ಡಾ. ವಿಜಯಾ

ನಮ್ಮ ನಡುವಿನ ಸಾಂಸ್ಕೃತಿಕ ತಾರೆ - ಡಾ. ವಿಜಯಾ

ಬದಲಾಯಿಸಿ

ವಿಜಯಾರವರು ಹುಟ್ಟಿದ್ದು ದಾವಣಗೆರೆಯಲ್ಲಿ ೧೯೪೨ರ ಮಾರ್ಚ ೧೦ರಂದು, ತಂದೆ ಶಾಮಣ್ಣ, ತಾಯಿ ಸರೋಜ. ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಹೊಸ ಪೇಟೆಯ ಅಮರಾವತಿ ನಂತರ ಬೆಂಗಳೂರಿನಲ್ಲಿ ಬಿ.ಎ.ಪದವಿ ಹಾಗೂ ಶ್ರೀರಂಗರ ನಾಟಕಗಳು: ಒಂದು ಅಧ್ಯಯನ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌ಡಿ ಪದವಿ[] ಡಾ. ವಿಜಯಾ (ಇಳಾ) ನಾಡಿನ ಬಹುಜನರ ಪಾಲಿಗೆ "ವಿಜಯಮ್ಮ". ಆ ಹೆಸರು ಕೇಳಿದವರಿಗೆ ಸಾಮಾನ್ಯವಾಗಿ ಮನಸ್ಸಿನಲ್ಲಿ ಮೂಡುವ ಚಿತ್ರ ಯಾವತ್ತೂ ಒಪ್ಪವಾಗಿ, ಅಭಿರುಚಿಯಿಂದ ವಸ್ತ್ರ ಧರಿಸುವ, ನೀಳಕಾಯದ, ದೊಡ್ಡ ಹಣೆಬೊಟ್ಟಿನ, ನಿತ್ಯ ವರ್ಚಸ್ಸಿನ ಮಹಿಳೆಯದು, ಈ ಸಾಮಾನ್ಯ ಕಣ್ ನೆಲೆಯ ಆಚೆಗೆ ಬಹುಮುಖವಾದ ಸಾಂಸ್ಕೃತಿಕ ಆಸಕ್ತಿ ಹಾಗೂ ಸಾಧನೆಗಳುಳ್ಳ ಹಲವು ಆಯಾಮಗಳ ವ್ಯಕ್ತಿ ಅವರು ಎನ್ನುವುದು ಅವರ ನಿಕಟ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅನುಭವಕ್ಕೆ ಬರುವಂಥದು.

ವೈಯಕ್ತಿಕ ಬದುಕೆಂಬ ಪುಟ್ಟ ಜಾಗದಿಂದು ಹೊರಟು ಸಾಮಾಜಿಕವಾದ ವಿಶಾಲವಾದ ಸಾಂಸ್ಕೃತಿಕ ಲೋಕದಲ್ಲಿ ಅವರು ತಮ್ಮನ್ನು ಬೆಳೆಸಿಕೊಂಡ ಬಗೆಯೇ ಅಚ್ಚರಿ ತರಬಲ್ಲದು. ವಿಜಯಲಕ್ಷ್ಮಿ ಎಂಬ ಮುಗ್ಧ, ಅಮಾಯಕ ಯುವ ಗೃಹಿಣಿ ವೈವಾಹಿಕ ಬದುಕೆನ್ನುವ ಕುಲುಮೆಯಲ್ಲಿ ಕಾದು ಕಾದು ಕೊನೆಗೊಮ್ಮೆ ತನ್ನೆರಡು ಮಕ್ಕಳೊಂದಿಗೆ ಆ ಸಂಕೋಲೆಯಿಂದ ಹೊರಬಂದದ್ದು, ತನ್ನನ್ನೂ ಮಕ್ಕಳನ್ನೂ ಸಂಭಾಳಿಸಿಕೊಳ್ಳುತ್ತ ಸ್ವಾಭಿಮಾನದಿಂದ ಹೊಸ ಬದಕನ್ನು ಕಟ್ಟಿಕೊಳ್ಳತೊಡಗಿದ್ದು ಒಂದು ಘಟ್ಟ. ಆಮೇಲೆ ಪತ್ರಿಕಾರಂಗದಲ್ಲಿ ಕಾಲಿರಿಸಿ, ಹಲವಾರು ಪತ್ರಿಕೆಗಳಲ್ಲಿ ದುಡಿದು, ಸಹ ಸಂಪಾದಕರಾಗಿ ಮಾಧ್ಯಮವ್ಯಕ್ತಿಯಾಗಿ ಬೆಳೆದದ್ದು ಇನ್ನೊಂದು ಘಟ್ಟ.

ಸ್ಥೂಲವಾಗಿ ವೃತ್ತಿ ವಿವರ

ಬದಲಾಯಿಸಿ

‘ ಉದ್ಯೋಕ್ಕಾಗಿ ಐಟಿಐ ಕಾರ್ಖಾನೆಯನ್ನು ಸೇರಿದವರು ಅಲ್ಲಿಂದ ಪತ್ರಕರ್ತೆಯಾಗಿ ಬೆಳೆದು, ಸಂಪಾದಕರಾದ ಹಾದಿ ಸರಳವೇನೂ ಆಗಿರಲಿಲ್ಲ. ಅವರು ಸೇವೆ ಸಲ್ಲಿಸಿರುವ ಪತ್ರಿಕೆಗಳೇ ಒಂದು ಗುಂಪೆನ್ನುವಷ್ಟಿವೆ. ’ಪ್ರಜಾಮತ’ ವಾರಪತ್ರಿಕೆ (1968-70), ’ಮಲ್ಲಿಗೆ’ ಮಾಸಪತ್ರಿಕೆಗೆ ಸಹ ಸಂಪಾದಕಿಯಾಗಿ (1970-73), 'ತುಷಾರ’ ಮಾಸಪತ್ರಿಕೆ ಸಹಾಯಕ ಸಂಪಾದಕಿಯಾಗಿ (1977-1991), 'ರೂಪತಾರಾ’ ಚಲನಚಿತ್ರ ವಾರಪತ್ರಿಕೆಗೆ ಸಹ ಸಂಪಾದಕಿಯಾಗಿ (1977-1991), 'ಉದಯವಾಣಿ’ ದಿನಪತ್ರಿಕೆಯ ಅಂಕಣಗಾರ್ತಿಯಾಗಿ (1972-91), ’ಅರಗಿಣೆ’ ಚಲನಚಿತ್ರ ವಾರಪತ್ರಿಕೆಯ ಗೌರವ ಸಂಪಾದಕಿಯಾಗಿ (1991-92), ’ಬೆಳ್ಳಿಚುಕ್ಕಿ’ ವಿಡಿಯೋ ಮ್ಯಾಗಜಿನ್ ಸಂಪಾದಕ ಸಲಹೆಗಾರರಾಗಿ (1992), ’ನಕ್ಷತ್ರಲೋಕ’ ಚಲನಚಿತ್ರ ಸಾಪ್ತಾಹಿಕದಲ್ಲಿ (1996), ’ಕರ್ಮವೀರ’ ಸಾಪ್ತಾಹಿಕಕ್ಕೆ ಸಲಹಾ ಮಂಡಳಿ ಸದಸ್ಯೆಯಾಗಿ (1992), 'ನಮ್ಮ ಮಾನಸ’ ಮಹಿಳಾ ಪತ್ರಿಕೆ ಹಾಗೂ ’ಹೊಸತು’ ಮಾಸ ಪತ್ರಿಕೆಗಳ ಸಂಪಾದಕ ಮಂಡಳಿ ಸಲಹೆಗಾರರಾಗಿ...... ಇತ್ಯಾದಿ.

ಅವರು ಕಾಲಿಟ್ಟಲ್ಲಿ ಆಯಾ ಪತ್ರಿಕೆಗಳ ಹೊರ ಆಕೃತಿಗೂ ಒಳಗಿನ ತಿರುಳಿಗೂ ವಿಶೇಷವಾದ ಅರ್ಥವಂತಿಕೆ ಹಾಗೂ ಸೌಂದರ್ಯಗಳನ್ನು ತಂದುಕೊಡಲು ಶ್ರಮಿಸುತ್ತಾರೆ. ’ಇದು ನನ್ನದು ಇದು ಪರರದು’ ಎಂಬ ಭೇದವೆಣಿಸದೆ ಒಟ್ಟಾರೆಯಾಗಿ ಪತ್ರಿಕೆಯ ಗುಣಮಟ್ಟವನ್ನು ಉತ್ತಮಗೊಳಿಸಲು ತುಂಬ ಕಾಳಜಿವಹಿಸುವುದನ್ನು ’ನಮ್ಮ ಮಾನಸ’ ತಿಂಗಳ ಪತ್ರಿಕೆಯ ಸಂದರ್ಭದಲ್ಲಿ ನಾನು ಸ್ವತಃ ಕಂಡಿದ್ದೇನೆ. ಇಂಥ ಕಲಾತ್ಮಕ ಅಭಿರುಚಿ ಹಾಗೂ ವಿವಿಧ ಕಲೆಗಳ ಬಗೆಗೆ ಅವರು ರೂಢಿಸಿಕೊಂಡ ಅಭಿಜಾತ ಆಸಕ್ತಿಗಳು ನೈಜವಾಗಿ ಪೂರ್ಣರೂಪದಲ್ಲಿ ಪ್ರಕಟಗೊಂಡಿದ್ದು ಅವರೇ ಸಂಪಾದಿಸಿ ಹಲವು ವರ್ಷಗಳವರೆಗೆ ಪ್ರಕಟಿಸುತ್ತಿದ್ದ ’ಸಂಕುಲ’ ಎಂಬ ಸೃಜನಾತ್ಮಕ ಕಲೆಗಳಿಗೇ ಮೀಸಲಾದ ಪತ್ರಿಕೆಯಲ್ಲಿ ಎನ್ನಬಹುದು. ಕನ್ನಡದಲ್ಲಿ ಅಪರೂಪದ್ದಾದ ಈ ಪತ್ರಿಕೆಗೆ ಅಪಾರ ಜನರ ಪ್ರೀತ್ಯಾದರಗಳು ಸಿಕ್ಕಿದಷ್ಟು ಪ್ರಮಾಣದಲ್ಲಿ ಧನಸಹಾಯ ಒದಗಿ ಬರದಿದ್ದುದೇ ಕೊರತೆಯಾಯಿತು. ಆದರೂ ಆ ಪತ್ರಿಕೆ ವಿವಿಧ ಕಲೆಗಳ ಸಾಂಸ್ಕೃತಿಕ ಚರಿತ್ರೆಯ ಉಜ್ವಲ ದಾಖಲೆಯಾಗಿದ್ದು ಇಂದಿಗೂ ಕಲಾವಿದ್ಯಾರ್ಥಿಗಳಿಗೆ ಪರಾಮರ್ಶೆಗೆ ಅರ್ಹವಾಗಿದೆ ಎಂಬುದು ವಿಜಯಾ ಅವರ ಪತ್ರಿಕೋದ್ಯಮ ಅನುಭವ ಸಂಪನ್ನತೆಗೆ ಸಾಕ್ಷಿಯಾಗಿರುತ್ತದೆ.

ಸಣ್ಣ ಕತೆಯ ಸೊಗಸು

ಬದಲಾಯಿಸಿ

ತಮ್ಮ ಬದುಕಿನ ವಿಕಾಸದ ದಾರಿಯಲ್ಲಿ ವಿಜಯಾ ಮೊದಲು ಆರಂಭಿಸಿದ್ದ ಅನೇಕ ಅಂಶಗಳು ಮುಂದೆ ಪರಂಪರೆಯಾಗಿ ಬೆಳೆಯಿತು. ಸಣ್ಣ ಕತೆಗಾರರ ದೊಡ್ಡ ಸಮುದಾಯವನ್ನೇ ಅವರು ಬೆಳೆಸಿದ್ದು. ’ಅಂಕಣ’ಗಳನ್ನು ನಿರ್ಧಿಷ್ಟ ಧ್ಯೇಯ ಸಾಧನೆಗಾಗಿ ಬರೆಯತೊಡಗಿದ್ದು ಅಂಥ ಮೊದಲುಗಳಲ್ಲಿ ಸೇರಿರುತ್ತದೆ. ’ಅಂಕಣ’ಕ್ಕಾಗಿ ’ಸಣ್ಣ ಕತೆಯ ಸೊಗಸು’ ಎಂಬ ಸಾಹಿತ್ಯ ಮೀಮಾಂಸೆಯ ಲೇಖನಮಾಲೆಯನ್ನು ವಿಶಿಷ್ಟವಾದ ಲಲಿತವಾದ ಭಾಷಾಶೈಲಿಯಲ್ಲಿ ಅವರು ಬರೆದದ್ದು ಮುಂದೆ ಅನೇಕ ಮಹಿಳೆಯರ ಪತ್ರಿಕಾಬರಹಗಳಿಗೆ ಮಾದರಿಯಾಯಿತು ಎಂಬಂತೆ ಇಂದೂ ಬಹುಮಂದಿ ಲೇಖಕಿಯರ ಬರಹದ ಭಾಷೆ ಹಾಗೆಯೇ ಇರುತ್ತದೆ.

ವಿಜಯಾ ತಮ್ಮೊಳಗಿನ ಸಂಕೋಚ, ಕೀಳರಿಮೆಗಳನ್ನು ತಾವು ಮೀರುವ ಪ್ರಕ್ರಿಯೆಯಲ್ಲೇ ಅನೇಕ ಪ್ರೀಳಿಗೆಗಳ ಯುವ ಬರಹಗಾರರು, ಕಲಾವಿದರು, ಹೋರಾಟಗಾರರಿಗೂ ಕೀಳರಿಮೆಗಳಿಂದ ಹೊರಬರುವುದಕ್ಕೆ ನೆರವಾಗಿದ್ದಾರೆ, ಮನೋಬಲಗಳನ್ನು ಬೆಳೆಯಿಸಿದ್ದಾರೆ. ಪತ್ರಿಕಾ ಮಾಧ್ಯಮದಲ್ಲಿ ತಾವು ಬೆಳೆದು ಗಳಿಸಿಕೊಂಡ ಸ್ಥೈರ್ಯ, ಸ್ಥಾನಬಲದ ಪ್ರಭಾವ, ಪತ್ರಿಷ್ಠೆಗಳನ್ನು, ಜನಸಂಪರ್ಕ ಶಕ್ತಿಯನ್ನೂ ಸದುದ್ದೇಶದಿಂದ ಬಳಸುತ್ತಾ ಅದೆಷ್ಟು ಬರಹಗಾರರಿಗೆ, ಕಲಾಪರಿಶ್ರಮಿಗಳಿಗೆ, ದುಡಿಮೆಗಾರರಿಗೆ ಅವಕಾಶ, ಬೆಂಬಲ, ಪ್ರೋತ್ಸಾಹಗಳನ್ನು ವಿಜಯಾ ನೀಡಿದ್ದಾರೆ, ನೀಡುತ್ತಲೂ ಇದ್ದಾರೆ ಎಂಬುದು ಯಾರ ಲೆಕ್ಕಕ್ಕೂ ಬರಲಾರದು.

ಚಿತ್ರಾ ನಾಟಕ ತಂಡ

ಬದಲಾಯಿಸಿ

ತುರ್ತು ಪರಿಸ್ಥಿತಿಯ ಆಪತ್ಕಾಲದಲ್ಲಿ ನಜಸಮುದಾಯದಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸುವುದು ಅವಶ್ಯಕವಾಗಿದ್ದಾಗ, ವಿಜಯಾ, ಎ.ಎಸ್. ಮೂರ್ತಿಯವರಿಗೆ ಸಹಕರಿಸಿ ’ಚಿತ್ರಾ’ ಎಂಬ ನಾಟಕ ತಂಡವನ್ನು ಕಟ್ಟಿದರು. ಈ ತಂಡದವರು ಅಭಿನಯಸಲೆಂದೇ ಬೀದಿನಾಟಕಗಳನ್ನು ರಚಿಸಿದರು. ಕನ್ನಡಕ್ಕೆ ಹೊಸದಾಗಿದ್ದ ಬೀದಿನಾಟಕ ಪ್ರಯೋಗಗಳು ಬಹುಬೇಗ ಜನಪ್ರಿಯವಾಗಿ ಅದೇ ಒಂದು ರಾಜಕೀಯ ಚಳುವಳಿಯಾಗಿದ್ದು ಒಂದು ಇತಿಹಾಸ.

ಇದೇ ಹಂತದಲ್ಲಿ ’ಸೂತ್ರದ ಬೊಂಬೆಯಾಟ’ದಂಥ ಜನಪದ ಕಲೆಯನ್ನು ನವೀಕರಿಸಿ ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಪುನಾರಚಿಸಿ, ಹೊಸ ವಿಚಾರಗಳಿಗೆ ಅದನ್ನು ಒಂದು ಒಳ್ಳೆಯ ಕಲಾಮಾಧ್ಯಮವನ್ನಾಗಿ ಹೇಗೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಅವರ ಇನ್ನೊಂದು ಸಾಹಸ. ರಂಗಭೂಮಿ ಚಳವಳಿಗೆ ಆಕರ್ಷಿತರಾದಾಗ, ಅದಕ್ಕೆ ಪೂರಕವಾಗಬಲ್ಲ ರೀತಿಯ ರಂಗಶಾಲೆಯನ್ನು ಕಟ್ಟಲು ನೆರವಾದರು. ಈ ರೆಪರ್ಟಿರಿಯ ಮೂಲಕ ಅಸಂಖ್ಯ ಕಲಾವಿದರು, ಹೊಸ ನಾಟಕಕಾರರು ಬೆಳಕಿಗೆ ಬರಲು ಅವರು ಕಾರಣವಾದರು.
ಚಲನಚಿತ್ರ, ನಟನಟಿಯರು, ತಂತ್ರಜ್ಞರ ಬಗ್ಗೆ ಸಾಮಾಜಿಕವಾಗಿ ತುಂಬ ಕೀಳು ಭಾವನೆಗಳಿದ್ದ ಕಾಲದಲ್ಲಿ ’ರೂಪತಾರಾ’ದಂಥ ಚಲನಚಿತ್ರ ಪತ್ರಿಕೆಯ ಸಂಪಾದನಾ ಕಾರ್ಯಕ್ಕೆ ಒಪ್ಪಿದ ವಿಜಯಾ ಅವರು ಆ ಕ್ಷೇತ್ರದ ನಟನಟಿಯರಿಗೂ, ತಂತ್ರಜ್ಞರಿಗೂ ಜನರ ಗೌರವವನ್ನು ದೊರಕಿಸಿಕೊಡಲು ಶ್ರಮಿಸಿ ಗಾಂಧಿನಗರ ವಲಯದಲ್ಲೂ ಸುಂಸ್ಕೃತ, ಮಾನವೀಯ ವಾತಾವರಣ ಇರುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ವಿಜಯಾ ಅವರ ವ್ಯಕ್ತಿತ್ವ ಹಾಗೂ ಅವರ ಉಪಸ್ಥಿತಿಯೇ ಆ ಕ್ಷೇತ್ರದ ಎಷ್ಟೋ ಜನರಿಗೆ ಮನಃಪರಿವರ್ತನೆಗೂ ಕಾರಣವಾಗಿದ್ದಿತು, ಮಾನಸಿಕ ಸ್ಥೈರ್ಯವನ್ನೂ ತುಂಬಿದ್ದಿತು.

ಇಳಾ ಮುದ್ರಣ

ಬದಲಾಯಿಸಿ

ಇಳಾ ಮುದ್ರಣಾಲಯವನ್ನು ಕಟ್ಟಿ ಬೆಳೆಸಿದ್ದು ವಿಜಯಾ ಅವರ ಸಾಧನೆಯ ಕಿರೀಟದ ಇನ್ನೊಂದು ಗರಿ, ಸಂಖ್ಯಾತ ಹಿರಿಯ ಹಾಗೂ ಕಿರಿಯರ ಸಾಹಿತ್ಯ ಕೃತಿಗಳನ್ನು, ಅತ್ಯುತ್ತಮ ಗುಣಮಟ್ಟದಲ್ಲಿ ಮುದ್ರಿಸಿ ಬೆಳಕಿಗೆ ತಂದಿರುವ ಹಾಗೂ ತರತ್ತಲೂ ಇರುವ ಈ ಸಂಸ್ಥೆಗೆ ಬರಿಯ ಲಾಭದೃಷ್ಟಿಗೆ ಬದಲಾಗಿ ಗುಣಾಭಿರುಚಿಯನ್ನೇ ತಳಹದಿಯನ್ನಾಗಿಸಿದವರು ವಿಜಯಾ.
ಸಾಮಾಜಿಕವಾದ ಅನ್ಯಾಯಗಳ ವಿರುದ್ಧ ಸದಾ ಧ್ವನಿಯೆತ್ತುತ್ತಲೇ ಬಂದಿರುವ ವಿಜಯಾ ವ್ಯಕ್ತಿಗಳು ಅನ್ಯಾಯ, ದೌರ್ಜನ್ಯ, ಸಂಕಟಗಳಿಗೆ ಒಳಗಾದದ್ದು ಕಂಡಾಗ ವಿಶೇಷವಾಗಿ ಕರಗಿ ಹೋಗುವವರು.ಸಾಮೂಹಿಕ ಚಳವಳಿಗಳಲ್ಲಿ - ವಿಶೇಷವಾಗಿ ದಲಿತ-ಬಂಡಾಯ ಹಾಗೂ ಮಹಿಳಾ ಚಳವಳಿಗಳಲ್ಲಿ—ಸಂಪೂರ್ಣವಾದ ಒತ್ತಾಸೆ ನೀಡಿ ಚಳವಳಿಗಾರ ಯುವಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿದವರು. ನೊಂದವರೊಂದಿಗೆ ಹೀಗೆ ತೊಡಗಿಕೊಳ್ಳುವ ವೇಳೆಗೆ ಆಗಲೇ ವಿಜಯಾ ಈ ನಾಡಿನ ಸಂಸ್ಕೃತಿಯ ಕೆನೆಪದರದ ಎಲ್ಲಾ ಕ್ಷೇತ್ರಗಳ ಪ್ರಸಿದ್ಧನಾಮರಿಗೆ ಸಮಾನಸ್ಕಂದರಾಗಿ ಬೆಳೆದಿದ್ದರು. ಸಾಮಾನ್ಯಳಂತಿದ್ದ ಒಬ್ಬ ಹೆಣ್ಣುಮಗಳು ತನ್ನೊಳಗಿನ ಪ್ರತಿಭೆ, ದಿಟ್ಟತನ, ಕಲಾಸಕ್ತಿಗಳನ್ನು, ಲೋಕವ್ಯವಹಾರ ವಿವೇಕ ಹಾಗೂ ಜನಸಂಪರ್ಕಗಳ ಮೂಲಕ ಹೀಗೆ ತ್ರಿವಿಕ್ರಮಾಕಾರದಲ್ಲಿ ವಿಸ್ತರಿಸಿಕೊಂಡ ವಿದ್ಯಮಾನವು ಅಪರೂಪ ಮಾತ್ರವಲ್ಲ, ಬೆರಗು ಪಡಿಸುವಂಥದ್ದು. ಈ ಎತ್ತರದ ನಿಲುವಿನ ವ್ಯಕ್ತಿತ್ವದ ತುಂಬಾ ಸಂಕೀರ್ಣವಾದ ಆಯಾಮಗಳಿಂದಾಗಿ ಒಂದು ಸಂಸ್ಥೆಯೇ ಆಗಿರುವ ವಿಜಯಾ ಅವರ ಆ ಎಲ್ಲಾ ಸಾಂಸ್ಕೃತಿಕ ಆಯಾಮಗಳನ್ನು ವ್ಯಾಖ್ಯಾನಿಸುವುದು ಯಾವುದೇ ಬಿಡಿ ವ್ಯಕ್ತಿಗೆ ಮೀರಿದ ಸಾಹಸವಾದೀತು. ಅದ ಕಾರಣ ಪ್ರಸ್ತುತ ಲೇಖನದಲ್ಲಿ ಡಾ.ವಿಜಯಾ ಅವರ ಸಾಹಿತ್ಯದ ಆಂತರಿಕ ಸ್ವರೂಪವನ್ನು ಗುರುತಿಸುವ ನಮ್ರ ಯತ್ನಕ್ಕೆ ಮಾತ್ರ ಕೈ ಹಾಕಿದ್ದೇನೆ.

ಪ್ರಕಾಶಕಿಯಾಗಿ

ಬದಲಾಯಿಸಿ

ಪತ್ರಿಕೆಗಳ ಮುಖಾಂತರವೂ, ಪುಸ್ತಕ ಪ್ರಕಾಶಕರಾಗಿಯೂ ಲೆಕ್ಕವಿರದಷ್ಟು ಸಾಹಿತಿಗಳಿಗೆ ವಿಜಯಾ ಅವರ ಬರಹವನ್ನು ದಾಖಲಿಸಲು ನೆರವಾದರು. ಆದರೆ ತಮ್ಮದೇ ವಿಚಾರ, ಭಾಷಣ, ಚಿಂತನೆ, ಉಪನ್ಯಾಸ ಮುಂತಾದವನ್ನು ಮುದ್ರಿಸಿ ಪ್ರಕಟಿಸಿ ಕಾಯ್ದಿಡುವ ವಿಷಯದಲ್ಲಿ ಅವರು ಯಾವಾಗಲೂ ಅನಾಸಕ್ತರು. ಈ ಕಾರಣಕ್ಕಾಗಿಯೇ ಅವರು ಭಾಷಣ-ಉಪನ್ಯಾಸಗಳಲ್ಲಿ ಆಡಿದ ಮಾತೆಲ್ಲವೂ ಬರಹಕ್ಕೆ ಬಂದಿಲ್ಲ. ಬರೆದದ್ದೆಲ್ಲವೂ ಕಾಲಕಾಲಕ್ಕೆ ವ್ಯವಸ್ಥಿತವಾಗಿ ಪ್ರಕಟಣೆಗಳನ್ನು ಕಂಡಿಲ್ಲ. ಪ್ರಕಟವಾದದ್ದು ಕೂಡ ಕ್ರಮಬದ್ಧವಾಗಿ ರಕ್ಷಿತವಾಗಲಿಲ್ಲ. ಆಪ್ತೇಷ್ಟರು ಪ್ರೀತಿಯಿಂದ ಆಗ್ರಹಿಸಿ ಆಗೀಗ ಹೊರಬರುವಂತೆ ಮಾಡಿರುವ ಕೆಲವೇ ಕೃತಿಗಳ ಮೂಲಕ ನಾವು ವಿಜಯಾ ಅವರ ಸಾಹಿತ್ಯಕ ಅಭಿವ್ಯಕ್ತಿಯ ಸಾರವನ್ನು ತಿಳಿಯಬೇಕಿದೆ.

ಪತ್ರಕರ್ತೆಯಾಗಿ

ಬದಲಾಯಿಸಿ

ಒಬ್ಬ ಪತ್ರಕರ್ತೆಯಾಗಿ ಸಮಾಜದ ವೈವಿಧ್ಯಮಯ ಬದುಕಿನ ಸ್ತರಗಳ ಬಗೆಬಗೆಯ ವಾಸ್ತವಾಂಶಗಳು ವಿಜಯಾ ಅನುಭವಕ್ಕೆ ಬಂದಿರುತ್ತವೆ. ಅವುಗಳನ್ನು ತಮ್ಮ ಚಿಂತನೆಯೊಂದಿಗೆ ಬೆಸೆದು ದಾಖಲಿಸಿರುವ ಯತ್ನಗಳು ಅಂಕಣ ಬರಹಗಳಾಗಿ ರೂಪುತಳೆದಿರುತ್ತವೆ. ಇಂದಿನಂತೆ, ವಿದ್ಯುನ್ಮಾನ ತಂತ್ರಜ್ಞಾನದ ಮೂಲಕ ಸುಲಭವಾಗಿ ಕೂತಲ್ಲೇ ಕ್ಷಣಮಾತ್ರದಲ್ಲಿ ಅಗತ್ಯ ಮಾಹಿತಿಗಳನ್ನು ಜೋಡಿಸಿ ಮುದ್ರಿಸಬಲ್ಲ ಕಾಲ ಅದಲ್ಲ. ಸ್ವತಃ ಜನಗಳ ಬಳಿಗೇ ಹೋಗಿ ಸನ್ನಿವೇಶ ಘಟನೆಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿ ಖುದ್ದಾಗಿ ವಿಷಯ ಸಂಗ್ರಹಿಸಿ ವಿಶ್ಲೇಷಿಸುತ್ತಿದ್ದ ಆ ಕಾಲದಲ್ಲಿ ಅನುಭವ ವೈವಿಧ್ಯದಗಳಿಕೆಗೂ ಹೇರಳ ಅವಕಾಶವಿತ್ತು. ವಿಜಯಾ ಅವರ ಅಂಕಣ ಬರಹಗಳನ್ನು ಅವುಗಳ ವಸ್ತು ವೈವಿಧ್ಯವನ್ನು ಗಮನಿಸಿದರೆ ಅವೆಲ್ಲ ಅವರ ಅನುಭವ ಸಮೃದ್ಧಿಯನ್ನು ಸೂಚಿಸುತ್ತವೆ ಎಂದು ಮನಗಾಣಬಹುದು. ’ಮಾತಿನಿಂದ ಲೇಖನಿಗೆ’ ಹಾಗೂ ’ಸುದ್ದಿ-ಕನ್ನಡಿ’ ಇವು ವಿಜಯಾ ಅವರ ಎರಡು ಅಂಕಣ-ಲೇಖನಗಳ ಸಂಕಲನಗಳು. ಒಂದೊಂದರ ಹಿಂದೆಯೂ ಒಂದು ಚರಿತ್ರೆ ಅಡಗಿದೆ.

’ತುಷಾರ’ ಮಾಸಪತ್ರಿಕೆಯಲ್ಲಿ ಸಂಪಾದಕರಾಗಿದ್ದಾಗ ಅವರು ಬರೆಯುತ್ತಿದ್ದ ’ಮಾತಿನಿಂದ ಲೇಖನಿಗೆ’ ಎಂಬ ಅಂಕಣ 43 ಲೇಖನಗಳೂ ಅದೇ ಅಂಕಣದ ಹೆಸರಿನ ಅಡಿಯಲ್ಲಿ 1981ರಲ್ಲಿ ಸಂಕಲನವಾಗಿ ಹೊರಬಂದಿತು. ’ರಾಜಕಾರಣಿಗಳು, ಸಿನಿಮಾದವರು, ಕೊನೆಗೆ ಡಕಾಯಿತರೂ ಸಹ ನಿಂತದ್ದು ಕೂತದ್ದು ಸುದ್ದಿಯಾಗುವಾಗ ಸಾಹಿತ್ಯ ಸೃಷ್ಟಿಯಂಥ ಮುಖ್ಯ ಕಾರ್ಯದಲ್ಲಿ ತೊಡಗಿರುವ ಸಾಹಿತಿ ಮಾತ್ರ ತೆರೆಮರೆಯಲ್ಲೇ ಏಕೆ?’ ಎಂದು ಚಿಂತಿಸಿ ವಿಜಯಾ ಅವರು ಸಾಹಿತಿಗಳಿಗೂ ಸಾಹಿತ್ಯಕ್ಕೂ ಸಂಬಂಧಿಸಿದ ವಿಷಯಗಳನ್ನು ಸುದ್ದಿಗಳಂತೆ ತಮ್ಮ ಅನ್ನಿಸಿಕೆಯೊಡನೆ ಪ್ರಕಟಿಸಲು ನಡೆಸಿದ ಪ್ರಯೋಗವೇ ಈ ಅಂಕಣ. ಬರಲಿರುವ, ಬಂದಿರುವ ಕೃತಿಗಳನ್ನು ಕುರಿತು, ಆ ಕ್ಷಣದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಾತಾವರಣಕ್ಕೆ ಈ ಸಾಹಿತಿಗಳು, ವಿಮರ್ಶಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಸುದ್ದಿಯಾಗಿಸುವ ಯತ್ನ ಅದಾಗಿತ್ತು. ಆದರೆ ಎಲ್ಲಾ ಕಡೆ ಆಗುವ ಹಾಗೆ ಸಾಹಿತಿಗಳ ಸ್ವಹಿತದ ಹಪಾಹಪಿಗಳು, ಕ್ಷುಲ್ಲಕ ರಾಜಕೀಯಗಳು ಒಳಗೊಂದು ಹೊರಗೊಂದಾದ ವರ್ತನೆಗಳು ವಿಜಯಾಗೆ ಬೇಸರ ಬರಿಸಿದವು ಹೀಗಾಗಿ ತುಂಬ ಉತ್ತಮ ಪ್ರತಿಕ್ರಿಯೆಗಳು ಓದುಗರಿಂದ ದೊರೆತ್ತಿದ್ದಂಥ ಈ ಅಂಕಣದ ಸ್ವರೂಪವನ್ನೇ ಅವರು ಬದಲಾಯಿಸಿಕೊಂಡರು. ಈಗ ನೋಡುವಾಗ ಸಾಹಿತಿಗಳನ್ನು, ಸಾಹಿತ್ಯವನ್ನು ಕುರಿತ ಸುದ್ದಿಗಳ ಭಾಗವು ಆ ಕಾಲದ ಸಾಹಿತ್ಯರಂಗದ ಚರಿತೆಯ ನಾಟ್ಯೀಕರಣದ ಹಾಗೆ ಕಂಡರೆ, ನೊಂದವರ ಬದುಕಿನ ಚಿತ್ರಗಳು ಭಾವ ಮಿಡಿವ ಕಿರುಗತೆಗಳಂತೆ, ಬದುಕಿನ ಕಿರುನಾಟಕಗಳಂತೆ ಮನಸ್ಸಿಗೆ ಮುಟ್ಟುವಂತೆ ರಚಿತವಾಗಿರುವುದನ್ನು ಕಾಣಬಹುದು. ಇದು ಅಂಕಣ ಬರಹವಾದರೂ ಇದರೊಳಗಿರುವ ಜೀವನಚಿತ್ರಣ ಸೃಜನಶೀಲ ರಚನೆಯಷ್ಟೇ ಆಸಕ್ತಿಯದಾಯವೆನಿಸುತ್ತದೆ.

’ಸುದ್ದಿ-ಕನ್ನಡಿ’ ಅಂಕಣ

ಬದಲಾಯಿಸಿ

’ಸುದ್ದಿ-ಕನ್ನಡಿ’(2002) ಕೂಡ ಅಂಕಣ ಬರಹಗಳ ಸಂಕಲನವೇ, ಆದರೆ ಇದರ ಸ್ವರೂಪ ಲಕ್ಷಣಗಳು, ವಿಷಯಗಳು ನಾಡಿನ ಸಾಂಸ್ಕೃತಿಕ ಬದುಕಿನಲ್ಲಿ ಹಾಸು ಹೊಕ್ಕಾಗಿ ಎದ್ದು ತೋರುವ ರಾಜಕೀಯದ ನಾನಾ ಮುಖಗಳ ಮೇಲೆ ಫೋಕಸ್ ಆಗಿರುತ್ತವೆ. ಇಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಗಳಿಂದ ವಾಸ್ತಾವಂಶಗಳನ್ನು ಬಯಲಿಗೆ ತರುವ ಯತ್ನವು ಪ್ರಧಾನವಾಗಿದ್ದು, ವಿಜಯಾ ಅವರ ಲೇಖಿನಿ ಕೂಡ ಎಷ್ಟು ಹರಿತವೂ ಮೊನಚೂ ಆಗಬಲ್ಲದು ಎಂಬುದರ ಪರಿಚಯ ನಮಗೆ ಆಗುತ್ತದೆ. ’ಸುದ್ದಿ-ಕನ್ನಡಿ’ಯ ಪ್ರತಿಯೊಂದು ಲೇಖನವೂ ನಮ್ಮ ಸಾಂಸ್ಕೃತಿಕ ಕ್ಷೇತ್ರಗಳಾದ ವಿಶ್ವವಿದ್ಯಾಲಯ, ರಂಗಭೂಮಿ, ಫಿಲಂ ಚೇಂಬರ್, ಒಕ್ಕೂಟಗಳು, ಮಾತ್ರವಲ್ಲದೆ ಇವುಗಳಲ್ಲಿ ತೊಡಗಿರುವ ಬುದ್ಧಿಜೀವಿಗಳು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು, ರಾಜಕೀಯ ಮುಖಂಡರು ಹೊತ್ತುಕೊಳ್ಳುವ ಮುಖವಾಡಗಳು, ಎಲ್ಲೆಲ್ಲೂ ತುಂಬಿರುವ ಹೊಲಸು ರಾಜಕೀಯ ಆಷಾಢಭೂತಿತನ, ಭಟ್ಟಂಗಿತನಗಳನ್ನು ಬೆಳಕಿಗೆ ತರುವ ಆಶಯದಿಂದ ಕೂಡಿರುತ್ತದೆ. ದಲಿತ-ಬಂಡಾಯ ಚಳವಳಿ ನಾಡಿನಲ್ಲಿ ಪ್ರಚಲಿತಗೊಳಿಸಿದ್ದ ತೀವ್ರವಾದ ರಾಜಕೀಯಪ್ರಜ್ಞೆ ಈ ಲೇಖನಗಳಲ್ಲೂ ಪ್ರತಿಧ್ವನಿಸುತ್ತದೆ. ಈ ಚಳವಳಿಯಲ್ಲಿ ವಿಜಯಾ ಸ್ವತಃ ಭಾಗವಹಿಸಿದ್ದವರು ಎಂಬುದನ್ನು ಅವು ನೆನಪಿಸುತ್ತವೆ. ಸಾಮಾಜಿಕ ಭ್ರಷ್ಟತನ, ಕೊಳಕು ರಾಜಕೀಯಗಳ ಶುದ್ಧೀಕರಣಕ್ಕಾಗಿ ಜನತೆಯಲ್ಲಿ ಎಚ್ಚರ ಮೂಡಿಸುವುದೂ ಪ್ರಮುಖ ಅಸ್ತ್ರವೆನ್ನುವ ಎಲ್ಲಾ ಕಾಲದ ಪ್ರಗತಿಪರ ಆಶಯಕ್ಕೆ ಕನ್ನಡಿ ಹಿಡಿಯುತ್ತದೆ ಈ ’ಸುದ್ದಿ-ಕನ್ನಡಿ’. ಸಾಹಿತಿಯಾಗಿ, ವಿಚಾರವಂತ ಮಹಿಳೆಯಾಗಿ ವಿಜಯಾ ಭಾಗವಹಿಸಿರಬಹುದಾದ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ ಅವರು ಮಂಡಿಸಿದಂಥ ಪ್ರಬಂಧಗಳು, ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದಂಥ ವೈಚಾರಿಕ ಲೇಖನಗಳನ್ನು ’ಸಂಕುಲ’ (1989) ಹಾಗೂ ’ನಿಜಧ್ಯಾನ’(2005) ಸಂಕಲನಗಳಲ್ಲಿ ಕಾಣಬಹುದು. ಈ ಸ್ವತಂತ್ರ ಬರಹದ ಲಕ್ಷಣಗಳನ್ನೂ ಅಂಕಣ ಬರಹಗಾರಿಕೆಗೆ ಬಳಸುವ ಅಪರೂಪದ ಪ್ರಯೋಗವೊಂದನ್ನೂ ವಿಜಯಾ ತಮ್ಮ ಆರಂಭ ಕಾಲದ ಕೃತಿ ’ಸಣ್ಣಕತೆಯ ಸೊಗಸು’ (1975)ವಿನಲ್ಲೇ ನಡೆಸಿದ್ದರು. ಕನ್ನಡಕ್ಕೆ ಹೊರಗಿನಿಂದ ಬಂದ ಸಣ್ಣಕತೆಯ ಪ್ರಕಾರ ದೇಸಿಗುಣಗಳನ್ನು ಮೈಗೂಡಿಸಿಕೊಂಡೇ ಬೆಳೆದಿದೆ. ಈ ರಚನಾ ಪ್ರಕಾರದ ಸ್ವರೂಪ, ಲಕ್ಷಣ, ಅದರ ರಚನೆಯ ಕ್ರಮ, ವಸ್ತು, ನಿರೂಪಣಾತಂತ್ರ ಮುಂತಾದ ಸೃಜನಶೀಲ ಅಭಿವ್ಯಕ್ತಿಯ ಪರಿಕರಗಳನ್ನು ಕುರಿತು ಸರಳವೂ, ಲಲಿತವೂ, ನೇರವೂ ಆದ ಶೈಲಿಯಲ್ಲಿ ನಿರೂಪಿಸುತ್ತಾ, ಹಲವಾರು ಲೇಖಕ-ಲೇಖಕಿಯರ ಕತೆಗಳ ವಿಶ್ಲೇಷಣೆಯ ಮೂಲಕ ವಿಮರ್ಶೆಯನ್ನೂ ಸಾಧಿಸುವ ಯತ್ನ ಇಲ್ಲಿದೆ.

ಸೊಗಸು ಶೈಲಿ

ಬದಲಾಯಿಸಿ

ಪತ್ರಿಕಾ ಬರಹಕ್ಕಿರುವ ಸಂವಹನ ಶಕ್ತಿಯನ್ನು ಸಾಹಿತ್ಯಮೀಮಾಂಸೆಗೂ ಬಳಸುವ ಈ ಪ್ರಯತ್ನದಲ್ಲಿ ಹೊಸದಾಗಿ ಕತೆ ಬರೆಯಲು ಬಯಸುವ ಯುವ ಜನರಿಗಾಗಿ ಒಂದು ಮಾರ್ಗದರ್ಶಕ ಕೈಪಿಡಿಯ ಲಕ್ಷಣಗಳಿವೆ. ಚೆನ್ನಾಗಿ ಓದಿಸಿಕೊಳ್ಳುವ ಗುಣದಿಂದಾಗಿ ಸಾಮಾನ್ಯ ಸಾಹಿತ್ಯದ ಓದುಗರೂ ಇದರಿಂದ ತಮ್ಮ ಓದಿನ ತಿಳಿವನ್ನು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಒಂದು ಲೇಖನಮಾಲೆಯಾಗಿ ಮೊದಲು ಇದು ಪತ್ರಿಕೆಯಲ್ಲಿ ಪ್ರಕಟವಾದಾಗ ಅಪಾರವಾದ ಲೋಕಪ್ರಿಯತೆ ಅದಕ್ಕೆ ದೊರೆಯಿತು. ಓದುಗರು ವಿಮರ್ಶೆಯ ಪುಸ್ತಕವೊಂದನ್ನು ಓದುತ್ತಿದ್ದೇವೆ ಎಂಬ ತಲೆಭಾರವನ್ನು ಅನುಭವಿಸದ ಹಾಗೆ ಭಾಷೆಯ ಲಾಲಿತ್ಯವನ್ನು ಪರಿಭಾಷೆಗೂ ಲೇಪಿಸಿದ ಈ ರಚನೆ ವಿಜಯಾ ಅವರ ’ಸೊಗಸು-ಶೈಲಿ’ಯ ಕಟ್ಟೋಣವೆಂದೇ ಇಂದಿಗೂ ತೋರುತ್ತದೆ. ಮಹಿಳೆಯ ಬರಹದ ಭಾಷೆಯನ್ನು ಚರ್ಚಿಸಲಾಗುವ ಈ ದಿನಗಳಲ್ಲಿ ವಿಜಯಾ ಅವರ ಈ ಕೃತಿಯನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಈ ಕೃತಿ ಹೊರಬಂದ ಕಾಲಕ್ಕೆ ಕನ್ನಡಲ್ಲಿ ನವ್ಯ ಸಾಹಿತ್ಯ ವಿಮರ್ಶೆಯ ಭರಾಟೆ ಇತ್ತು. ವಿಮರ್ಶೆ ಎಂದರೆ ಕ್ಲಿಷ್ಟವಾದ ಪರಿಕಲ್ಪನೆಗಳನ್ನು ಅಷ್ಟೇ ಕ್ಲಿಷ್ಟವಾದ ಪರಿಭಾಷೆಯಲ್ಲಿ ಕಟ್ಟುವ, ಶಾಬ್ದಿಕ-ಬೌದ್ಧಿಕತೆಯ ಒರೆಗಲ್ಲಿನಲ್ಲಿ ಕೃತಿಯೊಂದನ್ನು ತಿಕ್ಕೆ ಒರೆಹಚ್ಚುವುದು ಎನ್ನುವುದೇ ಆಗ ಒಪ್ಪಿತವಾಗಿದ್ದ ಮುಖ್ಯ ವಿಚಾರಧಾರೆ. ಅಂಥ ಹೊತ್ತಿನಲ್ಲಿ ಒಳ್ಳೆಯ ಸುಗಮ ಸಂಗೀತದಂತೆ ಓದುಗರ ಹೃದಯದ ಭಾವಗಳನ್ನೇ ಮುಟ್ಟಿ ಎಚ್ಚರಿಸುವ ಆರ್ದ್ರತೆಯುಳ್ಳ ಭಾಷೆಯಲ್ಲಿ ಸಾಹಿತ್ಯಮೀಮಾಂಸೆ ನಡೆಸಿ ಅಂದಿನ ವಿಮರ್ಶಾ ಮಾನದಂಡಗಳಿಗೇ ಸವಾಲು ಒಡ್ಡಿದ್ದರು. ವಿಜಯಾ ’ಸಣ್ಣಕತೆಯ ಸೊಗಸ’ನ್ನು ತಿಳಿಯಹೇಳಿದ ಭಾಷೆಯಲ್ಲಿಯೇ ಇಂದಿನ ಅನೇಕ ಲೇಖಕಿಯರು ಪತ್ರಿಕಾ ಅಂಕಣಗಳನ್ನು ಬರೆಯುವುದನ್ನು ಕಾಣಬಹುದು. ಈ ಬಗೆಯ ಬರಹದ ಬಲುದೊಡ್ಡ ಶಕ್ತಿ ಎಂದರೆ ಅದರ ಸಂವಹನ ಸಾಧ್ಯತೆಯದು. ಬಹುಬೇಗ ಅದು ವಿಶಾಲವಾದ ಓದುಗ ವೃಂದಕ್ಕೆ ತಲಪಿಬಿಡುತ್ತದೆ. ಆದರೆ ಈ ಲಾಲಿತ್ಯವೇ ಅತಿರೇಕಕ್ಕೆಹೋದರೆ ವೈಚಾರಿಕತೆಯ ಕೊರತೆಯಿಂದ ಬರಹ ಕುಸಿಯುವುದೂ ಸಾಧ್ಯ. ಈ ಶಕ್ತಿ-ಮಿತಿಗಳ ನಡುವೆ ಸಮತೋಲನವನ್ನು ಸಾಧಿಸಿರುವುದು ವಿಜಯಾ ಅವರ ಕೃತಿಯ ಹೆಗ್ಗಳಿಕೆ, ಈ ಅಂಶವನ್ನು ಆ ಕೃತಿಗೆ ಮುನ್ನುಡಿ ಬರೆದಿರುವ ಡಾ. ಯು.ಆರ್. ಅನಂತಮೂರ್ತಿಯವರು ಹೀಗೆ ಸೂಚಿಸುತ್ತಾರೆ: "ಗಂಟುಗಂಟಾಗಿ ವಿಮರ್ಶೆ ಬರೆಯುವುದು ಅಭ್ಯಾಸವಾದ ನನಗೆ, ಸರಳವಾಗಿ ಬರೆದೂ ಗಾಢವಾದ ವಿಶ್ಲೇಷಣೆಯಾಗಬಲ್ಲ ವಿಮರ್ಶೆಯ ಒಲಿಸಿಕೊಳ್ಳಬಲ್ಲ ಸಜ್ಜನಿಕೆ ಅತ್ಯಂತ ಕಷ್ಟವಾದ್ದು ಎನಿಸಿದೆ. ಯಾರಾದರೂ ಕನ್ನಡದಲ್ಲಿ ಇದನ್ನು ಮಾಡಬಲ್ಲವರಿದ್ದರೆ ಪತ್ರಿಕೋದ್ಯಮದ ಜೊತೆ ನಿಕಟ ಸಂಬಂಧವಿರುವ ನಿಮ್ಮಂಥವರು ಎಂದು ನನ್ನ ಭಾವನೆ." ವಿಜಯಾ ಅವರು ನಡೆಸಿದ ಈ ವಿಮರ್ಶಾಪ್ರಯೋಗ ಒಂದು ಚಾರಿತ್ರಿಕ ಯತ್ನವಾಗಿ ಇಂದಿಗೂ ಕುತೂಹಲ ಹುಟ್ಟಿಸುತ್ತದೆ.

ಅಲ್ಲಿಂದ ಮುಂದಿನ ದಶಕಗಳಲ್ಲಿ ವಿಜಯಾ ಅವರ ಬರವಣಿಗೆಯಲ್ಲೂ ಬದಲಾವಣೆಗಳು ಆಗಿರುತ್ತವೆ. ಕಾಲ, ಸಾಂಸ್ಕೃತಿಕ ಸಂದರ್ಭಗಳಿಗೆ ಹಾಗೂ ವಿಷಯಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ಸಾಕಷ್ಟು ಪರಿವರ್ತನೆ ಆಗಿರುವುದನ್ನು ಅವರ ಅಂಕನ ಬರಹಗಳಲ್ಲೇ ಕಂಡಿರುತ್ತೇವೆ. ಹಾಗೆ ಹೊಸ ವಿಚಾರ, ಹೊಸ ಸಂವೇದನೆಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ವಿಜಯಾ, ಬರಹವನ್ನು ಎಂದೂ ನಿಂತ ನೀರಾಗಲು ಬಿಟ್ಟಿವರಲ್ಲ. ಈ ಅಂಶವನ್ನು ಚೆನ್ನಾಗಿ ತೋರಿಸುವ ಮತ್ತೊಂದು ಮುಖ್ಯ ಕೃತಿ ’ನಿಜಧ್ಯಾನ(2005). ಈ ಕೃತಿಯಲ್ಲಿ ಮೊದಲ ಬಾರಿಗೆ ವಿಜಯಾ ಅವರ ಅಂತರ್ಮುಖತೆ, ಧ್ಯಾನಸ್ಥ ಮನದ ಗತಿಯೇ ಮುಖ್ಯವಾಗಿ ಚಿಂತನೆಗಳನ್ನು ಮುನ್ನಡೆಸುತ್ತದೆ. ಅಲ್ಲದೆ ಸ್ತ್ರೀಪರವಾದ ವಿಚಾರಗಳನ್ನು ಹೊಂದಿರುವ ಲೇಖನಗಳೇ ಇಲ್ಲಿ ಸಂಕಲಿತವಾಗಿರುತ್ತವೆ. ಮಹಿಳಾ ಚಳವಳಿ ಕನ್ನಡಕ್ಕೆ ಹೊಸದಾಗಿದ್ದರೂ ಹುಟ್ಟು ಬಂಡಾಯದ ಸ್ವಭಾವವಿರುವ ಮಹಿಳೆಯಾಗಿ ವಿಜಯಾ ಅವರಿಗೆ ಅದೂ ಒಳಗಿನ ಸ್ಪಂದನೆಯೇ ಆಗಿತ್ತು. ಮಹಿಳೆಯರ ದಮನಿತ/ಶೋಷಿತ ಪರಿಸ್ಥಿತಿಗಳು ಇರುವ ಹಾಗೆ, ಅವರ ಒಳಗಿನ ಬಲ-ಶಕ್ತಿಗಳ ನೆಲೆಗಳೂ ನಮ್ಮ ಸಮಾಜದಲ್ಲಿ ಇದ್ದೇ ಇರುತ್ತವೆ. ಆದ್ದರಿಂದ ವ್ಯಕ್ತಿಯಾಗಿ ಸ್ವತಂತ್ರವೂ ಸ್ವಾಯತ್ತವೂ ಆದ ಬದುಕನ್ನು ಬದುಕಲು ಮಹಿಳೆಗೆ ಎಲ್ಲಾ ಅವಕಾಶಗಳು ಅವಶ್ಯಕವಾಗಿ ಸಿಕ್ಕಬೇಕೆನ್ನುವುದೇ ವಿಜಯಾ ಇಲ್ಲಿನ ಲೇಖನಗಳಲ್ಲಿ ಮಾಡುವ ಹಕ್ಕೊತ್ತಾಯವಾಗಿರುತ್ತದೆ. ’ಭಾರತೀಯ ನಾರಿ’ ಹೊಕ್ಕು ಬಂದ ಪರೇಕ್ಷೆಗಳು, ಪಟ್ಟ ಬವಣೆಗಳಿಂದ ಹಿಡಿದು ಲಲ್ಲೇಶ್ವರಿಯಂಥ ಸಂತಕವಿ ಕಂಡುಕೊಂಡ ವಿಮೋಚನೆಯವರೆಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಮಹಿಳೆಯರ ಬಲಿದಾನದ ಪ್ರಶಸ್ತಿಯ ಮರೆಯಲ್ಲಿ ದೌರ್ಜನ್ಯ ಅತ್ಯಾಚಾರಗಳ ಕರಿನೀರಿನ ಶಿಕ್ಷೆಯಿಂದ ಹಿಡಿದು ರಂಗಕಲಾವಿದೆ ಬಿ. ಜಯಶ್ರೀ ಅವರ ಮನಬಿಚ್ಚಿದ ಮಾತುಕತೆಯವರೆಗೆ ಬಗೆಬಗೆಯಾದ ಸ್ತ್ರೀ ಬದುಕಿನ ಸನ್ನಿವೇಶಗಳು ಇಲ್ಲಿ ಚಿತ್ರಗಳಂತೆ ಸಾಗುತ್ತವೆ. ಚಿಂತನೆ ಹಾಗೂ ಬರದ ಸೊಗಸು ಎರಡೂ ಕೈ ಜೋಡಿಸಿರುವ ಪ್ರಬುದ್ಧವಾದ ರಚನೆಗಳುಳ್ಳ ’ನಿಜಧ್ಯಾನ’ ನಿಜವನ್ನು ಶೋಧಿಸುವ ಮನದ ಧ್ಯಾನ ಹೇಗೋ ಹಾಗೆ ತನ್ನನ್ನೇ ಶೋಧಿಸಿಕೊಳ್ಳುವ ಯತ್ನವೂ ಆಗಿದೆ ಲೇಖಕಿಗೆ.

  • * *

ಪತ್ರಿಕಾರಂಗ ವಿಜಯಾ ಅವರ ವೃತ್ತಿಯಾಗಿ ಬದುಕನ್ನು ರೂಪಿಸಿದ್ದರೆ ರಂಗಭೂಮಿ ಅವರ ಪ್ರವೃತ್ತಿಯಾಗಿದ್ದು ಬದಕನ್ನು ಅರಿಯುವ, ಅರ್ಥೈಸಿಕೊಳ್ಳುವ ಅಂತಃಪ್ರಜ್ಞೆಯನ್ನು ರೂಪಿಸಿತು. ತಮ್ಮ ಬಾಲ್ಯದಿಂದಲೂ ಸೋದರಮಾವ ಚಿಕ್ಕಜಾಜೂರು ನಾಗರಾಜ್ ಅವರಿಂದ ರಂಗಭೂಮಿಯ ಬಗ್ಗೆ ಒಲವನ್ನು ವಿಜಯಾ ಬೆಳೆಸಿಕೊಂಡಿದ್ದರು. ಆಗ ಕಲಿತ ರಂಗಗೀತೆಗಳನ್ನು ಇನ್ನೂ ಮರೆತಿಲ್ಲ. ಎಲ್ಲಿಯೇ ನಾಟಕಗಳು ಪ್ರದರ್ಶಿತವಾದರೂ ಹೋಗಿ ನೋಡಿಯೇತೀರುವ ಅದಮ್ಯ ಆಸಕ್ತಿ ಅವರದು. ಇಂಥ ರಂಗಾಸಕ್ತಿಯೇ ಅವರನ್ನು ಕ್ರಿಯಾತ್ಮಕವಾದ ರಂಗಸೇವೆಗೂ ಸೆಳೆದಿರುತ್ತದೆ. ವಿಜಯಾ ಅವರ ಸಾಧನೆಗಲು ಯಾವ ಕ್ಷೇತ್ರದ್ದಾಗಿದ್ದರೂ ಅದರಲ್ಲಿ ಅವರ ಕ್ರಿಯಾಶೀಲ ತೊಡುಗುವಿಕೆಗೇ ಪ್ರಥಮ ಆದ್ಯತೆ. ಅದರ ಸಾಹಿತ್ಯಕ ದಾಖಾಲಾತಿಗೆ ಅಂಥ ಸ್ಥಾನವಿಲ್ಲ.

ಬೊಂಬೆಯಾಟ

ಬದಲಾಯಿಸಿ

ಎಪ್ಪತ್ತರ ದಶಕದ ಆರಂಭದಲ್ಲಿ ರಾಷ್ಟ್ರೀಯ ನಾಟಕಶಾಲೆಯಲ್ಲಿ ’ಪಪೆಟ್ ಶೋ’ ಬಗ್ಗೆ ತರಬೇತಿ ಪಡೆದು ಬಂದಿದ್ದ ಎ.ಎಲ್. ಶ್ರೀನಿವಾಸಮೂರ್ತಿಯವರ ಪರಿಚರ ವಿಜಯಾಗೆ ಆಯಿತು. ಹೊಸ ಕಾಲಕ್ಕೆ ತಕ್ಕಂಥ ರೀತಿಯಲ್ಲಿ ಈ ಸೂತ್ರದ ಬೊಂಬೆಯಾಟವನ್ನು ಆಧುನಿಕಗೊಳಿಸಿ, ಸಂಪೂರ್ಣ ಮಹಿಳೆಯರ ತಂಡವನ್ನು ಕಟ್ಟಲು ಆಶಿಸಿದರು. ಅಂಥ ನಾಟಕಗಳನ್ನು ಆಡಿಸುವ ಪ್ರಯತ್ನಕ್ಕೆ ಕೈ ಹಾಕಿದ ವಿಜಯಾ ಹಲವಾರು ಮಹಿಳೆಯರನ್ನು ಒಗ್ಗೂಡಿಸಿ ತಿಂಗಳುಗಟ್ಟಲೆ ಬೊಂಬೆಯಾಟದ ತಂತ್ರದ ತರಬೇತಿ ಒದಗಿಸಿ ’ಪಪೆಟ್ ಲ್ಯಾಂಡ್’ ಎಂಬ ಒಂದು ತಂಡವನ್ನು ಕಟ್ಟಿದರು. ಗಿರೀಶ್ ಕಾರ್ನಾಡರ ಪ್ರಸಿದ್ಧವಾದ ’ಮಾನಿಷಾದ’ ನಾಟಕ, ಗಿರಡ್ಡಿ ಗೋವಿಂದರಾಜ ಅವರ ’ಕನಸುಗಳು’ ಎಂಬ ಸಣ್ಣಕಥೆಗಳನ್ನು ಬೊಂಬೆಯಾಟಕ್ಕೆ ಅಳವಡಿಸಿ ಪ್ರಯೋಗಿಸಿದರು. ಈ ರಂಗಪ್ರಯೋಗಗಳು ಎಷ್ಟು ಯಶಸ್ವಿಯಾದವೆಂದರೆ ಆ ’ಪಪೆಟ್ ಲ್ಯಾಂಡ್’ ತಂಡದವರು ಕರ್ನಾಟಕದಾದ್ಯಂತ ಪ್ರಯಾಣಮಾಡಿ ನಾಟಕಗಳನ್ನು ಪ್ರದರ್ಶಿಸಲು ಐದಾರು ವರ್ಷಗಳ ಕಾಲ ವಿಜಯಾ ತಾವೇ ಅದಕ್ಕೆ ಸಹಾಯ ಹಾಗೂ ಸಹಕಾರವನ್ನು ಒದಗಿಸಿದ್ದರು. ಆವರೆಗೆ ಜನಪದ ಕಲಾಪ್ರಕಾರವಾಗಿ ಮಾತ್ರ ಉಳಿದು ಬಂದಿದ್ದು ಜನಪದ ಹಾಗೂ ಪೌರಾಣಿಕ ವಸ್ತುಗಳಲ್ಲೇ ಹಳತಾಗಿದ್ದ ಈ ಕಲೆಯನ್ನು ಹೊಸಕಾಲಕ್ಕೆ ಒಗ್ಗಿಸಿ, ಮರುಜೀವ ಕೊಟ್ಟಿದ್ದು ಹಾಗೂ ಅನೇಕ ಹೆಣ್ಣುಮಕ್ಕಳು ಈ ಕಲೆಯನ್ನು ಕಲಿಯುವಂತೆ ಪ್ರೇರಿಪಿಸಿದ್ದು ವಿಜಯಾ ಅವರ ಸಾಹಸಪರತೆ ಹಾಗೂ ಸಂಘಟನಾತ್ಮಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಬೀದಿ ನಾಟಕ

ಬದಲಾಯಿಸಿ

ಎಪ್ಪತ್ತರ ದಶಕದ ನಡುಭಾಗದಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದಾಗ, ಪ್ರಜಾತಂತ್ರದ ಕೊರಳು ಹಿಸುಕಿದ ಆ ಹೇಯ ಆಡಳಿತ ಕ್ರಮದ ವಿರುದ್ಧ ದೇಶದ ಉದ್ದಗಲಕ್ಕೂ ಬಲವಾದ ಪ್ರತಿಭಟನೆ ಹುಟ್ಟಿ, ನಾನಾ ವಲಗಳು ರಾಜಕೀಯ ಹೋರಾಟಕ್ಕೆ ಹೊರಟ ಸಂದರ್ಭವಿತ್ತು. ರಂಗಭೂಮಿಯ ಮೂಲಕ ನಾಟಕಕಾರರೂ, ಕಲಾವಿದರೂ ಈ ಹೊಸ ರಾಜಕೀಯ ಎಚ್ಚರ ಜನರಲ್ಲಿ ಉಂಟಾಗಲು ಶ್ರಮಿಸಿದರು. ಆ ಕಾಲಕ್ಕೆ ನಾಟಕಗಳನ್ನು ಬೀದಿ ಬೀದಿಗಳಲ್ಲೇ ಅಭಿನಯಿಸುವ ಚಳವಳಿಯೊಂದು ಕನ್ನಡದಲ್ಲೂ ನಡೆಯಿತು. ಇಂಥ ’ಬೀದಿನಾಟಕ’ ಪ್ರಯೋಗವನ್ನು ರಾಜಕೀಯವಾದ ಜನಜಾಗೃತಿಯ ಸಾಧನವಾಗುವಂತೆ ರೂಪಿಸಿ ಬೆಳೆಸಿದವರಲ್ಲಿ ಡಾ.ವಿಜಯಾ ಅವರಿಗೆ ಬಹು ಮುಖ್ಯವಾದ ಸ್ಥಾನವಿದೆ. ಎ.ಎಸ್. ಮೂರ್ತಿಯವರ ಜೊತೆಗೂಡಿ ’ಚಿತ್ರಾ’ ರಂಗತಂಡವನ್ನು ಕಟ್ಟಿ, ಆ ತಂಡದವರ ಅಭಿನಯಕ್ಕಾಗಿಯೇ ವಿಜಯಾ ಅವರು ’ಬಂದರೋ ಬಂದರು’, ಕೇಳ್ರಪ್ಪೋ ಕೇಳಿ’, ’ಮುಖವಿಲ್ಲದವರು’, ’ಕಸಿದವರು’, ’ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ?’, ’ಮಿಲೇ ಸುರ್ ಮೇರಾ ತುಮ್ಹಾರ’ ಮುಂತಾದ ಏಳು ಬೀದಿನಾಟಕಗಳನ್ನು ರಚಿಸಿದರು. ಇವುಗಳಲ್ಲಿ ಮೊತ್ತಮೊದಲು ಅಭಿನಯಗೊಂಡು ನಾಡಿನಾದ್ಯಂತ ಜಯಭೇರಿ ಬಾರಿಸಿದ್ದು ’ಬಂದರೋ ಬಂದರು’ ಎಂಬುದು. ತುರ್ತು ಪರಿಸ್ಥಿತಿಯ ಅವಧಿಯಲ್ಲೇ ಬರೆದದ್ದು ಇದು. ತುಂಬ ಸರಳವಿದ್ದು, ಯಾವ ರಂಗಸಜ್ಜಿಕೆಯಿಲ್ಲದೆ ಬೇದಿಯಲ್ಲಿ ಆಡಲು ಚೆನ್ನಾಗಿ ಒಗ್ಗುವಂತಿದ್ದು ಅತ್ಯಂತ ಜನಪ್ರಿಯವೂ ಆಯಿತು. ನಾಡಿನಾದ್ಯಂತ ಲೆಕ್ಕವಿಲ್ಲದಷ್ಟು ತಂಡಗಳು ಈ ನಾಟಕವನ್ನು ಅಭಿನಯಿಸಿದವು. ಸಾವಿರಾರು ಪ್ರದರ್ಶನಗಳನ್ನು ಕಂಡಿದ್ದ ಈ ನಾಟಕವನ್ನು ಜನರು ತಮಿಳು, ತೆಲುಗು, ಸಂಸ್ಕೃತ ಭಾಷೆಗಳಿಗೂ ತರ್ಜುಮೆ ಮಾಡಿಕೊಂಡು ಅಭಿನಯಿಸಿದರು.

ಡಾ. ವಿಜಯಾ ಅವರ ರಂಗಭೂಮಿಯ ಸಾಧನೆಯನ್ನು ಚಾರಿತ್ರಿಕವಾಗಿ ಗುರುತಿಸುವುದು ಸಾಮಾನ್ಯವಾಗಿ ಈ ಬೀದಿನಾಟಕಗಳ ಮೂಲಕವೇ ಎಂಬುದು ರೂಢಿಯಾಗಿದೆ. ಈಗ ಮತ್ತೆ ಪರಿಶೀಲಿಸಿದರೆ ಅವರ ಒಂದೊಂದು ಬೀದಿನಾಟಕವೂ ನಿಸ್ಚಿತವಾದ ರಾಜಕೀಯ ಸಂದೇಶವೊಂದನ್ನು ಜನತೆಗೆ ಮುಟ್ಟಿಸುವುದಕ್ಕೆಂದೇ ರಚಿತವಾದವು ಎಂಬುದನ್ನು ಕಾಣಬಹುದು. ದೇವಸ್ಥಾನ ಕಟ್ಟಿಸುವುದಾಗಿ ಹೇಳುತ್ತಾ ಬಡವರು, ಸಿರಿವಂತರು ಎಂಬ ಭೇದವಿರದೆ ಜನತೆಯಿಂದ ಕಾಣಿಕೆ ಸ್ವೀಕರಿಸುತ್ತಾ, ಶೋಷಿಸುತ್ತಾ, ಲೂಟಿಮಾಡುತ್ತಾ ಮೆರೆಯುವ ಭ್ರಷ್ಟ ರಾಜಕೀಯ ಮುಖಂಡರ ಸಮಾಜಸೇವೆಯ ವಿಡಂಬನೆ ’ಬಂದರೋ ಬಂದರು’ ನಾಟಕದ ವಸ್ತುವಾದರೆ, ’ಕೇಳ್ರಪ್ಪೋ ಕೇಳ್ರಿ’ ಸಾಮಾನ್ಯ ಜನರಲ್ಲ್ ಮುಖಂಡರ ಆಷಾಢಭೂತಿತನದ ಬಗ್ಗೆ ಎಚ್ಚರಿಸಿ, ಅವರು ತಮ್ಮ ಹಕ್ಕುಗಳಿಗಾಗಿ ತಾವೇ ಹೋರಾಡಲು ಪ್ರೇರಿಪಿಸುತ್ತದೆ. ’ಮುಖವಿಲ್ಲದವರು’ ತೋಳ ರಾಜಕಾರಣಿಗಳ ಬಗ್ಗೆ ಕುರಿಗಳಂತಿರುವ ಪ್ರಜೆಗಳನ್ನು ಎಚ್ಚರಿಸುವ ನಾಟಕವಾದರೆ, ’ಕಸಿದವರು’ ಭೂಸುಧಾರಣೆಯ ಕಾನೂನಿನ ದುರುಪಯೋಗದ ವ್ಯವಸ್ಥೆಯಲ್ಲಿ ಭೂಹೀನರಾದವರ ದುರವಸ್ಥೆಯನ್ನು ಕೇಂದ್ರವಾಗಿಸಿಕೊಂಡಿರುತ್ತದೆ. ’ಎಲ್ಲೆದ್ದೇವೆ ನಾವು ಎಲ್ಲಿದ್ದೇವೆ?’ ನಾಟಕ ಈ ಬೀದಿನಾಟಕಗಳ ನಡುವೆ ಕುತೂಹಲ ಹುಟ್ಟಿಸುವಂತಿದೆ.

1980ರಷ್ಟು ಹಿಂದೆಯೇ ರಚಿತವಾದ ಈ ನಾಟಕ ಲಿಂಗತಾರತಮ್ಯದ ವಿರುದ್ಧವಾಗಿ ಪ್ರತಿಭಟಿಸುವ ಆಶಯವುಳ್ಳದ್ದು. ಸ್ತ್ರೀವಾದಿ ಚಿಂತನೆಯ ವಸ್ತುವುಳ್ಳ ಈ ನಾಟಕವು ಮಹಿಳೆಯರಿಗೆ ತಮ್ಮ ಸ್ಥಿತಿಯ ಬಗ್ಗೆ ಎಚ್ಚರ ಮೂಡಿಸುವ ಯತ್ನ ಮಾಡುತ್ತದೆ. ಒಂದು ರೀತಿಯಲ್ಲಿ ಆ ಕಾಲಕ್ಕೆ ಡಾ. ವಿಜಯಾ ದಬ್ಬೆ ತಮ್ಮ ಕಾವ್ಯದ ಮೂಲಕ, ’ಅಚಲಾ’, ’ಮಾನಸ’ ಮಹಿಳಾ ಪತ್ರಿಕೆಗಳು ಹೋರಾಟದ ತಾತ್ವಿಕ ಚಿಂತನೆಗಳ ಮೂಲಕ ಮಹಿಳೆಯರಲ್ಲಿ ಯಾವ ಸ್ವಾಭಿಮಾನ, ಅಸ್ಮಿತೆಯ ಎಚ್ಚರ ಮೂಡಿಸುತ್ತಿದ್ದವೋ ಅಂಥದ್ದೇ ಉದ್ದೇಶದಿಂದ ಡಾ. ವಿಜಯಾ ಈ ಬೀದಿನಾಟಕಗಳನ್ನು ರಚಿಸಿದ್ದುದನ್ನು ಗಮನಿಸಬೇಕು. ವಿಜಯಾ ಬರೆದ ಬೀದಿನಾಟಗಳು ಪುರುಷರು ಪರೆದಿರುವುದಕ್ಕಿಂತ ಏನೂ ಭಿನ್ನವಲ್ಲ ಎನ್ನುವವರು ಈ ನಾಟಕವನ್ನು ಗಮನಿಸಬೇಕು.

ದುಡಿವವರ ಪರವಾಗಿ

ಬದಲಾಯಿಸಿ

ಹಾಗೆ ನೋಡಿದರೆ ಅಂದಿನಿಂದ ಇಂದಿನವರೆಗೂ ಡಾ. ವಿಜಯಾ ಅವರು ಸ್ತ್ರೀವಾದವನ್ನು ನಮ್ಮ ಜನತೆಗಾಗಿ ಅರ್ಥೈಸುತ್ತಾ ಬಂದಿರುವ ವಿಧಾನ ಯಾವುದು, ಈ ತಾತ್ವಿಕತೆಯ ಬಗ್ಗೆ ಅವರ ನಿಲುವು ಏನು ಎಂಬುದನ್ನು ಈ ನಾಟಕದ ಸಂದರ್ಭದಲ್ಲೇ ಪ್ರಸ್ತಾಪಿಸಲು ಸಾಧ್ಯವಿದೆ. ಗಂಡಾಳ್ತನದ ವ್ಯವಸ್ಥೆಯೊಳಗೆ ಮಹಿಳೆಯರು ಬಹುವಾಗಿ ದಮನಿತರು, ಶೋಷಿತರು ಎಂಬುದು ಒಂದು ವಾಸ್ತವವೇ. ಆದರೆ ಪುರಷರೆಲ್ಲರೂ ಎಲ್ಲ ಕಾಲಕ್ಕೂ ಶೋಷಿತರೇ ಆಗಿರುತ್ತಾರೆಂದೇನೂ ಅಲ್ಲ. ಅವರೂ ಅದೇ ವ್ಯವಸ್ಥೆಯಿಂದಾಗಿ ಮೊಟುಕುಗೊಂಡ ಅಂತಃಕರಣದಿಂದಾಗಿ ದೌರ್ಜನ್ಯವನ್ನು ಮೀಸೆಯ ಹಾಗೆ ಮುಖದ ಮೇಲೆ ಏರಿಸಿಕೊಂಡಿರುತ್ತಾರೆ ಎನ್ನುವುದೂ ವಾಸ್ತವವೇ. ಆ ವ್ಯವಸ್ಥೆಯೇ ಅಧಿಕಾರ ಸಂಬಂಧಗಳಲ್ಲಿ ಕಟ್ಟಿಬೆಳೆಸಿದ್ದಾಗಿದ್ದು, ಅಧಿಕಾರ, ಸಂಪತ್ತು ಹಾಗೂ ಯಜಮಾನಿಕೆಯ ಅವಕಾಶ ದೊರೆತಾಗ ಮಹಿಳೆಯರೂ ಪುರಷರಷ್ಟೇ ಕ್ರೌರ್ಯ, ಶೋಷಕತನಗಳನ್ನು ದುರ್ಬಲರ ಮೇಲೆ ತೋರಬಲ್ಲರು, ಎನ್ನುವುದು ಈ ವ್ಯವಸ್ಥೆಯದೇ ಇನ್ನೊಂದು ವ್ಯಂಗ್ಯ. ಅದೇ ರೀತಿ ಎಲ್ಲ ದಮನಗಳ ನಡುವೆಯೂ ಮಹಿಳೆಯರು ತಮ್ಮದೇ ಒಳಗಿರುವ ಶಕ್ತಿ ಸಾಮರ್ಥ್ಯ, ಸ್ವಾಭಿಮಾನಗಳಿಂದ ತಮ್ಮ ಅಸ್ಮಿತೆಯನ್ನು ದೃಡಪಡಿಸಿಕೊಳ್ಳಲು, ಅದಕ್ಕಾಗಿ ಶ್ರಮಿಸಲು ಕೆಲವು ತಾಣಗಳೂ ಇದೇ ವ್ಯವಸ್ಥೆಯಲ್ಲಿ ಇರುತ್ತವೆ ಎನ್ನುವ ಹಲವು ಸಾಂಸ್ಕೃತಿಕ ವಾಸ್ತಾವಂಶಗಳ ಅರಿವಿನಿಂದ ವಿಜಯಾ ತಮ್ಮ ಸ್ತ್ರೀವಾದದ ತಾತ್ವಿಕತೆಯನ್ನು ರೂಪಿಸಿಕೊಂಡಿರುವುದು ಅವರ ಇತರ ಬರವಣಿಗೆಗಳಲ್ಲೂ ಕಂಡುಬರುತ್ತದೆ. ಮಹಿಳೆಯರ ಎಲ್ಲಾ ಸಂಘಟಿತ ಹೋರಾಟಗಳಿಗೆ, ಅವರ ಹೋರಾಟದ ಹಿಂದಿರುವ ಐಡಿಯಾಲಜಿ ಯಾವ ಪಕ್ಷಕ್ಕೆ ಬದ್ಧ ಎಂಬ ಲೆಕ್ಕಾಚಾರ ಮಾಡದೆ ಬೆಂಬಲಿಸಬಲ್ಲ ವಿಜಯಾ, ಎಂದೂ ತಮ್ಮ ನಿಲುವುನಲ್ಲಿ ರಾಜಿ ಮಾಡಿಕೊಂಡದ್ದಿಲ್ಲ. ಅದರಲ್ಲೂ ಸಮಾಜದ ಅತ್ಯಂತ ದುರ್ಬಲ ಸ್ತರಗಳ ಜನರ ಹೋರಾಟ, ಹಕ್ಕೊತ್ತಾಯಗಳಿಗೆ ಅವರ ಬೆಂಬಲ ಸದಾ ಇರುತ್ತದೆ ಎನ್ನುವುದಕ್ಕೆ ಇಂದಿಗೂ ಗಾರ್ಮೆಂಟ್ ಉದ್ಯಮದ ದುಡಿವ ಮಹಿಳೆಯರ ಹೋರಾಟದ ಜೊತೆಗಿರುವ ಅವರ ನಿಲುವೇ ನಿದರ್ಶನ.

ಬೀದಿನಾಟಕಗಳ ವಿಷಯಕ್ಕೆ ಮತ್ತೆ ಬರುವದಾದರೆ, ತುರ್ತು ಪರಿಸ್ಥಿತಿಯ ಒತ್ತಡ ಇಲ್ಲವಾಗಿ ಜನತಂತ್ರದ ವ್ಯವಸ್ಥೆ ಮರುಸ್ಥಾಪಿತವಾಗಿ ಜನಜೀವನ ಸಹಜಗತಿಗೆ ಹಿಂದಿರುಗಿದ ಮೇಲೆ ಬೀದಿನಾಟಕ ಚಳವಳಿ ಕೂಡ ತನ್ನ ಕಾವನ್ನು ಕಳೆದುಕೊಂಡಿತು. ಇದು ಕಾಲಗತಿಯ ಅನಿವಾರ್ಯವೆಂಬುದನ್ನು ವಿಜಯಾ ತಮ್ಮ ’ಬೀದಿನಾಟಕಗಳು' ಸಂಕಲನದ (1996) ಮುನ್ನುಡಿಯಲ್ಲಿ ತಾವೇ ಸೂಚಿಸಿದ್ದಾರೆ: "ಎಲ್ಲ ಚಳವಳಿಗಳ ಹಾಗೆ ಬೀದಿನಾಟಕ ಚಳವಳಿಯೂ ಸಹ ಅವಸ್ಥಾಂತರಗಳ ನಡುವೆ ಜನಪರ/ವಿರೋಧಿ ಧೋರಣೆಗಳನ್ನು ತುಂಬಿಕೊಂಡು ಪ್ರದರ್ಶನಗೊಂಡಿದೆ. ಅದಕ್ಕಿರುವ ಸರಳತೆ ಒಮ್ಮೆ ಗುಣವಾದರೆ ಮತ್ತೊಮ್ಮೆ ಮಾರಕವೂ ಆಗಿದೆ."

ಬೀದಿ ನಾಟಕಕ್ಕೆ ಮಾನ್ಯತೆ

ಬದಲಾಯಿಸಿ

ಇದೇನೇ ಇದ್ದರೂ ’ಬಂದರೋ ಬಂದರು’ ಎಂಬ ಅವರ ಮೊದಲ ನಾಟಕ ಪ್ರಕಟವಾದಾಗ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೀದಿನಾಟಕ ಪ್ರಕಾರವನ್ನು ಪ್ರತ್ಯೇಕವೆಂದು ಮಾನ್ಯ ಮಾಡಿತು. ಆಗ ವರ್ಷದ ಉತ್ತಮ ಕೃತಿಯ ಬಹುಮಾನ ಆ ಅಕಾಡೆಮಿಯಿಂದ ವಿಜಯಾ ಅವರ ಕೃತಿಗೇ ದೊರೆತಿತ್ತು. ಈ ಕ್ಷೇತ್ರಕ್ಕೆ ಅವರು ದುಡಿದ ಬಗೆಗೆ ಜನತೆ ಸಲ್ಲಿಸಿದ ಗೌರವದ್ದೇ ಇನ್ನೊಂದು ರೂಪ ಅದು.

’ಉಳ್ಳವರ ನೆರಳಲ್ಲಿ’, ’ಧನ್ವಂತರಿ ಚಿಕಿತ್ಸೆ’ (ಕುವೆಂಪು ಕಥೆಯ ನಾಟಕರೂಪ) ಎಂಬ ರಂಗನಾಟಕಗಳೂ ವಿಜಯಾ ಅವರಿಂದ ರಚಿತವಾಗಿದ್ದು, ಯಶಸ್ವಿ ರಂಗ ಪ್ರದರ್ಶನಗಳನ್ನೂ ಕಂಡವು. ಆದರೂ ಆ ನಿಟ್ಟಿನಲ್ಲಿ ಏಕೋ ಮುಂದುವರಿಯದೆ ಉಳಿದರು.

’ರಂಗ ಸಾಂಗತ್ಯ’

ಬದಲಾಯಿಸಿ

ರಂಗಭೂಮಿಯೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ವಿಜಯಾ ಅವರು ತಮ್ಮ ಇತ್ತೀಚಿನ ಮಹತ್ವದ ಕೃತಿ ’ರಂಗ ಸಾಂಗತ್ಯ’ (2012)ದಲ್ಲಿ ಸೊಗಸಾಗಿ ನಿರೂಪಿಸುತ್ತಾರೆ. ವಿವಿಧ ವಿಚಾರ ಸಂಕಿರಣಗಳಲ್ಲಿ, ನಾಟೋಕೋತ್ಸವ ವೇದಿಕೆಗಳಲ್ಲಿ, ಸಮ್ಮೇಳನಗಳಲ್ಲಿ ಅವರು ಮಾಡಿದ ಉಪನ್ಯಾಸಗಳು, ಮಂಡಿಸಿದ ಪ್ರಬಂಧಗಳನ್ನು ಇಲ್ಲಿ ಒಗ್ಗೂಡಿಸಿರುತ್ತಾರೆ. ಆಧುನಿಕ ಹವ್ಯಾಸಿ ರಂಗಭೂಮಿಯ ನಿರ್ಮಾಣದ ಮಹಾನ ಆಚಾರ್ಯರಾದ ಶ್ರೀರಂಗರು, ಹೊಸ ಅಲೆಯಲ್ಲಿ ಕಲಾತ್ಮಕ ರಂಗಭೂಮಿಯ ಹಾದಿಯನ್ನು ಪುನಾರಚಿಸಿದ ಬಿ.ವಿ. ಕಾರಂತರು, ಪ್ರಗತಿಪರ ’ಸಮುದಾಯ’ ನಾಟಕ ಚಳವಳಿಯ ಅಧ್ವರ್ಯು ಪ್ರಸನ್ನ ಮೊದಲಾದ ಒಬ್ಬೊಬ್ಬರೊಂದಿಗೂ ಅವರ ರಂಗ ಕ್ರಿಯೆಗಳಲ್ಲಿ ಸಹಕರಿಸಿರುವ ಮೂಲಕ ವಿಜಯಾ ಗಳಿಸಿದ ವ್ಯಾಪಕವಾದ ರಂಗಾನುಭವದ ದರ್ಶನ ಇಲ್ಲಿ ನಮಗೆ ಸಿಗುತ್ತದೆ.
"ಹವ್ಯಾಸಿ ರಂಗಭೂಮಿ ಮತ್ತು ಮಹಿಳೆ", "ರಂಗಭೂಮಿಯಲ್ಲಿ ಸ್ತ್ರೀ: ಅಸ್ತಿತ್ವ-ಅನನ್ಯತೆ"ಯಂಥ ರಂಗಚಿಂತನಾ ಲೇಖನಗಳು ರಂಗಭೂಮೆ ಮತ್ತು ಮಹಿಳೆಯ ಸಂಬಂಧಗಳ ಬಗ್ಗೆ ಇನ್ನಷ್ಟು ಅಧ್ಯಯನ, ಸಂಶೋಧನೆಗೆ ದಾರಿ ತೋರಿಸುವ ಬಹು ಮುಖ್ಯ ಲೇಖನಗಳಾದರೆ, ಮಾಸ್ತಿಯವರ ’ಶಾಂತಾ ಮತ್ತು ಉಷಾ’, ರೆಕ್ಕೆ ಕಟ್ಟುವಿರಾ?’, ’ಕಾಮನ ಬಿಲ್ಲಿಗೆ’ ಎಂಬಂಥ ಲೇಖನಗಳು ರಂಗಪ್ರದರ್ಶನಗೊಂಡ ನಾಟಕಗಳ ಬಹುಸೂಕ್ಷ್ಮ ಪ್ರಾಯೋಗಿಕ ವಿಮರ್ಶೆಗಳಾಗಿರುತ್ತವೆ. ರಂಗದಲ್ಲಿ ನಾಟಕದ ಪ್ರಯೋಗದ ತಾಂತ್ರಿಕ ಸೂಕ್ಷ್ಮತೆಗಳು ಹಾಗೂ ಅಭಿನಯ ಕಲೆಯ ಅತಿಸೂಕ್ಷ್ಮವೂ ನವುರಾದದ್ದೂ ಆದ ಅಂಗಗಳ ಇಷ್ಟು ಆಳವಾದ ಅರಿವು ವಿಜಯಾಗೆ ಇದ್ದರೂ ಈ ಅರಿವನ್ನು ಬಳಸಿ ಉತ್ತಮ ರಂಗನಾಟಕಗಳನ್ನು ರಚಿಸಲು ಅವರೇಕೆ ಮುಂದಾಗಲಿಲ್ಲ? - ಎಂಬುದು ನನ್ನಂಥವರಿಗೆ ಕಾಡಿಸುವ ಪ್ರಶ್ನೆ.

ಪಿಎಚ್.ಡಿ. ಪ್ರಬಂಧ

ಬದಲಾಯಿಸಿ

ಉನ್ನತ ರಂಗಾವಕಾಶಗಳುಳ್ಳ ನಾಟಕಗಳನ್ನು ವಿಜಯಾ ರಚಿಸದೆ ಇರಬಹುದು. ಆದರೆ ಆ ಕ್ಷೇತ್ರದ ಮಹಾನ ನಾಟಕಕಾರ ಶ್ರೀರಂಗರ ರಂಗಸಾಹಿತ್ಯವನ್ನು ಪಿಎಚ್.ಡಿ. ಸಂಶೋಧನೆಗೆ ಆರಿಸಿಕೊಂಡಿದ್ದು ವಿಜಯಾ ಅವರ ರಂಗಾಭಿಮಾನದ್ದೇ ಒಂದು ಫಲ. ವ್ಯಾಪಕವಾದ ಅಧ್ಯಯನ ಮೂಲಕ ಶ್ರೀರಂಗರ ಸಮಗ್ರ ನಾಟಕ ಸಾಹಿತ್ಯದ ಘನವಾದ ವಿಶ್ಲೇಷಣೆ-ವಿಮರ್ಶೆಯೊಂದನ್ನು ಕನ್ನಡಿಗರಿಗೆ ಒದಗಿಸಿರುವ ವಿಜಯಾ ಅವರ ಕೃತಿ "ಶ್ರೀರಂಗ : ರಂಗಸಾಹಿತ್ಯ"ವನ್ನು ಕೂಡ ಅವರ ಮಕ್ಕಳೇ ಮುಂದೆ ನಿಂತು ಹೊರತರಬೇಕಾಯಿತು. ಹಾಗೆ ತಂದದ್ದರಿಂದ ರಂಗಭೂಮಿಯ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಾಕ್ತರಿಗೂ ಒಮ್ಮೆಗೇ ದೊಡ್ಡ ಆಕರವೊಂದು ದೊರೆತಂತಾಗಿದೆ. ಈ ಕೃತಿಯ ಮೂಲಕ ರಂಗಭೂಮಿ-ಸಾಹಿತ್ಯರಂಗಳಿಗೆ ವಿಜಯಾ ಸ್ವತಃ ಒಂದು ಸೇತುವೆಯಾಗಿ ನಿಲ್ಲುವ ನಿಲ್ಲುವ ಬಗೆ ಕುತೂಹಲಕರವಾದದ್ದು. ಶ್ರೀರಂಗರ ಬಗ್ಗೆ ಭಾವನಾತ್ಮಕವಾದ ವೈಯಕ್ತಿಕ ಗೌರವವು ಲೇಖಕಿಯ ವಿಮರ್ಶೆಯ ವಸ್ತುನಿಷ್ಠತೆಯ ಮೇಲೆ ಪ್ರಭಾವ ಬೀರಿಲ್ಲ ಎಂಬುದು ಗಮನಾರ್ಹ,

’ರೂಪತಾರಾ

ಬದಲಾಯಿಸಿ

ಆಧುನಿಕ ಕನ್ನಡ ನಾಡಿನ ಸಂಸ್ಕೃತಿಯಲ್ಲಿ ತುಂಬ ಪ್ರಭಾವಶಾಲಿಯೂ ವೈವಿಧ್ಯಪೂರ್ಣವೂ ಆಗಿ ಬೆಳೆದಿರುವ ಚಲನಚಿತ್ರ ರಂಗಕ್ಕೆ ವಿಜಯಾ ಅವರು ನೀಡಿರುವ ಕೊಡುಗೆಯೂ ಪುಸ್ತಕೀಯವಾಗಿ ಲೆಕ್ಕಮಾಡಲು ಬರುವಾಂಥದ್ದಲ್ಲ. ಆದರೆ ಚಲನಚಿತ್ರ ಪತ್ರಿಕೋದ್ಯಮದ ಮೂಲಕ ಈ ನಕ್ಷತ್ರಲೋಕದ ಚಿತ್ರೋದ್ಯಮಕ್ಕೆ ಒಮ್ಮೆ ಪರಿಚಿತರಾದ ಬಳಿಕ ಇವತ್ತಿನವರೆಗೂ ವಿಜಯಾ ಗಾಢ ಸಂಬಧವನ್ನು ಉಳಿಸಿಕೊಂಡು ಬಂದಿರುತ್ತಾರೆ. ಅವರು ’ರೂಪತಾರಾ’ಕ್ಕೆ ಸಂಪಾದಕರಾಗಿ ಕಾಲಿರಿಸಿದ ಕಾಲಕ್ಕೆ ಕನ್ನಡದಲ್ಲಿ ಹೊಸ ಅಲೆಯ ಕಲಾತ್ಮಕ ಚಿತ್ರಗಳ ಗಾಳಿ ಬೀಸುತ್ತಿತ್ತು. ಆ ರೀತಿಯ ಚಿತ್ರಗಳನ್ನು, ಅವುಗಳ ಪ್ರಯೋಗಾತ್ಮಕ ಲಕ್ಷಣ, ತಂತ್ರಾದಿಗಳನ್ನು ಒಂದರ್ಥದಲ್ಲಿ ಅವುಗಳ ’Idiom' ಅನ್ನು ಜನರಿಗೂ, ಸಾಂಪ್ರಾದಾಯಿಕ ಚಲನಚಿತ್ರ ಕ್ಷೇತ್ರಕ್ಕೂ ಪರಿಚಯಿಸುವ ನಿರಂತರವಾದ ಸಂವಾದವೊಂದನ್ನು ರೂಪಿಸುವ ಮಹತ್ವದ ಜವಬ್ದಾರಿಯನ್ನು ಆಗ ವಿಜಯಾ ನಿರ್ವಹಿಸಿದ್ದರು. ಈ ಹೊಸ ಕಲಾತ್ಮಕ ಚಿತ್ರಗಳ ತಯಾರಕರಿಗೆ, ನಿರ್ದೇಶಕರಿಗೆ, ಅವರ ಪ್ರಯೋಗಳಿಗೆ ಅವಶ್ಯಕವಾಗಿದ್ದ ಬೆಂಬಲ, ಪ್ರೋತ್ಸಾಹ, ಒತ್ತಾಸೆಗಳು ದೊರಕುವಂತೆ ಮಾಡಿದವರಲ್ಲಿ ವಿಜಯಾ ಅವರದು ಅನನ್ಯ ಯತ್ನವಾಗಿತ್ತು. ಆ ಹೊಸ ಅಲೆಯ ಚಿತ್ರಗಳ ಬಗ್ಗೆ ವಿಚಾರ ಸಂಕಿರಣಗಳನ್ನು, ಪ್ರದರ್ಶನದ ನಂತರದ ಚರ್ಚೆ-ಸಂವಾದ ಗೋಷ್ಟಿಗಳನ್ನು, ಪ್ರೇಕ್ಷಕರಿಗಾಗಿ ರಸಗ್ರಹಣ ಶಿಬಿರಗಳನ್ನು ಏರ್ಪಡಿಸುವಲ್ಲಿ ವಿಜಯಾ ಯಾವತ್ತೂ ಮುಂದಾಳ್ತನವನ್ನು ವಹಿಸಿದವರು, ಚಿತ್ರರಂಗದಲ್ಲಿ ಈ ಹೊಸ ಅಲೆ ತಂದ ಬದಾಲವಣೆಗಳಿಗೆ, ಬೆಳವಣಿಗೆಗಳಿಗೆ ಸರ್ಕಾರವೂ ಸ್ಪಂದಿಸಿ ಹೊಸ ಚಲನಚಿತ್ರ ನೀತಿಯನ್ನು ರೂಪಿಸಿತು. ಬೇರೆ ಬೇರೆ ಸಿನಿಮಾ ಪತ್ರಕರ್ತರ ನಡುವೆ ಇದ್ದ ಭಿನ್ನಭಿಪ್ರಾಯಗಳನ್ನು ನಿವಾರಿಸಿ ಅವರಲ್ಲಿ ಒಮ್ಮತ ಮೂಡಿಸಿದ ವಿಜಯಾ ಅವರ ಮಧ್ಯಸ್ಥಿಕೆಯ ಫಲವೇ ಚಲನಚಿತ್ರ ಪತ್ರಕರ್ತರ ಸಂಘ. ಇದರ ಮೂಲಕ ಚಲನಚಿತ್ರ ಪತ್ರಕರ್ತರು ಸಹಕಾರ ಭಾವದಿಂದ ಚಿತ್ರರಂಗದ ಪ್ರಗತಿಗೆ ಸಂಬಂಧಿಸಿದ ವಿಚಾರಗಳನ್ನು ವಿನಿಮಯಿಸಿಕೊಳ್ಳಲು ಒಂದು ಜಾಗ ಒದಗಿಸಿತು. ಲಾಭಪರತೆ, ವಾಣಿಜ್ಯಗಳು ಮಾತ್ರ ಚಲನಚಿತ್ರಗಳ ಯಶಸ್ಸನ್ನು ಅಳೆಯುವ ಮಾನದಂಡ ಎನ್ನುವ ಜನರಂಜನೆಕೇಂದ್ರಿತ ಚಿತ್ರೋದ್ಯಮಕ್ಕೆ ಹೊಸ ಅಲೆಯ ಚಿತ್ರಗಳು ಜನತೆಯನ್ನು ವೈಚಾರಿಕವಾಗಿಯೂ ಕಲಾದೃಷ್ಟಿಯಿಂದಲೂ ಬೆಳೆಸಲು ಯತ್ನಿಸಿದ್ದುದೇ ಒಂದು ವಿರೋಧ ಹಾಗೂ ಸ್ಪರ್ಧೆಯ ಕಾರಣವಾಗಿತ್ತು. ಈ ಎರಡು ಪಂಗಡಗಳ ನಿರ್ಮಾಪಕ, ನಿರ್ದೇಶಕರ ನಡುವೆ ಮಧ್ಯಸ್ಥಿಕೆ ವಹಿಸಿದ ಡಾ. ವಿಜಯಾ ಚಿತ್ರರಂಗದಲ್ಲಿ ಆರೋಗ್ಯಕರ ಸಂಬಂಧ ಏರ್ಪಡುವಂತೆ ಮಾಡುವಲ್ಲಿ ಯಶಸ್ವಿಯಾದರು.

ಚಲನಚಿತ್ರೋತ್ಸವ

ಬದಲಾಯಿಸಿ

ಹಳೆಯ ಚಿತ್ರಗಳ ಚಾರಿತ್ರಿಕ ಸಾಧನೆಗಳಿಂದ ಚಲನಚಿತ್ರ ಗಳಿಸಿದ್ದ ಅನುಭವಗಳು ಅದರ ತಿಳಿವಳಿಕೆ ನಷ್ಟವಾಗದೆ ಉಳಿಯಬೇಕೆಂಬ ಆಶಯದಿಂದ ’ನಾಸ್ಟಾಲ್ಜಿಯಾ’ ಎಂಬ ಚಲನಚಿತ್ರೋತ್ಸವವೊಂದು ಬೆಂಗಳೂರಲ್ಲಿ ನಡೆಯುವಂತೆ ದುಡಿದದ್ದರಲ್ಲಿ ವಿಜಯಾ ಅವರ ಶ್ರಮವೂ ವಿಶೇಷವಾದದ್ದು. ಮೂಕಿ ಚಿತ್ರಗಳ ನಾಯಕಿ ದೇವಿಕಾರಾಣಿಯಂಥವರಿಂದ ಹಿಡಿದು ಅತ್ಯಂತ ಹೊಸ ಪೀಳಿಗೆಯ ಕಲಾವಿದರವರೆಗೆ ಎಲ್ಲರನ್ನೂ ಒಗ್ಗೂಡಿಸಿ ಭಾರಿ ಮೆರವಣಿಗೆ ನಡೆಸಿದ್ದು, ಅಂಥಾದ್ದು ಹಿಂದೆಂದೂ ಬೆಂಗಳೂರನಲ್ಲಿ ನಡೆದಿರಲಿಲ್ಲ. ಈ ಚಿತ್ರೋತ್ಸವ ಕಾರ್ಯಕ್ರಮದ ಯಶಸ್ಸಿನಿಂದ ಆದ ಪರಿಣಾಮ ಇನ್ನೂ ಮಹತ್ವದ್ದು. ಆ ವರೆಗೆ ದೆಹಲಿಗೆ ಮಾತ್ರ ಸೀಮಿತವಾಗಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರಿಗೆ ಬಂದಿತು.

ಇಂದಿಗೂ ವಿಜಯಾ ಚಲನಚಿತ್ರ ಉದ್ಯಮದಲ್ಲಿ ಅಪಾರವಾದ ಗೌರವದಿಂದ ಕಾಣಲ್ಪಡುತ್ತಿದ್ದರೆ, ಅವರು ಆ ಕ್ಷೇತ್ರಕ್ಕೆ ನೀಡಿದ ಆಂತರಿಕ ಕಾಣಿಕೆಯೇ ಮುಖ್ಯ ಕಾರಣ. ಇಂದಿಗೂ ’ಸುಚಿತ್ರಾ’ದಂಥ ಕಲಾ ಮತ್ತು ಚಲನಚಿತ್ರ ಅಕಾಡೆಮಿಯ ಜೊತೆ ನಿಕಟವಾಗಿ ಕ್ರಿಯಾಶೀಲರಾಗಿ ಕನ್ನಡಕೂ ಕನ್ನಡ ಸಂಸ್ಕೃತಿಗೂ ದುಡಿಮೆ ಸಲ್ಲಿಸುತ್ತಲೇ ಬಂದಿರುತ್ತಾರೆ.

ಹೀಗೆ ಪತ್ರಿಕಾರಂಗ, ರಂಗಭೂಮಿ, ಮತ್ತು ಚಲನಚಿತ್ರರಂಗ-ಇವು ಡಾ. ವಿಜಯಾ ಅವರ ವ್ಯಕ್ತಿತ್ವದ ಪ್ರಭಾವದ ತ್ರಿವಿಕ್ರಮಾವತಾರದ ವಿಕಸನದ ಮೂರು ಲೋಕಗಳು ಎನ್ನಬಹುದು. ನಾಡು, ನುಡಿ, ಕಲಾವೈವಿಧ್ಯ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಮುಂದಿನ ಪೀಳಿಗೆಗಳಿಗಾಗಿ ರಕ್ಷಿಸಿಡುವ ಯೋಜನಾಬದ್ಧ ತನ್ಮಯತೆ ಹಾಗೂ ಸಮರ್ಪಣಾ ಭಾವದಿಂದ ಡಾ. ವಿಜಯಾ ದುಡಿದಿರುವುದನ್ನು ಗಮನಿಸದಿದ್ದರೆ ಈ ಲೇಖನದ ಉದ್ದೇಶವು ಪೂರ್ಣವಾಗದು.

ತಮ್ಮ ಹಿರಿಯ ಸಾಹಿತಿದಿಗ್ಗಜ ಮಿತ್ರರು ಪ್ರಧಾನ ಸಂಪಾದಕರಾಗಿರುವ ಅಥವಾ ಅಂಥ ಮಿತ್ರರು ಸಹ ಸಂಪಾದಕರಾಗಿರುವ ತುಂಬ ಮಹತ್ವದ ಸಾಂಸ್ಕೃತಿಕ ಕೋಶಗಳಿಗಾಗಿ ವಿಜಯಾ ದುಡಿಯುವ ರೀತಿಯೇ ಅಪರೂಪದ್ದು. ಬಹಳ ನಿಸ್ವಾರ್ಥತೆ ಹಾಗೂ ಪರಿಶ್ರಮಗಳನ್ನು ಬಯುಸುವ ಈ ಬೃಹತ್ ಸಂಪುಟಗಳು ತುಂಬಾ ಅಚ್ಚುಕಟ್ಟಾಗಿ, ಸಾಧ್ಯವಿದ್ದಷ್ಟೂ ಸಮಗ್ರವಾಗಿ, ಅತಿ ಕಡಿಮೆ ಲೋಪದೋಷಗಳೊಂದಿಗೆ ಪೂರ್ಣವಾಗಿ ಹೊರಬರುವಂತೆ ಮಾಡುವುದರಲ್ಲಿ ಊಟ, ನಿದ್ದೆ, ವಿಶ್ರಾಂತಿಗಳನ್ನೂ ಲೆಕ್ಕಿಸದೆ ವಿಜಯಾ ಕ್ರಿಯಾನಿರತರಾಗಿರುವುದು ನಿಜಕ್ಕೂ ಅಸಾಧಾರಣ ಗೌರವಾರ್ಹವಾದ ಸಂಗತಿ. ಹಾಗೆ ಅವರು ಕೆಲಸ ಮಾಡಿರುವ ಕೆಲವು ಮಹಾಸಂಪುಟಗಳು ಹೀಗಿವೆ:

ಕೆಲವು ಮಹಾಸಂಪುಟಗಳು

ಬದಲಾಯಿಸಿ
  1. ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ(ಪ್ರ.ಸಂ. ಪ್ರೊ. ಎಲ್. ಎಸ್. ಶೇಷಗಿರಿರಾವ್ ಸಂ.: ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ವಿಜಯಾ. ಉದಯಭಾನು ಕಲಾಸಂಘ, ಬೆಂಗಳೂರು - 1993)
  2. ಕನ್ನಡ ಚಲನಚಿತ್ರ ಇತಿಹಾಸ : 2 ಸಂಪುಟಗಳಲ್ಲಿ (ಸಂ. ಡಾ. ವಿಜಯಾ, ಶ್ರೀ ಎಂ.ಬಿ.ಸಿಂಗ್, ಶ್ರೀ ವಿ.ಎನ್. ಸುಬ್ಬರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ, ಬೆಂಗಳೂರು, 2001)
  3. ಬೆಂಗಳೂರು ದರ್ಶನ : 2 ಸಂಪುಟಗಳಲ್ಲಿ (ಕಾರ್ಯನಿರ್ವಾಹಕ ಸಂಪಾದನೆ : ಡಾ. ವಿಜಯಾ, ಉದಯಭಾನು ಕಲಾಸಂಘ, ಬೆಂಗಳೂರು, 2003)
  4. ಕರ್ನಾಟಕ ಕಲಾದರ್ಶನ : 2 ಸಂಪುಟಗಳಲ್ಲಿ (ಸಂ. ಪ್ರೊ. ಎಮ್.ಎಚ್. ಕೃಷ್ಣಯ್ಯ, ಡಾ. ವಿಜಯಾ, ಶ್ರೀ ಸಿ. ಆರ್. ಕೃಷ್ಣರಾವ್, ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, 2010)

ಇಂಥ ಮೇರು ಸ್ವರೂಪದ ಗ್ರಂಥಗಳು ಸಂಪಾದಕರಿಗೆ ಜನತೆಯಿಂದ ಅಪಾರ ಮೆಚ್ಚುಗೆ ಗೌರವಗಳನ್ನು ತಂದಿರುತ್ತವೆ. ಆದರೆ ಕೆಲವು ಸಲ ಅಸಹನೆ, ಅಸೂಯೆ, ಕ್ಷುದ್ರ ರಾಜಕೀಯದ ಜನರ ಆಕ್ಷೇಪ, ನಿಂದನೆಗಳನ್ನೂ ಎದುರಿಸುವಂತೆ ಆಗುವುದುಂಟು. ಇಂಥ ಸಂದರ್ಭಗಳಲ್ಲಿ ಧೃತಿಗೆಡದೆ, ಸಹಸಂಪಾಕರೊಂದಿಗೆ ಧೃಡವಾಗಿ ನಿಂತು ಗೆದ್ದವರು ಡಾ.ವಿಜಯಾ.

ಈ ಸಂಪುಟಗಳಲ್ಲದೆ ನಾಡಿನ ಅನೇಕ ನಾಡಿನ ಅನೇಕ ಹಿರಿಯ ಸಾಹಿತಿಗಳು ಕಲಾವಿದರ ಸಾಧನೆಗಳನ್ನು ಸಂಸ್ಮರಿಸುವ ಅಭಿನಂದನ ಗ್ರಂಥಗಳ ಸಂಪಾದನೆ ಮಾಡಿರುವುದೂ ಇನ್ನೊಂದು ಸಾಧನೆ.

ಡಾ. ವಿಜಯಾ ಈ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೂಟ್ಟಿರುವ ಕಾಣಿಕೆ ಶಬ್ದಗಳಲ್ಲಿ ಹೇಳಿ ಮುಗಿಸುವಂಥಾದ್ದಲ್ಲ. ಆದ್ದರಿಂದ ಜನತೆ ತಮ್ಮ ಗೌರವ, ಅಭಿಮಾನಗಳನ್ನು ಪ್ರಶಸ್ತಿ ಪುರಸ್ಕಾರಗಳ ಮೂಲಕ ಸಲ್ಲಿಸಿರುತ್ತದೆ. ಅಂಥ ಕೆಲವು ಮಹತ್ವದ ಪ್ರಶಸ್ತಿಗಳು ವಿಜಯಾ ಅವರ ಮಡಿಲು ತುಂಬಿವೆ:

ದೊರೆತ ಕೆಲವು ಗೌರವಗಳು

ಬದಲಾಯಿಸಿ
  1. ಪತ್ರಿಕಾರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಪ್ರತಿಷ್ಟಿತ "ಸಂದೇಶ ಪ್ರಶಸ್ತಿ", 2005
  2. ಪತ್ರಿಕಾರಂಗಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಸಂದಿರುವ "ಆರ್. ಎನ್. ಆರ್. ಪ್ರಶಸ್ತಿ", 2005
  3. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, 2006
  4. ಲೋಕಶಿಕ್ಷಣ ಟ್ರಸ್ಟ್ ನವರು ಸಮಾಜಸೇವೆಗಾಗಿ ನೀಡಿದ ಹಾರ್ನಹಳ್ಳಿ ರಾಮಸ್ವಾಮಿ ಸ್ಮಾರಕ ಪ್ರಶಸ್ತಿ, 2010
  5. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕಾಣಿಕೆಗಾಗಿ ಅಖಿಲ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ನೀಡಿರುವ "ಅನುಪಮಾ ಪ್ರಶಸ್ತಿ", 2010
  6. ಸಾಹಿತ್ಯ ಮತ್ತು ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಪ್ರತಿಷ್ಟಿತ "ಮಾಸ್ತಿ ಪ್ರಶಸ್ತಿ", 2011
  7. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  8. ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಫೆಲೋಶಿಪ್.
  9. ವಿ.ಸೀ ಪ್ರಶಸ್ತಿ - 2013
  10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2019) - ಕುದಿ ಎಸರು ಕೃತಿಗಾಗಿ

1997ರಲ್ಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ವಿಜಯಾಗೆ ಲಭಿಸಿತ್ತು. ಆದರೆ ಸರ್ಕಾರದಿಂದ ಪ್ರಶಸ್ತಿ ಪತ್ರವನ್ನಷ್ಟೇ ಸ್ವೀಕರಿಸಿ, ಹಣವನ್ನು ವಿಜಯಾ ಹಿಂದಿರುಗಿಸುವ ಮೂಲಕ ತಮ್ಮ ವ್ಯಕ್ತಿ ಸ್ವಾತಂತ್ರ್ಯ, ಸ್ವಾಯತ್ತತೆಗಳನ್ನು ಎತ್ತಿಹಿಡಿದರು. ಇಂದಿಗೂ ಅದೇ ತತ್ವವನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ. ಅವರಿಗಿರುವ ಸ್ಥಾನಗೌರವದ ಬಲವನ್ನು ಸ್ವಂತಕ್ಕಾಗಿ ಬಳಸಿಕೊಳ್ಳದೆ ಸರ್ಕಾರಿ ಭಾರಿ ಪ್ರಶಸ್ತಿಗಳನ್ನು ಇತರ ಲೇಖಕರಿಗೆ ದೊರಕಿಸಿಕೊಡಬಲ್ಲ ತೀರ್ಪುಗಾರರ ಜಾಗದಲ್ಲೇ ಅವರು ಇರಬಯಸುವವರು. ಹೀಗೆ ಯಾವುದೇ ಸಾಂಸ್ಕೃತಿಕ ಸ್ತರವನ್ನು ಗಮನಿಸಿದರೂ ವಿಜಯಾ ಅವರ ಪ್ರಭೆ, ಅಂತಶ್ಚೇತನದ ಹೊಳಪೊಂದು ಹೊಳೆಯುವುದರಿಂದಾಗಿ ನಮ್ಮ ನಡುವಿನ ಸಾಂಸ್ಕೃತಿಕ ತಾರೆ ಅವರಾಗಿದ್ದಾರೆ.

ಅನುಬಂಧ

ಬದಲಾಯಿಸಿ

ಜನನ : ಮಾರ್ಚ್ 1942, ದಾವಣಗೆರೆ
ಶೈಕ್ಷಣಿಕ : ಎಂ. ಎ. (ಕನ್ನಡ), ಮೈಸೂರು ವಿಶ್ವವಿದ್ಯಾನಿಲಯ
ಪಿಎಚ್.ಡಿ. - ಶ್ರೀರಂಗರ ನಾಟಕಗಳ ಕುರಿತ ಸಂಪ್ರಬಂಧಕ್ಕೆ.

ವೃತ್ತಿ

ಬದಲಾಯಿಸಿ
  • ’ಪ್ರಜಾಮತ’ ಸಾಪ್ತಾಹಿಕ - ಪತ್ರಕರ್ತೆ (1968-70);
  • ’ಮಲ್ಲಿಗೆ’ ಮಾಸಪತ್ರಿಕೆ - ಸಹ ಸಂಪಾದಕಿ (1970-73);
  • ’ತುಷಾರ’ ಮಾಸಪತ್ರಿಕೆ - ಸಹಾಯಕ ಸಂಪಾದಕಿ (1973-91);
  • ’ರೂಪತಾರಾ’ ಮಾಸಪತ್ರಿಕೆ - ಸಹಾಯಕ ಸಂಪಾದಕಿ(1977-91);
  • ’ಉದಯವಾಣಿ’ ದೈನಿಕ, ಅಂಕಣಕಾರ್ತಿ (1972-91);
  • ’ಅರಗಿಣಿ’ ಸಾಪಾಹ್ತಿಕ - ಗೌರವ ಸಂಪಾದಕಿ (1991-92); #’ಬೆಳ್ಳಿಚುಕ್ಕಿ’ ವಿಡಿಯೋ ಮ್ಯಾಗಜೀನ್ - ಸಮಾಲೋಚಕ ಸಂಪಾದಕಿ (1992);
  • 'ಸಂಕುಲ’ ಪ್ರಧಾನ ಸಂಪಾದಕಿ (1994ರಿಂದ); #’ನಕ್ಷತ್ರಲೋಕ’ ಸಾಪ್ತಾಹಿಕ - ಸಂಪಾದಕಿ (1996);
  • 'ಕರ್ಮವೀರ’ ಸಾಪ್ತಾಹಿಕ, ಸಲಹೆಗಾರ್ತಿ (1992), #'ನಮ್ಮ ಮಾನಸ’ ಮಹಿಳಾ ಪತ್ರಿಕೆ, ಸಲಹೆಗಾರ್ತಿ;
  • ’ಹೊಸತು’ ಮಾಸಪತ್ರಿಕೆ - ಸಲಹಾ ಮಂಡಳಿಯಲ್ಲಿ.

ಅಲಂಕರಿಸಿದ ಸ್ಥಾನಗಳು

ಬದಲಾಯಿಸಿ

ಬೆಂಗಳೂರು ದೂರದರ್ಶನದ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯೆಯಾಗಿ,
ಸುಚಿತ್ರಾ ಫಿಲ್ಂ ಸೊಸೈಟಿ ಟ್ರಸ್ಟಿಯಾಗಿ,
ಸುಚಿತ್ರಾ ಕಲಾ ಕೇಂದ್ರದ ಮುಖ್ಯಸ್ಥೆಯಾಗಿ,
ಕನ್ನಡ ಪುಸ್ತಕ ಪ್ರಾಧಿಕಾರದ ’ಪುಸ್ತಕ ನೀತಿ’ಯ ಸದಸ್ಯೆಯಾಗಿ,
ರಾಷ್ಟ್ರೀಯ ಚಲನಚಿತ್ರೋತ್ಸವದ ಕಮಿಟಿಯಲ್ಲಿ,
ಅತಿಮಬ್ಬೆ ಮತ್ತು ನೃಪತುಂಗ ಪ್ರಶಸ್ತ್ರಿ ಆಯ್ಕೆ ಸಮಿತಿಯಲ್ಲಿ,
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ,
IFFI, ಬೆಂಗಳೂರು 2012 - ಜ್ಯೂರಿಯಾಗಿ,
ಗುಬ್ಬಿ ಶತಮಾನೋತ್ಸವ ಸಮಿತಿಯಲ್ಲಿ,
ಮೈಸೂರು ವಿಶ್ವವಿದ್ಯಾನಿಲಯ ಮಹಿಳಾ ಅಧ್ಯಯನ ಕೇಂದ್ರದ ಸಲಹಾ ಸಮಿತಿಯಲ್ಲಿ....
ಇಂಥ ಇನ್ನೂ ಇತ್ಯಾದಿಗಳ ಗೌರವಗಳೊಂದಿಗೆ ಕನ್ನಡದ ಕೆಲಸಕ್ಕಾಗಿ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಜೈಲಿನ ವಾಸವೂ ಆಗಿದೆ.

ಕೃತಿಗಳು

ಬದಲಾಯಿಸಿ
  • ಮಾತಿನಿಂದ ಲೇಖನಿಗೆ (ಲೇಖನಗಳ ಸಂಗ್ರಹ);
  • ಬಂದರೋ ಬಂದರು (ಬೀದಿ ನಾಟಕ);
  • ಮಾನಿಷದ (ಕಾರ್ನಾಡರ ಕೃತಿಯ ಸೂತ್ರದ ಬೊಂಬೆಯಾಟಕ್ಕೆ ನಾಟಕ ಅವತರಣಿಕೆ);
  • ಏಳು ನಾಟಕಗಳು (ಸಂಕಲನಗಳು);
  • ಉಳ್ಳವರ ನೆರಳು (ನಾಟಕ);
  • ಧನ್ವಂತರಿ ಚಿಕೆತ್ಸೆ (ಕುವೆಂಪು ಕಥೆಯ ನಾಟಕ ರೂಪ);
  • ಮುಖವಿಲ್ಲದವರು (ಬೀದಿನಾಟಕ);
  • ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ?(ಬೀದಿನಾಟಕ);
  • ಸಂಕುಲ (ಲೇಖನ ಸಂಕಲನ);
  • ಬೀದಿನಾಟಕಗಳು (ಸಂಕಲನ);
  • ಸತ್ಯಜಿತ್ ರಾಯ್ (ವ್ಯಕ್ತಿ ಚಿತ್ರಣ);
  • ಸಣ್ಣಕತೆಯ ಸೊಗಸು(ವಿಶ್ಲೇಷಣೆ);
  • ಎ.ಎನ್. ಸುಬ್ಬರಾವ್ (ವ್ಯಕ್ತಿ ಚಿತ್ರಣ);
  • ಶ್ರೀರಂಗ - ರಂಗಸಾಹಿತ್ಯ (ಪಿಎಚ್. ಡಿ. ಸಂಪ್ರಬಂಧ);
  • ಸುದ್ದಿ-ಕನ್ನಡಿ (ಲೇಖನ ಸಂಕಲನ);
  • ನಿಜಧ್ಯಾನ (ಲೇಖನ ಸಂಕಲನ);
  • ನೇಮಿಚಂದ್ರ (ಸಂಪಾದಿತ);
  • ರಂಗಸಾಹಿತ್ಯ (ಲೇಖನ ಸಂಕಲನ)
  • ತಾರಶಂಕರ ಬಂದೋಪಾಧ್ಯಾಯ (ಅನುವಾದ)
  • ಪಠ್ಯಾನುವಾದ (ಸಂಪಾದಿತ)


ಹೊರಗಿನ ಕೊಂಡಿಗಳು

ಬದಲಾಯಿಸಿ
  1. ಸಲ್ಲಾಪ ಸಂಸ್ಕೃತಿ ಸಲ್ಲಾಪ

ಉಲ್ಲೇಖಗಳು

ಬದಲಾಯಿಸಿ
  1. "ಡಾ.ವಿಜಯಾ". kanaja.in. Archived from the original on 2014-04-03. Retrieved 9-2-2014. {{cite web}}: Check date values in: |accessdate= (help)


"https://kn.wikipedia.org/w/index.php?title=ವಿಜಯಾ&oldid=1058231" ಇಂದ ಪಡೆಯಲ್ಪಟ್ಟಿದೆ