ವಿಕಿಪೀಡಿಯ:ಕಾರ್ಯನೀತಿ/ತಾಂತ್ರಿಕ ಪದಗಳು ಆಂಗ್ಲದಲ್ಲಿ

(ವಿಕಿಪೀಡಿಯಾದ ಬಗ್ಗೆ ನಡೆದ ಚರ್ಚೆಯಿಂದ). ಚರ್ಚೆ ಮತ್ತು ಪ್ರತಿಕ್ರಿಯೆಗಳು ಕನ್ನಡ ವಿಕಿಪೀಡಿಯಾ ಸದಸ್ಯರಿಂದ ಬಂದದ್ದು.


> ಪ್ರಿಯರೆ, ತಾಂತ್ರಿಕ ಪದಗಳ ಭಾಷಾಂತರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಸಂಗತಿಗಳನ್ನು ಗಮನಿಸಿ.
> . ಮೈಸೂರು ವಿಶ್ವವಿದ್ಯಾಲಯವು ೧೯೭೦ರ ದಶಕದಲ್ಲಿ ಸೈನ್ಸ್ ಮತ್ತು ತಾಂತ್ರಿಕ
> ಪರಿಭಾಷೆಗಳನ್ನೆಲ್ಲ ಅನುವಾದಿಸಿ ದೊಡ್ಡ ದೊಡ್ಡ ಪಠ್ಯಪುಸ್ತಕಗಳನ್ನು ಪ್ರಕಟಿಸಿತು.
> ಅವುಗಳನ್ನು ಆಗಲೂ ಯಾರೂ ಬಳಸಲಿಲ್ಲ, ಈಗಂತೂ ಕಣ್ಮರೆಯಾಗಿವೆ. ಇಂಥ ದೊಡ್ಡ ಸಮಾನಾರ್ಥಕ
> ಪದಕೋಶಗಳೂ ಹೊರಬಂದವು. ಆದರೆ ನೀವು ಹೇಳುವಂತ ಕನ್ನಡ ಜನಸಾಮಾನ್ಯರು ಯಾರೂ ಅವನ್ನು
> ಬಳಸಿದ್ದು ಕಾಣೆ. ಈಗ ಹೊಸ ತಾಂತ್ರಿಕತೆ ಬಂದಿರುವಾಗ ಮತ್ತೆ ಅದೇ ತಪ್ಪನ್ನು ೩೦
> ವರ್ಷಗಳ ನಂತರ ಪುನರಾವರ್ತಿಸುವುದು ಬೇಡ.
> . ಎರಡನೆಯದು, ಕನ್ನಡವನ್ನು ಬಲ್ಲ ಸಾಮಾನ್ಯ ಜನರು ಬಲು ದೊಡ್ಡ ಇಂಗ್ಲಿಷ್
> ಶಬ್ದಕೋಶವನ್ನು ಬಲ್ಲವರೇ ಆಗಿದ್ದಾರೆ. ಅವರಿಗೆ ಇಂಗ್ಲಿಷ್ ಸ್ಪೆಲಿಂಗು ಗೊತ್ತಿಲ್ಲ.
> ಆದರೆ ಕನ್ನಡ ಲಿಪಿಯಲ್ಲಿ ಆ ಪದಗಳನ್ನು ಓದಿದರೆ ಅರ್ಥವಾಗುತ್ತದೆ. ಭಾಷೆಯ ಬಳಕೆಯಲ್ಲಿ
> ಅಭಿಮಾನಿಗಳಿಗಿಂತ, ಭಾಷಾವಿದ್ವಾಂಸರಿಗಿಂತ ಜನಸಾಮಾನ್ಯರ ಬಳಕೆಯೇ ಮುಖ್ಯ ಅಳತೆಗೋಲು
> ಆಗಿರಬೇಕು. ಸರ್ಕಾರವು ಮಾಡಿರುವ ಆಡಳಿತ ಪದಕೋಶದ ಕನ್ನಡಕ್ಕಿಂತ ಬಳಕೆಯ ಇಂಗ್ಲಿಷ್
> ಪದಗಳೇ ಜನಸಾಮಾನ್ಯರಿಗೆ ಸುಲಭ ಗ್ರಾಹ್ಯವಲ್ಲವೆ?
> . ಮೂರನೆಯ ಸಂಗತಿ. ಯಾವುದೇ ವಿಷಯವನ್ನು ಕುರಿತ ಹೆಚ್ಚಿನ ಬೌದ್ಧಕ ತಿಳಿವಳಿಕೆಯನ್ನು
> ಪಡೆಯಲು ಆಯಾ ವಿಷಯಕ್ಕೆ ಸಂಬಂಧಿಸಿದ ಭಾಷಾಬಳಕೆಯನ್ನು ಪರಿಚಯಮಾಡಿಕೊಳ್ಳುವುದು
> ಅನಿವಾರ್ಯ. ಕಂಪ್ಯೂಟರನ್ನು ಕುರಿತು ಕೂಡ ಈ ಮಾತು ನಿಜ. ಇಂಜಿನಿಯರಿಂಗ್, ಮೆಡಿಕಲ್,
> ಆರ್ಕಿಯಾಲಜಿ, ಇಂಥ ಯಾವುದೇ ವಿಷಯವನ್ನು ತಿಳಿಯಬಯಸುವವರು ನಮ್ಮ ಕಲ್ಪನೆಯ "ಸಾಮಾನ್ಯ"
> ಜನ ಅಲ್ಲ, ಅಂಥ ವಿಷಯವನ್ನು ತಿಳಿಯಲು ಅಗತ್ಯವಾದ ಶ್ರಮವನ್ನು ಪಡಲು ಸಿದ್ದರಾದ ಜನ
> ವರ್ಗ, ಅಲ್ಲವೇ? ತಮ್ಮ ವಿಷಯಕ್ಕೆ ಸಂಬಂಧಿಸಿದ ಹೊಸ ಪರಿಭಾಷೆಗಳನ್ನು ಕಲಿಯಲಾಗದಿದ್ದರೆ
> ಅವರು ಮತ್ತೇನನ್ನು ಕಲಿಯಲು ಸಾಧ್ಯ?
> . ನಾಲ್ಕನೆಯ ಸಂಗತಿ. ದಿನ ಬಳಕೆಯ ಮಾತಿನಲ್ಲಿ ಅಸಂಖ್ಯಾತವಾಗಿ ಅನ್ಯಭಾಷೆಯ ಪದಗಳನ್ನು
> ನಾವೆಲ್ಲ ಬಳಸಿದರೂ ಬರವಣಿಗೆ ಮಾತ್ರ ಇಂಗ್ಲಿಷ್ ದೂರವಾಗಿ, ಸಂಸ್ಕೃತ ಸಮಾನಾರ್ಥಕ ಅಥವ
> ತತ್ಸಮಗಳಿಂದ ಕೂಡಿರಬೇಕೆಂದು ಬಯಸುವ ವಿಚಿತ್ರ ಮನೋಧರ್ಮದವರಾಗಿದ್ದೇವೆ. ಈ
> ಮಡಿವಂತಿಕೆಯೆ ಕನ್ನಡದ ಬಳಕೆಯ ವ್ಯಾಪ್ತಿ ಹೆಚ್ಚದಂತೆ ತಡೆದಿದೆ.
> . ಐದನೆಯ ಮತ್ತು ಕೊನೆಯ ಸಂಗತಿ. ವಿವರಣೆಯ ಭಾಷೆ ಕನ್ನಡವಾಗಿರಬೇಕು, ಅಷ್ಟೇ ಅಲ್ಲ
> ಕನ್ನಡಮಾತ್ರವೇ ಅಗಿರಬೇಕು ಎನ್ನುವುದು ನನ್ನ ಅಭಿಪ್ರಾಯ. ಅಂದರೆ ಎಲ್ಲ ಭಾಷೆಗಳಂತೆ
> ಕನ್ನಡವೂ ನಾಮಪದಗಳನ್ನು ಯಥೇಚ್ಛವಾಗಿ ಅನ್ಯ ಭಾಷೆಗಳಿಂದ ಸ್ವೀಕರಿಸಿದೆ. ಆದರೆ
> ಕ್ರಿಯಾಪದಗಳು ಮತ್ತು ಧಾತುರೂಪಗಳು ಮಾತ್ರ ಕನ್ನಡವೇ ಆಗಿದೆ. ಯಾವ ಭಾಷೆಯೂ
> ಕ್ರಿಯಾಪದಗಳನ್ನು ಎರವಲು ಪಡೆಯುವುದಿಲ್ಲ. ಇಂಗ್ಲಿಷಿನ ಕ್ರಿಯಾಪದಗಳೂ ಕನ್ನಡಕ್ಕೆ
> ಬಂದಾಗ ನಾಮಪದಗಳೇ ಆಗಿಬಿಡುತ್ತವೆ. ಅವಕ್ಕೆ ಕನ್ನಡದ ಕ್ರಿಯಾಪದಗಳನ್ನು
> ಸೇರಿಸುತ್ತೆವೆ. ಕ್ಯಾಚ್, ಕನ್ಸಿಡರ್, ಮೀಟ್, ಅಪ್ಲೈ, ಇಂಥ ಅಸಂಖ್ಯ ಪದಗಳೊಂದಿಗೆ
> "ಹಿಡಿ", "ಮಾಡು" ಎಂಬ ಕನ್ನಡ ಕ್ರಿಯಾಪದಗಳನ್ನು ಸೇರಿಸುತ್ತೇವಲ್ಲವೆ?
> . ಕನ್ನಡವೆಂದರೆ ಪದಕೋಶಮಾತ್ರವಲ್ಲ. ಕೇವಲ ಕನ್ನಡದ ಮತ್ತು ಸಂಸ್ಕೃತದ, ಅನ್ಯಭಾರತೀಯ
> ಭಾಷೆಗಳಿಂದ ಪಡೆದ ಪದಗಳ ರಾಶಿಮಾತ್ರವೇ ಕನ್ನಡತನ ಮತ್ತು ಕನ್ನಡದ ಸ್ವರೂಪವನ್ನು
> ನಿರ್ಧರಿಸುವುದಿಲ್ಲ. ಅರ್ಥ ನಿರ್ಮಾಣದ ನಿಯಮಗಳು ಕನ್ನಡತನವನ್ನೊ ಇಂಗ್ಲಿಷ್ ತನವನ್ನೊ
> ತಮಿಳು ತನವನ್ನೊ ನಿರ್ಧರಿಸುತ್ತವೆ. ಹಾಗೆ ಕನ್ನಡ ೯ನೆಯ ಶತಮಾನದಿಂದಲೂ ತನ್ನ
> ಅರ್ಥವಂತಿಕೆಯ ನಿಯಮಗಳನ್ನು ಜತನದಿಂದ ಕಾಪಾಡಿಕೊಂಡುಬಂದಿದೆ. ಜಗತ್ತಿನ ಎಲ್ಲ ಭಾಷೆಗಳೂ
> ತಮ್ಮ ಅರ್ಥವಂತಿಕೆಯ ನಿಯಮಗಳನ್ನು ಎಂದೆಂದಿಗೂ ಬಿಟ್ಟುಕೊಡುವುದೇ ಇಲ್ಲ. ದಿನದಿನವೂ
> ಹೊಸತಾಗಿ ಸೇರುವ ಮತ್ತು ಮರೆಯಾಗುವ ಪದಸಂಪತ್ತು ಭಾಷೆಯ ತೀರ ಮೇಲ್ಪದರಕ್ಕೆ
> ಸಂಬಂಧಿಸಿದ್ದು. ಅದರ ಬಗ್ಗೆ ಮಡಿವಂತಿಕೆ ತೋರುತ್ತ ಅನ್ಯಭಾಷೆಯ ಪದಗಳನ್ನು
> ನಿರಾಕರಿಸುವುದೇ ಭಾಷಾಭಿಮಾನ ಎಂದುಕೊಳ್ಳುವುದು ತೀರ ತಪ್ಪು. ಕಂಪ್ಯೂಟರ್ ವಲಯಕ್ಕೆ
> ಸಂಬಂಧಿಸಿದ ತಿಳಿವಳಿಕೆಯನ್ನು ಕನ್ನಡದಲ್ಲಿ ನೀಡುವುದು ಅತ್ಯಂತ ಅವಶ್ಯಕ, ತುರ್ತು. ಅದರ
> ಅರ್ಥ ನಮ್ಮ ಸಮಯವನ್ನೆಲ್ಲ ಸಂಸ್ಕೃತ ಮೂಲದ, ಅನ್ಯ ಭಾರತೀಯ ಭಾಷೆಯ ಆಕರಗಳಿಂದ
> ಸಮಾನಾರ್ಥಕಗಳನ್ನು ಹುಡುಕುವುದರಲ್ಲೆ ವ್ಯಯಮಾಡುವುದಲ್ಲ. ತಾಂತ್ರಿಕ ಪದಗಳು ಹಾಗೆಯೇ
> ಇರಲಿ, ಅವುಗಳ ವಿವರಣೆ ಮಾತ್ರ ತಿಳಿಗನ್ನಡದ್ದಾಗಿರಲಿ ಎಂಬುದು ನನ್ನ ನಿಲುವು. ಉಗ್ರ
> ಕನ್ನಡಾಭಿಮಾನಿಗಳು ಇದನ್ನು ಒಪ್ಪಬೇಕೆಂಬ ಹಟವಾಗಲೀ, ಒಪ್ಪಿಯಾರೆಂಬ ಭ್ರಮೆಯಾಗಲಿ
> ನನ್ನಲ್ಲಿಲ್ಲ. ಮೂರುದಶಕದ ಹಿಂದಿನ ತಪ್ಪನ್ನೆ ಪುನರಾವರ್ತಿಸುವುದನ್ನು ಕಂಡಾಗ ವಿಷಾದ
> ಮಾತ್ರ ಮೂಡುತ್ತದೆ.ಮಾತು ಕೊಂಚ ಕಟುವಾಗಿದ್ದರೆ ದಯವಿಟ್ಟು ಕ್ಷಮಿಸಿ.

ಈ ಮಾತನ್ನು ಯಾರಾದರು ಒಪ್ಪಬೇಕಾದ್ದೆ.
>
> ನಮ್ಮ ವಯಕ್ತಿಕ ಬರೆವಣಿಗೆಯಲ್ಲಿ ತಾಂತ್ರಿಕ ಪದಗಳನ್ನು ಹೇಗೆ ಬಳಸುತ್ತೇವೆ ಎನ್ನುವುದು
> ಹಾಗಿರಲಿ, ಕನ್ನಡ ವಿಕಿಪೇಡಿಯಾದಲ್ಲಿ ಬರೆಯುವಾಗ ಏಕರೂಪತೆ ಇದ್ದರೆ ಚೆನ್ನಾದ್ದರಿಂದ
> ವಿಕಿಯ ಮಟ್ಟಿಗೆ ಒಪ್ಪಂದಕ್ಕೆ ಬರುವುದು ಒಳಿತು. ಈ ವಿಷಯವನ್ನು ಚರ್ಚೆಗೆ ಹಾಕೋಣವೆ?
> ವಿಕಿಯ ಮಟ್ಟಿಗೆ ನಾನ್ನು ನಿಮ್ಮ ಕಡೆಗೇ ವಾಲುತ್ತೇನೆ.

ಉತ್ತರ ೨

ಬದಲಾಯಿಸಿ

ಲೇಖನದಲ್ಲಿ ಆಗಲೇ ತಾಂತ್ರಿಕ ಪದಗಳ ಕನ್ನಡ ರೂಪವನ್ನು ಬಳಸಿದ್ದರಿಂದ ಏಕರೂಪ ತರುವ ಇಚ್ಛೆಯಿಂದ ಪದಗಳ ಕನ್ನಡ ರೂಪಕ್ಕೆ ಪತ್ರ ಬರೆದೆ.

ಪ್ರತಿಯೊಂದು ತಾಂತ್ರಿಕ ಪದಕ್ಕೂ ಕನ್ನಡ ಸಮಾನಾರ್ಥಕವನ್ನು ಹುಡುಕುವುದು ಬಹುಷಃ ಸಾಧ್ಯವಾಗದ ಮಾತು. ಕೆಲವನ್ನೇ ಕನ್ನಡ ಅವತರಣಿಕೆಯಲ್ಲಿ ಬಳಸಿದರೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತೆ, ಆದ್ದರಿಂದ ನೀವು ಹೇಳುವುದು ಸತ್ಯ. ನಾವುಗಳು ತಾಂತ್ರಿಕ ಪದಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ತಿಳಿಗನ್ನಡ ವಿವರಣೆಯೆಡೆ ಗಮನಹರಿಸಬೇಕಾದುದು ಒಪ್ಪಿಕೊಳ್ಳುವಂತಹ ಸಂಗತಿ.