ರೇಮಂಡ್ ಡಾಜ್
ರೇಮಂಡ್ ಡಾಜ್ (1871-1942). ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಬ್ಬ ಪ್ರಾಯೋಗಿಕ ಮನೋವಿಜ್ಞಾನಿ.
ಬದುಕು
ಬದಲಾಯಿಸಿಹುಟ್ಟಿದ್ದು ಅಮೆರಿಕದ ವೋಬರ್ನ್ ಎಂಬಲ್ಲಿ. 1893ರಲ್ಲಿ ವಿಲಿಯಮ್ಸ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದ. ಅನಂತರ ತನ್ನ ಉನ್ನತ ಶಿಕ್ಷಣವನ್ನು ಜರ್ಮನಿಯ ಹಾಲೆ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ, ಪ್ರಸಿದ್ಧ ತತ್ತ್ವವೇತ್ತ ಹಾಗೂ ಮನೋವಿಜ್ಞಾನಿ ಎನಿಸಿದ್ದ ಬೆನ್ನೋ ಐರ್‍ಮನ್ನನಿಂದ 1896ರಲ್ಲಿ ಪಿ.ಎಚ್‍ಡಿ. ಪದವಿಯನ್ನು ಸಂಪಾದಿಸಿಕೊಂಡು ಆತನ ಸಹಾಯಕನಾಗಿ ಒಂದು ವರ್ಷ ಕಾಲ ದುಡಿದ. 1898ರಲ್ಲಿ ಸ್ವದೇಶಕ್ಕೆ ಹಿಂದಿರುಗಿ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ 4 ವರ್ಷ ಮನೋವಿಜ್ಞಾನವ ಶಿಕ್ಷಕನಾಗಿ ಸೇವೆ ಸಲ್ಲಿಸಿ 1909ರಲ್ಲಿ ಅದೇ ವಿಶ್ವವಿದ್ಯಾಲಯದ ಮನೋವಿಜ್ಞಾನ ಪೀಠವನ್ನು ಅಲಂಕರಿಸಿದ. ತರುವಾಯ ಯೇಲ್ ಮನೋವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿ ತಾನು ನಿವೃತ್ತನಾಗುವ ವರೆಗೆ (1936) ದುಡಿದ. 1929ರಲ್ಲಿ ಆ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾದ ಮಾನವೀಯ ಸಂಬಂಧಗಳ ಸಂಸ್ಥೆಯ ಮೂಲ ನಿರ್ದೇಶಕರುಗಳಲ್ಲಿ ಈತ ಒಬ್ಬನಾಗಿ ಕೆಲಸಮಾಡಿದುದೂ ಉಂಟು.
ಸಂಶೋಧನೆಗಳು
ಬದಲಾಯಿಸಿಓದುವುದರಲ್ಲಿ ದೃಷ್ಟಿಪ್ರತ್ಯಕ್ಷಣ ಎಂಬ ವಿಷಯದ ಬಗ್ಗೆ ಡಾಜ್ ಅಮೂಲ್ಯ ಸಂಶೋಧನೆಗಳನ್ನು ನಡೆಸಿದ್ದಾನೆ. ತನ್ನ ಸಂಶೋಧನೆಗಳಿಗೆ ಆತ ತಾನೇ ನಿರ್ಮಿಸಿದ ಪ್ರಯೋಗ ಪರಿಕರಗಳನ್ನು ಬಳಸಿದ. ಅವುಗಳಲ್ಲಿ ಮುಖ್ಯವಾದವು ಐರ್‍ಮನ್-ಡಾಜ್ ಟಾಚಿಸ್ಟೋಸ್ಕೋಪ್ ಮತ್ತು ಡಾಜ್‍ದರ್ಪಣ ಟಾಚಿಸ್ಟೋಸ್ಕೋಪ್. ಇಷ್ಟು ಮಾತ್ರವಲ್ಲದೆ ಆತ ತನ್ನ ಸಂಶೋಧನೆಗಳನ್ನು ಶುದ್ಧ ವಿಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣ ಮನೋವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿಯೂ ಅನ್ವಯಿಸಿದ.
ಕೃತಿಗಳು
ಬದಲಾಯಿಸಿಡಾಜನ ಪ್ರಕಟಿತ ಕೃತಿಗಳಲ್ಲಿ ಮುಖ್ಯವಾದುವೆಂದರೆ: ಬೇಸಿಕ್ ಕಂಡಿಷನ್ಸ್ ಆಫ್ ಹ್ಯೂಮನ್ ವೇರಿಯಬಿಲಿಟಿ (1927), ಕಂಡಿಷನ್ಸ್ ಅಂಡ್ ಕಾನ್ಸಿಕ್ವೆನ್ಸಸ್ ಆಫ್ ಹ್ಯೂಮನ್ ವೇರಿಯಬಿಲಿಟಿ (1931). ಅಲ್ಲದೆ ಆರ್.ಸಿ.ಟ್ರಾವಿಸನೊಂದಿಗೆ ಆತ ಸೆನ್ಸೊರಿ ಮೋಟಾರ್ ಕಾನ್ಸಿಕ್ವೆನ್ಸಸ್ ಆಫ್ ಪ್ಯಾಸಿವ್ ಆಸಿಲೇಷನ್ ಎಂಬ ಕೃತಿಯನ್ನೂ ಯೂಜಿನ್ ಕಾನ್‍ನ ಜೊತೆ ಸೇರಿ ಯೂಜಿನ್ ಕಾನ್‍ನ ಜೊತೆ ಸೇರಿ ದಿ ಕ್ರೇವಿಂಗ್ ಫಾರ್ ಸುಪೀರಿಯಾರಿಟಿ (1931) ಎಂಬ ಕೃತಿಯನ್ನೂ ರಚಿಸಿದ್ದಾನೆ. ಆತನ ಆತ್ಮಚರಿತ್ರೆಯ ಹೆಸರು-ಎ ಹಿಸ್ಟೊರಿ ಆಫ್ ಸೈಕಾಲಜಿ ಇನ್ ಆಟೋಬಯಾಗ್ರಫಿ (1930). ಇಷ್ಟು ಮಾತ್ರವಲ್ಲದೆ ಆತ 1904-15ರ ವರೆಗೆ ದಿ ಸೈಕಲಾಜಿಕಲ್ ರಿವ್ಯೂ; 1916-20ರ ವರೆಗೆ ದಿ ಜರ್ನಲ್ ಆಫ್ ಎಕ್ಸ್ ಪೆರಿಮೆಂಟಲ್ ಸೈಕಾಲಜಿ; 1921ರಿಂದ ದಿ ಜರ್ನಲ್ ಆಫ್ ಕಂಪ್ಯಾರಿಟಿವ್ ಸೈಕಾಲಜಿ; ಮತ್ತು 1904-10ರ ವರೆಗೆ ದಿ ಸೈಕಲಾಜಿಕಲ್ ಬುಲೆಟಿನ್ ಎಂಬ ನಿಯತ ಕಾಲಿಕೆಗಳ ಸಹ ಸಂಪಾದಕನಾಗಿ ಸೇವೆ ಸಲ್ಲಿಸಿದ್ದಾನೆ.