ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೪

ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.

ಮೆಣಸು ಕಾಳುಗಳನ್ನು ಅದರ ಮೂಲವನ್ನವಲಂಬಿಸಿ ವರ್ಗೀಕರಿಸಲಾಗುತ್ತದೆ. ಎರಡು ಬಹಳ ಜನಪ್ರಿಯ ತಳಿಗಳು ಭಾರತದ ಮಲಬಾರ್ ತೀರದಲ್ಲಿ ದೊರೆಯುವ ತಳಿಗಳು: ಮಲಬಾರ್ ಮೆಣಸು ಹಾಗೂ ತೆಲ್ಲಿಚೆರಿ ಮೆಣಸು. ತೆಲ್ಲಿಚೆರಿ ತಳಿ ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯೆಂದು ಹೇಳಲಾಗುತ್ತದೆ. ಸರವಾಕ ಎಂಬ ತಳಿಯ ಮೆಣಸು ಮಲೇಶಿಯದ ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋಂಗ್ ಎಂಬ ತಳಿ ಇಂಡೋನೇಶಿಯದ ಸುಮಾತ್ರ ದ್ವೀಪದಲ್ಲಿ ದೊರಕುತ್ತವೆ. ಬಿಳಿಯ ಮುಂಟೋಕ್ ಮೆಣಸು ಇಂಡೋನೇಶಿಯದ ಮತ್ತೊಂದು ಉತ್ಪಾದನೆ, ಬಾಂಗ್ಕಾ ದ್ವೀಪದಲ್ಲಿ ದೊರೆಯುವಂತದ್ದು.