ವಿಕ್ಟೋರಿಯ ಗೌರಮ್ಮ
ವಿಕ್ಟೋರಿಯಾ ಗೌರಮ್ಮ (೪ ಜುಲೈ ೧೮೪೧ - ೩೦ ಮಾರ್ಚ್ ೧೮೬೪) ಕೊಡಗಿನ ರಾಜನಾಗಿದ್ದ ಚಿಕ್ಕ ವೀರರಾಜೇಂದ್ರನ (ಇಂಗ್ಲಿಷ್ ನ್ಯಾಯಾಲಯದ ವಿಚಾರಣೆಗಳಲ್ಲಿ "Veer Rajunder Wadeer" ಎಂದು ಉಲ್ಲೇಖಗೊಂಡ[೧] ) ಮಗಳು.
ಜನನ
ಬದಲಾಯಿಸಿ೧೮೩೪ರಲ್ಲಿ ನಡೆದ ಕೂರ್ಗ್ ಕದನದ ನಂತರ ಜನರಲ್ ಜೇಮ್ಸ್ ಸ್ಟುವರ್ಟ್ ಫ್ರೇಸರ್ ನೇತೃತ್ವದಲ್ಲಿ ಬ್ರಿಟಿಷರಿಂದ ಪದಚ್ಯುತಗೊಂಡ ರಾಜ ೨೪ ಏಪ್ರಿಲ್ ೧೮೩೪ ರಂದು ಶರಣಾಗಿ, ಬನಾರಸ್‌ಗೆ ರಾಜಕೀಯ ಸೆರೆಯಾಳಾಗಿ ಕೊಂಡೊಯ್ಯಲ್ಪಟ್ಟನು. ರಾಜನ ೧೧ ಮಕ್ಕಳಲ್ಲಿ ಒಬ್ಬಳಾಗಿ ಬನಾರಸ್‌ನಲ್ಲಿ ಜನಿಸಿದ ಗೌರಮ್ಮ ಕೇವಲ ಮೂರೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡಳು.
ಬಾಲ್ಯ
ಬದಲಾಯಿಸಿಮಾರ್ಚ್ ೧೮೫೨ರಲ್ಲಿ, ಈಸ್ಟ್ ಇಂಡಿಯಾ ಸರ್ಕಾರವು ತನ್ನ ಸಂಪತ್ತನ್ನು ಹಿಂದಿರುಗಿಸಬೇಕೆಂದು ನ್ಯಾಯಾಲಯದಲ್ಲಿ ಒತ್ತಾಯಿಸುವ ಇರಾದೆಯಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿದ. ಅಲ್ಲಿನ ರಾಣಿ ವಿಕ್ಟೋರಿಯಾಳ ರಾಜೋಪಚಾರಗಳನ್ನು ಸ್ವೀಕರಿಸಿ, ತನ್ನ ಮಕ್ಕಳಲ್ಲೇ ತುಸು ಹೆಚ್ಚು ಬೆಳ್ಳಗಿದ್ದ ೧೧ ವರ್ಷದ ಮಗಳಾದ ಗೌರಮ್ಮನನ್ನು "ಕಾಗೆಗಳ ಗುಂಪಿನ ಪಾರಿವಾಳ" ಎಂದು ಹೊಗಳಿ ರಾಣಿಯ ಆಶ್ರಯದಲ್ಲಿಟ್ಟನು.[೨] ತನ್ನ ಸಂಸ್ಥಾನದ ರಾಜಕುಮಾರಿ ಆಂಗ್ಲಸಮಾಜದಲ್ಲಿ ಗೌರವಾನ್ವಿತ ಮಹಿಳೆಯಾಗಿ ಪ್ರಶಂಸೆಗಳಿಸಿದರೆ ತನ್ನ ನ್ಯಾಯಾಲದ ಮೊಕದ್ದಮೆಗೆ ಅನುಕೂಲವಾಗುವುದೆಂಬ ಆಲೋಚನೆ ಆತನಿಗಿತ್ತು.
ಬಕಿಂಗ್‌ಹ್ಯಾಮ್ ಅರಮನೆಯಲ್ಲಿ, ೧೮೫೨ರ ಜುಲೈ ೫ ರಂದು ಕ್ಯಾಂಟರ್ಬರಿಯ ಆರ್ಚ್ಬಿಷಪ್ ಅವರು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಳನ್ನು ಅಧಿಕೃತ ಪೋಷಕಿ(ಧರ್ಮಮಾತೆ)ಯಾಗಿ ಗುರುತಿಸಿ, ರಾಣಿಯ ಪ್ರಾಯೋಜಕತ್ವದಲ್ಲಿ, "ವಿಕ್ಟೋರಿಯಾ" ಎಂಬ ನಾಮಕರಣದೊಂದಿಗೆ ಕ್ರೈಸ್ತ ದೀಕ್ಷಾಸ್ನಾನ (ಬಾಪಿಸ್ಮ) ನೀಡಿದರು. [೩] [೪] ಹೀಗೆ ಕ್ರೈಸ್ತ ಧರ್ಮಕ್ಕೆ ಪರಿವರ್ತನೆಗೊಂಡ ಮೊದಲ ಭಾರತೀಯ ರಾಜಕುಮಾರಿಯಾಗಿದ್ದಳು. ಅಂದು ಮಹಾರಾಣಿ ಚರ್ಮದ ಹೊದಿಕೆಯ ಸ್ವಂತ ಹಸ್ತಾಕ್ಷರವಿರುವ ಬೈಬಲ್ ಮತ್ತು ಹಲವಾರು ಆಭರಣಗಳನ್ನು ಉಡುಗೊರೆಯಾಗಿ ನೀಡಿದಳು.
ವೈವಾಹಿಕ ಜೀವನ
ಬದಲಾಯಿಸಿಗೌರಮ್ಮಳ ಪೋಷಣೆ ಮತ್ತು ಪಾಶ್ಚಾತ್ಯ ಸಮಾಜದ ರೀತಿರಿವಾಜುಗಳನ್ನು ಕಲಿಸುವ ಹೊಣೆಗಾರಿಕೆಯನ್ನು ಮೇಜರ್ ಡ್ರಮ್ಮಂಡ್ ದಂಪತಿಗಳಿಗೆ ವಹಿಸಲಾಯಿತು. ಗೌರಮ್ಮಳಿಗೆ ಗೌರವಾನ್ವಿತ ರಾಜಕುಮಾರಿಯ ಪದವನ್ನು ನೀಡಲಾಯಿತಲ್ಲದೇ, ಆಕೆ ಮಹಾರಾಣಿಯ ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಳು. ಗೌರಮ್ಮ ಎಲ್ಲರ ಗಮನ ಸೆಳೆಯುವ ಚತುರೆಯಾಗಿದ್ದಳು. ಬಣ್ಣ ಯುರೋಪಿಯನ್ನರಿಗೆ ಹೋಲಿಸಿದರೆ ಸ್ವಲ್ಪ ಕಂದಾಗಿತ್ತು ಮತ್ತು ಲಕ್ಷಣವಂತೆಯಾಗಿದ್ದಳು. ಹೌರೀ ಮತ್ತು ಭಾರತೀಯ ಮೂಲದ ಭಾಷೆಗಳೊಂದಿಗೆ ಆಂಗ್ಲಭಾಷೆಯಲ್ಲೂ ಪರಿಣಿತೆಯಾಗತೊಡಗಿದ್ದಳು.
೧೮೫೮ರಲ್ಲಿ ರಾಣಿ ವಿಕ್ಟೋರಿಯಾ ದುಲೀಪ್ ಸಿಂಗ್‌ನ ಪೋಷಕಿಯಾಗಿದ್ದ ಲೇಡಿ ಲಾಗಿನ್ ದೇವರ ಮಗಳಿಗೆ ಸೂಕ್ತ ವರನನ್ನು ಹುಡುಕಲು ಕೇಳಿಕೊಂಡಳು. ಭಾರತೀಯ ಮೂಲದ ರಾಜಮನೆತನದ ಪದಚ್ಯುತ ಸದಸ್ಯನಾದ ದುಲೀಪ್ ಸಿಂಗ್‌ಗೆ ಅವಳು ಸೂಕ್ತ ಹೆಂಡತಿಯಾಗುತ್ತಾಳೆ ಎಂಬ ನಿರೀಕ್ಷೆ ಇತ್ತು. ಆದರೆ ಅವನು ಆಂಗ್ಲ ಮಹಿಳೆಯನ್ನು ಮದುವೆಯಾಗಲು ಉದ್ದೇಶಿಸಿರುವುದಾಗಿ ಘೋಷಿಸಿದನು. ಲೇಡಿ ಲಾಗಿನ್ ಗೌರಮ್ಮನ ಪತಿಯಾಗಲು ಸೂಕ್ತವಾದ ಯುರೋಪ್ ಮೂಲದ ಗಣ್ಯನನ್ನು ಹುಡುಕಲು ಪ್ರಯತ್ನಿಸಿದಳು. ಗೌರಮ್ಮನ ತಂದೆ, ಆದರ್ಶರಹಿತ ವಯಸ್ಸಾದ ಪದರಹಿತ ರಾಜನಾಗಿ ಅಪಖ್ಯಾತಿ ಪಡೆಯಲಾರಂಭಿಸಿದ್ದೂ ವರಾನ್ವೇಷಣೆಗೆ ಕುಂದಾಯಿತು.[೫] ಆದ್ದರಿಂದಲೇ ಗೌರಮ್ಮಳನ್ನು ತಂದೆಯಿಂದ ಪ್ರತ್ಯೇಕವಾಗಿರಿಸಲಾಗಿತ್ತು. ಆದಾಗ್ಯೂ, ೧೮ ವರ್ಷದ ಗೌರಮ್ಮ ಅವಳಿಗಿಂತ ೩೦ ವರ್ಷ ಹಿರಿಯನಾದ ವಿಧುರ ಲೆಫ್ಟಿನೆಂಟ್ ಕರ್ನಲ್ ಜಾನ್ ಕ್ಯಾಂಪ್ಬೆಲ್‌ನನ್ನು ೧೮೬೦ರಲ್ಲಿ ವರಿಸಿದಳು. ಅವರಿಗೆ ಎಡಿತ್ ವಿಕ್ಟೋರಿಯಾ ಗೌರಮ್ಮ ಕ್ಯಾಂಪ್ಬೆಲ್ ಎಂಬ ಮಗಳು ೨ ಜುಲೈ ೧೮೬೧ ರಂದು ಜನಿಸಿದಳು.
ದುರದೃಷ್ಟವಶಾತ್ ಜಾನ್ ಕ್ಯಾಂಪ್ಬೆಲ್ ಬಹುದೊಡ್ಡ ಜೂಜುಕೋರನಾಗಿದ್ದ. ಗೌರಮ್ಮಳ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದನಲ್ಲದೇ ಅವರ ದಾಂಪತ್ಯ ಜೀವನ ಸಹ ಸುಖಕರವಾಗಿರಲಿಲ್ಲ. ಗೌರಮ್ಮನಿಗೆ ರಾಜಮನೆತನದಿಂದ ಬರುತ್ತಿದ್ದ ರಾಜಭತ್ಯೆಯ ಮೇಲಷ್ಟೇ ಆತನ ಒಲವಿತ್ತು.
ಗೌರಮ್ಮನ ಮಗಳಾದ ಎಡಿತ್ ವಿಕ್ಟೋರಿಯಾ ಸರ್ W. ಯಾರ್ಡ್ಲಿಯ ಮಗ ಹೆನ್ರಿ ಯಾರ್ಡ್ಲಿಯನ್ನು ವಿವಾಹವಾದರು ಮತ್ತು ವಿಕ್ಟರ್ ಎಂಬ ಮಗನನ್ನು ಹೊಂದಿದ್ದರು. [೬]
ಮರಣ
ಬದಲಾಯಿಸಿಎಡಿತ್ ವಿಕ್ಟೋರಿಯಾ ೩ ವರ್ಷದ ಕೂಸಾಗಿದ್ದಾಗ, ಗೌರಮ್ಮ ೧೮೬೪ ರಲ್ಲಿ ಕ್ಷಯರೋಗದಿಂದ ನಿಧನರಾದರು ಮತ್ತು ಅವರನ್ನು ಬ್ರಾಂಪ್ಟನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. [೩] ಬ್ಯಾರನ್ ಮಾರೊಚೆಟ್ಟಿ ಅವರಿಂದ ಅಮೃತಶಿಲೆಯ ಮುಖ ಪ್ರತಿಮೆಯನ್ನು ಮಾಡಲ್ಪಟ್ಟಿತು ಮತ್ತು ಈಗ ಅದು ಐಲ್ ಆಫ್ ವೈಟ್‌ನಲ್ಲಿರುವ ಓಸ್ಬೋರ್ನ್ ಹೌಸ್‌ನಲ್ಲಿದೆ. ಈ ಅಕಾಲಿಕ ಮರಣದಿಂದ ಬೇಸರಗೊಂಡಿದ್ದ ಮಹಾರಾಣಿ ಸಮಾಧಿಯಮೇಲೆ ಹೃದಯಸ್ಪರ್ಶಿಯಾಗಿ ಬೈಬಲ್‌ನ ವಾಕ್ಯವಾದ ‘Other sheep I have, which are not of this fold" ಎಂದು ಕೆತ್ತಿಸಿದ್ದಳು. ಕೆಲವೇ ದಿನಗಳಲ್ಲಿ, ಕ್ಯಾಂಪ್ಬೆಲ್ ಗೌರಮ್ಮನ ಒಡವೆಗಳೊಂದಿಗೆ ಕಾಣೆಯಾದ.[೭]
ಉಲ್ಲೇಖಗಳು
ಬದಲಾಯಿಸಿ- ↑ Anonymous (1857). Coorg and its Rajahs. London: John Bumpus. pp. 110–136.
- ↑ http://www.columbia.edu/itc/mealac/pritchett/00routesdata/1800_1899/coorgprincess/coorgprincess.html
- ↑ ೩.೦ ೩.೧ Login, E. Dalhousie (1916). Lady Login's Recollections. Court life and camp life 1820-1904. London: Smith, Elder & Co. pp. 148–194.
- ↑ "Baptism of the Princess Gauromma". Sherborne Mercury. 6 July 1852. p. 2 – via British Newspaper Archive.
- ↑ https://www.evolveback.com/coorg/princess-victoria-gowramma-coorg/
- ↑ M.O.C. (1894). Supplement to a memorial history of the Campbells of Melfort, Argyllshire and of other Highland families with whom they have intermarried. London: Simmons and Botten. p. 58.
- ↑ https://feminisminindia.com/2018/12/12/victoria-gowramma-princess/