ಲ್ವೀ ಜೋಲಿಯೆಟ್
ಜೋಲಿಯೆಟ್, ಲ್ವೀ 1645-1700. ಒಬ್ಬ ಫ್ರೆಂಚ್ ಕೆನೇಡಿಯನ್ ಪರಿಶೋಧಕ,
ಬದುಕು, ಸಾಧನೆ
ಬದಲಾಯಿಸಿ1645ರ ಸೆಪ್ಟಂಬರ್ 21ರಂದು ಕ್ವಿಬೆಕ್‍ನಲ್ಲಿ ಜನಿಸಿ, ಅಲ್ಲಿಯ ಕ್ರೈಸ್ಟ್ ಕಾಲೇಜಿನಲ್ಲಿ ಧಾರ್ಮಿಕ ಶಿಕ್ಷಣ ಪಡೆದ. 1662ರಲ್ಲಿ ಅವನಿಗೆ ಸಣ್ಣ ಉದ್ಯೋಗವೊಂದು ದೊರೆಯಿತು. ಆದರೆ ಪಶ್ಚಿಮ ಗಡಿನಾಡಿನ ಅರಣ್ಯಗಳಲ್ಲಿ ಬೋನಿಗನಾಗ ಬಯಸಿ ಕ್ವಿಬೆಕ್ ನಿಂದ ಹೊರಟ. ಅಲ್ಲಿಯ ಇಂಡಿಯನರ ಸ್ನೇಹ ಬೆಳೆಸಿ, ಅಲ್ಲಿ ಕೆಲಸ ಮಾಡುತ್ತಿದ್ದ ಪಾದ್ರಿಗಳ ಸಂಪರ್ಕ ಪಡೆದ. 1669-70ರಲ್ಲಿ ಫ್ರೆಂಚ್ ಪರಿಶೋಧಕನೊಬ್ಬನೊಡನೆ ತಾಮ್ರನಿಕ್ಷೇಪಗಳನ್ನು ಶೋಧಿಸಲು ಗ್ರೇಟ್ ಲೇಕ್ಸ್ ಪ್ರದೇಶಕ್ಕೆ ಹೋದ. ಪೆಸಿಫಿಕ್ ಸಾಗರವನ್ನು ಸೇರುವುದೆಂದು ಕೆಲವರು ಭಾವಿಸಿದ್ದ ಮಿಸಿಸಿಪಿ ನದಿಯ ಪರಿಶೋಧನೆಯ ನೇತೃತ್ವ ವಹಿಸಲು 1672ರಲ್ಲಿ ಕೆನಡದ ಗವರ್ನರನಿಂದ ಜೋಲಿಯೆಟ್ ಆಯ್ಕೆಯಾದ. 1673ರ ಮೇ 17ರಂದು ಪಾದ್ರಿ ಫಾರ್ಕ್ ಮಾರ್ಕೆಟ್ ಮತ್ತು ಕೆಲವು ಮಂದಿ ಫ್ರೆಂಚ್ ಪರಿಶೋಧಕರೊಂದಿಗೆ ಜೋಲಿಯೆಟ್ ಮಿಚಿಗನ್ ಸರೋವರವನ್ನು ದಾಟಿ ವಿಸ್ಕಾನ್ಸಿನ್ ನದಿಯ ಮೂಲಪ್ರದೇಶವನ್ನು ತಲುಪಿ ಕೆಳಮುಖವಾಗಿ ಸಾಗುತ್ತ ಜೂನ್ 17ರಂದು ಮಿಸಿಸಿಪಿ ನದಿಯನ್ನು ಪ್ರವೇಶಿಸಿದ. ಸುಮಾರು ಒಂದು ತಿಂಗಳ ಕಾಲ ಅವರು ನದಿಯ ಗತಿಯನ್ನು ಅನುಸರಿಸಿ ಆರ್ಕನ್ಸಾ ನದಿಯು ಮುಖ ಪ್ರದೇಶವನ್ನು ತಲುಪಿದರು. ಮಿಸಿಸಿಪಿ ನದಿಯ ಹರಿವನ್ನು ಸ್ಥೂಲವಾಗಿ ಗೊತ್ತುಮಾಡಿಕೊಂಡು, ಅದು ಪೆಸಿಫಿಕ್ ಸಾಗರವನ್ನು ಸೇರುವುದಿಲ್ಲವೆಂಬುದನ್ನು ಮನದಟ್ಟು ಮಾಡಿಕೊಂಡು ಈ ತಂಡ ಹಿಂದಕ್ಕೆ ಹೊರಟಿತು. ಜೋಲಿಯೆಟ್ ಗ್ರೇಟ್ ಲೇಕ್ಸ್ ಹಾಗೂ ಸೆಂಟ್ ಲಾರೆನ್ಸ್ ನದಿಗಳ ಮಾರ್ಗವಾಗಿ ಕ್ವಿಬೆಕಿನತ್ತ ಯಾನ ಮಾಡುತ್ತಿದ್ದಾಗ ಮಾಂಟ್ರಿಯಾಲ್ ಬಳಿ ಅವನ ದೋಣಿ ತಲೆಕೆಳಗಾಗಿ ಅವನ ಎಲ್ಲ ಭೂಪಟಗಳೂ ಟಿಪ್ಪಣಿಗಳೂ ನೀರುಪಾಲಾದುವು. ಆದರೂ ಅವನು ತನ್ನ ನೆನಪಿನಿಂದಲೇ ಬಹುಮಟ್ಟಿನ ಭೂಪಟ ಟಿಪ್ಪಣಿಗಳನ್ನು ಮತ್ತೆ ಸಿದ್ದಪಡಿಸಿದ. ಜೋಲಿಯೆಟ್ ಕ್ವಿಬೆಕ್ ತಲುಪಿದಾಗ ಅವನ ಅನ್ವೇಷಣೆಗಳಿಗಾಗಿ ಅವನನ್ನು ಗೌರವಿಸಲಾಯಿತು. ಜೋಲಿಯೆಟ್‍ನ ಅಮೂಲ್ಯ ಸೇವೆಯನ್ನು ಪರಿಗಣಿಸಿ ಫ್ರೆಂಚ್ ಸರ್ಕಾರ ಅವನಿಗೆ ಸೆಂಟ್ ಲಾರೆನ್ಸ್ ನದಿಯ ಮುಖಪ್ರದೇಶದಲ್ಲಿರುವ ಆಂಟಿಕಾಸ್ಟಿ ದ್ವೀಪವನ್ನು 1680ರಲ್ಲಿ ನೀಡಿ ಸನ್ಮಾನಿಸಿತು. ಆದರೆ ಇದು 1691 ರಲ್ಲಿ ಬ್ರಿಟಿಷರ ವಶವಾಯಿತು. 1697ರಲ್ಲಿ ಕ್ವಿಬೆಕ್‍ನ ದಕ್ಷಿಣಕ್ಕಿರುವ ಜೋಲಿಯೆಟ್ ಎಂಬ ಸ್ಥಳವನ್ನು ಅವನಿಗೆ ಜಹಗೀರಾಗಿ ನೀಡಲಾಯಿತು. 1700ರ ಮೇ ತಿಂಗಳಿನಲ್ಲಿ ಜೋಲಿಯೆಟ್ ಮರಣಹೊಂದಿದೆ. ಜೋಲಿಯೆಟ್ ಮತ್ತು ಮಾರ್ಕೆಟ್ ಮಿಸಿಸಿಪಿಯ ಪ್ರಥಮ ಪರಿಶೋಧಕರೆಂಬುದು ವಾದಗ್ರಸ್ತವಾಗಿದೆ. ಇವರಿಗಿಂತ ಮುಂಚೆ ರ್ಯಾಡೀಸನ್ ಎಂಬಾತ ಬಹುಶಃ ಇಲ್ಲಿಗೆ ಬಂದಿದ್ದನೆನ್ನಲಾಗಿದೆ. ಆದರೂ ಸಾಕಷ್ಟು ದೂರ ಈ ನದಿಯನ್ನು ಅನುಸರಿಸಿ ಹೋದವರಲ್ಲಿ ಇವರೇ ಮೊದಲಿಗರೆನ್ನಬಹುದು.