ಲಿಚ್ಛವಿ

ಭಾರತೀಯ ವಂಶ

ಲಿಚ್ಛವಿಯರು ಪ್ರಾಚೀನ ಭಾರತದ ವಜ್ಜಿ ಮಹಾಜನಪದದ ಆಳ್ವಿಕೆ ನಡೆಸುತ್ತಿದ್ದ ಸಂಘದ ವಂಶಗಳ ಪೈಕಿ ಅತ್ಯಂತ ಪ್ರಸಿದ್ಧ ವಂಶವಾಗಿದ್ದರು. ಲಿಚ್ಛವಿಗಳ ರಾಜಧಾನಿ ಮತ್ತು ತವರಾಗಿದ್ದ ವೈಶಾಲಿಯು ವಜ್ಜಿ ಮಹಾಜನಪದದ ರಾಜಧಾನಿಯೂ ಆಗಿತ್ತು. ತನ್ನ ರಾಜ್ಯದಲ್ಲಿ ವಜ್ಜಿ ಪ್ರಾಂತ್ಯವನ್ನು ಸೇರಿಸಿಕೊಂಡ ಅಜಾತಶತ್ರುವು ವೈಶಾಲಿಯನ್ನು ನಂತರ ವಶಪಡಿಸಿಕೊಂಡನು.[][]

ತನ್ನ ಅರ್ಥಶಾಸ್ತ್ರ ಪುಸ್ತಕದಲ್ಲಿ ಕೌಟಿಲ್ಯನು ಲಿಚ್ಛವಿಯರನ್ನು ಒಂದು ಗಣ ಸಂಘವೆಂದು ವರ್ಣಿಸುತ್ತಾನೆ. ಇದರ ನಾಯಕನು ರಾಜ (ರಾಜಶಬ್ದೋಪಜೀವಿನಃ) ಎಂಬ ಬಿರುದನ್ನು ಬಳಸುತ್ತಿದ್ದನು. ಒಂದು ಬೌದ್ಧ ಪಠ್ಯವಾದ ಮಹಾಪರಿನಿಬ್ಬಾನ ಸುತ್ತಂತವು ಅವರನ್ನು ಕ್ಷತ್ರಿಯರೆಂದು ಮತ್ತು ಬುದ್ಧನ ಅವಶೇಷಗಳ ಹಕ್ಕುದಾರರಲ್ಲಿ ಒಬ್ಬರೆಂದು ಸೂಚಿಸುತ್ತದೆ. ಅವರು ಸ್ವತಃ ಕ್ಷತ್ರಿಯ ಸ್ಥಾನದ ಹಕ್ಕನ್ನು ಸಾಧಿಸಿದ್ದಾರೆ. ದೀಘ ನಿಕಾಯದ ಪ್ರಕಾರ, ಲಿಚ್ಛವಿಯರು ವಶಿಷ್ಠ ಗೋತ್ರದವರಾಗಿದ್ದರು. ಮನುಸ್ಮೃತಿಯಲ್ಲಿ, ಲಿಚ್ಛವಿಯರನ್ನು ವ್ರತ್ಯ ಕ್ಷತ್ರಿಯ ವರ್ಗದಲ್ಲಿ ಇರಿಸಲಾಗಿದೆ ಎಂದು ಒಬ್ಬ ವಿದ್ವಾಂಸನು ಊಹಿಸುತ್ತಾನೆ.

ತನ್ನ ಪರಮತ್ಥಜೋತಿಕಾ ಕೃತಿಯಲ್ಲಿ ಬುದ್ಧಘೋಶನು ಲಿಚ್ಛವಿಯರ ಮೂಲವನ್ನು ಬನಾರಸ್‍ಗೆ ಪತ್ತೆಹಚ್ಚಿದನು. ಇಂದಿನ ಉತ್ತರ ಬಿಹಾರ ಮತ್ತು ತೆರಾಯ್ ಪ್ರದೇಶವನ್ನು ಒಳಗೊಂಡಿರುವ ಪ್ರದೇಶದ ಮೇಲೆ ಲಿಚ್ಛವಿ ಪ್ರಾಬಲ್ಯದ ಸ್ಥಾಪನೆಯ ದಿನಾಂಕ ತಿಳಿದಿಲ್ಲ. ಮಹಾವೀರ ಮತ್ತು ಗೌತಮ ಬುದ್ಧರ ಕಾಲದ ವೇಳೆಗೆ, ಈ ವಂಶವು ಆಗಲೇ ತಮ್ಮ ರಾಜಧಾನಿ ವೈಶಾಲಿಯ ಸುತ್ತ ಸ್ಥಿರವಾಗಿ ನೆಲೆನಿಂತಿದ್ದರು. ಬೌದ್ಧ ಸಂಪ್ರದಾಯವು ಅನೇಕ ಖ್ಯಾತ ಲಿಚ್ಛವಿಯರ ಹೆಸರುಗಳನ್ನು ಸಂರಕ್ಷಿಸಿದೆ. ಇವರಲ್ಲಿ ರಾಜಕುಮಾರ ಅಭ್ಯಯ, ಒಟ್ಠಾದ್ಧ, ಮಹಾಲಿ, ಸೇನಾಪತಿಗಳು, ಸೀಹ ಮತ್ತು ಅಜಿತ, ದುಮ್ಮುಖ ಹಾಗೂ ಸುನಕ್ಖತ. ಭದ್ರವಾಹುವಿನ ಕಲ್ಪಸೂತ್ರವು ಒಂಭತ್ತು ಲಿಚ್ಛವಿ ಗಣರಾಜರನ್ನು ಉಲ್ಲೇಖಿಸುತ್ತದೆ. ಇವರು ಮಲ್ಲದ ಒಂಭತ್ತು ಗಣರಾಜರು ಮತ್ತು ಕಾಶಿ-ಕೋಸಲದ ಹದಿನೆಂಟು ಗಣರಾಜರ ಜೊತೆಗೆ ಮಗಧದ ವಿರುದ್ಧ ಒಂದು ಒಕ್ಕೂಟವನ್ನು ರಚಿಸಿದರು. ಚೇತಕನು ಈ ಒಕ್ಕೂಟದ ನಾಯಕನಾಗಿದ್ದನು. ಚೇತಕನ ಸೋದರಿ ತ್ರಿಶಲಾ ಮಹಾವೀರನ ತಾಯಿಯಾಗಿದ್ದಳು.

ಲಿಚ್ಛವಿ ಸರ್ಕಾರ ವ್ಯವಸ್ಥೆಯ ವಿರಳ ವರದಿಗಳು ಮಾತ್ರ ಉಳಿದಿವೆ. ಲಿಚ್ಛವಿ ೭೭೦೭ ರಾಜರನ್ನು ಹೊಂದಿತ್ತು ಎಂದು ಚುಲ್ಲಕಲಿಂಗ ಜಾತಕ ಮತ್ತು ಏಕಪಣ್ಣ ಜಾತಕದ ಪರಿಚಯಾತ್ಮಕ ಭಾಗಗಳು ಉಲ್ಲೇಖಿಸುತ್ತವೆ. ಈ ಸಂಖ್ಯೆ ಸಾಂಪ್ರದಾಯಿಕ ಮಾತ್ರ, ಮತ್ತು ನಿಖರವಾಗಿದ್ದಿರುವುದು ಅಸಂಭವವಾಗಿದೆ. ಅದರ ಬಹುತೇಕ ನೆರೆರಾಜ್ಯಗಳಿಂದ ಭಿನ್ನವಾಗಿ ಲಿಚ್ಛವಿಯು ಸಂಪೂರ್ಣ ರಾಜಪ್ರಭುತ್ವವಾಗಿರಲಿಲ್ಲ ಎಂದು ಇದು ಪ್ರದರ್ಶಿಸುತ್ತದೆ. ಅಂತಿಮ ಅಧಿಕಾರ ೭೭೦೭ ರಾಜರ ಬಳಿ ಇತ್ತು. ಇವರು ಪ್ರತಿ ವರ್ಷ ಭೇಟಿಯಾಗಿ ತಮ್ಮ ಒಬ್ಬ ಸದಸ್ಯನನ್ನು ರಾಜನಾಗಿ ಮತ್ತು ಅವನಿಗೆ ನೆರವಾಗಲು ಒಂಭತ್ತು ಜನರ ಪರಿಷತ್ತನ್ನು ಆಯ್ಕೆಮಾಡುತ್ತಿತ್ತು.

ಉಲ್ಲೇಖಗಳು

ಬದಲಾಯಿಸಿ
  1. Raychaudhuri, Hemchandra (1972), Political History of Ancient India, University of Calcutta, Calcutta, pp. 106–113, 186–90
  2. "An introduction to Nepal". p. 41. Retrieved 27 March 2017.


"https://kn.wikipedia.org/w/index.php?title=ಲಿಚ್ಛವಿ&oldid=804734" ಇಂದ ಪಡೆಯಲ್ಪಟ್ಟಿದೆ