ಲಿಂಗಾಯತ ಧರ್ಮದ ಪುನರುತ್ಥಾನ


ಗುರುಬಸವಣ್ಣನವರು ತಮ್ಮ ಜೀವಿತ ಅವಧಿಯಲ್ಲಿಯೇ ಒಂದು ಪರಿಪೂರ್ಣ ಧರ್ಮವನ್ನು ಕೊಟ್ಟರು. ಧಾರ್ಮಿಕ ಲಾಂಛನಗಳಾದ ಅಷ್ಟಾವರಣಗಳು, ಆಚರಣೆಗಳಾದ ಪಂಚಾಚಾರಗಳನ್ನು ಕೊಟ್ಟರು. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ, ಭೂ ಮಂಡಲದ ಯಾವುದೇ ಭಾಗದಲ್ಲಿ, ಒಂದು ಧರ್ಮ ಗುರುವಿನ ಜೀವಿತ ಅವಧಿಯಲ್ಲೇ ಲಿಂಗಾಯತ ಧರ್ಮದಷ್ಟು ಪರಿಪೂರ್ಣವಾದ ಧರ್ಮ ಮತ್ತಾವುದೂ ಆಗಲಿಲ್ಲ. ಗುರುಬಸವಣ್ಣನವರು ಅಂದು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅನುಯಾಯಿಗಳನ್ನು ಹೊಂದಿದ್ದರು. ಧಾರ್ಮಿಕ ಸಂಹಿತೆಯಾಗಿ ವಚನ ಸಾಹಿತ್ಯವನ್ನು ಕೊಟ್ಟರು. ತಾವೊಬ್ಬರೇ ವಚನಗಳನ್ನು ಬರೆಯದೇ ತಮ್ಮ ಸನ್ನಿಧಿಗೆ ಬಂದ ಎಲ್ಲರಿಗೂ ಶಿಕ್ಷಣವನ್ನು ಕೊಟ್ಟು, ಅನುಭಾವದ ನುಡಿಗಲಿಸಿ ಅವರಿಂದಲೂ ಅನುಭಾವದ ನುಡಿಗಳು ವಚನಗಳ ರೂಪದಲ್ಲಿ ಹೊರ ಹೊಮ್ಮುವಂತೆ ಮಾಡಿದರು. ಗುರುಬಸವಣ್ಣನವರು ತತ್ವವನ್ನು ಕೇವಲ ಬೋಧಿಸಿದೆ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದರು.

ಇಷ್ಟಲಿಂಗವು ದೇವರ ಕುರುಹು ಮಾತ್ರವಲ್ಲದೆ ಸಮಾನತೆಯ ಕುರುಹು ಕೂಡ ಆಯಿತು. ಇಷ್ಟಲಿಂಗ ಧರಿಸಿದವರೆಲ್ಲರೂ ಸಮಾನರು ಎಂದು ಸಾರಿದರು. ಪೂರ್ವಾಶ್ರಮದಲ್ಲಿ ಯಾವುದೇ ಜಾತಿ ಮತದವರಿರಲಿ ಇಷ್ಟಲಿಂಗ ದೀಕ್ಷೆ ಹೊಂದಿದವರಲ್ಲಿ ಹಿಂದಿನ ಕುಲಜಾತಿಗಳನ್ನು ಹುಡುಕದೇ ಅವರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳಸಬೇಕೆಂದು ಸಾರಿ ಅಂಥ ಒಂದು ಮಾದರಿಯಾದ ವಿವಾಹವನ್ನು ಕೂಡ ಗುರುಬಸವಣ್ಣನವರು ಮಾಡಿ ತೋರಿಸಿದ್ದರು. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದ ಮಧುವರಸರು ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗಾಯತರಾಗಿದ್ದರು. ವೃತ್ತಿಯಲ್ಲಿ ಸಮಗಾರನಾಗಿದ್ದ ಹರಳಯ್ಯನವರೂ ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗಾಯತರಾಗಿದ್ದರು. ಮಧುವರಸರ ಮಗಳನ್ನು ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಿದ್ದರಿಂದ ಸಂಪ್ರದಾಯವಾದಿಗಳು ಸಿಡಿದೆದ್ದರು. ಗುರುಬಸವಣ್ಣನವರಿಗೆ ಗಡಿಪಾರು ಶಿಕ್ಷೆಯಾಯಿತು. ಅಲ್ಲಿಗಾಗಲೇ ಅಲ್ಲಮ ಪ್ರಭುದೇವರು ಲೋಕ ಸಂಚಾರಕ್ಕಾಗಿ ಹೋಗಿದ್ದರು. 

ಗುರುಬಸವಣ್ಣನವರು ಅನುಭಾವ ಮಂಟಪದ ಶೂನ್ಯ ಪೀಠಕ್ಕೆ ಗುರು ಚೆನ್ನಬಸವಣ್ಣನವರನ್ನು ಎರಡನೆಯ ಗುರುವನ್ನಾಗಿ ಮಾಡಿ ಕೂಡಲ ಸಂಗಮಕ್ಕೆ ಹೋದರು. ಕಲ್ಯಾಣದಲ್ಲಿ ಕ್ರಾಂತಿಯಾಯಿತು. ಸಂಪ್ರದಾಯವಾದಿಗಳು ವಚನ ಸಾಹಿತ್ಯವನ್ನು ಸುಟ್ಟು ಹಾಕಿ ಶರಣರ ವಧೆ ಮಾಡಲು ಸಂಚು ಹೂಡಿದಾಗ, ಶರಣರು ರಾತ್ರೊ ರಾತ್ರಿ ವಚನಗಳ ಕಟ್ಟನ್ನು ಮೂಟೆ ಕಟ್ಟಿಕೊಂಡು ಹೊರಟರು. ಮಡಿವಾಳ ಮಾಚಿದೇವರು, ಅಕ್ಕನಾಗಲಾಂಬಿಕಾ ಮತ್ತು ಗುರು ಚೆನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಯ ದಟ್ಟಾರಣ್ಯದಲ್ಲಿ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ಬಚ್ಚಿಟ್ಟರು. ಅಲ್ಲೇ ಇರುವ ಒಂದು ದೊಡ್ಡ ಗವಿಯನ್ನು ಮಹಾಮನೆ ಗವಿಯೆಂದು ಕರೆದು ಅಲ್ಲಿ ಮತ್ತೊಮ್ಮೆ ಅನುಭಾವ ಮಂಟಪದ ಭವ್ಯತೆಯನ್ನು ತಂದರು.

ಗುರು ಚೆನ್ನಬಸವಣ್ಣನವರು ಕಲ್ಯಾಣದಿಂದ ಹೋಗುವಾಗ ಸೊನ್ನಲಾಪುರದಲ್ಲಿರುವ ಸಿದ್ಧರಾಮೇಶ್ವರರನ್ನು ಶೂನ್ಯಪೀಠದ 3ನೆಯ ಗುರುವಾಗಿ ಪೀಠಾರೋಹಣ ಮಾಡಿಸಿದರು. ಈ ಪೀಠಾರೋಹಣ ಸೊನ್ನಲಾಪುರದಲ್ಲೇ ನಡೆಯಿತು. ಅಧಿಕೃತವಾಗಿ ಈ ಮೂವರು ಶೂನ್ಯಪೀಠದ ಗುರುಗಳಾದರು. ಇವರ ನಂತರ ಸುಮಾರು 3 ಶತಮಾನಗಳ ಕಾಲದಲ್ಲಿ ಲಿಂಗಾಯತ ಧರ್ಮವು ಅಳಿವಿನ ಅಂಚಿಗೆ ಹೋಯಿತು. ಯಡೆಯೂರು ಸಿದ್ಧಲಿಂಗೇಶ್ವರರು 15ನೆಯ ಶತಮಾನದಲ್ಲಿ 101 ಜನ ವಿರಕ್ತರನ್ನು ತಯ್ಯಾರು ಮಾಡಿದರು. ವಚನಗಳ ಪ್ರತಿ ಮಾಡಿಸಿ ಮತ್ತೊಮ್ಮೆ ಲಿಂಗಾಯತ ಧರ್ಮವನ್ನು ಪ್ರಚಾರಕ್ಕೆ ತಂದರು.

ಗುರುಬಸವಣ್ಣನವರು ಕೈಗೊಂಡ ಅನೇಕ ಕಾರ್ಯಗಳನ್ನು ಇವರೂ ಕೈಗೊಂಡರು, ದಾಸೋಹ, ಶಿಕ್ಷಣ, ಸಮಾನತೆಗಳನ್ನು ಸಮಾಜದಲ್ಲಿ ತಂದರು. ಇವರಿಂದಾಗಿ ಅಳಿವಿನ ಅಂಚಿನಲ್ಲಿದ್ದ ಲಿಂಗಾಯತ ಧರ್ಮವು ಪುನಃ ಹೊಸ ರೂಪವನ್ನು ಪಡೆದುಕೊಂಡಿತು. ವಚನಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿ ಮಾಡಿಸಿದುದರಿಂದ ವಚನ ಸಾಹಿತ್ಯ ಪ್ರಚಾರಕ್ಕೆ ಬಂದಿತು. ಸ್ವತಃ ಯಡೆಯೂರು ಸಿದ್ಧಲಿಂಗೇಶ್ವರರೂ ವಚನಗಳನ್ನು ಬರೆದಿದ್ದಾರೆ. ಇವರ ಶಿಷ್ಯರಲ್ಲೊಬ್ಬರಾದ ಬೋಳಬಸವೇಶ್ವರ ಎನ್ನುವವರು ಗುರುಬಸವಣ್ಣನವರ ಎಲ್ಲಾ ವಚನಗಳಿಗೂ ವ್ಯಾಖ್ಯಾನ ಬರೆದರು. ಇನ್ನೊಬ್ಬ ಶಿಷ್ಯರಾದ ಶಿವಗಣ ಪ್ರಸಾದಿ ಮಹಾದೇವಯ್ಯನವರು `ಶೂನ್ಯ ಸಂಪಾದನೆ' ಎನ್ನುವ ಉದ್ಧಾಮ ಕೃತಿಯನ್ನು ರಚಿಸಿದರು. 12ನೆಯ ಶತಮಾನದಲ್ಲಿ ಅನುಭಾವ ಮಂಟಪದಲ್ಲಿ ನಡೆಯುತ್ತಿದ್ದ ಸಂಭಾಷಣೆಯು, ವಚನಗಳು ರೂಪ ತಳೆಯಿತು. ಆಯಾ ಸಂದರ್ಭಗಳಲ್ಲಿ ಹೊರ ಹೊಮ್ಮಿದ ವಚನಗಳನ್ನು ಗುರುತಿಸಿ ಸಂಭಾಷಣೆಯ ರೂಪದಲ್ಲಿರುವ ವಚನಗಳನ್ನು ಜೋಡಿಸುತ್ತಾ ಆ ಮೂಲಕ ಲಿಂಗಾಯತ ಧರ್ಮದ ಪರಿಚಯ ಮಾಡಿಕೊಟ್ಟರು.

ಇವರ ನಂತರ 17ನೆಯ ಶತಮಾನದಲ್ಲಿ ಷಣ್ಮುಖ ಶಿವಯೋಗಿಗಳೂ ಕೂಡ ವಚನಗಳನ್ನು ಬರೆದರು. ಧರ್ಮ ಪ್ರಚಾರ ಮಾಡಿದರಾದರೂ 12ನೆಯ ಶತಮಾನದಂಥ ಭವ್ಯತೆ ಲಿಂಗಾಯತ ಧರ್ಮಕ್ಕೆ ಸಿಗಲಿಲ್ಲ. ಅಂದು ಗುರುಬಸವಣ್ಣನವರು ಮಾಡಿದಂಥ ಗಣಪರ್ವಗಳನ್ನಾಗಲೀ ಅಥವಾ ಲಿಂಗಾಯತ ಧರ್ಮದ ಎಲ್ಲಾ ಅನುಯಾಯಿಗಳನ್ನು ಒಂದು ಕಡೆ ಸೇರಿಸುವಂಥ ಕಾರ್ಯ ನಡೆಯಲಿಲ್ಲ. 17ನೆಯ ಶತಮಾನದಿಂದೀಚೆಗೆ 20ನೆಯ ಶತಮಾನದ ಮಧ್ಯಭಾಗದವರೆಗೆ ಈ ಧರ್ಮ ಸಂಪೂರ್ಣವಾಗಿ ನಶಿಸಿಹೋಗಿತ್ತು `ಲಿಂಗಾಯತ' ಎನ್ನುವುದೊಂದು ಧರ್ಮವಿದೆ ಎಂದೇ ಯಾರಿಗೂ ಗೊತ್ತಿರಲಿಲ್ಲ.

1880ರಲ್ಲಿ ಜನಿಸಿದ ಶರಣ ಫಕೀರಪ್ಪ ಗುರು ಬಸಪ್ಪ ಹಳಕಟ್ಟಿಯವರು ಜನರ ಜಗುಲಿಗಳ ಮೇಲೆ ಅಳಿವಿನ ಅಂಚಿನಲ್ಲಿದ್ದ ವಚನಗಳ ಕಟ್ಟನ್ನು ಸಂಗ್ರಹಿಸಿಸುವುದರ ಮೂಲಕ ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು. ಅನೇಕ ವಚನಗಳನ್ನು ಸಂಶೋಧಿಸಿ 1923ರಲ್ಲಿ `ವಚನ ಶಾಸ್ತ್ರ ಸಾರ ಭಾಗ-1' ಎನ್ನುವ ಗ್ರಂಥ ಪ್ರಕಟಣೆ ಮಾಡಿದರು. ನಂತರ ಇನ್ನೂ ಅನೇಕ ವಚನಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಪ್ರಕಟಿಸಿದರು. ಆಗ ಜನರಿಗೆ `ಲಿಂಗಾಯತ ಧರ್ಮ' ಎಂದು ಒಂದು ಧರ್ಮ ಇದೆ, ವಚನ ಸಾಹಿತ್ಯ ಈ ಧರ್ಮದ ಸಾಹಿತ್ಯ ಎಂದು ಗೊತ್ತಾಗಲಾರಂಭಿಸಿತು. ವಚನ ಸಾಹಿತ್ಯದ ಪ್ರಕಟಣೆಯ ನಂತರ ಧರ್ಮವು ಪುಸ್ತಕದಲ್ಲಿ ಉಳಿಯಿತೇ ಹೊರತು ಹೆಚ್ಚಿನ ಜನಗಳ ಮಸ್ತಕಕ್ಕೆ ಬರಲಿಲ್ಲ.

ಲಿಂಗಾಯತ ಧರ್ಮವನ್ನು ಪುನಃ ಪ್ರತಿಷ್ಠಾಪಿಸಲು ಪ್ರಥಮ ಹೆಜ್ಜೆಯನಿಟ್ಟವರು ಪರಮಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರು. 15-09-1931ರಂದು ಜನಿಸಿದ ಇವರು ಗುರುಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಈ ಸಾಹಿತ್ಯದಲ್ಲಿ ಒಂದು ಧರ್ಮವಡಗಿದೆ ಎಂದು ಅರಿತುಕೊಂಡರು. ಲಿಂಗಾಯತ ಧರ್ಮದಿಂದ ಲೋಕೋದ್ಧಾರವಾಗಬಲ್ಲುದು. ಈ ದೇಶದಲ್ಲಿ ಶಾಂತಿ ನೆಮ್ಮದಿಗಳು ನೆಲೆಗೊಳ್ಳಬೇಕಾದರೆ ಬಸವ ತತ್ವ ಪ್ರಚಾರವಾಗಬೇಕು ಎಂದು ಸಂಕಲ್ಪಿಸಿ ಸ್ವಯಂ ಸನ್ಯಾಸಿಯಾಗಿ ನಾಡನಾದ್ಯಂತ ವಚನ ಸಾಹಿತ್ಯಾಧಾರಿತ ಪ್ರವಚನಗಳನ್ನು ಮಾಡುವುದರ ಮೂಲಕ ಲಿಂಗಾಯತ ಧರ್ಮ ಜಾಗೃತಿಗೈದರು. ವಚನಗಳಿಗೆ ವ್ಯಾಖ್ಯಾನ ಬರೆದರು. `ದೇವರು' ಹಾಗೂ `ಅಕ್ಕನ ಪ್ರವಚನ'ವೆಂಬ ತಾತ್ವಿಕ ಗ್ರಂಥಗಳನ್ನು ಬರೆದರು. ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿಯೂ ಪ್ರವಚನಗಳನ್ನು ಮಾಡಿದರು. `ವಿಶ್ವ ಕಲ್ಯಾಣ ಮಿಷನ್' ಎಂಬ ಚಾರಿಟಬಲ್ ಟ್ರಸ್ಟ್‍ನ್ನು ಸ್ಥಾಪಿಸಿದರು.

 ಧರ್ಮ ರಕ್ಷಣೆಗಾಗಿ ರಾಷ್ಟ್ರೀಯ ಬಸವದಳ ಎಂಬ ಧಾರ್ಮಿಕ ಸಂಘಟನೆಯನ್ನು ಸಂಘಟಿಸಿದರು. ಸಿಖ್ ಧರ್ಮದಲ್ಲಿ, ಸಿಖ್ ಗುರುಗಳು ಹೇಗೆ ಮುಸ್ಲಿಂ ಅರಸರಿಂದ ಹಿಂಸೆಯನ್ನು ಅನುಭವಿಸಿದರೊ, ಅದೇ ರೀತಿ ಗುರು ಲಿಂಗಾನಂದರು ಸಂಪ್ರದಾಯವಾದಿಗಳಿಂದ ಅನಂತ ನೋವುಗಳನ್ನು ಹಿಂಸೆಯನ್ನು ಅನುಭವಿಸಿಯೂ ಲಿಂಗಾಯತ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು. 1966ರ ವರೆಗೆ ಏಕಾಂಗಿಯಾಗಿ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿಗೂ ಸಂಚರಿಸಿ ಪ್ರವಚನ ಮಾಡಿ ಧರ್ಮ ಜಾಗೃತಿ ಗೈದಿದ್ದಾರೆ. 1966ರಲ್ಲಿ ಅಕ್ಕಮಹಾದೇವಿಯ ಅವತಾರವೆತ್ತಿ ಬಂದಿದ್ದಾರೇನೊ ಎಂಬಂತೆ, ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು 

ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರಿಂದ ಜಂಗಮ ದೀಕ್ಷೆಯನ್ನು ಪಡೆದು ಲಿಂಗಾನಂದ ಗುರುಗಳಿಗೆ ಸಹಾಯಕ ಶಕ್ತಿಯಾದರು. ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಮೊಟ್ಟ ಮೊದಲ ಹೆಜ್ಜೆ ಇಟ್ಟವರು ಗುರು ಲಿಂಗಾನಂದರಾದರೆ, ಜೊತೆ ಜೊತೆಯಲ್ಲೇ ಹೆಜ್ಜೆ ಇಟ್ಟವರು ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು.

ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು 13-03-1946ರಂದು ಜನಿಸಿ, ಎಂ.ಎ. ತತ್ವe್ಞÁನ ಅಭ್ಯಾಸ ಮಾಡಿ, ಪೂಜ್ಯ ಶ್ರೀ ಲಿಂಗಾನಂದ ಗುರುದೇವರೊಂದಿಗೆ ಲಿಂಗಾಯತ ಧರ್ಮ ಪುನರುತ್ಥಾನ ಕಾರ್ಯದಲ್ಲಿ ಕೈ ಜೋಡಿಸಿದಾಗ ಈ ಧರ್ಮದಲ್ಲಿ ಆದ ಬದಲಾವಣೆಗಳು ಅಪಾರ. ಅವರು ಜಗತ್ತಿನ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿ, ಒಂದು ಪರಿಪೂರ್ಣ ಧರ್ಮಕ್ಕಿರುವ ಲಕ್ಷಣಗಳನ್ನು ಕಂಡು ಕೊಂಡರು. ಅಲ್ಲಿಯವರೆಗೆ ಈ ಧರ್ಮದ ಅನುಯಾಯಿಗಳಲ್ಲಿ ಗುರುಬಸವಣ್ಣನವರ ಬಗ್ಗೆ ಅಷ್ಟೊಂದು ಭಕ್ತಿಯಿರಲಿಲ್ಲ. ಕಾರಣ ಇತರ ಮಠಾಧೀಶರು ದೀಕ್ಷೆಯನ್ನು ಕೊಡುವಾಗ ತಮ್ಮ ಭಾವಚಿತ್ರಗಳನ್ನು ನೀಡಿ ಪೂಜಿಸಲು ಹೇಳುತ್ತಿದ್ದರೇ ಹೊರತು ಗುರುಬಸವಣ್ಣನವರ ಬಗ್ಗೆ ಹೇಳುತ್ತಿರಲಿಲ್ಲ ಅಥವಾ ಅವರ ಭಾವಚಿತ್ರ ಕೊಡುತ್ತಿರಲಿಲ್ಲ. ಮಾತೆ ಮಹಾದೇವಿಯವರು ಇದನ್ನು ತಪ್ಪಿಸಿ, ಗುರುಬಸವಣ್ಣನವರನ್ನು ಧರ್ಮದ ಕೇಂದ್ರ ಸ್ಥಾನದಲ್ಲಿಟ್ಟು ಗುರು ಬಸವೇಶ್ವರರ ಪೂಜೆಯನ್ನು ಮಾಡಲು ಕಲಿಸಿದರು.

ಸ್ತ್ರೀ ಸಮಾನತೆಯನ್ನು ಸಾರಿದ ಗುರುಬಸವಣ್ಣನವರ ಅಶೋತ್ತರಗಳನ್ನು ಪೂರೈಸಲು 1970ರಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರು ಧಾರವಾಡದಲ್ಲಿ ಜಗದ್ಗುರು ಅಕ್ಕಮಹಾದೇವಿ ಗುರು ಪೀಠವನ್ನು ಸ್ಥಾಪಿಸಿ ಪೂಜ್ಯ ಶ್ರೀ ಮಾತೆ ಮಹಾದೇವಿಯವರನ್ನು ಪೀಠಾರೋಹಣ ಮಾಡಿಸಿ ಪ್ರಥಮ ಮಹಿಳಾ ಜಗದ್ಗುರುವನ್ನಾಗಿ ಮಾಡಿದರು.

ಪೂಜ್ಯ ಶ್ರೀ ಮಾತೆ ಮಹಾದೇವಿಯವರೂ ಗುರು ಲಿಂಗಾನಂದರಂತೆ ನಾಡಿನಾದ್ಯಂತ ಸಂಚರಿಸಿ ಪ್ರವಚನಗಳನ್ನು ಮಾಡಿದರು. ನಾಡಿನಾದ್ಯಂತ ಹಂಚಿ ಹೋಗಿರುವ ಎಲ್ಲಾ ಲಿಂಗಾಯತರನ್ನು ಒಂದೇ ವೇದಿಕೆಗೆ ತರಬೇಕು, ಇವರೆಲ್ಲರನ್ನೂ ಒಂದೇ ಸೂತ್ರದಲ್ಲಿ ಬಂಧಿಸಬೇಕು ಎಂದು ಯೋಚಿಸಿದರು.

12-01-1988 ರಂದು ಗುರುಬಸವಣ್ಣನವರ ಐಕ್ಯಕ್ಷೇತ್ರವಾದ ಕೂಡಲ ಸಂಗಮದಲ್ಲಿ ಮಹಾ ಸಮ್ಮೇಳನವೊಂದನ್ನು ಮಾಡಿ ಅದಕ್ಕೆ `ಶರಣಮೇಳ' ಎಂದು ಕರೆದರು. ಈ ಶರಣಮೇಳಕ್ಕೆ ನಾಡಿನಾದ್ಯಂತ ಹರಿದು ಹಂಚಿ ಹೋಗಿದ್ದ ಎಲ್ಲಾ ಲಿಂಗಾಯತರು, ಬಸವ ಭಕ್ತರು ಬಸವಾಭಿಮಾನಿಗಳು, ಸಾಹಿತಿಗಳು ಮತ್ತು ಮಠಾಧೀಶರನ್ನು ಕರೆದು ಒಂದೇ ವೇದಿಕೆಗೆ ತಂದರು. 12ನೆಯ ಶತಮಾನದಲ್ಲಿ ಗುರುಬಸವಣ್ಣನವರು ತಮ್ಮ ಅನುಯಾಯಿಗಳೆಲ್ಲರನ್ನೂ ವರ್ಷಕ್ಕೊಮ್ಮೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಒಂದೇ ಕಡೆ ಸೇರಿಸಿ ಗಣಪರ್ವಗಳನ್ನು ಮಾಡುತ್ತಿದ್ದರು. ಇದಾದ ಮೇಲೆ 20ನೆಯ ಶತಮಾನದವರೆಗೆ ಇಂಥ ಯಾವುದೇ ಸಮ್ಮೇಳನಗಳಾಗಿರಲಿಲ್ಲ. ಶರಣಮೇಳ ಅಂಥ ಮೊಟ್ಟ ಮೊದಲ ಮಹಾ ಸಮ್ಮೇಳನವಾಯಿತು. ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಮೈಲಿಗಲ್ಲಾಯಿತು. ಸಿಖ್ ಧರ್ಮದಲ್ಲಿ ಗುರು ಗೋವಿಂದಸಿಂಗರು ಸಮ್ಮೇಳನ ಮಾಡಿದಂತೆ ಲಿಂಗಾಯತ ಧರ್ಮದಲ್ಲಿ ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಮತ್ತು ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಮಾಡಿದರು. ಈ ಸಮ್ಮೇಳನದಲ್ಲಿ ಅವರು ಲಿಂಗಾಯತ ಧರ್ಮಕ್ಕೆ 6 ಸೂತ್ರಗಳನ್ನು ಕೊಟ್ಟರು. ``ಈ ಸೂತ್ರಗಳಲ್ಲಿ ನಂಬಿಕೆ ಇರುವ ನಾವೆಲ್ಲ ಒಂದೇ ಕುಟುಂಬದ ಮಕ್ಕಳಂತೆ ಗುರುಬಸವಣ್ಣನವರ ಮಕ್ಕಳು" ಎಂದು ತಿಳಿಸಿದರು. 1. ಧರ್ಮಗುರು - ಗುರುಬಸವಣ್ಣನವರು. 2. ಧರ್ಮ ಸಂಹಿತೆ - ವಚನ ಸಾಹಿತ್ಯ. 3. ಧರ್ಮ ಲಾಂಛನ - ಇಷ್ಟಲಿಂಗ. 4. ಧರ್ಮ ಕ್ಷೇತ್ರ - ಗುರುಬಸವಣ್ಣನವರ ವಿದ್ಯಾಭೂಮಿ ತಪೆÇೀಸ್ಥಾನ ಮತ್ತು ಲಿಂಗೈಕ್ಯ ಸ್ಥಳವಾದ ಕೂಡಲ ಸಂಗಮ. 5. ಧರ್ಮ ಧ್ವಜ - ಷಟ್ಕೋನ ಇಷ್ಟಲಿಂಗ ಮುದ್ರೆ ಸಹಿತ ಬಸವ ಧ್ವಜ. 6. ಧರ್ಮದ ಧ್ಯೇಯ - ಜಾತಿವರ್ಣ ವರ್ಗ ರಹಿತ ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣ. ಎನ್ನುವಂಥ ಆರು ಸೂತ್ರಗಳ ಘೋಷಣೆಯನ್ನು ತಾವು ಮಾಡಿ ನೆರೆದಿದ್ದ ಶರಣರಿಂದ ಪುನರುಚ್ಛಾರ ಮಾಡಲು ಹೇಳಿದ್ದಾಗ ಅಲ್ಲಿ ನೆರೆದಿದ್ದ ಸುಮಾರು 4 ಲಕ್ಷ ಜನರಲ್ಲಿ ಮಿಂಚಿನ ಸಂಚಾರವಾಯಿತು. ನಮಗೂ ಒಂದು ಧರ್ಮವಿದೆ, ಧರ್ಮಗುರುವೊಬ್ಬರಿದ್ದಾರೆ ಎನ್ನುವಂಥ ಅರಿವು ಈ ಸಮಾಜಕ್ಕೆ ಅಂದಾಯಿತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನವರಿ 11 ರಿಂದ 15ರವರೆಗೆ ಪ್ರತಿವರ್ಷವೂ ಶರಣಮೇಳಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಶರಣಮೇಳದ ಮುಖಾಂತರ ಲಿಂಗಾಯತ ಧರ್ಮೀಯರಲ್ಲಿ ಸಂಸ್ಕಾರ, ಸಂಘಟನೆ ಮತ್ತು ಸಮಾನತೆಯನ್ನು ಬೆಳೆಸುತ್ತಿದ್ದಾರೆ. 1992ರಲ್ಲಿ ಕೂಡಲ ಸಂಗಮದಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಸ್ಥಾಪಿಸಿದರು. ಇದಕ್ಕೆ ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿಯವರು ಪ್ರಥಮ ಪೀಠಾಧೀಶರಾದರು. ಪೂಜ್ಯ ಶ್ರೀ ಮಾತೆ ಮಹಾದೇವಿಯವರು 2002ರಲ್ಲಿ ಬಸವ ಕಲ್ಯಾಣದಲ್ಲಿ ಶೂನ್ಯ ಪೀಠವನ್ನು ಸ್ಥಾಪಿಸಿ 12ನೆಯ ಶತಮಾನದ ಶೂನ್ಯ ಪೀಠ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಭಕ್ತ ವೃಂದದಿಂದ `ಮಾತಾಜಿ' ಎಂದು ಪ್ರೀತಿಯಿಂದ ಕರೆಯಲ್ಪಡುವ ಪೂಜ್ಯ ಶ್ರೀ ಮಾತೆ ಮಾಹಾದೇವಿಯವರು 1995ರಲ್ಲಿ ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಸ್ವಾಮೀಜಿಯವರು ಲಿಂಗೈಕ್ಯರಾದ ಮೇಲೆ. ಮಾತಾಜಿಯವರು 1996ರಲ್ಲಿ ಬಸವ ಧರ್ಮ ಮಹಾಜಗದ್ಗುರು ಪೀಠದ ದ್ವಿತೀಯ ಗುರುಗಳಾದರು. ಅನೇಕ ಜನ ಗುರುಗಳನ್ನು ಅಳಿಸಿಹಾಕಿ ಧರ್ಮಗುರು ಬಸವಣ್ಣನವರನ್ನು ಪ್ರತಿಷ್ಠಾಪಿಸಿದರು. ಸಿಖ್ ಧರ್ಮದಲ್ಲಿ ಮೊದಲು ಪಾದೋದಕ ತೆಗೆದುಕೊಳ್ಳುವ ಪದ್ಧತಿ ಇದ್ದಂತೆ, ಲಿಂಗಾಯತ ಧರ್ಮೀಯರಲ್ಲೂ ಆ ಪದ್ಧತಿ ಇತ್ತು. ಗುರು ಗೋವಿಂದಸಿಂಗರು ಅದನ್ನು ತಪ್ಪಿಸಿ, `ಕಿರಪಾನ್' ಎಂದು ಕರೆಯುವ ತೀರ್ಥವನ್ನು ತೆಗೆದುಕೊಳ್ಳುವುದನ್ನು ಜಾರಿಗೆ ತಂದಂತೆ, ಪಾದೋದಕ ಬದಲಿಗೆ ಹಸ್ತದಿಂದ ಮಾಡುವ ಕರುಣೋದಕ ತೆಗದುಕೊಳ್ಳುವುದನ್ನು ಮಾತೆ ಮಹಾದೇವಿಯವರು ಜಾರಿಗೆ ತಂದರು.

ಸಾಮೂಹಿಕ ಪ್ರಾರ್ಥನೆ, ಶರಣ ಸಂಗಮ, ದಾಸೋಹ, ಶಿವರಾತ್ರಿಯ ಗಣಮೇಳದಂಥ ಅನೇಕ ಕಾರ್ಯಕ್ರಮಗಳನ್ನು ಲಿಂಗಾಯತ ಧರ್ಮೀಯರನ್ನು ಸಂಘಟಿಸುವುದಕ್ಕಾಗಿ ಜಾರಿಗೆ ತಂದರು. ಗುರುಬಸವಣ್ಣನವರು, ಅಕ್ಕಮಹಾದೇವಿ ಹಾಗೂ 12ನೆಯ ಶತಮಾನದ ಅನೇಕ ಶರಣರ ಕುರಿತಾದ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. 12ನೆಯ ಶತಮಾನದಲ್ಲಿ ಇಷ್ಟಲಿಂಗ ದೀಕ್ಷೆ ಕೊಡುವ ಪದ್ಧತಿ ಚೆನ್ನಾಗಿಯೇ ಇತ್ತು. ಆದರೆ ನಂತರ ಬಂದ ಸ್ವಾರ್ಥಿಯಾದ, ವೈದಿಕ ಧರ್ಮದಿಂದ ಪ್ರಭಾವಿತಗೊಂಡ ಮಠಾಧೀಶರು ಈ ಪದ್ಧತಿಯನ್ನು ಮಡಿಗೊಳಿಸಿದರು. ಎಲ್ಲರಿಗೂ ದೀಕ್ಷೆ ನೀಡುತ್ತಿರಲಿಲ್ಲ. ಮಾತೆ ಮಹಾದೇವಿಯವರು ಇಷ್ಟಲಿಂಗ ದೀಕ್ಷಾ ಸಂಸ್ಕಾರವನ್ನು ಸರಳಗೊಳಿಸಿದರು. ದೀಕ್ಷೆ ಕೊಡುವಾಗ ``ಓಂ ನಮಃ ಶಿವಾಯ" ಎನ್ನುವ ಶಿವ ಮಂತ್ರದ ಬದಲಿಗೆ ``ಓಂ ಲಿಂಗಾಯ ನಮಃ" ಎನ್ನುವ ದೇವ ಮಂತ್ರವನ್ನು ಬೋಧಿಸುವುದನ್ನು ಬಳಕೆಗೆ ತಂದರು. ಧರ್ಮರಕ್ಷಣೆಗಾಗಿ, ಬಸವ ಧರ್ಮ ಸಂಸತ್, ಲಿಂಗಾಯತ ಧರ್ಮ ಮಹಾಸಭೆ, ರಾಷ್ಟ್ರೀಯ ಬಸವದಳ, ಗಣಾಚಾರದಳದಂಥ ಅನೇಕ ಸಂಘಟನೆಗಳನ್ನು ಕಟ್ಟಿದ್ದಾರೆ.

ಗುರು ಗೋವಿಂದಸಿಂಗರು `ಗ್ರಂಥ ಸಾಹೀಬ್' ಧರ್ಮಗ್ರಂಥ ರಚಿಸಿದಂತೆ ಇವರೂ ಕೂಡ ಲಿಂಗಾಯತ ಧರ್ಮದ ಧರ್ಮ ಗ್ರಂಥವನ್ನು ಬರೆಯುತ್ತಿದ್ದಾರೆ, ಮುಂಬರುವ ಕೆಲವೇ ದಿನಗಳಲ್ಲಿ ಅದನ್ನು ಪ್ರಕಟಿಸುವವರಿದ್ದಾರೆ. ಇದೀಗ `ಲಿಂಗಾಯತ ಧರ್ಮ'ವನ್ನು ಸ್ವತಂತ್ರ ಧರ್ಮವಾಗಿ ಘೋಷಿಸಿ, ಸಂವಿಧಾನಾತ್ಮಕ ಮುನ್ನಣೆಗಾಗಿ ಸರಕಾರಕ್ಕೆ ಮನವಿಕೊಟ್ಟು ಅದಕ್ಕಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರನ್ನು ಲಿಂಗಾಯತ ಧರ್ಮದ ಗುರು ಗೋವಿಂದಸಿಂಗ್ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. -Sachidanand Chatnalli