ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೨

"ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ" ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ ಪಿ ರಾಜರತ್ನಂ ಅವರು.
ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ಕನ್ನಡ ಪಂಡಿತ ಹುದ್ದೆ ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ೧೯೭೬ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ. ಪಿ. ರಾಜರತ್ನಂ ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
``ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. ಕುಡುಕನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. ಟಿ ಪಿ ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.