ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೭

ಉಂಗುರಕ್ಕೆ ಅಳವಡಿಸಲಾಗಿರುವ ಸುಂದರ ವಜ್ರ

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ. ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗ ತಲುಪಿಸುತ್ತಿವೆ. ಜಗತ್ತಿನ ಒಟ್ಟೂ ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ.