ವೀಣಾ ವೆಂಕಟಗಿರಿಯಪ್ಪ
ವೀಣಾ ವೆಂಕಟಗಿರಿಯಪ್ಪ(ಏಪ್ರಿಲ್ ೨೬, ೧೮೮೭ - ಜನವರಿ ೩೦, ೧೯೫೨) ಕರ್ನಾಟಕ ಸಂಗೀತ ಪರಮಪರೆಯಲ್ಲಿ ಮಹತ್ವಪೂರ್ಣ ಹೆಸರು. ವೀಣಾ ವೆಂಕಟಗಿರಿಯಪ್ಪ ಎಂದರೆ ವೀಣಾಗಾನ ಲೋಕವೆಂಬ ಗಗನದಲ್ಲಿ ಧ್ರುವ ನಕ್ಷತ್ರದಂತೆ. ಅವರ ವೀಣಾಗಾನವನ್ನು ಆಲಿಸಿದ ವಿ.ಸೀತಾರಾಮಯ್ಯನವರು ‘ವೀಣಾಗಾನ’ ಎಂಬ ದಿವ್ಯಕವನವನ್ನು ರಚಿಸಿದ್ದರು.
ವೀಣಾ ವೆಂಕಟಗಿರಿಯಪ್ಪ | |
---|---|
Born | ಏಪ್ರಿಲ್ ೨೬, ೧೮೮೭ ಹೆಗ್ಗಡದೇವನ ಕೋಟೆ |
Died | ಜನವರಿ ೩೦, ೧೯೫೨ |
Occupation(s) | ವೀಣಾ ವಾದಕರು, ವಾಗ್ಗೇಯಕಾರರು |
ಜೀವನ
ಬದಲಾಯಿಸಿವೀಣೆ ವೆಂಕಟಗಿರಿಯಪ್ಪನವರು ದಿನಾಂಕ ಏಪ್ರಿಲ್ ೨೬, ೧೮೮೭ರಂದು ಹೆಗ್ಗಡದೇವನ ಕೋಟೆಯಲ್ಲಿ ವೈದಿಕ ಮನೆತನದಲ್ಲಿ ಜನ್ಮ ತಾಳಿದರು. ತಂದೆ ವೆಂಕಟರಾಮಯ್ಯ, ತಾಯಿ ನರಸಮ್ಮನವರು. ಕೇವಲ ಹನ್ನೊಂದು ತಿಂಗಳ ಹಸುಗೂಸಾಗಿದ್ದಾಗಲೇ ವೆಂಕಟಗಿರಿಯಪ್ಪನವರಿಗೆ ಪಿತೃವಿಯೋಗವಾಯಿತು. ತಾಯಿ ನರಸಮ್ಮ ಮಗುವಿನೊಂದಿಗೆ ಮೈಸೂರಿಗೆ ಬಂದು ತಂದೆ ದೊಡ್ಡ ಸುಬ್ಬರಾಯರಲ್ಲಿ ಆಶ್ರಯ ಪಡೆದರು. ದೊಡ್ಡ ಸುಬ್ಬರಾಯರಿಗೆ ಐದು ಜನ ಹೆಣ್ಣುಮಕ್ಕಳು, ಏಕೈಕ ಪುತ್ರ ಚಿಕ್ಕ ಸುಬ್ಬರಾಯರು. ಇವರ ನಾಮಕರಣದ ದಿನ ದೊಡ್ಡ ನಾಗರ ಹಾವೊಂದು ಮನೆಯ ಹೊಸ್ತಿಲಲ್ಲೇ ಕುಳಿತಿದ್ದನ್ನು ಕಂಡ ದೊಡ್ಡ ಸುಬ್ಬರಾಯರು ಮಗನನ್ನು ಸುಬ್ಬರಾಯನೆಂದೇ ಕರೆದರು. ದಿನ ಕಳೆದಂತೆ ಅವರನ್ನು ಚಿಕ್ಕ ಸುಬ್ಬರಾಯರೆಂದು ಕರೆಯುವ ರೂಢಿಯಾಯಿತು. ಚಿಕ್ಕ ಸುಬ್ಬರಾಯರಿಗೆ ಮಕ್ಕಳನ್ನು ಸಾಕುವ ಅದೃಷ್ಟವಿಲ್ಲವಾಗಿ ತಂಗಿಯ ಮಗ, ವೆಂಕಟಗಿರಿಯಪ್ಪನವರನ್ನೇ ಮಗನಂತೆ ಸಾಕಿ ವಿದ್ಯಾಭ್ಯಾಸ ಮಾಡಿಸಿದರು.
ವೀಣಾ ವಾದನದ ಕಲಿಕೆ
ಬದಲಾಯಿಸಿವೆಂಕಟಗಿರಿಯಪ್ಪನವರಿಗೆ ಐದನೆಯ ವರ್ಷದಿಂದ ವೀಣೆ ಪಾಠ ಸ್ವತಃ ದೊಡ್ಡ ಸುಬ್ಬರಾಯರಿಂದಲೇ, ದೊಡ್ಡ ಸುಬ್ಬರಾಯರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಪ್ರಮುಖ ವಿದ್ವಾಂಸರಾಗಿದ್ದರು. ಇದರಿಂದ ಇವರದು ವೀಣಾ ಮನೆತನ ಎಂಬುದು ವಿದಿತವಾಗುತ್ತದೆ. ವಿಜಯದಶಮಿ ದಿನ ದೇವರಿಗೂ ವೀಣೆಗೂ ಮೊಮಮ್ಮಗನಿಂದ ಪೂಜೆ ಮಾಡಿಸಿ ವೀಣೆ ಪಾಠ ಪ್ರಾರಂಭಿಸಿದ ದೊಡ್ಡ ಸುಬ್ಬರಾಯರು ತಮ್ಮ ಅಂತ್ಯ ಕಾಲವನ್ನರಿತು ಮುಂದಿನ ಜವಾಬ್ದಾರಿಯನ್ನು ಪುತ್ರ ಚಿಕ್ಕಸುಬ್ಬರಾಯರಿಗೆ ಒಪ್ಪಿಸಿದರು. ಚಿಕ್ಕ ಸುಬ್ಬರಾಯರು ತಮಗೆ ವೀಣೆಯಲ್ಲಿದ್ದ ಘನ ಪಾಂಡಿತ್ಯವನ್ನು ಹೊರಗೆ ತೋರಗೊಡದೆ ಎಲೆ ಮರೆ ಕಾಯಿಯಂತೆ ಶಿಷ್ಯರಿಗೆ ಪಾಠ ಹೇಳುವುದರ ಮೂಲಕ ವಿನಿಯೋಗಿಸುತ್ತಿದ್ದರು. ಮಗನಂತೆಯೇ ಬೆಳೆದ ಸೂಕ್ಷ್ಮಮತಿಯಾದ ವೆಂಕಟಗಿರಿಯಪ್ಪನವರಿಗೆ ಮೀಟಿನ ಸೂಕ್ಷ್ಮ, ಎಡಗೈ ಬೆರಳುಗಳ ಕೌಶಲ್ಯ ಎಲ್ಲವನ್ನೂ ಶಿಸ್ತಿನಿಂದ ಸಂಪ್ರದಾಯಕ್ಕೆ ತಕ್ಕಂತೆ ಶ್ರದ್ಧೆಯಿಂದ ಸುಮಾರು ಒಂದು ಸಾವಿರ ಕೀರ್ತನೆಗಳನ್ನು ಪಾಠ ಮಾಡಿಸಿ ಘನ ವಿದ್ವಾಂಸರನ್ನಾಗಿ ಮಾಡಿದರು.
ರಾಜಾಸ್ಥಾನದಲ್ಲಿ
ಬದಲಾಯಿಸಿಆಳುವ ಮಹಾಪ್ರಭುಗಳು ಸ್ವತಃ ಕಲಾವಿದರೂ ಮಹಾರಸಿಕರೂ ಆಗಿದ್ದರು. ಅವರಿಂದ ಮೆಚ್ಚುಗೆ ಪಡೆಯುವುದೆಂದರೆ ಅದು ಸುಲಭ ಸಾಧ್ಯವಾಗದು. ಆದರೆ ವಿದ್ವನ್ಮಣಿಗಳಾದ ವೆಂಕಟಗಿರಿಯಪ್ಪನವರು ಮಹಾರಾಜರ ಶಿಸ್ತಿನ ಪರೀಕ್ಷೆಯಲ್ಲಿ ಶ್ರದ್ಧೆಯಿಂದ ವೀಣೆ ನುಡಿಸುವುದರ ಮೂಲಕ ಶ್ಲಾಘ್ಯತೆ ಪಡೆದು ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಮಹಾಪ್ರಭುಗಳು ಇವರ ಪಾಲಿಗೆ ಕಲ್ಪವೃಕ್ಷ ಕಾಮಧೇನುವೆ ಆದರು. ಇನ್ನೂ ಹೆಚ್ಚಾಗಿ ಹೇಳಬಹುದಾದರೆ ನಿಜಕ್ಕೂ ಇವರಲ್ಲಿ ಪರಸ್ಪರ Friend, Philosopher, Guide ಎನ್ನುವಂತಹ ಆತ್ಮೀಯತೆ ಬೆಳೆದಿತ್ತು.
ವೀಣೆ ಶೇಷಣ್ಣನವರ ಸಾನ್ನಿಧ್ಯದಲ್ಲಿ
ಬದಲಾಯಿಸಿಆ ಸಮಯದಲ್ಲಿ ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರ ಸಾನ್ನಿಧ್ಯವೂ, ಅವರ ವೀಣಾ ನಿನಾದವನ್ನು ಆಲಿಸುವ ಅವಕಾಶವೂ ಒದಗಿ ಬರುತ್ತಿತ್ತು. ವೀಣೇ ಶೇಷಣ್ಣನವರ ಶೈಲಿ, ರಾಗಾಲಾಪನೆ, ಮನೋಧರ್ಮ, ತಾನದ ವೈಖರಿ, ಸ್ವರ ಪ್ರಸ್ತಾರ, ಎಲ್ಲವನ್ನೂ ಅವರ ಆತ್ಮೀಯ ಶಿಷ್ಯರಾಗಿ, ಗುರುವಿನ ಪ್ರಾಮಾಣಿಕ ವಿದ್ಯಾರ್ಥಿಯಾಗಿ ಅಭ್ಯಸಿಸಿ ಅವರ ಮೆಚ್ಚುಗೆಯನ್ನು ಗಳಿಸಿ ಗುರುಸೇವೆ ಮಾಡಿದರು. ಗುರುವಿನ ಪೂರ್ಣಾನುಗ್ರಹ ಪಡೆದರು. ಗುರುವಿನ ಪ್ರಶಂಸೆಗೆ ಪಾತ್ರರಾದರು. ಇವರ ಕಚೇರಿಯನ್ನು ಕೇಳಿದ ರಸಿಕರು, ವೀಣೆ ಶೇಷಣ್ಣನವರ ಕಚೇರಿಯನ್ನೇ ಕೇಳಿದಷ್ಟು ತೃಪ್ತಿ ಸಂತೋಷಗೊಂದು ಪ್ರಶಂಸಿಸುತ್ತಿದ್ದರು.
ಉತ್ತರಾದಿ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ
ಬದಲಾಯಿಸಿರಾಜಸ್ಥಾನದಲ್ಲಿ ವೆಂಕಟಗಿರಿಯಪ್ಪನವರು ಅತ್ಯುತ್ತಮವಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಸಂಗೀತ ವಿದ್ವಾಂಸರ ಸ್ಥಾನವನ್ನೇ ಮಹತ್ವ ಉಳ್ಳದ್ದಾಗಿ ಮಾಡಿದ ಪ್ರಮುಖರಾಗಿದ್ದರು. ಮಹಾರಾಜರಿಗೆ ದಕ್ಷಿಣಾದಿ ಸಂಗೀತದಷ್ಟೇ ಅಭಿರುಚಿ ಉತ್ತರಾದಿ ಮತ್ತು ಪಾಶ್ಚಾತ್ಯ ಸಂಗೀತದಲ್ಲಿಯೂ ಇದ್ದುದರಿಂದ ವೆಂಕಟಗಿರಿಯಪ್ಪನವರನ್ನು ಉತ್ತೇಜಿಸಿ ಪಿಯಾನೊ, ಕೆರಮಿಮ್ ಮುಂತಾದ ವಾದ್ಯಗಳನ್ನು ಕಲಿಯುವ ಆಸಕ್ತಿ ಬೆಳೆಸಿದರು. ಪಾಶ್ಚಿಮಾತ್ಯ ಸಂಗೀತವನ್ನೂ ಅಭ್ಯಸಿಸಿದ ನಂತರ ವೆಂಕಟಗಿರಿಯಪ್ಪನವರು ವಾದ್ಯಗೋಷ್ಠಿ ಮತ್ತು ಅರಮನೆ ಕರ್ನಾಟಕ ಬ್ಯಾಂಡಿನ ಮೇಲ್ವಿಚಾರಕರಾಗಿ ಜವಾಬ್ದಾರಿ ಹೊತ್ತರು. ಮಹಾರಾಜರಿಗೆ ಪ್ರಿಯವಾದ ಕೃತಿಗಳನ್ನೆಲ್ಲಾ, ಶ್ರಮವನ್ನ ಲೆಕ್ಕಿಸದೆ ಶ್ರದ್ಧೆಯಿಂದ ಬರೆದಿಡುತ್ತಿದ್ದರು. ಕರ್ನಾಟಕ ಸಂಗೀತದ ಕೃತಿಗಳನ್ನು ಪಾಶ್ಚಿಮಾತ್ಯ ನೊಟೇಶನ್ ಪ್ರಕಾರ ಬರೆಯುವ ಜವಾಬ್ದಾರಿ ಇವರ ಪಾಲಿಗೆ ಬಂದಿದ್ದರಿಂದ ಅದಕ್ಕಾಗಿ ಬಹಳ ಶ್ರಮಿಸಿದ್ದಾರೆ. ಇಂಗ್ಲಿಷ್ ಬ್ಯಾಂಡ್‌ನ ಶಕರಾಗಿದ್ದ ಸ್ಮಿತ್ ಅವರು, ವೆಂಕಟಗಿರಿಯಪ್ಪನವರು ಮಹಾರಾಜರಿಗೆ ಬರೆದು ಕೊಟ್ಟಿದ್ದ ಪಾಶ್ಚಿಮಾತ್ಯ ನೊಟೇಷನ್ ನೋಡಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು. ಇದರಿಂದ ಹರ್ಷಗೊಂಡ ಮಹಾರಾಜರು ಇಂಥಾ ವಿದ್ವಾಂಸರು ತಮ್ಮ ಆಸ್ಥಾನದಲ್ಲಿರುವುದರ ಬಗ್ಗೆ ಹೆಮ್ಮೆಗೊಂಡು ಇವರನ್ನು ಕರ್ನಾಟಕ ಬ್ಯಾಂಡ್‌ಗೆ ನಿರ್ದೇಶಕರಾಗಿ ನೇಮಿಸಿದರು. ಇದಕ್ಕಾಗಿ ಹೆಚ್ಚುವರಿ ಭತ್ಯದ ಅಪ್ಪಣೆಯೂ ಆಯಿತು. ಕ್ರಮೇಣ ಇವರು ಅರಮನೆ ವಾದ್ಯಗೋಷ್ಠಿಯ ಮುಖ್ಯ ನಿರ್ದೇಶಕರಾದರು. ಹಿಂದೂಸ್ತಾನಿ, ಕರ್ನಾಟಕ ಸಂಗೀತದ ಅತ್ಯುತ್ತಮ ಗಾಯಕರು, ವಾದಕರು ನುಡಿಸಿ ಹಾಡಿರುವ ಕೃತಿಗಳ ಗ್ರಾಮಫೋನ್ ರೆಕಾರ್ಡನ್ನು ಕೇಳಿ ಅದನ್ನೂ ಸ್ವರ ಪಡಿಸಿ ಬರೆದು ಆ ಕೃತಿಗಳನ್ನು ವಾದ್ಯಗೋಷ್ಠಿಯಲ್ಲಿ ತಯಾರು ಮಾಡಿ ಮಹಾರಾಜರ ಸಮ್ಮಖದಲ್ಲಿ ಪ್ರದರ್ಶಿಸಿ ಅವರ ಮೆಚ್ಚುಗೆ, ಪ್ರಶಂಸೆ, ಬಹುಮಾನಗಳಿಗೆ ಪಾತ್ರರಾದರು.
ಗುರುವರ್ಯರಾಗಿ
ಬದಲಾಯಿಸಿಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಪುತ್ರಿಯರಾದ ರಾಜಕುಮಾರಿ ವಿಜಯ, ರಾಜಕುಮಾರಿ ಸುಜಯ ಮತ್ತು ರಾಜಕುಮಾರಿ ಚಾಮುಂಡಮ್ಮಣ್ಣಿಯವರಿಗೂ ವೀಣಾ ಶಿಕ್ಷಣದ ಏರ್ಪಾಡಾಯಿತು. ಮಹಾರಾಜರು ಕಲಾವಿದರ ಏಳಿಗೆಯ ಬಗ್ಗೆ ಆಸಕ್ತಿ, ಅಭಿಮಾನವನ್ನು ತಳೆದದ್ದರಿಂದ ಕಲಾಭ್ಯಾಸ ಮಾಡಲು ಅವಕಾಶವಿಲ್ಲದ ಆಸಕ್ತ ಮಕ್ಕಳಿಗಾಗಿ ಉತ್ತಮ ವಿದ್ವಾಂಸರಿಂದ ಉಚಿತವಾಗಿ ಪಾಠ ಕಲಿಸುವ ಮಹದವಕಾಶ ಒದಗಿಸಿಕೊಟ್ಟು, ಅದರ ಮೇಲ್ವಿಚಾರಣೆಯನ್ನೂ ಇವರಿಗೇ ವಹಿಸಿದರು. ವೀಣಾ ವೆಂಕಟಗಿರಿಯಪ್ಪನವರು ಸರ್ಕಾರದ ಟ್ರೈನಿಂಗ್ ಕಾಲೇಜಿನಲ್ಲೂ, ಮಹಾರಾಣಿ ಹೈಸ್ಕೂಲಿನಲ್ಲಿಯೂ ಅಧ್ಯಾಪಕರಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದರು.
ಕೆಲವೊಂದು ಅವಿಸ್ಮರಣೀಯ ಘಳಿಗೆಗಳು
ಬದಲಾಯಿಸಿಇವರ ಸಂಗೀತ ಕಚೇರಿಗಳಲ್ಲಿ ಸ್ವಾರಸ್ಯಕರವೂ, ಚಿರಸ್ಮರಣೀಯವೂ ಆದ ಘಟನೆಗಳು ನಡೆಯುತ್ತಿದ್ದವು. ತಿರುವಾಂಕೂರು ದಿವಾನರಾಗಿದ್ದ ಸರ್.ಸಿ.ಪಿ. ರಾಮಸ್ವಾಮಯ್ಯರ್ ಮನೆಯಲ್ಲಿ ಕಚೇರಿ. ಅಂದು ಶ್ರೇಷ್ಠ ವಿದ್ವಾಂಸರೂ ಕಲಾರಸಿಕರೂ ಸ್ವಯಂ ವೀಣಾ ವಿದುಷಿ ಮಹಾರಾಣಿ ಸೇತು ಪಾರ್ವತಿಬಾಯಿಯವರು ಆಗಮಿಸಿದ್ದರು. ವೆಂಕಟಗಿರಿಯಪ್ಪನವರು ನುಡಿಸುತ್ತಿದ್ದ ಘನರಾಗ ತಾನಗಳನ್ನೂ ಅದರ ಅಪೂರ್ವ ಶೈಲಿ ಮತ್ತು ದಾಟುಸ್ವರಗಳ ವಿಚಿತ್ರ ಸಂಯೋಜನೆಗಳಿಂದ ಆಕರ್ಷಿತರಾದ, ನಾದಮಾಧುರ್ಯದಿಂದ ಪ್ರಭಾವಿತರಾದ ಮಹಾರಾಣಿಯವರು ಇವರ ಸಮೀಪಕ್ಕೆ ಬಂದು, ಒಂದೆರಡು ನಿಮಿಷ ವೀಣೆ ನುಡಿಸುವುದನ್ನು ತಡೆ ಹಿಡಿಯುವಂತೆ ಕೈ ಮುಗಿದು ಕೇಳಿಕೊಂಡರು. ಅರಮನೆಯಿಂದ ತರಿಸಿದ್ದ ೩-೪ ಬೆಳ್ಳಿ ತಟ್ಟೆಗಳ ತುಂಬಾ ಜಾಜಿ, ಗುಲಾಬಿ, ಸಂಪಿಗೆ ಹೂಗಳಿಂದ ಇವರನ್ನೂ ವೀಣೆಯನ್ನೂ ಪೂಜಿಸಿದ ನಂತರ ಕಚೇರಿ ಮುಂದುವರಿಸಿ ಮುಕ್ತಾಯದ ನಂತರ ಮಹಾರಾಣಿಯವರು ರತ್ನ ಖಚಿತವಾದ ತೋಡಾ, ಖಿಲ್ಲತ್ತು, ಸಾವಿರಾರು ರೂಪಾಯಿಗಳನ್ನು ನೀಡಿ ಗೌರವಿಸಿದರು.
ಜೋಧ್‌ಪುರದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ವೆಂಕಟಗಿರಿಯಪ್ಪನವರು ರಾತ್ರಿ ೧೨.೩೦ ರಿಂದ ಬೆಳಗಿನ ೪ ಘಂಟೆಯವರೆಗೂ ಅಮೋಘವಾಗಿ ವೀಣೆನುಡಿಸಿ ಪಂಡಿತ್ ಓಂಕಾರ್ ನಾಥ್ ಮತ್ತು ಬಿಸ್ಮಿಲ್ಲಾ ಖಾನ್ ಮೊದಲಾದ ಪಂಡಿತರನ್ನೂ ಚಕಿತಗೊಳಿಸಿದರು. ಅಂದು ಇವರಿಗೆ ವಜ್ರದುಂಗುರ, ಸಹಸ್ರಾರು ರೂಪಾಯಿಗಳನ್ನು ನೀಡಲಾಯಿತು.
ಸುಮಾರು ೧೯೪೨ರಲ್ಲಿ ವಿಶ್ವವಿದ್ಯಾಲಯದಲ್ಲಿ ಹಿಂದಿ ಪ್ರಾಧ್ಯಾಪಕರಾಗಿದ್ದ ನಾಗಪ್ಪನವರಿಂದ ಏರ್ಪಡಿಸಲ್ಪಟ್ಟ ಇವರ ಸುಮಧುರ ಕಚೇರಿ ಕೇಳಿದ, ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಂಧ್ರದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಬುಲಸು ಸಾಂಬಮೂರ್ತಿಯವರ ಮಾತಿನಲ್ಲಿ ಹೇಳುವುದಾದರೆ “ಇವತ್ತು ವೀಣೆ ನುಡಿಸಿದವರು ಶೇಷಣ್ಣನವರೋ, ವೆಂಕಟಗಿರಿಯಪ್ಪನವರೋ ನನಗೆ ತಿಳಿಯದು. ಈ ದಿನ ನಾನು, ಪರಿಶುದ್ಧವೂ, ಸಂಪ್ರದಾಯಬದ್ಧವೂ ಆದ ಸುಶ್ರಾವ್ಯವಾದ ಸಂಗೀತವನ್ನು ಕೇಳಿದೆ” (Today I heard a chaste, traditional, very sweet, feminine music) ಎಂದು ಹೇಳಿ ತಟಸ್ಥರಾಗಿ ಬಿಟ್ಟರು.
ವೆಂಕಟಗಿರಿಯಪ್ಪನವರು ಉತ್ತರ ಭಾರತ ಪ್ರವಾಸ ಕೈಗೊಳ್ಳುವಾಗ ತಮ್ಮ ಆತ್ಮೀಯ ಶಿಷ್ಯರುಗಳಾದ ದೊರೆಸ್ವಾಮಿ ಐಯ್ಯಂಗಾರ್ ಮತ್ತು ಆರ್.ಎನ್. ದೊರೆಸ್ವಾಮಿಗಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ವಾಡಿಕೆ. ಈ ಪ್ರವಾಸದ ಸಂಧರ್ಭದಲ್ಲಿ ಇವರ ಆರೋಗ್ಯದಲ್ಲಿ ಏರು ಪೇರುಂಟಾಗಿ ೧೦೪ ಡಿಗ್ರಿ ಜ್ವರ ಬಂದು ತೋಳು ಊದಿಕೊಂಡು, ಕೈ ಚಳುಕು ಬಂದು ಧೈರ್ಯಗುಂದಿ ಮಾತನಾಡುತ್ತಿದ್ದರೂ ಕೂಡ, ಸಂಜೆ ರಾಜರ ಸಮ್ಮುಖದಲ್ಲಿ ಕಚೇರಿಯನ್ನು ಧೃತಿಗೆಡದೆ, ಮಾತೆ ಸರಸ್ವತೀದೇವಿಯೇ ಬೆರಳುಗಳಲ್ಲಿ ನರ್ತನ ಮಾಡುತ್ತಿರುವಳೋ ಎಂಬಂತೆ ಮಹಾರಾಜರನ್ನೂ ಸಭಿಕರನ್ನೂ ಮಂತ್ರ ಮುಗ್ಧರನ್ನಾಗಿಸಿ, ಅವರು ಕಂಬನಿಗೈಯ್ಯುವ ರೀತಿಯಲ್ಲಿ ರಾಗ ತಾನಗಳನ್ನು ನುಡಿಸಿ ವಿಜೃಂಭಿಸಿದರು. ಮಹಾರಾಜರಿಂದ ಅಮೂಲ್ಯ ಖಿಲ್ಲತ್ತು ಸಾವಿರಾರು ರೂಪಾಯಿ ಸಂಭಾವನೆ ಪಡೆದರು.
ಅಮೋಘ ವೀಣಾಗಾನ
ಬದಲಾಯಿಸಿವೀಣಾವಾದನ ಕೌಶಲ್ಯ: ನಾದಮಯ ಸಂಗೀತ, ರಮ್ಯ ಮಧುರ ಚಿತ್ರ ವಿಚಿತ್ರ ಕಲ್ಪನೆ, ನಾದದ ಪ್ರಪಂಚ, ಮಾಧುರ್ಯಯುಕ್ತ ಯಮುನೆಯ ರಂಗತರಂಗ, ಕೋಲ್ಮಿಂಚು, ವೇಣುವಿನ ಮಾಧುರ್ಯ, ಶಂಖನಾದದ ಗಾಂಭೀರ್ಯ, ಸುಂಧರ ಸಂಕೀರ್ಣ ಭಾವತರಂಗ ಅಲೌಕಿಕ ವಾಚ್ಯಾತೀತ ಸೌಂದರ್ಯಯುಕ್ತ, ಮೈಸೂರು ಸಂಪ್ರದಾಯದ ವೀಣೆಯ ಶೈಲಿ ಸ್ವರೂಪ. ಅದರ ಹಿರಿಮೆ, ಮೀಟಿನ ಸೂಕ್ಷ್ಮ, ಹೊರಹೊಮ್ಮವ ನಾದದ ಮಾಧುರ್ಯ, ಎಡಗೈ ಬೆರಳುಗಳ ಕೌಶಲ, ಚಳಕ, ರೋಮಾಂಚಕಾರಿಯಾದ ದಾಟುಸ್ವರ ಸಂಯೋಜನೆ, ವಿವಿಧ ಸಂಗೀತ ಪದ್ಧತಿಗಳ ಸೌಖ್ಯದಾಯಕ ಅಂಶಗಳನ್ನೂ ಆರಿಸಿಕೊಂಡು ಬಹುಮುಖ ಸೌಖ್ಯವನ್ನು ಉಂಟುಮಾಡುವಂತಹ ಕೌತುಕಮಯ ವಾತಾವರಣವನ್ನು ನಿರ್ಮಿಸುವ ವೈವಿಧ್ಯಮಯ ಅವರ ವೀಣಾಗಾನ.
ವಾಗ್ಗೇಯಕಾರರಾಗಿ
ಬದಲಾಯಿಸಿವೆಂಕಟಗಿರಿಯಪ್ಪನವರು ವಾಗ್ಗೇಯಕಾರರಾಗಿಯೂ ವಿಜೃಂಭಿಸಿದ್ದಾರೆ. ಮಹಾವೈದ್ಯನಾಥಯ್ಯರ್ ರವರ ೭೨ ಮೇಳರಾಗಮಾಲಿಕೆಯನ್ನು ಕೇಳಿ ಪ್ರಭಾವಿತರಾದ ಇವರು ಮಹಾರಾಜರ ಅಣತಿಯಂತೆ ಸುಮಾರು ೩೦ ಮೇಳ ರಾಗಗಳಲ್ಲಿ ಕೃತಿಗಳನ್ನೂ ರಚಿಸಿದರು. “ರಾಜಾ ಪ್ರತ್ಯಕ್ಷ ದೇವತಾ” ಎಂಬುದನ್ನು ಸಾದರ ಪಡಿಸುವ ರೀತಿಯಲ್ಲಿ, ರಾಜರಿಗೆ ಶುಭವನ್ನು ಹಾರೈಸಿ ಪ್ರತಿವರ್ಷ ವರ್ಧಂತಿಯಲ್ಲಿ ಅಪರೂಪ ರಾಗಗಳಾದ ಪ್ರಭಾಪ್ರಿಯ, ಸುನಾದ ವಿನೋಧಿನಿ, ಭುವನ ಗಾಂಧಾರಿ, ಕುಲಭೂಷಣಿ, ಶಾರದಾ ಪ್ರಿಯ, ಬುಧಮನೋಹರಿ ಮುಂತಾದ ರಾಗಗಳಲ್ಲಿ ಕನ್ನಡ ಸಾಹಿತ್ಯದೊಂದಿಗೆ ಕೃತಿರಚನೆ ಮಾಡಿ ಅವುಗಳನ್ನು ಅರಮನೆ ಬ್ಯಾಂಡ್‌ನಲ್ಲಿ ಸಾದರಪಡಿಸಿ ಮಹಾರಾಜರ ಪ್ರಶಂಸೆಗೆ ಪಾತ್ರರಾದರು. ವರ್ಣಗಳು, ತಿಲ್ಲಾನಗಳು, ರಾಗಮಾಲಿಕೆ, ನಗ್ಮಗಳು(ಹಿಂದೂಸ್ತಾನಿ ಗತ್ತು) ಇವರ ರಚನೆಗಳ ವೈವಿಧ್ಯತೆ.
ಮಹಾನ್ ಶಿಷ್ಯರು
ಬದಲಾಯಿಸಿವೆಂಕಟಗಿರಿಯಪ್ಪನವರು ಸಂಗೀತ ಕಲಾ ಲೋಕಕ್ಕೆ ಅಮೂಲ್ಯವಾದ ಶಿಷ್ಯ ಪರಂಪರೆಯನ್ನು ಬೆಳೆಸಿ ವೀಣಾ ಪ್ರಪಂಚದಲ್ಲಿ ಚಿರಂತನ ಧ್ರುವ ನಕ್ಷತ್ರವಾಗಿ ಪ್ರಕಾಶಿಸುತ್ತಿದ್ದಾರೆ. ಅವರ ಶಿಷ್ಯ ಸಂಪತ್ತು ಅಪಾರ. ಅವರೊಬ್ಬ ಆದರ್ಶ ಗುರುವಾಗಿದ್ದರು. ನಿರಪೇಕ್ಷಾಭಾವದಿಂದ ಶಿಷ್ಯರಿಗೆ ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು.
ವೆಂಕಟಗಿರಿಯಪ್ಪನವರ ಶಿಷ್ಯರಲ್ಲಿ ಅಂತರರಾಷ್ಟ್ರೀಯ ಕೀರ್ತಿವಂತರೂ, ಪ್ರತಿಭಾಶಾಲಿಗಳೂ ಆಗಿದ್ದವರು ಶ್ರೀ ದೊರೆಸ್ವಾಮಿ ಐಯ್ಯಂಗಾರ್ಯರು. ಹಾಗೆಯೇ ಇನ್ನೊಬ್ಬ ಪ್ರತಿಭಾವಂತರು ಆರ್.ಎನ್. ದೊರೆಸ್ವಾಮಿಯವರು. ಇವರ ಶೀಷ್ಯ ವೃಂದದಲ್ಲಿದ್ದವರು ವೀಣಾ ಎಂ.ಚೆಲುವರಾಯಸ್ವಾಮಿಗಳು, ಎಂ.ಜೆ. ಶ್ರೀನಿವಾಸ ಐಯ್ಯಂಗಾರ್ಯರು ಇನ್ನೂ ಅನೇಕರು.
ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳುತ್ತಲೇ ಹೋಗಬಹುದು. ಅವರ ರಚನೆ ನಗ್ಮಾವನ್ನು ಇವರಿಂದಲೇ ಕಲಿತ, ಮಹಾರಾಜ ಜಯಚಾಮರಾಜೇಂದ್ರ ಒಡೆಯರವರ ಸೋದರಿ ರಾಣಿ ವಿಜಯದೇವಿ BBC ಯಲ್ಲಿ ಪ್ರಸಾರ ಮಾಡಿದರು. ಇದನ್ನು ಕೇಳಿದ BBC ನಿರ್ದೇಶಕರು ಮೆಚ್ಚಿ “ಇದನ್ನು ರಚಿಸಿದಾತನಿಗೆ ನಿಜವಾಗಿಯೂ ಸ್ವತಂತ್ರ ಮನೋಧರ್ಮವಿದೆ”. Your Professor has an unbounded creative faculty. His music is masculine, bold and impressive.” ಎಂದು ಶ್ಲಾಘಿಸಿದ್ದನ್ನು ಕೇಳಿ ಸಂತೋಷಗೊಂಡು ೩೦೦೦ ರೂಪಾಯಿಗಳನ್ನು ಮೆಚ್ಚುಗೆಗಾಗಿ ಇವರಿಗೆ ಕಳಿಸಿದರು.
ವೆಂಕಟಗಿರಿಯಪ್ಪನವರ ವೀಣಾವಾದನವನ್ನು ಯಾರಾದರೂ ಪ್ರಶಂಸಿಸಿದರೆ ಅವರಾಡುತ್ತಿದ್ದ ಮಾತು, “ನಮ್ಮ ದೊರೆಸ್ವಾಮಿ ವೀಣೆ ಕೇಳಿದ್ದೀರಾ” ಎಂದು! ಇಂಥಾ ಗುರುಗಳನ್ನು ಪಡೆಯುವುದು ಶಿಷ್ಯರ ಪೂರ್ವ ಪುಣ್ಯವೇ ಸರಿ.
ಪ್ರಶಸ್ತಿ ಗೌರವಗಳು
ಬದಲಾಯಿಸಿ೧೯೩೬ರಲ್ಲಿ ದಸರಾ ಮಹೋತ್ಸವದ ಸಮಯದಲ್ಲಿ ವೆಂಕಟಗಿರಿಯಪ್ಪನವರಿಗೆ ವೈಣಿಕ ಪ್ರವೀಣ ಎಂಬ ಬಿರುದು, 1946ರಲ್ಲಿ ಸಂಗೀತ ವಿಶಾರದ ಎಂಬ ಪ್ರಶಸ್ತಿಗಳನ್ನಿತ್ತು ಗೌರವಿಸಿತು. ಕುಂಭಕೋಣದ ಶ್ರೀಗಳವರಿಂದ ವೈಣಿಕ ಶಿಖಾಮಣಿ ಪಡೆದರು. ಶೃಂಗೇರಿ ಕಂಚೀ ಗುರುಗಳೂ ತೋಡಾ ಶಾಲು ಇತ್ತು ಆಶೀರ್ವದಿಸಿದರು. ಯಾವ ಸಂಸ್ಥಾನಕ್ಕೆ ಹೋದರೂ ಇವರ ಪ್ರತಿಭೆಗೆ ಮಾರು ಹೋಗಿ ರಾಜಯೋಗ್ಯವಾದ ರೀತಿಯಲ್ಲಿ ಸನ್ಮಾನಿಸುತ್ತಿದ್ದರು. ಕೊಲ್ಲಂಗೋಡು, ತಿರುವಾಂಕೂರು, ಭರತ್‌ಪುರ, ಪಂಡಾರ ಸನ್ನಿಧಿ, ಧರ್ಮಪುರ, ಬರೋಡ, ಜಯಪುರ, ಬೋಧ್‌ಪುರ, ಪುದಕೋಟ್ಟೈ ಮತ್ತು ಬಂಗನಪಲ್ಲಿ ಸಂಸ್ಥಾನದ ರಾಜರುಗಳಿಂದ ಚಿನ್ನದ ಪದಕಗಳು, ರತ್ನಖಚಿತ ತೋಡಾ, ಖಿಲ್ಲತ್ತುಗಳನ್ನೂ ಬಹುಮಾನಗಳನ್ನೂ ಗಳಿಸಿದರು.
ವಿದಾಯ
ಬದಲಾಯಿಸಿವೆಂಕಟಗಿರಿಯಪ್ಪನವರು ಸಂಸಾರದಲ್ಲಿ ಬಹಳ ದುಃಖ ಅನುಭವಿಸಿದರು. ಅವರ ಪ್ರೀತಿಯ ಪುತ್ರ ಪ್ರಸನ್ನನ ಸಾವಂತೂ ಅವರ ಮನಸ್ಸು, ದೇಹದ ಮೇಲೆ ತೀವ್ರ ಆಘಾತವನ್ನುಂಟು ಮಾಡಿತು. ಅವರ ಮಕ್ಕಳೆಲ್ಲಾ ಸುಸಂಸ್ಕೃತರು, ಸಂಗೀತ ಕ್ಷೇತ್ರದಲ್ಲಷ್ಟೇ ಅಲ್ಲದೆ ಇತರ ಕ್ಷೇತ್ರಗಳಲ್ಲೂ ಪ್ರತಿಭಾಶಾಲಿಗಳಾಗಿದ್ದಾರೆ. ಶ್ರೀಮತಿ ಅಮೃತ, ಶ್ರೀ ಪ್ರಭಾಕರ್ ಮತ್ತು ಶ್ರೀ ಹರಿಪ್ರಸಾದ್ ಪ್ರಾಧ್ಯಾಪಕರೂ, ಎಂಜಿನಿಯರ್, ವೈದ್ಯಕೀಯ ವೃತ್ತಿಯಲ್ಲಿ ಮಹತ್ತರವಾದ ಸೇವೆ ಸಲ್ಲಿಸಿದ್ದಾರೆ.
ವೆಂಕಟಗಿರಿಯಪ್ಪನವರು ೧೯೫೨ ಜನವರಿ ೩೦ ರಂದು ಸರಸ್ವತಿ ಮಾತೆಯ ಪಾದಾರವಿಂದದಲ್ಲಿ ಲೀನವಾಗಿ ಹೋದರು.
ಮಾಹಿತಿ ಆಧಾರ
ಬದಲಾಯಿಸಿರಾಜಲಕ್ಮೀ ತಿರುನಾರಾಯಣನ್ ಅವರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕೃತಿಯಲ್ಲಿ ಪ್ರಕಟಿತ ಲೇಖನ