ಲೂಯಿ ಡ ಬ್ರಾಗ್ಲೀ
ಲೂಯಿ ವಿಕ್ಟರ್ ಪಿಯರ್ ರೇಮಾಂಡ್ ಡ ಬ್ರಾಗ್ಲೀ, (1892-1987) . ಫ್ರೆಂಚ್ ಭೌತವಿಜ್ಞಾನಿ. ಅಲೆಬಲವಿಜ್ಞಾನಕ್ಕೆ (ವೇವ್ ಮೆಕ್ಯಾನಿಕ್ಸ್) ಭದ್ರಬುನಾದಿ ಹಾಕಿ ಆಧುನಿಕ ಭೌತಶಾಸ್ತ್ರದ ಗತಿಯನ್ನೇ ಬದಲಿಸಿದ ಮೇಧಾವಿ.
ಬದುಕು ಮತ್ತು ಸಾಧನೆ
ಬದಲಾಯಿಸಿಫ್ರಾನ್ಸಿನ ಡೀಪೇ ಎಂಬಲ್ಲಿ ವಿಕ್ಟರ್ ಡ್ಯೂಕ್ ಡಿಬ್ರಾಗ್ಲೀ ಎಂಬ ಪ್ರತಿಷ್ಠಿತನ ಮಗನಾಗಿ ಲೂಯಿಯ ಜನನ (15-8-1982). ಸೈಲಿ ಎಂಬಲ್ಲಿಯ ಲೈಸೇಜಾನ್ ಸನ್ ಎಂಬ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ಅನಂತರ ಸಾರ್‍ಬಾನೆಯಲ್ಲಿ ಸಾಹಿತ್ಯದ ಅಧ್ಯಯನ ನಡೆಸಿದ. ಇವನ ಮೊದಲನೆಯ ಪದವಿ (1910) ಇತಿಹಾಸದಲ್ಲಿ ಆದರೂ ಮುಂದೆ ಈತನ ಒಲವು ವಿಜ್ಞಾನದತ್ತ ತಿರುಗಿ 1913ರಲ್ಲಿ ವಿಜ್ಞಾನದಲ್ಲೂ ಪದವಿಯನ್ನು ಪಡೆದ. ಇದಾದ ಬಳಿಕ ಫ್ರೆಂಚ್ ಭೂಸೇನೆಯನ್ನು ಸೇರಿ, ಅಲ್ಲಿಯ ನಿಸ್ತಂತು ವಿಭಾಗದಲ್ಲಿ ಸೇವೆ ಸಲ್ಲಿಸಿದ. ಒಂದನೆಯ ಮಹಾಯುದ್ಧ (1914-18) ಮುಗಿದ ಬಳಿಕ ಭೌತಶಾಸತ್ರದ ಅಧ್ಯಯನ ಮತ್ತು ಸಂಶೋಧನೆಗೆ ಹಿಂತಿರುಗಿ, ಮೊದಲು ತನ್ನ ಅಣ್ಣ ಮಾರಿಸ್‍ನೊಡನೆ ಅನೇಕ ಪರಯೋಗಗಳನ್ನು ನಡೆಸಿದ. ಆದರೆ ಇವನ ಒಲವು ತಾತ್ತ್ವಿಕ ಭೌತಶಾಸ್ತ್ರ ಅದರಲ್ಲೂ ಕ್ವಾಂಟಮ್ ತತ್ತ್ವದ ಕಡೆಗೆ ವಾಲಿತು. ಕ್ವಾಂಟಮುಗಳ ತತ್ತ್ವದ ಬಗ್ಗೆ ಸಂಶೋಧನೆಗಳು ಎಂಬ ಪ್ರಬಂಧವನ್ನು ಬರೆದು 1924ರಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದ. ಇವನ ಅತಿ ಮುಖ್ಯವಾದ ಪರಿಶೋಧನೆಯಾದ ಎಲೆಕ್ಟ್ರಾನಿನ ಅಲೆಸ್ವಭಾವದ ಬಗ್ಗೆ ಈ ಪ್ರಬಂಧದಲ್ಲಿ ವಿವರಿಸಿದ್ದ.
ಕಪ್ಪುವಸ್ತುಗಳು ಹೊರಸೂಸುವ ವಿಸರಣಗಳ (ಬ್ಲ್ಯಾಕ್ ಬಾಡಿ ರೇಡಿಯೇಷನ್ಸ್) ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳು ಮ್ಯಾಕ್ಸ್ ಪ್ಲಾಂಕ್ ಬೆಳಕಿನ ಕ್ವಾಂಟಮ್ ಸಿದ್ಧಾಂತವನ್ನು ಪ್ರತಿಪಾದಿಸಿದ (1900). ಅದುವರೆಗೆ ನಮನ ಮತ್ತು ವ್ಯತಿಕರಣ (ಡಿಫ್ಯ್ರಾಕ್ಷನ್ ಅಂಡ್ ಇಂಟರ್‍ಫಿರೆನ್ಸ್) ಇತ್ಯಾದಿ ಪರಾಣಮಗಳನ್ನು ವಿವರಿಸಲು ಬೆಳಕು ಅಲೆ ರೂಪದಲ್ಲಿರುವುದೆಂದೇ ನಂಬಲಾಗಿತ್ತು. ಪ್ಲಾಂಕ್‍ನ ಕ್ವಾಂಟಮ್ ನಿಯಮದ ಪ್ರಕಾರ, ಬೆಳಕು ವಿವಿಕ್ತವಾದ ಒಂದು ಶಕ್ತಿ ಇರುವ ಕ್ವಾಂಟಮುಗಳ ರೂಪದಲ್ಲಿ ವಸ್ತುಗಳಿಂದ ಹೀರಲ್ಪಡುವುದು ಅಥವಾ ಉತ್ಸರ್ಜಿಸಲ್ಪಡುವುದು. ಆದರೆ ಬೆಳಕು ವಸ್ತುವಿನಿಂದ ಉತ್ಸರ್ಜಿಸಲ್ಪಟ್ಟ ಬಳಿಕ ಆಕಾಶದಲ್ಲಿ ಪ್ರಯಾಣ ಮಾಡಬೇಕಷ್ಟೆ. ಆಗ ಅದರ ಸ್ವರೂಪವೇನು? ದ್ಯುತಿ ವೈದ್ಯುತ ಪರಿಣಾಮದ ಗುಣಗಳನ್ನು ವಿವರಿಸಲು ಬೆಳಕು ಕಣಗಳಿಂದ ಕೂಡಿದ ಎಂದು ಆಲ್ಬರ್ಟ್‍ಐನ್‍ಸ್ಟೈನ್ 1905ರಲ್ಲಿ ಪ್ರತಿಪಾದಿಸಿದ. ಈತ ಫೋಟಾನ್‍ಗಳೆಂದು ಕರೆಯಲ್ಪಡುವ ಇಂಥ ಬೆಳಕಿನ ಕಣಗಳಿಗೂ ಬೆಳಕಿನ ಅಲೆಸ್ವರೂಪಕ್ಕೂ ಸಾಮರಸ್ಯವನ್ನು ಉಂಡುಮಾಡುವುದು ಹೇಗೆ ? ಈ ದೃಷ್ಠಯಿಂದಲೇ ಐನ್‍ಸ್ಟೈನ್ ಈ ಕಣಗಳನ್ನು ಅಲೆ ಕಟ್ಟುಗಳು (ವೇವ್ ಪ್ಯಾಕೆಟ್ಸ್) ಎಂದು ಕರೆದ. ಬೆಳಕಿನ ಈ ರೂಪದ್ವಯಗಳೆರಡನ್ನೂ ಅಳವಡಿಸಿಕೊಂಡಿರುವುದೇ ಆಧುನಿಕ ಬೆಳಕಿನ ಸಿದ್ಧಾಂತದ ವಿಶೇಷ.
ಈ ರೀತಿಯ ಅಲೆ ಮತ್ತು ಕಣಗಳೆಂಬ ರೂಪದ್ವಯ ಬೆಳಕಿಗೆ ಮಾತ್ರ ಸೀಮಿತವಾಗಿದೆಯೇ? ಈ ಪ್ರಶ್ನೆಯನ್ನು ಮೊದಲಬಾರಿಗೆ ಕೂಲಂಕಷವಾಗಿ ಪರಿಶೀಲಿಸಿ ಸಿರಯಾದ ಉತ್ತರವನ್ನು ಕಂಡುಹಿಡಿದ ಕೀರ್ತಿ ಲೂಯಿ ಡ ಬ್ರಾಗ್ಲೀಗೆ ಸಲ್ಲುತ್ತದೆ. 1922ರ ವೇಳೆಗೆ ಈತ ಎಲೆಕ್ಟ್ರಾನುಗಳ ಚಲನೆಯ ಬಗ್ಗೆ ಸಂಶೋಧನೆಯನ್ನು ಆರಂಭಿಸಿದ. ಗಣಿತಶಾಸ್ತ್ರವನ್ನು ಉಪಯೋಗಿಸಿ ತಾತ್ತ್ವಿಕವಾಗಿ ವಿಶ್ಲೇಷಿಸಿದ ಅನಂತರ ಎಲೆಕ್ಟ್ರಾನುಗಳು ಕಣಗಳಂತೆ ಮಾತ್ರವೇ ಯಾವಗಲೂ ವರ್ತಿಸುವುದೆಂದು ಹೇಳಲಾಗುವುದಿಲ್ಲವೆಂದೂ ಅವು ಅಲೆಗಳಂತೆ ವರ್ತಿಸುವುದಕ್ಕೆ ಅವಕಾಶ ಉಂಟೆಂದೂ ಸಿದ್ಧಾಂತಿಸಿದ. ಎಂದರೆ, ವಸ್ತುಗಳ ಕಣಗಳಿಗೆ ಸಂಬಂಧಿಸಿದಂತೆ ಅಲೆಗಳೂ ಇರುವುವೆಂದಾಯಿತು. ಇಂಥ ಅಲೆಗಳಿಗೆ ದ್ರವ್ಯಅಲೆಗಳು (ಮ್ಯಾಟರ್ ವೇವ್ಸ್) ಎಂದು ಹೆಸರು. ಪ್ರತಿಯೊಂದು ಕಣಕ್ಕೆ ಸಂಬಂಧಿಸಿದಂತೆಯೂ ಇರುವ ಅಲೆಗಳ ಮುಡಿಗಳ (ಕ್ರೆಸ್ಟ್ಸ್) ಮಧ್ಯೆ ಇರುವ ಅಂತರವನ್ನು ಡ ಬ್ರಾಗ್ಲೀ ಅಲೆಯುದ್ಧ ಎಂದು ಹೆಸರಿಸಲಾಗಿದೆ. ಈ ಡ ಬ್ರಾಗ್ಲೀ ಅಲೆಯುದ್ಧವೇ ವಸ್ತುವಿಗೆ ಸಂಬಂಧಿಸಿದ ಅಲೆಗಳ ವಿಲಕ್ಷಣ ಗುಣ. ಚಲನೆಯಲ್ಲಿರುವ ಕಣಗಳ ವಿಶೇಷ ಗುಣವಾದರೋ ಅವುಗಳ ಸಂವೇಗ 9ಮೊಮೆಂಟಮ್). ಇವೆರಡಕ್ಕೂ ಇರುವ ಸಂಬಂಧವನ್ನು ಡ ಬ್ರಾಗ್ಲೀ ನಿರೂಪಿಸಿದ:
ಇಂಥ ಯಾವುದೇ ಅಲೆಗಳ ಒಂದು ಮುಖ್ಯವಾದ ಗುಣವೆಂದರೆ, ತನ್ನ ಅಂಗ ಭಾಗಗಳ ಮಧ್ಯೆ ಇರುವ ಅಂತರವು ಅಲೆಯುದ್ಧಕ್ಕೆ ಹೋಲುವ ವಿಚ್ಛಿನ್ನ ವಸ್ತುವಿನ ಮೇಲೆ ಬಿದ್ದಾಗ, ಅಲೆಗಳು ನಮನಗೊಂಡು ಅವುಗಳ ವೃತಿಕರಣದಿಂದ ಕೆಲವು ದಿಶೆಗಳಲ್ಲಿ ಅಲೆಗಳ ಶಕ್ತಿ ಅತಿ ಹೆಚ್ಚಾಗಿಯೂ ಮಿಕ್ಕ ದೆಶೆಗಳಲ್ಲಿ ಹೆಚ್ಚು ಕಡಿಮೆ ಸೊನ್ನೆ ಶಕ್ತಿಯೂ ಇರುವಂತಾಗುವುದು. ಕಣಗಳಿಗೆ ಸಂಬಂಧಿಸಿದ ಅಲೆಗಳೂ ಇಂಥದೇ ಪರಿಣಾಮಕ್ಕೆ ಒಳಗಾಗುವುದೆಂದು ಡ ಬ್ರಾಗ್ಲೀ ತರ್ಕಿಸಿದ. ಡೇವಿಸನ್ ಮತ್ತು ಜರ್ಮರ್ ಎಂಬ ಅಮೆರಿಕದ ವಿಜ್ಞಾನಿಗಳು 1925ರಲ್ಲಿ ನಿಕಲ್ ಹರಳುಗಳನ್ನು ಉಪಯೋಗಿಸಿಕೊಂಡು. ಎಲೆಕ್ಟ್ರಾನುಗಳ ನಮನವನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟರು. ಅಷ್ಟೇ ಅಲ್ಲದೆ, ಇಂಥ ಪ್ರಯೋಗದಲ್ಲಿನ ಮನಮದ ಪ್ರಮಾಣ ಡ ಬ್ರಾಗ್ಲೀಯ ಲೆಕ್ಕಾಚಾರವನ್ನೂ ದೃಢಪಡಿಸಿತು. ಮುಂದೆ ಬ್ರಿಟನ್ನಿನ ಜಿ. ಪಿ. ತಾಮ್‍ಸನ್ ದೊಡ್ಡ ಹರಳಿನ ಬದಲು ಎಕ್ಸ್‍ಕಿರಣಗಳ ವಿಷಯದಲ್ಲಿ ಉಪಯೋಗಿಸುವ ಡೀಬೈ-ಷೆರ್ರರ್ ವಿಧಾನದ ರೀತಿಯಲ್ಲೇ ಹರಳಿನ ಪುಡಿಯನ್ನು ಬಳಸಿ ಎಲೆಕ್ಟ್ರಾನುಗಳ ಅಲೆರೂಪವನ್ನು ಸಮರ್ಥಿಸಿದ. ಈ ರೂಪದ್ವಯದ ಅರ್ಥವೇನೆಂದರೆ, ಯಾವುದೇ ಕ್ಷಣದಲ್ಲಿ ಕಣಗಳು ಒಂದು ಜಾಗದಲ್ಲಿ ಇರುವುವೋ ಇಲ್ಲವೋ ಎಂದು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಆದೆ ಅವು ಆ ಜಾಗದಲ್ಲಿರುವ ಸಂಭಾವ್ಯತೆ ಅವಕ್ಕೆ ಸಂಬಂಧಿಸಿದ ಅಲೆಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಕಣಪುಂಜಗಳ ಬಲವಿಜ್ಞಾನವನ್ನು ಡ ಬ್ರಾಗ್ಲೀ ಇನ್ನೂ ಹೆಚ್ಚಾಗಿ ಅಧ್ಯಯನ ಮಾಡಿ ದ್ರವ್ಯಅಲೆಗಳ ಗುಣಗಳ ಬಗ್ಗೆ ಸಂಶೋಧನೆಯನ್ನು ನಡೆಸಿದ. 1930 ರಿಂದ 1950ರ ವರೆಗೆ ಅಲೆಬಲವಿಜ್ಞಾನದ ಅನೇಕ ಮುಖಗಳಲ್ಲಿ ಪರಿಶೋಧನೆ ನಡೆಸಿದ: ಡಿರಾಕ್ ಪ್ರತಿಪಾದಿಸಿದ ಎಲೆಕ್ಟ್ರಾನುಗಳ ಸಿದ್ಧಾಂತ, ಬೆಳಕಿನ ಹೊಸ ಸಿದ್ಧಾಂತ, ಗಿರಕಿಸುತ್ತಿರುವ ಕಣಗಳ ಸಿದ್ಧಾಂತ, ಪರಮಾಣುಶಾಸ್ತ್ರದಲ್ಲಿ ಅಲೆಬಲ ವಿಜ್ಞಾನದ ಉಪಯೋಗ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದ. ಕಣಗಳು ಒಂದು ಪಥದಿಂದ ಇನ್ನೊಂದು ಪಥಕ್ಕೆ ಸತತವಾಗಿ ಹಾರುವ ಒಂದು ಮಾದರಿಯನ್ನೂ ಪರಿಶೀಲಿಸಿದ (1954).
ತನ್ನ 1924ರ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದ ಬಳಿಕ ಡ ಬ್ರಾಗ್ಲೀ ಎರಡು ವರ್ಷ ಸಾಲ್‍ಬಾನೆಯಲ್ಲಿ ಉಚಿತ ಶಿಕ್ಷಕನಾಗಿ ಕೆಲಸಮಾಡಿದ. ಅನಂತರ ಪ್ಯಾರಿಸ್ಸಿನ ಹೆನ್ರಿ ಪ್ವಾನ್‍ಕಾರೇ ಸಂಸ್ಥೆಯಲ್ಲಿ ತಾತ್ತ್ವಿಕ ಭೌತಶಾಸ್ತ್ರದ ಅಧ್ಯಾಪಕನಾಗಿ ನೇಮಕಗೊಂಡ. 1932ರಿಂದ ಈಚೆಗೆ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿನ ತಾತ್ತ್ವಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಹೆನ್ರಿ ಪ್ವಾನ್‍ಕಾರೇ ಸಂಸ್ಥೆಯಲ್ಲಿ ಪ್ರತಿ ವರ್ಷವೂ ಒಂದು ಹೊಸ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತ ಬಂದಿದ್ದು, ಇವುಗಳಲ್ಲಿ ಅನೇಕ ಉಪನ್ಯಾಸಮಾಲೆಗಳು ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ. ಡ ಬ್ರಾಗ್ಲೀಗೆ ಅಭಿಸಿರುವ ಹಲವಾರು ಪ್ರಶಸ್ತಿ ಗೌರವಗಳ ಪೈಕಿ ಹಿರಿದಾದದ್ದು ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ (1929).