ರಿಚರ್ಡ್ ಸ್ಟ್ಯಾಫರ್ಡ್ ಕ್ರಿಪ್ಸ್
ರಿಚರ್ಡ್ ಸ್ಟ್ಯಾಫರ್ಡ್ ಕ್ರಿಪ್ಸ್ (1889-1952). ಬ್ರಿಟನಿನ ರಾಜಕಾರಣಿ, ಆರ್ಥಿಕ ಧುರೀಣ ಮತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡುವ ವಿಷಯದಲ್ಲಿ ಸಂಧಾನ ನಡೆಸಿದ ಮುತ್ಸದ್ದಿ.
ಚಾಲ್ರ್ಸ್ ಆಲ್ಫ್ರೆಡ್ ಕ್ರಿಪ್ಸನ ನಾಲ್ಕನೆಯ ಮಗ. ಜನನ 1889ರಲ್ಲಿ. ಕ್ರಿಪ್ಸನ ಆರಂಭದ ವಿದ್ಯಾಭ್ಯಾಸ ವಿಂಚೆಸ್ಟರ್‍ನಲ್ಲೂ ಪ್ರೌಢಶಿಕ್ಷಣ (ರಸಾಯನ ಶಾಸ್ತ್ರ) ಲಂಡನ್ ವಿಶ್ವವಿದ್ಯಾಲಯದಲ್ಲೂ ನಡೆಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸಿಡಿಮದ್ದು ಗುಂಡುಗಳ ಶಾಖೆಯಲ್ಲಿ ಕೆಲಸ ನಿರ್ವಹಿಸಿದ. ಅನಾರೋಗ್ಯದ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಅವನು ಯಾವ ಸೇವೆಯನ್ನೂ ಸಲ್ಲಿಸುವುದಕ್ಕೆ ಸಾಧ್ಯವಾಗಲಿಲ್ಲ. 1913ರಲ್ಲಿ ಪ್ರಾರಂಭಿಸಿದ ಬ್ಯಾರಿಸ್ಟರ್ ವೃತ್ತಿಗೆ 1917ರಲ್ಲಿ ಹಿಂದಿರುಗಿ ಕೆಲವೇ ವರ್ಷಗಳಲ್ಲಿ ಸುಪ್ರಸಿದ್ಧ ನ್ಯಾಯವಾದಿಯಾದ.
ಆಗಿನ ಕಾಲದ ವಿಶ್ವದ ಸಮಸ್ಯೆಗಳಿಗೆ ಒಂದು ಧಾರ್ಮಿಕ ಅರ್ಥವನ್ನು ಕಲ್ಪಿಸಿದ ಕ್ರಿಪ್ಸ್ ಜೀವನಪರ್ಯಂತ ಆಂಗ್ಲಿಕನ್ ಧರ್ಮದ ಅನುಯಾಯಿಯಾಗಿದ್ದ. ರ್ಯಾಮ್ಸೆಮ್ಯಾಕ್ಡೊನಾಲ್ಡನ ಕಾರ್ಮಿಕ ಪಕ್ಷದ ಮಂತ್ರಿಮಂಡಲದಲ್ಲಿ 1930ರಲ್ಲಿ ಸಾಲಿಸಿಟರ್ ಜನರಲ್ ಆಗಿ ಅವನ ನೇಮಕವಾಯಿತು.
ನ್ಯಾಯನಿರೂಪಣಾಧಿಕಾರಿಗಳಿಗೆ ಸಾಂಪ್ರದಾಯಿಕವಾಗಿ ಕೊಡುತ್ತಿದ್ದ ನೈಟ್ ಪದವಿಯೂ ಲಭಿಸಿತು. 1931ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಬ್ರಿಸ್ಟಲಿನಿಂದ ಆಯ್ಕೆಯಾಗಿ ಪಾರ್ಲಿಮೆಂಟಿನ ಸದಸ್ಯನಾದ. 1950ರ ವರೆಗೂ ಆ ಕ್ಷೇತ್ರವನ್ನು ಪ್ರತಿನಿಧಿಸಿದ. 1935ರಲ್ಲಿ ಕ್ರಿಪ್ಸನಿಗೂ ಆತನ ಪಕ್ಷಕ್ಕೂ ವೈಮನಸ್ಯವುಂಟಾಗಿ ಆತ ಆ ಪಕ್ಷದಿಂದ ಹೊರಬಂದ. 1940ರ ಮೇ ತಿಂಗಳಿನಲ್ಲಿ ವಿನ್‍ಸ್ಟನ್ ಚರ್ಚಿಲ್ ಕ್ರಿಪ್ಸನನ್ನು ರಷ್ಯಕ್ಕೆ ರಾಯಭಾರಿಯನ್ನಾಗಿ ಕಳುಹಿಸಲು ಅಲ್ಲಿ ಆತ ಎರಡು ವರ್ಷಗಳ ಕಾಲ ಇದ್ದ. ರಷ್ಯದಿಂದ ಹಿಂದಿರುಗಿ ಬಂದ ಮೇಲೆ ಕ್ರಿಪ್ಸನಿಗೆ ವಿಮಾನೋತ್ಪಾದನ ಶಾಖೆಯ ಸಚಿವ ಪದವಿ ದೊರಕಿತು. ಎರಡನೆಯ ಮಹಾಯುದ್ಧ ಮುಗಿಯುವವರೆಗೂ ಈ ಪದವಿಯಲ್ಲಿ ಮುಂದುವರಿದು, ಯುದ್ಧ ಮುಗಿದ ಮೇಲೆ ಪುನಃ ಲೇಬರ್ ಪಕ್ಷಕ್ಕೆ ಸೇರಿ ಆಟ್ಲಿಯ ಸಚಿವ ಸಂಪುಟದಲ್ಲಿ ಬೋರ್ಡ್ ಆಫ್ ಟ್ರೇಡಿನ ಅಧ್ಯಕ್ಷನಾಗಿದ್ದ. ಸ್ವಾತಂತ್ರ್ಯ ನೀಡುವ ವಿಷಯದಲ್ಲಿ ಭಾರತದೊಂದಿಗೆ ಒಪ್ಪಂದಕ್ಕೆ ಬರಲು ಅವನು ನಡೆಸಿದ ಪ್ರಯತ್ನಗಳು ಗಮನಾರ್ಹ. 1947ರಲ್ಲಿ ಬ್ರಿಟನಿನ ಆರ್ಥಿಕ ಮಂತ್ರಿಯಾಗಿ 1950ರ ವರೆಗೆ ದೇಶದ ಒಳಾಡಳಿತದಲ್ಲಿ ಪ್ರಮುಖ ಪಾತ್ರವಹಿಸಿದ. ಹಣಕಾಸಿನ ವ್ಯವಹಾರವನ್ನು ಬಹಳ ಕಟ್ಟುನಿಟ್ಟಿನಿಂದ ನಡೆಸಿ ಬೆಲೆಗಳು ಏರದಂತೆ ತಡೆಗಟ್ಟಿದ. ಅವನು ಆರ್ಥಿಕ ಮಂತ್ರಿಯಾಗಿದ್ದಾಗ ಗ್ರೇಟ್ ಬ್ರಿಟನಿನ ಆರ್ಥಿಕಸ್ಥಿತಿ ಉತ್ತಮಗೊಂಡಿತು; ವ್ಯಾಪಾರ ವರ್ಧಿಸಿತು. ಆದರೂ 1949ರಲ್ಲಿ ಪೌಂಡ್ ಅಪಮೌಲ್ಯವಾಗುವುದನ್ನು ತಡೆಗಟ್ಟಲಾಗಲಿಲ್ಲ. ಅನಾರೋಗ್ಯದ ಕಾರಣದಿಂದಾಗಿ 1950ರ ಅಕ್ಟೋಬರ್ ತಿಂಗಳಲ್ಲಿ ಆತ ತನ್ನ ಅಧಿಕಾರಕ್ಕೂ ಪಾರ್ಲಿಮೆಂಟ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಬೇಕಾಯಿತು. 1952ರ ಏಪ್ರಿಲ್ 21ರಂದು ಜೂರಿಕ್‍ನಲ್ಲಿ ಮರಣ ಹೊಂದಿದ.