ರಿಚರ್ಡ್ ಕ್ಲ್ಯವರ್ಹೌಸ್ ಜೆಬ್

ಸರ್ ರಿಚರ್ಡ್ ಕ್ಲ್ಯವರ್ಹೌಸ್ ಜೆಬ್ ( 1841-1905). ಅಭಿಜಾತ ಗ್ರೀಕ್ ಸಾಹಿತ್ಯದಲ್ಲಿ ವಿದ್ವಾಂಸ; ಸೋಫೋಕ್ಲಿಸ್‍ನ ನಾಟಕಗಳ ಭಾಷ್ಯಕಾರ.

ದಂಡಿ ಎಂಬಲ್ಲಿ ಜನಿಸಿದ ಈತ ಚಾರ್ಟರ್‍ಹೌಸಿನ ಸೇಂಟ್ ಕೊಲಂಬಾ ಕಾಲೇಜಿನಲ್ಲೂ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲೂ ಶಿಕ್ಷಣ ಪಡೆದು ಅಧ್ಯಾಪಕನಾಗಿ 1875ರವರೆಗೊ ಕೆಲಸಮಾಡಿದ. ಅನಂತರ ಗ್ಲಾಸ್ಗೊ ವಿಶ್ವವಿದ್ಯಾಲಯದಲ್ಲಿ ಗ್ರೀಕ್ ಪ್ರಾಧ್ಯಾಪಕನಾಗಿ ನೇಮಕಗೊಂಡ. 1889ರಲ್ಲಿ ಮತ್ತೆ ಕೇಂಬ್ರಿಜ್‍ಗೇ ಹಿಂತಿರುಗಿ ವಿಶ್ವವಿದ್ಯಾನಿಲಯದ ರಾಜಪೋಷಿತ ಗ್ರೀಕ್ ವಿದ್ಯಾಪೀಠದ ಮುಖ್ಯ ಪ್ರಾಧ್ಯಾಪಕನಾದ. 1891ರಿಂದ 1905ರವರೆಗೊ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಪಾರ್ಲಿಮೆಂಟ್ ಸದಸ್ಯನಾಗಿದ್ದ.

ಹೆಲೆನಿಕ್ ಅಧ್ಯಯನ ಸಂಸ್ಥೆಯೊಂದನ್ನೂ ಅಥೆನ್ಸಿನಲ್ಲಿ ಪ್ರಾಚ್ಯ ವಿದ್ಯಾಲಯವನ್ನೂ ಸ್ಥಾಪಿಸಿದ ಈತ ಬ್ರಿಟಿಷ್ ಅಕಾಡಮಿಯ ಮೂಲಸದಸ್ಯನೂ ಆಗಿದ್ದು 1900ರಲ್ಲಿ ನೈಟ್‍ಹುಡ್ ಪದವಿಯನ್ನೂ 1905ರಲ್ಲಿ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪಡೆದ.

ಗ್ರೀಕ್ ಸಾಹಿತ್ಯವನ್ನು ಪರಿಚಯಿಸುವ ಎ ಪ್ರೈಮರ್ ಆಫ್ ಗ್ರೀಕ್ ಲಿಟರೇಚರ್ (1877); ಆ್ಯಟಿಕ್ ಅರಟರ್ಸ್ (1879); ಮತ್ತು ಆ್ಯನ್ ಇಂಟ್ರಡಕ್ಷನ್ ಟು ಹೋಮರ್ (1887) ಎಂಬ ಈತನ ಪುಸ್ತಕಗಳು ಹೆಸರಾದವು. ಆಳವೂ ವಿಸ್ತಾರವೂ ಆದ ಪಾಂಡಿತ್ಯ ಮಾತ್ರವಲ್ಲದೆ ಗ್ರೀಕ್ ಭಾಷೆಯಲ್ಲಿ ಭಾವಗೀತೆಗಳನ್ನು ರಚಿಸುವಷ್ಟು ಪ್ರತಿಭೆಯೂ ಈತನಿಗಿತ್ತು.

1883-98ರ ಅವಧಿಯಲ್ಲಿ ಈಡಿಪಸ್ ಟಿರನಸ್ ಎಂಬ ನಾಟಕದಿಂದ ಹಿಡಿದು ಅಯಾಜ್ ನಾಟಕದವರೆಗೊ ಸೋಫೋಕ್ಲಿಸ್‍ನ ಪ್ರತಿಯೊಂದು ನಾಟಕವನ್ನೂ ಸಂಪಾದಿಸಿ ಒಂದೊಂದು ಪ್ರತ್ಯೇಕ ಸಂಪುಟವಾಗಿ ವಿಮರ್ಶಾತ್ಮಕವಾದ ಮುನ್ನುಡಿ ಹಾಗೂ ಭಾಷ್ಯಗಳ ಸಮೇತ ಪ್ರಕಟಿಸಿದ.

ಬೇರೆ ಯಾವ ಗ್ರೀಕ್ ಸಾಹಿತ್ಯ ಕೃತಿಯ ಬಗ್ಗೆಯೂ ಇಂಥ ಶ್ರೇಷ್ಠವಾದ ಭಾಷ್ಯ ಇಂಗ್ಲಿಷಿನಲ್ಲಿ ಮತ್ತೊಂದಿಲ್ಲ. ಜೆಬ್‍ನ ಈ ಮೇರುಕೃತಿ ಲೋಕಕ್ಕೊಂದು ಚಿರಸ್ಮರಣೀಯವಾದ ಕಾಣಿಕೆ.

ಈತನ ಇತರ ಕೃತಿಗಳು : ಕ್ಯಾರೆಕ್ಟರ್ಸ್ ಆಫ್ ತಿಯೊಫ್ರೇಸ್ಟಸ್ (1870); ದಿ ಆ್ಯಟಿಕ್ ಆರಟರ್ಸ್ ಫ್ರಮ್ ಆಂಟಿಫಾನ್ ಟು ಐಸಿಯೋಸ್ (1876); ಸೆಲೆಕ್ಷನ್ಸ್ ಫ್ರಮ್ ದಿ ಆ್ಯಟಿಕ್ ಆರಟರ್ಸ್ (1880); ಬೆಂಟ್ಲಿ-ಇ.ಎಂ.ಎಲ್.ಸೀರೀಸ್ (1882); ಹೋಮರ್ (1887); ದಿ ಗ್ರೋತ್ ಅಂಡ್ ಇನ್ಫ್ಲೂಯೆನ್ಸ್ ಆಫ್ ಕ್ಲಾಸಿಕಲ್ ಗ್ರೀಕ್ ಪೊಯೆಟ್ರಿ (1893); ಎಡಿಷನ್ ಆಫ್ ಪೊಯೆಮ್ಸ್ ಆಫ್ ಬ್ಯಾಖಿಲೈಡಿಸ್ (1905).

ಜೆಬ್ಸ್ ಎಸ್ಸೇಸ್ ಅ್ಯಂಡ್ ಲೆಟರ್ಸ್ : ಜೆಬ್ಸ್ ಲೈಫ್ ಅಂಡ್ ಲೆಟರ್ಸ್-ಇವು ಈತನ ಮರಣಾನಂತರ ಪ್ರಕಟಗೊಂಡ ಕೃತಿಗಳು.