ವಿಶ್ವದ ಬೃಹತ್ ರೇಡಿಯೊ ಟೆಲಿಸ್ಕೋಪ್ ಮೇಲೆ ಭಾರತದ ಮುದ್ರೆ
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ನಿರ್ಮಿಸಲಾಗುವ ವಿಶ್ವದ ಅತಿ ದೊಡ್ಡ ಹಾಗೂ ಅತಿ ಸೂಕ್ಷ್ಮ ರೇಡಿಯೊ ಟೆಲಿಸ್ಕೋಪ್ ಮೇಲೆ ಭಾರತದ ವಿಶಿಷ್ಟ ಮುದ್ರೆ ಬೀಳಲಿದೆ.
ಚದರ ಕಿಲೋಮೀಟರ್ ಸರಣಿ (ಎಸ್‌ಕೆಎ)ಯ ಟೆಲಿಸ್ಕೋಪ್‌ನ ಪ್ರತಿ ಚಲನವಲನವನ್ನು ಭಾರತೀಯ ವಿಜ್ಞಾನಿಗಳ ನೇತೃತ್ವದ ಜಾಗತಿಕ ತಂಡ ನಿರ್ವಹಿಸಲಿದೆ. ರಾಷ್ಟ್ರೀಯ ರೇಡಿಯೊ ಖಭೌತವಿಜ್ಞಾನ ಕೇಂದ್ರ (ಎನ್‌ಸಿಆರ್‌ಎ), ರಾಮನ್ ಸಂಶೋಧನಾ ಸಂಸ್ಥೆ (ಆರ್‌ಆರ್‌ಐ) ಹಾಗೂ ಖ್ಯಾತ ಸಾಫ್ಟ್‌ವೇರ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ರೇಡಿಯೊ ಟೆಲಿಸ್ಕೋಪ್‌ನ ನಿಯಂತ್ರಣ ವ್ಯವಸ್ಥೆಯ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
'ಟೆಲಿಸ್ಕೋಪ್‌ನ ನಿಯಂತ್ರಣ ಹಾಗೂ ನಿಗಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಭಾರತ ಮುಂದಾಳತ್ವ ವಹಿಸಿದೆ' ಎಂದು ಎನ್‌ಸಿಆರ್‌ಎದ ಹಿರಿಯ ವಿಜ್ಞಾನಿ ಈಶ್ವರ ಚಂದ್ರ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ 200 ಕೋಟಿ ಡಾಲರ್ ವೆಚ್ಚದ ಟೆಲಿಸ್ಕೋಪ್ ನಿರ್ಮಿಸಲು ಎಸ್‌ಕೆಎ ಸಂಸ್ಥೆಯ ಸದಸ್ಯರು ವಾರದ ಹಿಂದೆ ನಿರ್ಧರಿಸಿದರು. ಎಸ್‌ಕೆಎ ಸಂಸ್ಥೆಯ ಸಹ ಸದಸ್ಯ ರಾಷ್ಟ್ರವಾಗಿರುವ ಭಾರತ, ವರ್ಷಾಂತ್ಯದ ವೇಳೆಗೆ ಪ್ರಬಲ ಸದಸ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಟೆಲಿಸ್ಕೋಪ್ ನಿರ್ಮಾಣಕ್ಕೆ ತಗಲುವ ಮೂಲ ಧನ, ನಿರ್ವಹಣಾ ವೆಚ್ಚವನ್ನು ಎಸ್‌ಕೆಎ ಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಭರಿಸಲಿವೆ.
ನಕ್ಷತ್ರ ಹಾಗೂ ಗ್ಯಾಲಕ್ಸಿಗಳ ರಚನೆ ಹಾಗೂ 1400 ಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂತು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಎಸ್‌ಕೆಎ ಬಳಕೆಯಾಗಲಿದೆ ಎಸ್‌ಕೆಎದ ಕೆಲವು ಹಾರ್ಡ್‌ವೇರ್‌ಗಳ ಅಭಿವೃದ್ಧಿ ಕಾರ್ಯದಲ್ಲಿ ಭಾರತ ತಂಡ ಭಾಗಿಯಾಗಲಿದೆ ಎಂದು ಚಂದ್ರ ತಿಳಿಸಿದ್ದಾರೆ.
2024ರ ವೇಳೆಗೆ ಟೆಲಿಸ್ಕೋಪ್ ನಿರ್ಮಾಣ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಸದ್ಯ ಲಭ್ಯವಿರುವ ಉಪಕರಣಕ್ಕಿಂತ 50 ಪಟ್ಟು ಸೂಕ್ಷ್ಮವಾಗಿರಲಿದೆ. ಸ್ಥಳೀಯ ನಕ್ಷತ್ರದಿಂದ ಟೆಲಿವಿಷನ್ ಸಿಗ್ನಲ್ ಗ್ರಹಿಸುವ ಸಾಮರ್ಥ್ಯವನ್ನೂ ಇದು ಹೊಂದಿರಲಿದೆ.