ವಿಲಿಯಮ್ ಗಿಲ್ಬರ್ಟ್

ಗಿಲ್ಬರ್ಟ್, ವಿಲಿಯಮ್ 1544-1603. ಇಂಗ್ಲಿಷ್ ವೈದ್ಯ , ಖಗೋಳಶಾಸ್ತ್ರಜ್ಞ ಹಾಗೂ ಭೌತವಿಜ್ಞಾನಿ. ಒಂದನೆಯ ಎಲಿಜಬೆತ್ ರಾಣಿಯ ಆಳ್ವಿಕೆಯ ವೇಳೆ ಇಂಗ್ಲೆಂಡಿನಲ್ಲಿ ಬಲು ಪ್ರಸಿದ್ಧನಾಗಿದ್ದ. ಗಿಲ್ಬರ್ಟ್ ಕಾಲ್ಚೆಸ್ಟರ್ನಲ್ಲಿ ಹುಟ್ಟಿ ಅಲ್ಲಿನ ಶಾಲೆಯಲ್ಲಿ ಓದಿ ಕೇಂಬ್ರಿಜ್ನ ಸೇಂಟ್ ಜಾನ್ ಕಾಲೇಜು ಸೇರಿ (1558 ) ಬಿ.ಎ., ಎಂ.ಎ. ಪದವಿಗಳನ್ನೂ ಬಳಿಕ ಎಂ.ಡಿ. ವೈದ್ಯಪದವಿಯನ್ನೂ (1569) ಪಡೆದು ತನ್ನ ಕಾಲೇಜಿನ ಹಿರಿಯ ಸದಸ್ಯನಾಗಿ ಚುನಾಯಿತನಾದ. ಯುರೋಪಿನಲ್ಲಿ ಸುತ್ತಾಡಿ ಲಂಡನ್ನಿನಲ್ಲಿ ವೈದ್ಯನಾಗಿ ನೆಲೆಸಿದ (1573).

ಗಿಲ್ಬರ್ಟ್, ವಿಲಿಯಮ್ ನ ಸಾಧನೆ

ಬದಲಾಯಿಸಿ
  • ವೈದ್ಯರ ಕಾಲೇಜು ಸದಸ್ಯನಾಗಿ (1576) ಮುಖ್ಯ ಹುದ್ದೆಗಳಲ್ಲಿ ಕೆಲಸ ಮಾಡಿದ. ಆ ಕಾಲೇಜು ಹೊರತರಲು ನಿರ್ಧರಿಸಿದ್ದ ಲಂಡನ್ನಿನ ಔಷಧಸಂಹಿತೆ (ಫಾರ್ಮಕೋಪಿಯ) ಪ್ರಕಟಣೆಯ ಮೇಲ್ವಿಚಾರಕರ ಸಮಿತಿಯಲ್ಲಿ ಈತ ಒಬ್ಬ ಸದಸ್ಯನಾಗಿದ್ದ (1589). ಆದರೆ ಈ ಸಂಹಿತೆ 1618 ರ ತನಕ ಹೊರಬೀಳಲಿಲ್ಲ. ಮೊದಲನೆಯ ಎಲಿಜ಼ಬೆತ್ ರಾಣಿಯ ಸ್ವಂತ ವೈದ್ಯನಾಗಿದ್ದ (1601). ಕಾಲ್ಚೆಸ್ಟರಿನ ಹೋಲಿ ಟ್ರಿನಿಟಿ ಚರ್ಚಿನಲ್ಲಿ ಅವನ ಸ್ಮಾರಕವಿದೆ. ವೈದ್ಯರಕಾಲೇಜಿಗೆ ದಾನ ಮಾಡಿದ ಅವನ ಪುಸ್ತಕಗಳು, ಗೋಳಗಳು, ಪರಿಕರಗಳು, ಲೋಹಸಂಗ್ರಹವೆಲ್ಲ ಲಂಡಿನ್ನಿನ ದಳ್ಳುರಿಯಲ್ಲಿ ನಾಶವಾದವು. ಈತ ಗೆಲಿಲಿಯೋನಂತೆ (1564-1642) ಪ್ರಯೋಗ ಕುಶಲಿ ಹಾಗೂ ಪರಿಣತಮತಿ. ಯಾವುದನ್ನೂ ಪ್ರಾಯೋಗಿಕವಾಗಿ ರುಜುವಾತಿಲ್ಲದೇ ಸ್ವೀಕರಿಸುತ್ತಿರಲಿಲ್ಲ.
  • ಉದಾಹರಣೆಗೆ, ಒಂದು ಅಯಸ್ಕಾಂತದ ಕಾಂತತ್ವವನ್ನು ಬೆಳ್ಳುಳ್ಳಿ ನಾಶಮಾಡುತ್ತದೆ ಎಂದು ವಿಜ್ಞಾನಿಗಳು ಕೂಡ ನಂಬಿದ್ದುದನ್ನು ನೇರ ಪ್ರಯೋಗ ಮಾಡಿ ತೋರಿಸಿ ಅಲ್ಲಗಳೆದ. ಕಾಂತತ್ವದ ವಿಚಾರ ಪ್ರಮುಖ ಲಕ್ಷಣ ಗ್ರಂಥವನ್ನು (1600) ಬರೆದ ಮೊದಲಿಗನಿವ. ಆಗಿನ ಕಾಲದಲ್ಲಿ ಕೇವಲ ವಿಜ್ಞಾನ ವಿಧಾನಗಳನ್ನು ಅನುಸರಿಸಿ ಹಲವು ವರ್ಷ ಸಂಶೋಧನೆ ನಡೆಸಿ ಕಂಡುಹಿಡಿದ ವಿಚಾರಗಳನ್ನು ಮೊತ್ತಮೊದಲು ಇದರಲ್ಲಿ ನಿರೂಪಿಸಿದ್ದ. ಕಾಂತವಾಹಕ ಶಕ್ತಿಯನ್ನು ಅಳತೆ ಮಾಡುವ ಏಕಮಾನವನ್ನು ಈತನ ಗೌರವಾರ್ಥ ಗಿಲ್ಬರ್ಟ್ ಎಂದೇ ಹೆಸರಿಸಲಾಗಿದೆ. ಸೂಜಿಗಲ್ಲು ಗಳು, ಸೂಜಿಗಲ್ಲಿನಂಥ ವಸ್ತುಗಳು, ವಿದ್ಯುತ್ತಿನ ಸೆಳೆತಗಳ ವಿಚಾರ, ಭೂಮಿ ಕೇವಲ ಒಂದು ಭಾರಿ ಸೂಜಿಗಲ್ಲೆಂದೂ, ಸೂಜಿಗಲ್ಲು ಉತ್ತರ ದಕ್ಷಿಣ ತೋರುವುದಕ್ಕೂ ಸೂಜಿಗಲ್ಲಿನ ದಿಕ್ಕಿಗೂ ಈ ಕಲ್ಪನೆಯೇ ಕಾರಣವೆಂದೂ ಆಗಲೆ ಬರೆದಿದ್ದ.
  • ಕಾಂತಾಕರ್ಷಣ ಬಲವಲ್ಲದೇ ವಿಶ್ವದಲ್ಲಿರುವ ಇತರ ಆಕರ್ಷಣ ಬಲಗಳನ್ನು ಕುರಿತು ಸಹ ಗಿಲ್ಬರ್ಟ್ ತೀವ್ರವಾಗಿ ಅನ್ವೇಷಿಸಿದ. ಉದಾಹರಣೆಗೆ, ಶಿಲಾರಾಳವನ್ನು (ಆ್ಯಂಬರ್) ಉಜ್ಜಿದಾಗ ಅದು ಹಗುರ ಪದಾರ್ಥಗಳನ್ನು ಆಕರ್ಷಿಸುವ ಸಾಮರ್ಥ್ಯ ಪಡೆಯುವುದೆಂದು ಪ್ರಾಚೀನ ಕಾಲದಿಂದಲೂ ತಿಳಿದಿತ್ತು. ಇಂಥ ಆಕರ್ಷಣ ಸಾಮರ್ಥ್ಯವನ್ನು ಪಡೆಯಬಲ್ಲ ಇತರ ವಸ್ತುಗಳ ಸಾಧನೆಯನ್ನು ಗಿಲ್ಬರ್ಟ್ ಮಾಡಿ ಅವೆಲ್ಲವನ್ನೂ ‘ಎಲೆಕ್ಟ್ರಿಕ್ಸ್’ ಎಂಬ ಸಾಮೂಹಿಕ ನಾಮದಿಂದ ಹೆಸರಿಸಿದ. ಗ್ರೀಕ್ ಭಾಷೆಯ ಎಲೆಕ್ಟ್ರಾನಿನಿಂದ (ಅರ್ಥ ಶಿಲಾರಾಳ) ಈ ಎಲೆಕ್ಟ್ರಿಕ್ ಪದವನ್ನು ಗಿಲ್ಬರ್ಟ್ ಉತ್ಪಾದಿ ಸಿದ.ಗಿಲ್ಬರ್ಟ್ ಸತ್ತಮೇಲೆ ಅವನ ಸೋದರ ಗಿಲ್ಬರ್ಟ್ನ ಎರಡು ಕೈಬರೆಹಗಳ ಆಧಾರದ ಮೇಲೆ ಒಂದು ಗ್ರಂಥವನ್ನು ಪ್ರಕಟಿಸಿದ (1651). ಕೊಪರ್ನಿಕಸನ ವಾದವನ್ನು ಇಂಗ್ಲೆಂಡಿನಲ್ಲಿ ಮೊತ್ತಮೊದಲು ಪ್ರತಿಪಾದಿಸಿದ ಮತ್ತು ಸ್ಥಿರ ನಕ್ಷತ್ರಗಳು ಭೂಮಿಯಿಂದ ಸಮದೂರದಲ್ಲಿ ಇಲ್ಲವೆಂದು ಹೇಳಿದ.