯ್ಯನವರ ನಡುವೆ ಕಂದಕವೇರ್ಪಟ್ಟಿತು. ಕಟುವಾಗಿ ಖಂಡನೆ ಮಾಡುತ್ತಿದ್ದ ವೆಂಕಟಕೃಷ್ಣಯ್ಯನವರ ಧೈರ್ಯವನ್ನು ಜನ ಮೆಚ್ಚಲಾರಂಭಿಸಿದರು. ಮುಂದೆ ಸರ್.ಬ್ಯಾನರ್ಜಿಯವರ ಕಾನೂನುಬದ್ಧ ಆಡಳಿತದಲ್ಲಿ ಘರ್ಷಣೆಗಳಿಗೆ ಅವಕಾಶವಿರಲಿಲ್ಲ. ವೆಂಕಟಕೃಷ್ಣಯ್ಯನವರ ಪ್ರಹಾರಕ್ಕೆ ಬ್ಯಾನರ್ಜಿಯವರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡುತ್ತಿರಲಿಲ್ಲ.
ಆನಂತರ ಸರ್.ಮಿರ್ಜಾ ಇಸ್ಮಾಯಿಲ್ ಅವರ ಅಧಿಕಾರ ಬಂತು. ವೆಂಕಟಕೃಷ್ಣಯ್ಯನವರ ಪ್ರತಿಭೆಯನ್ನು ಮನಗಂಡಿದ್ದ ಮಿರ್ಜಾ, ಅವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡರು. `ಸಾಧ್ವಿ', `ಸಂಪದಭ್ಯುದಯ' ಪತ್ರಿಕಾ ಕಚೇರಿಗಳನ್ನೇ ತಮ್ಮ ನಿವಾಸ ಮಾಡಿಕೊಂಡಿದ್ದ ವೆಂಕಟಕೃಷ್ಣಯ್ಯನವರನ್ನು ಭೇಟಿ ಮಾಡಲು ಮಿರ್ಜಾ ಅಲ್ಲಿಗೇ ಹೋಗುತ್ತಿದ್ದರು. ಇಂದಿಗೂ ಮೈಸೂರಿನಲ್ಲಿ ನಡೆಯುತ್ತಿರುವ ಅನಾಥಾಲಯವನ್ನು ವೆಂಕಟಕೃಷ್ಣಯ್ಯನವರು ಸ್ಥಾಪಿಸಲು ಮಿರ್ಜಾ ಸರ್ಕಾರದಿಂದ ನೆರವು ನೀಡಿದ್ದರು.
ಚಕ್ರವರ್ತಿಗಳು, ವೈಸ್‌ರಾಯ್‌ಗಳು, ಮಹಾರಾಜರುಗಳಿಗಿಂತಲೂ ರಾಷ್ಟ್ರ ಮುಖಂಡರೇ ಶ್ರೇಷ್ಟರು ಎಂಬ ಭಾವನೆ ವೆಂಕಟಕೃಷ್ಣಯ್ಯನವರದು. ಹೀಗಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ಮುಂತಾದವರ ಬಗ್ಗೆ ಅವರಲ್ಲಿ ಅಪಾರ ಗೌರವ. ಗೋಖಲೆಯವರ ಪರಂಪರೆಗೆ ಸೇರಿದ ರಾಜಕೀಯ ಹಾಗೂ ಪತ್ರಿಕಾ ಧ್ಯೇಯ ಡಿ.ವಿ.ಗುಂಡಪ್ಪನವರನ್ನು ಆಕರ್ಷಿಸಿತ್ತು. ಆಗ ಗುಂಡಪ್ಪನವರು ಕರ್ನಾಟಕ ಎಂಬ ಇಂಗ್ಲಿಷ್ ವಾರಪತ್ರಿಕೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರು. ತಮ್ಮ ಪತ್ರಿಕಾ ಕಚೇರಿಯಲ್ಲಿ ಗೋಖಲೆಯವರ ಭಾವಚಿತ್ರವನ್ನು ಅನಾವರಣ ಮಾಡಿಸಲು ಗುಂಡಪ್ಪನವರು ೧೯೧೫ ರಲ್ಲಿ ಗಾಂಧೀಜಿಯವರನ್ನು ಕರೆಸಿದ್ದರು. ಈ ಸಮಾರಂಭಕ್ಕೆ ಮೈಸೂರಿನಿಂದ ವೆಂಕಟಕೃಷ್ಣಯ್ಯನವರು ಬಂದಿದ್ದರು. ಆ ಸಂದರ್ಭದಲ್ಲಿ ಗಾಂಧೀಜಿಯವರೊಡನೆ ಮುಖತಃ ಚರ್ಚೆ ನಡೆಸಿದ ಸಂತೃಪ್ತಿ ವೆಂಕಟಕೃಷ್ಣಯ್ಯನವರದಾಗಿತ್ತು. ಮುಂದೆ ೧೯೨೭ ರಲ್ಲಿ ಗಾಂಧೀಜಿಯವರು ಮೈಸೂರಿಗೇ ಬಂದಿದ್ದರು. ಆಗ ವೆಂಕಟಕೃಷ್ಣಯ್ಯನವರು ಗಾಂಧೀಜಿಯವರನ್ನು ಪತ್ರಿಕೆಗಾಗಿ ಸಂದರ್ಶಿಸಿದ್ದರು. "ನೀವು ನನ್ನನ್ನು ಬಂದು ನೋಡುವುದಕ್ಕಿಂತ ಮೊದಲೇ ನಿಮ್ಮ ಕೀರ್ತಿ ನನ್ನ ಬಳಿಗೆ ಬಂದು ಬಿಟ್ಟಿದೆ. ನಿಮ್ಮ ಪತ್ರಿಕೆಗಳ ಮಹತ್ವವನ್ನು ನಾನು ಅರಿತಿದ್ದೇನೆ" ಎಂದುದ್ಗರಿಸಿ ಗಾಂಧೀಜಿ ಅಚ್ಚರಿ ಮೂಡಿಸಿದ್ದರು. ಇನ್ನೂ ಒಂದು ಉಲ್ಲೇಖಾರ್ಹ ಸಂಗತಿಯೆಂದರೆ ಜವಾಹರಲಾಲ್ ನೆಹರೂ ಅವರ ಭೇಟಿ. ೧೯೨೬ ರಲ್ಲಿ ಮೈಸೂರಿಗೆ ಭೇಟಿ ಕೊಟ್ಟಿದ್ದ ನೆಹರೂ, ವೆಂಕಟಕೃಷ್ಣಯ್ಯನವರನ್ನು ನೋಡಲು ಇಷ್ಟ ಪಟ್ಟಿದ್ದರು. ಆರೋಗ್ಯ ಸರಿಯಿರದ ವೆಂಕಟಕೃಷ್ಣಯ್ಯನವರು ಆಸ್ಪತ್ರೆಯಲ್ಲಿ ಮಲಗಿದ್ದರು. ನೆಹರೂ ಅಲ್ಲಿಗೇ ತೆರೆಳಿ ಆರೋಗ್ಯ ವಿಚಾರಿಸಿದ್ದರು.
ವೆಂಕಟಕೃಷ್ಣಯ್ಯನವರ ಶಿಷ್ಯಂದಿರಲ್ಲಿ ಮುಖ್ಯವಾದವರೆಂದರೆ ಪಿ.ಆರ್.ರಾಮಯ್ಯ, ಅಗರಂ ರಂಗಯ್ಯ ಹಾಗೂ ವೀರಕೇಸರಿ ಸೀತಾರಾಮಶಾಸ್ತ್ರಿ. ರಾಮಯ್ಯನವರು ತಾಯಿನಾಡು ಪತ್ರಿಕೆ ಪ್ರಾರಂಭಿಸಿದರೆ, ರಂಗಯ್ಯನವರು ವೆಂಕಟಕೃಷ್ಣಯ್ಯನವರ ಸಾಧ್ವಿಯ ಸಾರಥ್ಯವಹಿಸಿಕೊಂಡರು. ಶಾಸ್ತ್ರಿಯವರು ಬೆಂಗಳೂರಿನಲ್ಲಿ ವೀರಕೇಸರಿ ಪತ್ರಿಕೆ ಪ್ರಾರಂಭಿಸಿದರು.
ಪಿ.ಆರ್.ರಾಮಯ್ಯ ತಮ್ಮ ಗುರುಗಳ ಕಾಲಾನಂತರ `ವೆಂಕಟಕೃಷ್ಣಯ್ಯ ಮೆಮೋರಿಯಲ್ ಉಪನ್ಯಾಸ'ಗಳನ್ನು ಆರಂಭಿಸಿದರು. ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಯುವರೊಮ್ಮೆ ಈ ಸರಣಿಯಲ್ಲಿ ಭಾಷಣ ಮಾಡಿದ್ದರು. ಸ್ಮರಣ ಸಮಿತಿಯವರು ವೆಂಕಟಕೃಷ್ಣಯ್ಯನವರ ಭಾವಚಿತ್ರ ಅನಾವರಣಕ್ಕೆ ಮಾಜಿ ದಿವಾನ ವಿ.ಪಿ.ಮಾಧವರಾಯರನ್ನು ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡಿದ್ದರು. ದಿವಾನಗಿರಿಯ ಮೂರು ವರ್ಷ ತಮ್ಮನ್ನು ಕಾಡಿದ್ದ ವೆಂಕಟಕೃಷ್ಣಯ್ಯನವರ ಬಗ್ಗೆ ಮಾಧವರಾಯರಿಗೆ ಯಾವುದೇ ದ್ವೇಷವಿರಲಿಲ್ಲ. ಇದು ವೆಂಕಟಕೃಷ್ಣಯ್ಯನವರ ಸ್ಥಾರ್ಥರಹಿತ ಹೋರಾಟಕ್ಕೆ ಸಂದ ಗೌರವವೆನ್ನಬಹುದು.