ವರ್ಧಮಾನ ಸ್ವಾಮಿ ಜಿನ ಚೈತ್ಯಾಲಯ, ಮಾರ್ನಾಡು

ಮಾರ್ನಾಡು ಶ್ರೀ ವರ್ಧಮಾನಸ್ವಾಮಿ ಜಿನ ಚೈತ್ಯಾಲಯವು ಕರ್ನಾಟಕದ ಪುರಾತನ ಜೈನ ಚೈತ್ಯಾಲಯಗಳಲ್ಲಿ ಒಂದಾಗಿದೆ.

ಮಾರ್ನಾಡು ಶ್ರೀ ೧೦೦೮ ವರ್ಧಮಾನಸ್ವಾಮಿ ಬಸದಿಯು ಮಂಗಳೂರು ತಾಲೂಕಿನ ಮೂಡುಬಿದಿರೆಯ ಪಕ್ಕದ ಮೂಡುಮಾರ್ನಾಡು ಗ್ರಾಮದಲ್ಲಿದೆ. ಕೆಲ್ಲಪುತ್ತಿಗೆ, ದರೆಗುಡ್ಡೆ ಬಸದಿ ಇಲ್ಲಿಂದ ಸುಮಾರು ಆರೂವರೆ ಕಿ.ಮೀ. ದೂರದಲ್ಲಿದೆ.ಮಾರ್ನಾಡು ಬಸದಿಯು ಮೂಡುಬಿದಿರೆ ಜೈನ್ ಮಠಕ್ಕೆ ಸೇರಿರುತ್ತದೆ. ಇಲ್ಲಿಗೆ ಬರಲು ಮೂಡುಬಿದಿರೆಯಿಂದ ಬೆಳುವಾಯಿಗೆ ಬಂದು ಅಲ್ಲಿಂದ ಅಳಿಯೂರು ರಸ್ತೆಯಲ್ಲಿ ಮುಂದೆ ೩.೦೨ ಕಿ.ಮೀ.ನಲ್ಲಿ ಬಲಕ್ಕೆ ತಿರುಗಿ ನಾಮಫಲಕದ ಸಹಾಯದಿಂದ ಬರಬಹುದು ಅಥವಾ ಮೂಡುಬಿದಿರೆ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲಂಗಾರ್‍ನಲ್ಲಿ ಬಲಕ್ಕೆ ಸಾಗಿ ನಂತರ ೧ ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಬೇಕು. ಮುಂದೆ ಅಮನೊಟ್ಟು ಬಾಕ್ಯಾರ್ ಶಾಲೆಯಿಂದ ಮುಂದೆ ಸಾಗಿದಾಗ ಹೊಪಾಲಬೆಟ್ಟ ಗರಡಿಯಿಂದ ಮತ್ತೆ ಮುಂದೆ ಸಾಗಿದಾಗ ಆನೆಗುಡ್ಡೆಗೆ ಹೋಗುವ ದಾರಿಯಲ್ಲಿ ಅರ್ಧ ಫಲಾರ್ಂಗ್ ಮುಂದುವರಿದು ಅನತಿ ದೂರದಲ್ಲಿ ಎಡಕ್ಕೆ ಮಾರ್ನಾಡು ಬಸದಿಗೆ ವಾಹನ ಮಾರ್ಗದಲ್ಲಿ ಬರಬಹುದು .

ಇತಿಹಾಸ

ಬದಲಾಯಿಸಿ

ಬಸದಿಯನ್ನು ಮಾರ್ನಾಡು ಗ್ರಾಮದ ಬೀಡು ಹಾಗೂ ಚಳಿಯಾರು ಮನೆಯ ಪೂರ್ವಿಕರು ಕಟ್ಟಿಸಿದರೆಂದು ಹೇಳುತ್ತಾರೆ. ನಂತರದ ದಿನಗಳಲ್ಲಿ ಮಾರ್ನಾಡು ವರ್ಧಮಾನ ಹೆಗ್ಗಡೆಯವರ ಅಜ್ಜ ಮಾರ್ನಾಡುಗುತ್ತು ಹೆಗ್ಗಡೆಯವರು ದಿನಾಂಕ ೨೪-೦೩-೧೯೧೧ರಲ್ಲಿ ಪುನರ್ ನಿರ್ಮಾಣ ಮಾಡಿ ಜೀರ್ಣೋದ್ಧಾರಗೊಳಿಸಿದರೆಂದು ದಾಖಲೆಗಳಿಂದ ತಿಳಿದು ಬರುತ್ತದೆ. ಪೂರ್ವ ಇತಿಹಾಸದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಬಸದಿಯನ್ನು ಶ್ರೀ ವರ್ಧಮಾನ ಸಂಘ (ರಿ) ಇದರ ಆಡಳಿತ ಮಂಡಳಿಯವರು ನಡೆಸುತ್ತಿದ್ದಾರೆ.[]

ಪ್ರಾಂಗಣ

ಬದಲಾಯಿಸಿ

ಬಸದಿಗೆ ಮಹಡಿ ಇರುತ್ತದೆ. ಪದ್ಮಾವತಿ ಅಮ್ಮನವರು, ಕ್ಷೇತ್ರಪಾಲ ಬಸದಿಯ ಪಕ್ಕದಲ್ಲಿದ್ದು, ಬಸದಿಯ ಎದುರು ಕಲ್ಲುರ್ಟಿ ದೈವದ ಮಾರ್ನಾಡು ಗುಡಿಯಿರುತ್ತದೆ. ಗೋಪುರದ ಎಡ -ಬಲ ಬದಿಗಳ ಜಾಗವನ್ನು ಧಾರ್ಮಿಕ ಸಭೆ - ಸಮಾರಂಭಗಳಿಗೆ ಹಾಗೂ ಆಡಳಿತ ಮಂಡಳಿಯ ಸಭೆಗೆ ಮಾತ್ರ ಉಪಯೋಗಿಸಲಾಗುತ್ತಿದೆ . ಇದೀಗ ಗೋಪುರದ ಒಂದು ಬದಿಯಲ್ಲಿ ಬಸದಿಯ ಕಾರ್ಯಾಲಯ, ಇನ್ನೊಂದು ಬದಿಯಲ್ಲಿ ನೈವೇದ್ಯ ಕೋಣೆ ಇರುತ್ತದೆ. ಬಸದಿಯ ಎದುರು ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳಿವೆ. ಅಲ್ಲದೆ, ಸಮವಸರಣದ ಚಿತ್ರ ಹಾಗೂ ಪಂಚಕಲ್ಯಾಣದ ಚಿತ್ರಗಳಿರುತ್ತವೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಪ್ರಾರ್ಥನಾ ಮಂಟಪದಿಂದ ಮುಂದುವರಿದಾಗ ತೀರ್ಥ ಮಂಟಪ ತಲುಪಬಹುದು. ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿರುತ್ತದೆ. ಅದರ ಬದಿಯಲ್ಲಿ ಉತ್ತರಾಭಿಮುಖವಾಗಿ ಮಹಾಮಾತೆ ಪದ್ಮಾವತಿ ಅಮ್ಮನವರ ಸಾನ್ನಿಧ್ಯವಿರುತ್ತದೆ. ಗಂಧಕುಟಿಯ ಬಳಿಯಲ್ಲಿ ಗಣಾಧರ ಪಾದ, ಶ್ರುತ, ಬ್ರಹ್ಮದೇವರು ಹಾಗೂ ಇತರ ಮೂರ್ತಿಗಳಿವೆ. ಅಂಗಳದಲ್ಲಿ ಬಲಿಕಲ್ಲು, ಅಷ್ಟದಿಕ್ಷಾಲಕರ ಕಲ್ಲು ಇದೆ. ಬಸದಿಯ ಅಂಗಳದ ಎಡಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ಕ್ಷೇತ್ರಪಾಲ, ನಾಗನಕಲ್ಲು, ತ್ರಿಶೂಲ ಇದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದ್ದು, ಇದನ್ನು ಮುರಕಲ್ಲುಗಳಿಂದ ನಿರ್ಮಿಸಲಾಗಿದೆ. ಬಸದಿಗೆ ಇದೀಗ ನೂತನವಾಗಿ ಗೋಪುರದಲ್ಲಿ ಕಚೇರಿ ಇರುತ್ತದೆ.

ಪೂಜಾವಿಧಾನ

ಬದಲಾಯಿಸಿ

ಮಹಾಮಾತೆ ಪದ್ಮಾವತೀ ದೇವಿಯ ಮೂರ್ತಿ ಇದ್ದು, ಇದು ಪಾವನ ಕ್ಷೇತ್ರ ಎಂಬ ಕಾರಣಿಕದ ಹೆಸರು ಹೊಂದಿರುತ್ತದೆ. ದೇವಿಗೆ ನಿತ್ಯಪೂಜೆ ನಡೆಯುತ್ತದೆ. ವಿಶೇಷ ದಿನಗಳಲ್ಲಿ ಸೀರೆ ಉಡಿಸಿ, ಬಳೆಗಳನ್ನು ಹಾಕಿ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಬಸದಿಯಲ್ಲಿ ಅಮ್ಮನವರ ಎದುರು ಪ್ರಾರ್ಥನೆ ಮಾಡುವ ವಿಧಿ ಇದೆ. ಬಲಭಾಗದಿಂದ ಅಪ್ಪಣೆಯಾಗುವ ಕ್ರಮ ಇರುತ್ತದೆ. ಜಿನಬಿಂಬ ಅಥವಾ ಪೀಠಗಳಲ್ಲಿ ಬರವಣಿಗೆಯ ಬಗ್ಗೆ ಮಾಹಿತಿ ಇಲ್ಲ. ಬಸದಿಯ ಮೂಲನಾಯಕ ಕರಿ ಶಿಲೆಯ ಮೂರ್ತಿ. ಪರ್ಯಾಂಕಾಸನ ಭಂಗಿಯಲ್ಲಿದೆ. ಬಸದಿಯಲ್ಲಿ ಬೆಳಿಗ್ಗೆ, ಸಾಯಂಕಾಲ ಹೀಗೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಬಸದಿಯಲ್ಲಿ ಮಹಾವೀರ ಜಯಂತಿ, ನವರಾತ್ರಿ ಪೂಜೆ, ನೂಲಶ್ರಾವಣ, ಜೀವದಯಾಷ್ಟಮಿ ಹಾಗೂ ಇತರ ವಿಶೇಷ ಪೂಜೆ ಹಾಗೂ ಆರಾಧನೆ ನಡೆಯುತ್ತದೆ. ದಿಕ್ಪಾಲಕರಿಗೆ ವಿಶೇಷ ಪೂಜೆಯಂದು ಮಾತ್ರ ಪೂಜೆ ಆಗುತ್ತದೆ. ಜೊತೆಯಲ್ಲಿ ಇಲ್ಲಿರುವ ಎಲ್ಲಾ ದೇವರ ಮೂರ್ತಿಗಳಿಗೂ ನಿತ್ಯಪೂಜೆ ಆಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶೀ ಪ್ರಿಂಟರ್ಸ್. p. ೨೯೩.