ದೇವದಾರು ಪೈನೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಸಿಡ್ರಸ್ ದೇವದಾರ್ ಇದರ ಶಾಸ್ತ್ರೀಯ ಹೆಸರು. ದೇವದಾರು ಎಂದರೆ ಸಂಸ್ಕøತದಲ್ಲಿ ದೇವರ ಮರ ಎಂದರ್ಥ. ಇದು ಸಮಂಜಸವಾದ ಹೆಸರು. ಏಕೆಂದರೆ ದೇವದಾರು ಭಾರತದ ಭವ್ಯವಾದ ಮರಗಳಲ್ಲೊಂದು. ಸಮುದ್ರ ಮಟ್ಟದಿಂದ 1800-3300 ಮೀಟರು ಎತ್ತರವಿರುವ ಹಾಗೂ ಸಮಶೀತೋಷ್ಣ ವಾಯುಗುಣವಿರುವ ಕಾಶ್ಮೀರ, ಗಡವಾಲ್ ಮುಂತಾದ ಪಶ್ಚಿಮ ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಶುದ್ಧರೂಪದಲ್ಲಿ ಬೆಳೆಯುತ್ತದೆ. ಇದು ಇತರ ಶಂಕುದಾರಿ ಮರಗಳ ಮತ್ತು ಅಗಲವಾದ ಎಲೆಗಳುಳ್ಳ ಜಾತಿಯ ಮರಗಳ ಜೊತೆಯಲ್ಲಿ ಬೆರೆತು ಬೆಳೆಯುವುದೂ ಉಂಟು. ಎಲ್ಲ ಶಂಕುಧಾರಿ ಮರಗಳಂತೆ ಇದು ಸಹ ಹೂ ಬಿಡದೆ ಶಂಕುಗಳನ್ನು ಬಿಡುತ್ತದೆ. ಕಡುಹಸಿರು ಅಥವಾ ಬೆಳ್ಳಿನೀಲಿ ಬಣ್ಣದ ಎಲೆಗಳು ಗುಂಪುಗುಂಪಾಗಿ ಕೊಂಬೆ-ರೆಂಬೆಗಳ ತುದಿಗಳಲ್ಲಿ ಇಳಿಬಿದ್ದಿರುವಂತೆ ಜೋಡಣೆಗೊಂಡಿದೆ. ಎಲೆಗಳು ಸೂಜಿಯಂತೆ ಮೊನಚಾಗಿಯೂ ಗಡುಸಾಗಿಯೂ ಇವೆಯಲ್ಲದೆ ಅಡ್ಡವಾಗಿ ಕತ್ತರಿಸಿ ನೋಡಿದರೆ ತ್ರೀಕೋಣಕಾರದವಾಗಿವೆ. ಉದ್ದನೆಯ ಕೊಂಬೆಗಳಲ್ಲಿ ಎಲೆಗಳು ಪರ್ಯಾಯ ಮಾದರಿಯುಲ್ಲಿ ಜೋಡಣೆಗೊಂಡಿವೆಯಾದರೆ ಗಿಡ್ಡ ಕೊಂಬೆಗಳಲ್ಲಿ ಎಲೆಗಳೆಲ್ಲ ಗುಂಪುಗುಂಪಾಗಿ ಜೋಡಣೆಗೊಂಡಿವೆ. ಪೈನ್ ಮರಗಳಿಗೆ ಅಪವಾದವೆಂಬಂತೆ ಈ ಮರದಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳು ಬೇರೆ ಬೇರೆ ಮರಗಳಲ್ಲಿ ಮೂಡುವುವು. ಬೀಜದಾರಿ ಶಂಕುಗಳು ದೊಡ್ಡ ಗಾತ್ರದವು : ಇವುಗಳ ಆಕಾರ ಅಂಡದಂತೆ. ಪ್ರತಿ ಶಂಕುವಿನಲ್ಲಿ ದಟ್ಟವಾಗಿ ಜೋಡಿಸಿದ ಫಲಕಗಳುಂಟು. ಇವುಗಳ ನಡುವೆ ತೆಳುರೆಕ್ಕೆಯಿಂದ ಕೂಡಿದ ಬೀಜಗಳಿವೆ. ಶಂಕು ಮಾಗಿದಾಗ ಈ ಫಲಕಗಳೊಡನೆ ಬೀಜವೂ ಉದುರುತ್ತದೆ. ಅನಂತರ ಶಂಕುವಿನ ದಿಂಡು ಮಾತ್ರ ಬಹುಕಾಲದವರೆಗೆ ಮರದ ಮೇಲೆಯೇ ಇರುತ್ತದೆ.

ದೇವದಾರು ಮರ ದೀರ್ಘಾಯು. 700 ರಿಂದ 800 ವರ್ಷಗಳು ಬದುಕಿರುವ ಮರಗಳ ದಾಖಲೆಗಳುಂಟು. ಹಿಮಾಲಯ ಪ್ರದೇಶದ ಅನೇಕ ದೇವಸ್ಥಾನಗಳಲ್ಲಿ ಸಂವತ್ಸರಗಳಿಂದ ಚೆನ್ನಾಗಿ ಬೆಳೆದು ನಿಂತಿರುವ ದೇವದಾರು ಮರಗಳನ್ನು ಈಗಲೂ ಕಾಣಬಹುದು. ದೇವದಾರು ಮರದ ಚೌಬೀನೆ ತೇಗದ ಮರದಷ್ಟೇ ಗಟ್ಟಿಯಾದುದೂ ಬಾಳಿಕೆ ಬರುವಂಥದೂ ಆಗಿರುವುದರಿಂದ ಈ ಮರಕ್ಕೂ ಬಹಳ ಬೇಡಿಕೆ ಇದೆ. ಇದರಲ್ಲಿರುವ ಒಂದು ಬಗೆಯ ತೈಲ ಇದನ್ನು ಗೆದ್ದಲು ಮತ್ತು ಬೂಷ್ಟಿನಿಂದ ರಕ್ಷಿಸುತ್ತದೆ. ಕೈಯಿಂದ ಮಾತ್ರವಲ್ಲದೆ ಯಂತ್ರಗಳಿಂದಲೂ ಇದನ್ನು ಸರಾಗವಾಗಿ ಕತ್ತರಿಸಬಹುದು.

ದೇವದಾರು ಮರದ ದಿಮ್ಮಿಗಳನ್ನು ಹಿಮಾಲಯ ಪರ್ವತಗಳಿಂದ ಹರಿದು ಬರುವ ನದಿಗಳಲ್ಲಿ ಕೆಳಕ್ಕೆ ತೇಲಿ ಬಿಡುತ್ತಾರೆ. ಸಾಲುವೃಕ್ಷದಂತೆಯೇ ಈ ಮರದ ಮುಖ್ಯ ಉಪಯೋಗ ರೈಲ್ವೆ ಸ್ಲೀಪರ್‍ಗಳಿಗಾಗಿ. ಸಂಸ್ಕರಿಸದೇ ಇರುವ ಇದರ ಸ್ಲೀಪರುಗಳು ಸಾಮಾನ್ಯವಾಗಿ 15 ವರ್ಷ ಬಾಳಿಕೆ ಬರುತ್ತವೆ. ದೇವದಾರು ಮರದಿಂದ ಮನೆ ಕಟ್ಟಲು ಬೇಕಾದ ತೊಲೆ, ಕಂಬ, ಹಲಗೆ, ಬಾಗಿಲು, ಕಿಟಕಿ ಚೌಕಟ್ಟುಗಳು, ಮರದ ಮೇಲ್ಭಾಗವು ಇತ್ಯಾದಿಗಳನ್ನು ನಿರ್ಮಿಸಬಹುದು. ಇಷ್ಟೇ ಅಲ್ಲದೆ ಸೇತುವೆಗಳ ನಿರ್ಮಾಣ, ರೈಲುಗಾಡಿಗಳು, ಕುರ್ಚಿ ಮೇಜುಗಳು, ಸಾಮಾನು ತುಂಬಿ ಕಳುಹಿಸುವ ಪಟ್ಟಿಗೆಗಳು, ಮರದ ಕೆತ್ತನೆ ಮುಂತಾದುವುಗಳಲ್ಲಿಯೂ ದೇವದಾರು ಮರವನ್ನು ಉಪಯೋಗಿಸುವುದಿದೆ. ಸ್ಥಳೀಯವಾಗಿ, ತೊಗಟೆ, ಗೋಂದು, ದೇವದಾರು ಎಣ್ಣೆ ಇತ್ಯಾದಿಗಳನ್ನು ಔಷಧಗಳಿಗಾಗಿ ಉಪಯೋಗಿಸುವುದುಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದೇವದಾರು&oldid=903936" ಇಂದ ಪಡೆಯಲ್ಪಟ್ಟಿದೆ