ರಾಷ್ಟ್ರೀಯ ಶಿಕ್ಷಣ ಮತ್ತು ಸರ್ವೋದಯ
ರಾಷ್ಟ್ರೀಯ ಶಿಕ್ಷಣ ಮತ್ತು ಸರ್ವೋದಯ
ಬದಲಾಯಿಸಿಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್ಧತಿ ಭಾರತದ ಆದ್ಯಂತವೂ ಅಸ್ತಿತ್ವದಲ್ಲಿದ್ದರೂ ಅದು ಇಲ್ಲಿನವರ ಅಗತ್ಯಗಳನ್ನು ಪುರೈಸಿರಲಿಲ್ಲ; ಆಶೋತ್ತರಗಳನ್ನು ಈಡೇರಿಸಿರಲಿಲ್ಲ. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಬೋಧನಮಾಧ್ಯಮವಾದ್ದರ ಫಲವಾಗಿ ಜನಸಾಮಾನ್ಯಕ್ಕೂ ಶಿಕ್ಷಣಪಡೆದವರಿಗೂ ಅಂತರ ಏರ್ಪಟ್ಟು ಜ್ಞಾನದ ಸಾರ್ವತ್ರಿಕ ಪ್ರಸಾರಕ್ಕೆ ಅವಕಾಶವಿಲ್ಲವಾಗಿತ್ತು. ಅನ್ಯಭಾಷೆಯಾದ ಇಂಗ್ಲಿಷಿಗೆ ಕೊಟ್ಟಿದ್ದ ಅನುಚಿತ ಪ್ರಾಧಾನ್ಯದ ಫಲವಾಗಿ, ಅದು ವಿದ್ಯಾವಂತರ ಮೇಲೆ ಒಂದು ಹೊರೆಯಾಗಿ ಪರಿಣಮಿಸಿ ಅವರ ಮನಶ್ಶಕ್ತಿಯನ್ನು ಕುಂದಿಸಿ ತಮ್ಮ ನಾಡಿನಲ್ಲೆ ಅವರು ಅಪರಿಚಿತರಂತಾಗುವಂತೆ ಮಾಡಿತ್ತು. ವೃತ್ತಿಶಿಕ್ಷಣಕ್ಕೆ ಅಷ್ಟಾಗಿ ಅವಕಾಶವಿಲ್ಲದಿದ್ದ ಆ ಪದ್ಧತಿ ವಿದ್ಯಾವಂತರನ್ನು ಉನ್ನತಕಾರ್ಯಗಳಿಗೆ ಯೋಗ್ಯರಲ್ಲದವರನ್ನಾಗಿ ಮಾಡಿ ಅವರ ದೈಹಿಕ ಶಕ್ತಿಯನ್ನು ಕುಂದಿಸುತ್ತಿತ್ತು. ಪ್ರಾಥಮಿಕ ಶಿಕ್ಷಣದಿಂದ ಕಲಿತ ಅಷ್ಟಿಷ್ಟೂ ಮರೆತುಹೋಗಿ, ಅದರ ನಗರ ಅಥವಾ ಗ್ರಾಮಜೀವನದಲ್ಲಿ ಅನುಪಯುಕ್ತವೆನಿಸುತ್ತಿತ್ತು. ಆ ಮಟ್ಟಿಗೆ ಅದರ ಮೇಲೆ ಹೂಡಿದ ಹಣ ವ್ಯರ್ಥ ವ್ಯಯವಾಗುತ್ತಿತ್ತು. ಅಲ್ಲದೆ ಆ ಪದ್ಧತಿಯಿಂದ ತೆರಿಗೆ ತೆರುವವನಿಗಾಗಲಿ ಅವನ ಮಕ್ಕಳಿಗಾಗಲಿ ಅನುಕೂಲ ಆಗುತ್ತಿರಲಿಲ್ಲ. ಎಲ್ಲೊ ಕೆಲವರಿಗೆ ಸರ್ಕಾರದ ಉದ್ಯೋಗ ದೊರಕುತ್ತಿತ್ತೇ ಹೊರತು ಬಹುತೇಕ ಜನತೆ ನಿರುದ್ಯೋಗ, ಅಜ್ಞಾನ, ದಾರಿದ್ರ್ಯ ಇವುಗಳಲ್ಲಿ ತೊಳಲುವಂತೆ ಮಾಡಿತ್ತಲ್ಲದೆ ಅಸಮಾನತೆ, ಅನುಚಿತಸ್ಪರ್ಧೆ, ಅಸೂಯೆ, ಹಿಂಸೆ ಇವುಗಳಿಗೆ ಪ್ರೋತ್ಸಾಹವೀಯುವಂತೆ ಮಾಡಿತ್ತು. ಆದರೆ ಗಾಂಧೀಜಿಯವರ ಕಲ್ಪನೆಯ ಸರ್ವೋದಯ ಸಮಾಜರಚನೆಗೆ ಸಮಾನತೆ, ಸಹಕಾರ, ಪ್ರೇಮ, ಅಹಿಂಸೆ ಈ ಅಂಶಗಳು ಆಧಾರವಾಗಬೇಕಿತ್ತು. ಅದಕ್ಕೆ ಜನತೆಯಲ್ಲಿ ಜ್ಞಾನ, ಉದ್ಯೋಗ, ಪ್ರಸಾರ, ದಾರಿದ್ರ್ಯ ನಿವಾರಣೆ ಇವು ಅಗತ್ಯವಾಗಿ ಆಗಬೇಕಾಗಿತ್ತು. ಅದಕ್ಕೆ ಶಿಕ್ಷಣ ಸೂಕ್ತ ರೀತಿಯಲ್ಲಿ ಮಾರ್ಪಾಡಾಗಬೇಕಾಗಿತ್ತು. ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು. ಅಂಥ ಶಿಕ್ಷಣಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಕಾಲಾವಧಿಗಾದರೂ ಹೆಚ್ಚಿಸಿ, ಅದರಿಂದ ಮೆಟ್ರಿಕ್ಯುಲೇಷನ್ ಹಂತದಲ್ಲಿ ದೊರೆಯುವಷ್ಟು ಸಾಮಾನ್ಯ ಜ್ಞಾನವೂ (ಇಂಗ್ಲಿಷನ್ನುಳಿದು) ವೃತ್ತಿಯೊಂದರಲ್ಲಿ ಶಿಕ್ಷಣವೂ ದೊರಕುವಂತೆ ಅವಕಾಶಕಲ್ಪನೆಯಾಗಬೇಕೆಂದು ತೀರ್ಮಾನಿಸಿಕೊಂಡರು. ಈ ಬದಲಾವಣೆಗಳನ್ನು ಅಂದು ಇದ್ದ ಶಿಕ್ಷಣ ಪದ್ಧತಿಗೆ ತೇಪೆಹಾಕಿ ನೇರಮಾಡುವುದು ಅಸಾಧ್ಯವೆಂದುಕೊಂಡು ಪ್ರತ್ಯೇಕ ಶಿಕ್ಷಣಪದ್ಧತಿಯೊಂದರ ಅನುಷ್ಠಾನಕ್ಕೆ ಯತ್ನಿಸಿದರು. ರಾಷ್ಟ್ರದ ಅಂದಿನ ತೀವ್ರ ಸಮಸ್ಯೆಗಳನ್ನೂ ನಿವಾರಿಸಿ ತಮ್ಮ ಕನಸಿನ ಸರ್ವೋದಯ ಸಮಾಜವನ್ನು ರಚಿಸಬಲ್ಲ ಆ ಪದ್ಧತಿಯಲ್ಲಿ ಗ್ರಾಮೋದ್ಯೋಗಗಳಿಗೆ ಪ್ರಾಧಾನ್ಯವಿರಬೇಕೆಂದು ಭಾವಿಸಿದರು. ಏಕೆಂದರೆ, ಇಲ್ಲಿನ ಶೇ.80 ರಷ್ಟು ಜನತೆ ಗ್ರಾಮವಾಸಿ ಗಳಾಗಿದ್ದರು. ರಾಷ್ಟ್ರದ ಪ್ರಧಾನ ಸಮಸ್ಯೆಗಳನ್ನೂ ಪರಿಹರಿಸಿ ಸಮಾಜದಲ್ಲಿ ಪರಿವರ್ತನೆ ಮಾಡಬಲ್ಲ ಆ ಶಿಕ್ಷಣವನ್ನು ಅವರು ‘ಗ್ರಾಮೀಣ ರಾಷ್ಟ್ರೀಯ ಶಿಕ್ಷಣ’ ಎಂದು ಕರೆದರು. ಸಮಕಾಲೀನ ಶಿಕ್ಷಣವೇತ್ತರು ರಾಷ್ಟ್ರೀಯ ಶಿಕ್ಷಣ ಎಂಬುದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನು ಕಲ್ಪಿಸಿದ್ದರು. ಗಾಂಧಿಜಿಯವರ ಮೇಲಿನ ಅರ್ಥಕಲ್ಪನೆ ಅದೆಲ್ಲಕ್ಕಿಂತ ಭಿನ್ನವಾಗಿದೆ. ಅವರ ಮಾತಿನಲ್ಲೆ ಹೇಳುವುದಾದರೆ ‘ಇದು ಗ್ರಾಮೀಣ. ಏಕೆಂದರೆ ಉನ್ನತ ಅಥವಾ ಇಂಗ್ಲಿಷ್ ಶಿಕ್ಷಣವನ್ನು ತ್ಯಜಿಸಿರುತ್ತದೆ; ರಾಷ್ಟ್ರೀಯ. ಏಕೆಂದರೆ ಸತ್ಯ, ಅಹಿಂಸೆ, ಗ್ರಾಮೋದ್ಯೋಗಗಳ ಮೂಲಕ (ಎಂದರೆ ಅದನ್ನು ಕಲಿಸುವ ಅಧ್ಯಾಪಕರು ಮಕ್ಕಳಿಗೆ ತಾವು ಆರಿಸಿಕೊಂಡ ಕಸಬಿನ ಮೂಲಕ) ಯಾವ ನಿರ್ಬಂಧ ಹಸ್ತಕ್ಷೇಪಗಳೂ ಇಲ್ಲದೆ ಅವರ ಸರ್ವಸಾಮರ್ಥ್ಯಗಳೂ ವಿಕಸಿಸುವಂತೆ ಮಾಡುವರು, ಇದು ಯಾವ ದೃಷ್ಟಿಯಲ್ಲೂ ಪಾಶ್ಚಾತ್ಯ ವಿಧಾನದಿಂದ ಪ್ರಭಾವಿತವಾದುದಲ್ಲವೆಂಬುದು ಇದರಿಂದ ಸ್ಪಷ್ಟಪಡುತ್ತದೆ.
ಕಸಬು ಕೇಂದ್ರಿತ ಶಿಕ್ಷಣ
ಬದಲಾಯಿಸಿವ್ಯಕ್ತಿಯ ಸರ್ವತೋಮುಖವಾದ ಬೆಳೆವಣಿಗೆಯಾಗಲು ಸಾಧ್ಯವಾದಮಟ್ಟಿಗೆ ಎಲ್ಲ ಶಿಕ್ಷಣವನ್ನೂ ಒಂದು ಲಾಭದಾಯಕ ಕಸಬಿನ ಮೂಲಕ ಒದಗಿಸಬಹುದೆಂದು ಗಾಂಧೀಜಿ ತಮ್ಮ ಪ್ರಯೋಗಗಳಿಂದ ಸ್ಪಷ್ಟವಾಗಿ ಅರಿತು ಕೊಂಡಿದ್ದರು. ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಲು ಆರಿಸಿಕೊಳ್ಳುವ ಕಸಬು ವಿದ್ಯಾರ್ಥಿಯ ದೃಷ್ಟಿಯಲ್ಲಿ ಮೂರು ಉದ್ದೇಶಗಳನ್ನು ಸಾಧಿಸಬೇಕು : ಮೊದಲನೆಯದಾಗಿ, ತನ್ನ ಶಿಕ್ಷಣದ ವೆಚ್ಚವನ್ನು ತನ್ನ ದುಡಿಮೆಯ ಫಲವಾದ ಉತ್ಪನ್ನದಿಂದ ಗಳಿಸಿಕೊಳ್ಳುವಂತಾಗಬೇಕು; ಎರಡನೆಯದಾಗಿ, ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನು ಬೆಳೆಸಲು ಅದು ನೆರವಾಗಬೇಕು; ಮೂರನೆಯದಾಗಿ, ಮುಂದೆ ಅದು ತನ್ನ ಜೀವನೋಪಾಯಕ್ಕಾಗಿ ಅನುಸರಿಸಬಹುದಾದ ಉದ್ಯೋಗವೂ ಆಗಬೇಕು. ಹತ್ತಿ, ಉಣ್ಣೆ, ರೇಷ್ಮೆ - ಇವುಗಳ ಬಳಕೆಗೆ ಸಂಬಂಧಿಸಿದಂತೆ ಸಂಗ್ರಹ, ಶುದ್ಧೀಕರಣ, ಬೀಜ ತೆಗೆಯುವುದು (ಹತ್ತಿಯ ವಿಷಯದಲ್ಲಿ ಮಾತ್ರ), ಎಕ್ಕುವುದು, ನೂಲುವುದು, ಬಣ್ಣಕಟ್ಟುವುದು, ಗಂಜಿಕಟ್ಟುವುದು, ಹಾಸುಮಾಡುವುದು, ಇಮ್ಮಡಿ ನುಲಿಕೆ, ಮಾದರಿ ರಚನೆ, ಮತ್ತು ನೇಯ್ಗೆ - ಇತ್ಯಾದಿಯಾದ ಎಲ್ಲ ಕೆಲಸಗಳೂ ಕಸೂತಿ, ಹೊಲಿಗೆ, ಕಾಗದ ತಯಾರಿಕೆ, ಪುಸ್ತಕಕ್ಕೆ ರಟ್ಟು ಕಟ್ಟುವುದು, ಮರಗೆಲಸ, ಆಟಿಕೆಗಳ ತಯಾರಿಕೆ, ಮನೆಕಟ್ಟುವುದು -ಇವೆಲ್ಲ ಸರಾಗವಾಗಿ ಕಲಿಯಬಹುದಾದ ಹಾಗೂ ಅಷ್ಟಾಗಿ ಬಂಡವಾಳ ಬೇಡದ ಕಸಬುಗಳು. ಪ್ರಾಥಮಿಕ ಕಲಿಕೆ ಬಾಲಕಬಾಲಕಿಯರಿಗೆ ಜೀವನೋಪಾಯಕ್ಕೆ ನೆರವಾಗಬಲ್ಲ ಶಿಕ್ಷಣ ಒದಗಿಸಬೇಕು. ಅವರು ಕಲಿತಿರುವ ಕಸಬಿಗೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ಆಶ್ವಾಸನೆ ನೀಡಬೇಕು. ಅಥವಾ ಅವರು ತಯಾರಿಸುವ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು. ಆಗ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಅನುಕೂಲವಾಗುವುದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯೂ ಆಗಿರಬಲ್ಲದು. ಇವು ಗಾಂಧೀಜಿಯವರ ಮನಸ್ಸಿನಲ್ಲಿ 20ನೆಯ ಶತಮಾನದ ಆದಿಯಿಂದಲೂ ಶಿಕ್ಷಣದ ಬಗ್ಗೆ ಪುಟಗೊಳ್ಳುತ್ತಿದ್ದ ಭಾವನೆಗಳು. 1902 ರಲ್ಲೆ ಟಾಲ್ಸ್ಟಾಯ್ ಫಾರಮ್ಮಿನಲ್ಲಿ ಅಂಥ ಶಿಕ್ಷಣ ಸ್ವಾವಲಂಬಿಯಾಗಬಲ್ಲದೆಂದು ದೃಢಪಡಿಸಿಕೊಂಡಿದ್ದರೂ ಆ ಬಗ್ಗೆ ನಿರ್ದಿಷ್ಟವಾಗಿ ಪ್ರಕಟಿಸಿದ್ದು 1921 ರಲ್ಲಿ. ಹರಿಜನ ಪತ್ರಿಕೆಯಲ್ಲಿ ಮೊಟ್ಟಮೊದಲನೆಯದಾಗಿ ತಮ್ಮ ಶಿಕ್ಷಣದ ಸ್ಥೂಲ ರೂಪರೇಷೆಗಳನ್ನು ವಿವರಿಸಿದರು. ಆದರೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರಲು ಅಂದು ದೇಶದಲ್ಲಿ ಪರಕೀಯ ಆಡಳಿತ ಅಸ್ತಿತ್ವದಲ್ಲಿದ್ದುದರಿಂದ ಅವಕಾಶವಾಗಲಿಲ್ಲ. ಮೇಲಾಗಿ ಅವರು ಇಂಗ್ಲಿಷರ ಆಡಳಿತದ ವಿರುದ್ಧ ಚಳವಳಿ ಹೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದ್ದುದರಿಂದ ಸರ್ಕಾರ ಅವರ ಪದ್ಧತಿಗೆ ಪುರಸ್ಕಾರ ನೀಡುವುದಾದರೂ ಸಾಧ್ಯವೇ ? ಆದರೂ ಅವರು ವರ್ಧಾದಲ್ಲಿ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದೇ ಇದ್ದರು. ತಮ್ಮ ನೆಚ್ಚಿನ ಆ ಶಿಕ್ಷಣಪದ್ಧತಿಯನ್ನು ದೇಶಾದ್ಯಂತ ಆಚರಣೆಗೆ ತರಲು ಸೂಕ್ತ ಸನ್ನಿವೇಶಗಳಿಗಾಗಿ ಕಾದಿದ್ದರು.
1937 ರಲ್ಲಿ ಪ್ರಾಂತೀಯ ಸ್ವಾತಂತ್ರ್ಯ ಆಚರಣೆಗೆ ಬಂತು. ಪ್ರಾಂತ್ಯಗಳಲ್ಲಿ ಜನನಾಯಕರು ಶಿಕ್ಷಣ ಸಚಿವರಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುವಂತೆ ಶಿಕ್ಷಣ ವ್ಯವಸ್ಥೆ ಮಾಡಲು ಸಿದ್ಧರಾದರು. ಅಂದಿಗಾಗಲೆ ಕಡ್ಡಾಯ ಶಿಕ್ಷಣವನ್ನು ದೇಶಾದ್ಯಂತ ಆಚರಣೆಗೆ ತರಬೇಕೆಂಬ ಕೂಗು ಎಲ್ಲೆಲ್ಲೂ ಆರಂಭವಾಗಿತ್ತು. ಹಣದ ಅಭಾವದ ಕಾರಣವನ್ನು ಮುಂದೊಡ್ಡಿ ಸರ್ಕಾರ ಅದನ್ನು ನಿರ್ಲಕ್ಷಿಸುತ್ತ ಬಂದಿತ್ತು. ಈಗ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು. ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಅಭಾವವಿತ್ತು. ಜೊತೆಗೆ ಕಾಂಗ್ರೆಸ್ ಸರ್ಕಾರಗಳು ಪಾನನಿರೋಧವನ್ನು ಆಚರಣೆಗೆ ತರಲು ತೀರ್ಮಾನಿಸಿದ್ದರಿಂದ ಅದರಿಂದ ಬರುತ್ತಿದ್ದ ಆದಾಯವೂ ನಿಂತುಹೋಗಿತ್ತು. ಆದ್ದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತ್ತು. ಆ ಸಮಯದಲ್ಲಿ ಗಾಂಧೀಜಿ ಅಷ್ಟಾಗಿ ಹಣದ ವೆಚ್ಚವಿಲ್ಲದೆ ರಾಷ್ಟ್ರವ್ಯಾಪಕವಾಗಿ ಆಚರಣೆಗೆ ತರಬಹುದಾದ ತಮ್ಮ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಜನತೆಯ ಮುಂದಿಟ್ಟರು. ಅಂದಿಗಾಗಲೇ ಅವರ ಶಿಕ್ಷಣ ಪದ್ಧತಿಗೆ ತಕ್ಕಷ್ಟು ಪ್ರಚಾರ ದೊರೆತಿದ್ದು, ಬೇಕಾದ ಹಾಗೆ ಖಂಡನೆ ಮಂಡನೆಗಳು ಪ್ರಕಟವಾಗಿದ್ದುವು ಹಾಗೂ ಆ ಶಿಕ್ಷಣ ಪದ್ಧತಿಯ ಸ್ವಾವಲಂಬನೆಯ ಬಗ್ಗೆ ತೀವ್ರತರ ಟೀಕೆಗಳು ಬಂದಿದ್ದುವು. ಆದ್ದರಿಂದ ಅದನ್ನು ಆಚರಣೆಗೆ ತರುವ ಮುನ್ನ ತಜ್ಞರು ಅದನ್ನು ಪರಿಶೀಲಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು.
1937 ರ ಅಕ್ಟೋಬರ್ 23 ರಂದು ವರ್ಧಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ನಡೆಯಿತು. ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಪ್ರಕಟಿಸಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಟೀಕೆಗಳು ಬರಹತ್ತಿದ್ದುವು. ಆ ಪದ್ಧತಿಯನ್ನು ಸಮ್ಮೇಳನ ಚೆನ್ನಾಗಿ ಪರಿಶೀಲಿಸಿತು. ಸಮ್ಮೇಳನದಲ್ಲಿ ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳ ಶಿಕ್ಷಣ ಸಚಿವರೂ ರಾಷ್ಟ್ರೀಯ ಶಿಕ್ಷಣದಲ್ಲಿ ಆಸಕ್ತಿಯಿದ್ದ ಶಿಕ್ಷಣ ತಜ್ಞರೂ ಇತರರೂ ಇದ್ದರು. ಗಾಂಧೀಜಿಯ ಶಿಕ್ಷಣಯೋಜನೆಯ ಮೇಲೆ ತೀವ್ರರೀತಿಯಲ್ಲಿ ಚರ್ಚೆ ನಡೆಯಿತು. ಕಡೆಗೆ ಸಮ್ಮೇಳನ ಈ ಕೆಲವು ತೀರ್ಮಾನಗಳನ್ನು ಕೈಕೊಂಡಿತು : 1 ರಾಷ್ಟ್ರವ್ಯಾಪಕವಾಗಿ ಏಳು ವರ್ಷಗಳ ಉಚಿತ ಕಡ್ಡಾಯ ಶಿಕ್ಷಣವನ್ನು ದೊರಕಿಸಬೇಕು; 2 ಬೋಧನಮಾಧ್ಯಮ ಮಾತೃಭಾಷೆಯಾಗಿರಬೇಕು; 3 ಈ ಕಾಲಾವಧಿಯ ಶಿಕ್ಷಣ ಗಾಂಧೀಜಿ ಸಲಹೆ ಮಾಡಿರುವಂತೆ, ಒಂದು ಉತ್ಪನ್ನದಾಯಕ ಕೈಕಸಬನ್ನು ಕೇಂದ್ರಮಾಡಿಕೊಂಡಿರಬೇಕು. ಮಕ್ಕಳಲ್ಲಿ ಮೂಡಿಸಬೇಕಾದ ಮಿಕ್ಕೆಲ್ಲ ಸಾಮಥ್ರ್ಯ ಗಳೂ ಕೊಡಬೇಕಾದ ತರಬೇತೂ ಸಾಧ್ಯವಾದ ಮಟ್ಟಿಗೆ ಮಗುವಿನ ಸನ್ನಿವೇಶದಿಂದ ಆರಿಸಿಕೊಂಡ ಆ ಕೈಕಸಬಿನೊಡನೆ ಸಂಬಂಧಿಸಿರಬೇಕು; 4 ಈ ಶಿಕ್ಷಣ ಪದ್ಧತಿ ಕ್ರಮಕ್ರಮವಾಗಿ ಅಧ್ಯಾಪಕರ ಸಂಭಾವನೆಯ ಬಗ್ಗೆ ಸ್ವಯಂಪೂರ್ಣವಾಗಬೇಕು ಎಂದು ಸಮ್ಮೇಳನ ಆಶಿಸುವುದು. ಈ ತೀರ್ಮಾನಗಳನ್ನು ಆಧಾರ ಮಾಡಿಕೊಂಡು ಗಾಂಧೀಜಿ ಶಿಕ್ಷಣ ಯೋಜನೆಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕೊಡಬೇಕಾಗಿತ್ತು. ಅದಕ್ಕಾಗಿ ಸಮ್ಮೇಳನ ಜಾಕೀರ್ ಹುಸೇನ್ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಮಿತಿ ಎರಡು ತಿಂಗಳೊಳಗಾಗಿ ಈ ಕಾರ್ಯವನ್ನು ಪುರೈಸಿ ವರ್ಧಾ ಶಿಕ್ಷಣ ಯೋಜನೆ ಎಂಬ ಹೆಸರಿನ ವರದಿಯನ್ನು ಸಲ್ಲಿಸಿತು. ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಇದೊಂದು ಪ್ರಧಾನ ದಾಖಲೆ. ಆನಂತರ 1938 ರಲ್ಲಿ ಹರಿಪುರದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನ ಅದಕ್ಕೆ ತನ್ನ ಒಪ್ಪಿಗೆ ನೀಡಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳಲ್ಲೂ ಯೋಜನೆ ಮೂಲಶಿಕ್ಷಣ (ಬೇಸಿಕ್ ಎಜುಕೇಷನ್) ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂತು.
ಮೂಲಶಿಕ್ಷಣದ ಶಾಸ್ತ್ರೀಯ ಸ್ವರೂಪ
ಬದಲಾಯಿಸಿಮೂಲಶಿಕ್ಷಣವನ್ನು ರೂಪಿಸಿದ ಗಾಂಧೀಜಿ ಮೂಲತಃ ಶಿಕ್ಷಣವೇತ್ತರಲ್ಲ. ಅವರು ಅದನ್ನು ಶಿಕ್ಷಣಶಾಸ್ತ್ರದ ಬೆಳಕಿನಲ್ಲಿ ರೂಪಿಸುವ ಯತ್ನವನ್ನೂ ಮಾಡಿದವರಲ್ಲ. ಆದರೂ ಅವರ ಯೋಜನೆಯಲ್ಲಿ ಶಿಕ್ಷಣಶಾಸ್ತ್ರ ಎತ್ತಿಹಿಡಿಯುವ ಹಲವು ಸಲ್ಲಕ್ಷಣಗಳನ್ನು ಗುರುತಿಸಬಹುದು. ಉತ್ಪನ್ನದಾಯಕ ಚಟುವಟಕೆಯೊಂದರ ಮೂಲಕ ಮಕ್ಕಳಿಗೆ ಶಿಕ್ಷಣವೀಯಲು ನಿಯೋಜಿಸಿರುವ ಅವರ ಯೋಜನೆ ಎಲ್ಲ ಆಧುನಿಕ ತತ್ತ್ವಗಳಿಗೂ ಒಪ್ಪುವಂತಿದೆ. ಮಕ್ಕಳ ಸಮಗ್ರವೂ ಸರ್ವತೋಮುಖವೂ ಆದ ವಿಕಾಸಕ್ಕೆ ಅದು ಪರಿಣಾಮಕಾರಿ ವಿಧಾನವೆಂಬುದನ್ನು ಎಲ್ಲ ಶಿಕ್ಷಣತತ್ತ್ವಗಳೂ ಒಪ್ಪುತ್ತವೆ. ಅರ್ಥವಾಗದ ಸೈದ್ಧಾಂತಿಕರೂಪದ ಜ್ಞಾನವನ್ನು ಕಲಿಯಲು ಮಕ್ಕಳ ಮನಸ್ಸು ಬೇಸರಗೊಳ್ಳುವುದರಿಂದ ಅದು ವಿಹಿತವೆನಿಸದ ವಿಧಾನವಾಗುತ್ತದೆ. ಮೂಲಶಿಕ್ಷಣದಲ್ಲಿ ಬೌದ್ಧಿಕ ಮತ್ತು ಅಭ್ಯಾಸಾತ್ಮಕ (ಕ್ರಿಯಾಪ್ರದ) ಅಂಶಗಳೆರಡೂ ಸೇರಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಗಳೆರಡೂ ಸಮನ್ವಯಗೊಂಡು ಅಭಿವೃದ್ಧಿಯಾಗುತ್ತವೆ; ಮಕ್ಕಳು ಬರಿಯ ಗಿಳಿ ಓದಿನ ಅಕ್ಷರ ವಿದ್ಯೆಯನ್ನು ಸಾಧಿಸದೆ ರಚನಾತ್ಮಕ ಉದ್ದೇಶಗಳಿಗಾಗಿ ಬುದ್ಧಿ ಮತ್ತು ಕೈಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯುತ್ತಾರೆ; ಸುಮ್ಮನೆ ಕೇಳಿ ಅಥವಾ ಓದಿ ಕಲಿಯುವುದರ ಬದಲು ಮಾಡಿ ಕಲಿಯುವ ಅವಕಾಶವಿರುವುದರಿಂದ ಈ ಪದ್ಧತಿಯಿಂದ ಕಲಿತ ಶಿಕ್ಷಣ ದೃಢವಾಗಿ ನಿಲ್ಲುವುದರ ಜೊತೆಗೆ ಅವರ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಬಲ್ಲದು. ಯಾವುದೇ ಜ್ಞಾನವನ್ನು ಅವರಿಗೆ ಕಲಿಸಬೇಕಾದರೂ ಕಸಬನ್ನು ಮಾಡಲು ಅನಿವಾರ್ಯವೆನಿಸಿದಾಗ ಆ ಕಾರ್ಯಕ್ಕೆ ಯತ್ನಿಸುವುದರಿಂದ ಕಲಿತದ್ದು ಅರ್ಥವತ್ತಾಗಿರುವುದಲ್ಲದೆ ಅದನ್ನು ಕಲಿಯಲು ಮನಸ್ಸಿನಲ್ಲಿ ಆಸಕ್ತಿ, ಸಿದ್ಧತೆ ಮತ್ತು ಉದ್ದೇಶಗಳು ರೂಪುಗೊಂಡಿರುತ್ತವೆ. ಇವೆಲ್ಲ ಮನಶ್ಯಾಸ್ತ್ರಕ್ಕೆ ಸಮ್ಮತವೆನಿಸಿರುವ ಅಂಶಗಳು.
ಶೈಕ್ಷಣಿಕ ಸಮಾಜಶಾಸ್ತ್ರದ ದೃಷ್ಟಿಯಲ್ಲೂ ಮೂಲಶಿಕ್ಷಣ ಹಲವು ಉತ್ತಮ ಗುಣಗಳಿಂದ ಕೂಡಿರುವುದನ್ನು ಕಾಣಬಹುದು. ಸರ್ವೋದಯ ತತ್ತ್ವವ್ಯಕ್ತಿಯ ಜೀವನದಲ್ಲಿ ಅಂಕುರಿಸಿ ಸಮಾಜ ಜೀವನದಲ್ಲಿ ಆವಿಷ್ಕಾರವಾಗಬೇಕೆಂಬುದು ಗಾಂಧೀಜಿಯ ಅಭಿಲಾಷೆಯಾಗಿತ್ತು. ಅಂಥ ಪರಿವರ್ತನೆ ಅಹಿಂಸೆ ಅಥವಾ ಪ್ರೇಮದಿಂದ ಉದ್ಭವಿಸಬೇಕು. ಅದು ಎಲ್ಲ ಮಾನವರ (ಸಮಾಜದ) ಪರಮ ಒಳಿತಿನಲ್ಲಿ ಅಡಗಿದೆ. ಸಮಾಜ ಈಶ್ವರನ ವ್ಯಕ್ತಸ್ವರೂಪ. ಇದು ಜೀವಂತ ಚೈತನ್ಯದಲ್ಲಿನ (ದೇವ) ಅವರ ನೈಜವಾದ ನಂಬಿಕೆ. ವ್ಯಕ್ತಿಯ ಸಾಧನೆ (ಶಿಕ್ಷಣ), ಸಂಪತ್ತು, ಕಾಣಕೆಯ ರೂಪದಲ್ಲಿ ಸಮಾಜಕ್ಕೆ ಸಲ್ಲಬೇಕು. ಸಮಾಜ ಸಂಗ್ರಹಿಸಿಕೊಂಡು ರಕ್ಷಿಸಿಕೊಂಡು ಬಂದಿರುವ ಮಾನವಜನಾಂಗದ ಸಂಸ್ಕೃತಿ ಸಂಪತ್ತನ್ನು ವ್ಯಕ್ತಿ ಬಳಸಿಕೊಂಡು ತನ್ನ ಹಿತವನ್ನು ಸಾಧಿಸಿಕೊಂಡು ಸಮಾಜ ಹಿತಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ಶಕ್ತನಾಗಬೇಕು. ಈ ದೃಷ್ಟಿಯಲ್ಲಿ ಅವರ ಸರ್ವೋದಯ ಸಮಾಜದ ತತ್ತ್ವ ಸಾಮಾಜಿಕದೊಡನೆ ಆಧ್ಯಾತ್ಮಿಕವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶಿಕ್ಷಣವನ್ನೊಂದು ಉಪಕರಣವನ್ನಾಗಿ ಮಾಡಿಕೊಂಡಿತೆನ್ನಬಹುದು. ಅಂಥ ಶಿಕ್ಷಣದಿಂದ ದೇಶದ ಮಕ್ಕಳೆಲ್ಲ ಕೈಗಾರಿಕೆಯಲ್ಲಿ ತೊಡಗುವುದರಿಂದ ಬುದ್ಧಿಜೀವನಕ್ಕೂ ಶ್ರಮಜೀವನಕ್ಕೂ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದ ವ್ಯತ್ಯಾಸ ಕಡಿಮೆಯಾಗುವುದರ ಜೊತೆಗೆ ಬೇರೆ ಬೇರೆ ಕಸಬುಗಳಿಗಿರುವ ಭಿನ್ನತೆಯನ್ನೂ ಅಂತರವನ್ನೂ ನಿವಾರಿಸಿದಂತಾಗುತ್ತದೆ. ಸಮಾಜಕ್ಕೆ ಎಲ್ಲ ಕಸಬುಗಳೂ ಅಗತ್ಯವೆಂಬ ಅಂಶ ವ್ಯಕ್ತಪಟ್ಟು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ಲಭಿಸುತ್ತದೆ. ಮೂಲಶಿಕ್ಷಣ ಈ ಎಲ್ಲ ಸಾಮಾಜಿಕ ಮೌಲ್ಯಗಳನ್ನೂ ವೃದ್ಧಿಪಡಿಸಿ ಸಮಾಜದ ಪ್ರಗತಿಗೆ ರಕ್ತರಹಿತ ಕ್ರಾಂತಿಯ ಮೂಲಕ ನೆರವಾಗಬೇಕು. ಆರ್ಥಿಕ ದೃಷ್ಟಿಯಿಂದ ಪರಿಗಣಿಸಿದರೂ ಮೂಲಶಿಕ್ಷಣದಲ್ಲಿ ಪ್ರಗತಿಪರ ಅಂಶಗಳು ಕಾಣುತ್ತವೆ. ಪ್ರತಿಯೊಬ್ಬನೂ ಶಿಕ್ಷಣ ಮುಗಿಸಿಕೊಂಡು ಜೀವನೋಪಾಯವನ್ನು ಸಾಧಿಸಿಕೊಳ್ಳಲು ಶಕ್ತಿ ಪಡೆದಿರುತ್ತಾನೆ. ಅಲ್ಲದೆ ಅವನು ತನ್ನ ವೃತ್ತಿಯಲ್ಲಿ ಕುರುಡುಕರ್ಮ ಮಾಡದೆ ಬುದ್ಧಿಯನ್ನೂ ಬಳಸುವುದರಿಂದ ವೃತ್ತಿಯಲ್ಲೂ ಪ್ರಗತಿ ಸಾಧನೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿಗೂ ಅವಕಾಶವಾಗುತ್ತದೆ. ಶುದ್ಧ ಶಿಕ್ಷಣಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಜೀವನದಲ್ಲಿ ಅನುಸರಿಸುವ ಒಂದು ಕಸಬು ಶಾಲೆಯಲ್ಲಿ ಬೋಧನೆಯ ಕೇಂದ್ರವಿಷಯವಾಗಿರುವುದರಿಂದ ಜೀವನಕ್ಕೂ ಶಿಕ್ಷಣಕ್ಕೂ ನಿಕಟಸಂಬಂಧವಿರುವುದು ವ್ಯಕ್ತವಾಗಿ ಜೀವನವೇ ಬೇರೆ ಶಿಕ್ಷಣವೇ ಬೇರೆ ಎನ್ನುವ ಕೃತಕ ಅಹಿತದೃಷ್ಟಿ ಮಾಯವಾಗುತ್ತದೆ. ಯಾವ ಶಿಕ್ಷಣಪದ್ಧತಿಯೇ ಆಗಲಿ ವ್ಯಕ್ತಿಗೆ ಸತ್ಪೌರನಾಗಿ ಬಾಳಲು ಸಿದ್ಧತೆ ನೀಡಬೇಕು. ತಾವು ವೃತ್ತಿಯೊಂದರಲ್ಲಿ ಸಿದ್ಧತೆ ಪಡೆದಿರುವುದರಿಂದ ವ್ಯಕ್ತಿ ತನ್ನ ಜೀವನೋಪಾಯದ ಜೊತೆಗೆ ಸಮಾಜಕ್ಕೆ ಅಗತ್ಯವೆನಿಸುವ ಸೇವಾಕಾರ್ಯವನ್ನೂ ನಿರ್ವಹಿಸಬಲ್ಲನು. ಸಹಕಾರದ ಸನ್ನಿವೇಶದಲ್ಲಿ ಕಲಿತ ಆ ವೃತ್ತಿಮನೋಭಾವ ಸಮಾಜ ಜೀವನಕ್ಕೂ ಹರಿದುಬಂದು ವ್ಯಕ್ತಿಯಲ್ಲಿ ಸೇವಾದೃಷ್ಟಿಯನ್ನು ಬೆಳೆಸುವುದಲ್ಲದೆ, ವೈಯಕ್ತಿಕ ಮೌಲ್ಯ, ಆತ್ಮಗೌರವ, ವೃತ್ತಿದಕ್ಷತೆ ಮುಂತಾದ ಸದ್ಗುಣಗಳನ್ನೂ ಮೂಡಿಸುತ್ತದೆ.
ಗಾಂಧೀಜಿ ಗ್ರಾಂಥಿಕ ಶಿಕ್ಷಣವನ್ನೇನೂ ವಿರೋಧಿಸಲಿಲ್ಲ. ಆದರೆ ಪುಸ್ತಕದ ಓದು ಕಲಿಸುವುದಕ್ಕಾಗಿಯೇ ಕೋಟಿಗಟ್ಟಲೆ ಹಣ ತಿನ್ನುವ ಪ್ರಾಥಮಿಕ ಶಿಕ್ಷಣ ಮಕ್ಕಳ ಮನಶ್ಯಕ್ತಿಯನ್ನು ಶೋಷಿಸದಿರಬೇಕೆಂದು ಅವರ ಆಶಯವಾಗಿತ್ತು. ತಕಲಿ ಮುಂತಾದ ಉಪಕರಣಗಳಿಂದ ಕೆಲಸ ಮಾಡುವುದು ಮಕ್ಕಳಿಗೊಂದು ಆಟದ ರೂಪದಲ್ಲಿದ್ದು ಅಂಥ ಶೋಷಣೆಯಿಂದ ಅವರನ್ನು ವಿಮುಕ್ತಿ ಮಾಡುವುದೆಂದು ಅವರು ಪ್ರತಿಪಾದಿಸುತ್ತಿದ್ದರು. ಮೂಲಶಿಕ್ಷಣ ಕೇವಲ ಕಸಬೊಂದನ್ನು ಕಲಿಸುವ ಮಧ್ಯಯುಗಗಳ ಉಮೇದುವಾರಿ ತರಬೇತಿನಂತಿರಲಿಲ್ಲ; ಸಾಮಾನ್ಯ ಶಿಕ್ಷಣದ ಜೊತೆಗೆ ಕೈಗಾರಿಕೆಯೊಂದನ್ನು ಕಲಿಸುವ ಶಿಕ್ಷಣವೂ ಆಗಿರಲಿಲ್ಲ; ಅದು ನಿಜವಾಗಿ, ಯಾವುದಾದರೂ ಕೈಗಾರಿಕೆಯ ಮಾಧ್ಯಮದ ಮೂಲಕ ಇಡೀ ಶಿಕ್ಷಣವನ್ನು ದೊರಕಿಸಿ, ವೃತ್ತಿಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವವನ್ನೇ ರೂಪಿಸುವ ಒಂದು ಯೋಜನೆ. ಉನ್ನತ ಶಿಕ್ಷಣದ ಬಗ್ಗೆ ಗಾಂಧೀಜಿಯ ದೃಷ್ಟಿ : 20ನೆಯ ಶತಮಾನದ ಪುರ್ವಾರ್ಧ ದಲ್ಲಿ ಭಾರತದಲ್ಲಿದ್ದ ವಿಶೇಷ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಿಂದಾಗಿ ಗಾಂಧೀಜಿ ಪ್ರಾಥಮಿಕ ಶಿಕ್ಷಣದ ಕಡೆಯೇ ಹೆಚ್ಚು ಗಮನ ಹರಿಸಿದ್ದರೂ ಶಿಕ್ಷಣದ ಇತರ ಹಂತಗಳ ಬಗ್ಗೆಯೂ ಚಿಂತನೆ ನಡೆಸಿದ್ದರು. ಪ್ರಾಥಮಿಕ ಪುರ್ವದ ಮಕ್ಕಳ ಶಿಕ್ಷಣದ ಪ್ರಾಮುಖ್ಯವನ್ನೂ ಅಗತ್ಯವನ್ನೂ ಅವರು ಮನಗಂಡಿದ್ದರು. ರಾಷ್ಟ್ರದ ಮುನ್ನಡೆಗೆ ಉನ್ನತ ಶಿಕ್ಷಣದ ಅಗತ್ಯವನ್ನೂ ಅದರ ಪುನರ್ವ್ಯವಸ್ಥೆಯ ಅಗತ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅಂದು ಪ್ರಾಥಮಿಕಶಿಕ್ಷಣ ಎಲ್ಲ ದೇಶಗಳಂತೆ ಭಾರತದಲ್ಲೂ ತೀರ ಅಗತ್ಯವೆನಿಸಿದ್ದುದರಿಂದ ಅವರು ತಮ್ಮ ಗಮನವನ್ನು ಮುಖ್ಯವಾಗಿ ಆ ಕಡೆ ವಿನಿಯೋಗಿಸಿದರು. ಗಾಂಧೀಜಿಯ ದೃಷ್ಟಿಯಲ್ಲಿ ಮೂಲಶಿಕ್ಷಣ ದೃಷ್ಟಿಯನ್ನೇ ಉನ್ನತಶಿಕ್ಷಣಕ್ಕೂ ವಿಸ್ತರಿಸಬಹುದಾಗಿತ್ತು. ಹರಿಜನ ಪತ್ರಿಕೆಯಲ್ಲಿ ಆ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರ ರೂಪುರೇಖೆಯೂ ಮೂಲಶಿಕ್ಷಣಕ್ಕೆ ಆಧಾರವಾದ ಸ್ವಯಂ ಉದ್ಯೋಗ, ಸ್ವಾವಲಂಬನೆ, ಶ್ರಮಜೀವನ- ಇವುಗಳನ್ನೇ ಅವಲಂಬಿಸಿದ್ದು, ಪ್ರಾಥಮಿಕ ಶಿಕ್ಷಣದಂತೆ ಆ ಮೂಲಕ ಉನ್ನತ ಶಿಕ್ಷಣದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗ ಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ‘ಅದು ರಾಷ್ಟ್ರೀಯ ಆವಶ್ಯಕತೆಗಳನ್ನು ಆಧಾರಮಾಡಿಕೊಂಡು ವ್ಯವಸ್ಥೆಗೊಳ್ಳಬೇಕು; ಯಂತ್ರ ಪರಿಣಿತರು, ತಾಂತ್ರಿಕ ತಜ್ಞರು, ವಿವಿಧ ವೃತ್ತಿನಿಪುಣರು - ಇತ್ಯಾದಿಯವರನ್ನು ಸಿದ್ಧಪಡಿಸಲು ವೃತ್ತಿಶಿಕ್ಷಣ ವ್ಯವಸ್ಥೆಯೂ ಇದ್ದೇ ಇರಬೇಕು’ ಎಂದು ಅವರು ಭಾವಿಸಿದ್ದರು. ಆದರೆ ಔದ್ಯೋಗಿಕ ಶಿಕ್ಷಣ ಆಯಾ ಉದ್ಯೋಗಕ್ಕೆ ಹೊಂದಿಕೊಂಡಂತಿದ್ದು ಅಲ್ಲಿಗೆ ಅಗತ್ಯವಾಗುವ ಪದವೀಧರರ ಶಿಕ್ಷಣವನ್ನು ಆ ಉದ್ಯೋಗ ಕ್ಷೇತ್ರವೇ ನಿರ್ವಹಿಸಬೇಕೆಂದು ಅವರು ಪ್ರತಿಪಾದಿಸಿರುವರು. ಅದರ ಪ್ರಕಾರ ತಾತಾ ಔದ್ಯೋಗಿಕ ಸಂಸ್ಥೆಗಳಂಥವು ರಾಷ್ಟ್ರದ ಮೇಲ್ವಿಚಾರಣೆಯಲ್ಲಿ ಇಂಜಿನಿಯರಿಂಗ್ ಕಾಲೇಜೊಂದನ್ನು ನಡೆಸಬಹುದು. ಗಿರಣಿ ಕೆಲಸಗಾರರು ತಮ್ಮ ಉದ್ಯೋಗಗಳಿಗೆ ಬೇಕಾಗುವ ತಾಂತ್ರಿಕ ಪದವೀಧರರಿಗೆ ಶಿಕ್ಷಣವೀಯಲು ಕಾಲೇಜು ಗಳನ್ನು ನಡೆಸಬಹುದು; ವಾಣಿಜ್ಯಕ್ಷೇತ್ರ ವಾಣಿಜ್ಯಕಾಲೇಜುಗಳನ್ನೂ ನಡೆಸಬಹುದು; ವೈದ್ಯವೃತ್ತಿ ಧನಿಕರ ಆಸಕ್ತಿಯನ್ನು ಗಳಿಸಿರುವುದರಿಂದ ಖಾಸಗಿ ಅಂಗೀಕೃತ ಕಾಲೇಜುಗಳಲ್ಲಿ ಆ ಶಿಕ್ಷಣವನ್ನು ವ್ಯವಸ್ಥೆಗೊಳಿಸಬಹುದು. ಇವೆಲ್ಲ ಸರ್ಕಾರದ ಧನಸಹಾಯವಿಲ್ಲದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಕೆಲಸಮಾಡಬಲ್ಲವು. ಎಷ್ಟೋ ಕಲಾಶಾಸ್ತ್ರ ಮತ್ತು ವಿಜ್ಞಾನಶಾಸ್ತ್ರದ ಖಾಸಗಿ ಕಾಲೇಜುಗಳೂ ಆ ರೀತಿಯಲ್ಲಿ ನಡೆಯಲು ಸಾಧ್ಯವೆಂಬುದು ಆಗಲೆ ವ್ಯಕ್ತವಾಗಿತ್ತು. ಹಾಗೆಯೇ ಕೃಷಿ ಕಾಲೇಜುಗಳೂ ಸ್ವಾವಲಂಬಿಯಾಗಿ ನಡೆಯಬೇಕೆಂದು ಅವರು ಭಾವಿಸಿದ್ದರು. ಕೃಷಿಕ್ಷೇತ್ರದಲ್ಲೇ ಅವರಿಗೆ ಶಿಕ್ಷಣವೀಯುವುದಾದರೆ ಅದು ಸಾಧ್ಯವಾಗುವುದೆಂದೂ ಅಲ್ಲಿನ ವಿದ್ಯಾರ್ಥಿಗಳು ಪದವೀಧರರಾದ ಮೇಲೆ ವ್ಯವಸಾಯ ಕ್ಷೇತ್ರಕ್ಕೆ ಗಣನೀಯಸೇವೆ ಸಲ್ಲಿಸುವರೆಂದೂ ಅವರು ಸೂಚಿಸಿರುವರು; ಹೀಗೆಯೇ ಇತರ ವೃತ್ತಿಶಿಕ್ಷಣಗಳೂ ಸ್ವಾವಲಂಬಿಯಾಗಿ ಕೆಲಸ ಮಾಡುವುದು ಸಾಧ್ಯವೆಂದು ತೋರಿಸಿರುವರು. ಈ ದೃಷ್ಟಿ ವೈಪರೀತ್ಯವನ್ನು ಮುಟ್ಟಿರುವಂತೆ ತೋರಿದರೂ ಸಾಧ್ಯವೆಂಬುದನ್ನು ಅವರು ಮನಗಂಡಿದ್ದರು. ಮೇಲಾಗಿ ಅವರ ಆಸಕ್ತಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಕಡೆಗೆ ಇದ್ದುದರಿಂದ ಉನ್ನತ ಶಿಕ್ಷಣವನ್ನೆಲ್ಲ ಖಾಸಗೀ ಸಂಸ್ಥೆಗಳೇ ನಡೆಸುವಂತಾದರೆ ಸರ್ಕಾರ ತನ್ನ ಪೂರ್ಣಗಮನವನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಮೀಸಲಿಡಲು ಸಾಧ್ಯವಾಗುವುದೆಂದು ಅವರು ಆಲೋಚಿಸಿದರು.
ಮೂಲ ಶಿಕ್ಷಣದ ಭವಿಷ್ಯ
ಬದಲಾಯಿಸಿಭಾರತ ಸರ್ಕಾರ ಮೂಲಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿಯೆಂದು ಅಂಗೀಕರಿಸಿ ಅದರ ಪ್ರಗತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿತು. ಅದರೊಡನೆ ಅಂಟಿಕೊಂಡಿದ್ದ ‘ವಿದ್ಯಾರ್ಥಿ ದುಡಿಮೆಯಿಂದ ಅಧ್ಯಾಪಕರ ವೇತನವನ್ನು ದೊರಕಿಸಿಕೊಳ್ಳಬೇಕೆಂಬ’ ಅಂಶವನ್ನು ಕೈಬಿಡಲಾಯಿತು. ಆದರೂ ಅದು ದೇಶಾದ್ಯಂತ ಆಚರಣೆಗೆ ಬರಲಿಲ್ಲ. ಜನತೆಗೆ ಇಂದು ಅದರಲ್ಲಿ ಆಸಕ್ತಿಯಿಲ್ಲವಾಗಿದೆ. ಅದು ಉತ್ತಮ ತತ್ತ್ವಗಳ ಬುನಾದಿಯ ಮೇಲೆ ರಚನೆಯಾಗಿರುವುದೆಂದು ದೇಶವಿದೇಶಗಳ ಪಂಡಿತರನೇಕರು ಒಪ್ಪಿದ್ದರೂ ಅದು ತನ್ನ ಜನ್ಮಭೂಮಿಯಲ್ಲೇ ಪ್ರಚಾರಕ್ಕೆ ಬರಲಾರದಾದುದು ಆಶ್ಚರ್ಯದ ಸಂಗತಿ. ಆ ಪದ್ಧತಿಯ ಮೇಲೆ ಟೀಕೆಗಳೇನೋ ಹೇರಳವಾಗಿ ಬಂದುವು. ಅವುಗಳಲ್ಲಿ ವಾಸ್ತವಿಕವೆನ್ನಬಹುದಾದ ಕೆಲವನ್ನು ಇಲ್ಲಿ ಸೂಚಿಸಿದೆ. 1 ತೀರ ಚಿಕ್ಕ ವಯಸ್ಸಿನಲ್ಲಿ ಅವರ ಸ್ವಾಭಾವಿಕ ಆಸಕ್ತಿಗಳಿಗೆ ವಿರುದ್ಧವಾದ ವೃತ್ತಿಶಿಕ್ಷಣದ ವಾತಾವರಣವನ್ನು ಕಲ್ಪಿಸುತ್ತದಾಗಿ ಈ ಪದ್ಧತಿ ಮಕ್ಕಳಿಗೆ ಶಿಕ್ಷಣವೆಂದರೆ ಜಿಗುಪ್ಸೆ ಹುಟ್ಟಿಸುತ್ತದೆ. 2 ತಲೆಗೆಲ್ಲ ಒಂದೇ ಮಂತ್ರವೆಂದು ನೂಲುವುದನ್ನು ಎಲ್ಲರಿಗೂ ಕಲಿಸಹೋದರೆ ಯಾವ ಪುರುಷಾರ್ಥ ತಾನೆ ಸಾಧನೆಯಾದೀತು ? ಮುಂದಿನ ಜನಾಂಗವೆಲ್ಲ ಅದೇ ಕೈಗಾರಿಕೆಯನ್ನು ಅನುಸರಿಸಿದರೆ ಮುಂದೆ ಗತಿಯೇನು ? 3 ದಿನದ ಅರ್ಧಭಾಗದಲ್ಲಿ ತಮ್ಮ ಸ್ವಾಭಾವಿಕ ಆಸಕ್ತಿಗೆ ವಿರುದ್ಧವಾಗಿ ಇತರರು ಹೇರಿದ ಉದ್ಯೋಗದಲ್ಲಿ ತೊಡಗಿ ಆ ಸ್ವಾಭಾವಿಕ ಆಸಕ್ತಿಗಳ ಪ್ರಕಾಶನಕ್ಕೆ ಅಡಚಣೆಯಾಗಿ ಅವರ ವ್ಯಕ್ತಿತ್ವದಲ್ಲಿ ತೊಡಕುಗಳು ಮೂಡಿಕೊಳ್ಳುವುದಿಲ್ಲವೆ ? 4 ಕಸಬೇ ಪ್ರಧಾನವಾಗಿರುವ ಈ ಪದ್ಧತಿ ಮಗುವನ್ನೇ ಮರೆತಿರುವುದಲ್ಲದೆ ದೈಹಿಕ ಶಿಕ್ಷಣ, ನೈತಿಕ ಶಿಕ್ಷಣಗಳಿಗೆ ಅವಕಾಶ ಕಲ್ಪಸಿಲ್ಲ. 5 ಕಸಬಿಗೆ ಸಂಬಂಧಿಸಿದಂತೆ ವಿಷಯವನ್ನು ಬೋಧಿಸುವ ಯತ್ನದಲ್ಲಿ ಗೊಂದಲಕ್ಕೂ ಕೃತಕತೆಗೂ ಅವಕಾಶವಾಗಿ ಶಾಲೆಗೂ ಜೀವನಕ್ಕೂ ಅಂತರ ಹುಟ್ಟಿಕೊಳ್ಳುತ್ತದೆ. 6 ಪಠ್ಯಪುಸ್ತಕಗಳಿಗೆ ಪುರಸ್ಕಾರವೀಯದ ಈ ಶಿಕ್ಷಣ ಹೇಗೆ ತಾನೆ ಜನಪ್ರಿಯವಾದೀತು - ದೇವರಿಲ್ಲದ ಗುಡಿಯಂತೆ ? 7 ಮೇಲ್ಮಟ್ಟದ ಶಿಕ್ಷಣಕ್ಕೆ ಈ ಪದ್ಧತಿಯ ಅನ್ವಯ ಯೋಗ್ಯವಲ್ಲ. ಈಚೆಗೆ ಈ ದಿಕ್ಕಿನಲ್ಲಿ ಮೂಲಶಿಕ್ಷಣವನ್ನು ಸುಧಾರಿಸುವ ಯತ್ನ ನಡೆದಿದೆ. ಆದರೂ ಮೂಲಶಿಕ್ಷಣಕ್ಕೆ ಸ್ವಾತಂತ್ರ್ಯದ ಆರಂಭದಲ್ಲಿ ಲಭಿಸಿದ್ದ ಜನಪ್ರಿಯತೆ ಈಗ ಇಲ್ಲವಾಗಿದೆ. ಅದನ್ನು ಆ ರೂಪದಲ್ಲಿ ದೇಶಾದ್ಯಂತ ಪ್ರಚಾರಕ್ಕೆ ತರುವ ಯತ್ನವೂ ಹಿಂಬದಿಗೆ ಬಿದ್ದಂತೆ ಕಾಣುತ್ತದೆ. ಹೊಸದಾಗಿ ಪ್ರಚಾರಕ್ಕೆ ಬಂದ ಎಲ್ಲ ಶಿಕ್ಷಣಪದ್ಧತಿಗಳಿಗೂ ಇದೇ ಪಾಡು ಒದಗಿದೆ. ಅವು ಮೊದಲು ಪರಮೋತ್ಕೃಷ್ಟವೆಂದು ಹೊಗಳಿಸಿಕೊಳ್ಳುತ್ತವೆ; ಅನಂತರ ಅವುಗಳ ಕುಂದುಕೊರತೆಗಳನ್ನು ಕಂಡು ಜನತೆ ಅವನ್ನು ಕಟುವಾಗಿ ಟೀಕಿಸುತ್ತದೆ. ಆಮೇಲೆ ಅದರಲ್ಲಿರುವ ಉತ್ತಮಾಂಶಗಳನ್ನು ಮಾತ್ರ ಇಂದಿನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತದೆ. ಮೂಲಶಿಕ್ಷಣದ ಬಗ್ಗೆಯೂ ಈ ಮಾತು ಒಪ್ಪುತ್ತದೆ. ಈಗ ಅದು ತನ್ನ ಆ ಮೂರನೆಯ ಅಂತಸ್ತನ್ನು ಮುಟ್ಟಿದೆ. ಅದರಲ್ಲಿರುವ ಉತ್ತಮಾಂಶಗಳು ನಮ್ಮ ಪ್ರಾಥಮಿಕ ಶಿಕ್ಷಣಕ್ಷೇತ್ರವನ್ನು ಈಗಾಗಲೇ ಪರಿಣಾಮಗೊಳಿಸಿವೆ. ಕಸಬು, ಕಲೆ, ಕೈಕೆಲಸ ಮುಂತಾದ ಕಾಯಕಾನುಭವಗಳನ್ನೊದಗಿಸುವ ಚಟುವಟಿಕೆಗಳು ಅಲ್ಲಿನ ಪಠ್ಯಕ್ರಮದಲ್ಲಿ ಹೊಸದಾಗಿ ಸೇರಿಕೊಂಡಿವೆ. ಜೀವನಕ್ಕೆ ಹೊಂದಿಸಿಕೊಂಡು ವಿಷಯಗಳನ್ನು ಸಮೀಕರಿಸಿಕೊಂಡು ಪಾಠ ಬೋಧಿಸುವ ನೂತನ ಬೋಧನಕ್ರಮ ಬಳಕೆಗೆ ಬರುತ್ತಿದೆ. ತಮ್ಮ ಶಾಲೆಯನ್ನು ತಾವೇ ಚೊಕ್ಕಟವಾಗಿಟ್ಟುಕೊಳ್ಳುವ ಸ್ವಾವಲಂಬನೆಯ ದೃಷ್ಟಿ ಆಚರಣೆಗೆ ಬರುತ್ತಿದೆ. ಕೈಕೆಲಸಗಳ ಮೂಲಕ ಮಕ್ಕಳ ಕ್ರಿಯಾತ್ಮಕ ಶಕ್ತಿಗೆ ಪೋಷಣೆ ದೊರೆಯುವುದರ ಜೊತೆಗೆ ಅವರ ಮನಸ್ಸಿನಲ್ಲಿ ಶ್ರಮಜೀವನದ ಬಗ್ಗೆ ಗೌರವ ಬೆಳೆಯಲು ಅವಕಾಶವಾಗಿದೆ. ಶಾಲೆಯೊಡನೆ ಸುತ್ತಣ ಸಮಾಜದ ಜೀವನವನ್ನು ಹೊಂದಿಸಿಕೊಂಡು ಕೆಲಸಮಾಡುತ್ತ ಶಾಲೆ, ಸಮಾಜದ ಕ್ಷೇಮಚಿಂತನೆಗೂ ಅಭಿವೃದ್ಧಿಸಾಧನೆಗೂ ಕೆಲಸ ಮಾಡಬೇಕಾದ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ. ಇಷ್ಟೆಲ್ಲ ಮೂಲಶಿಕ್ಷಣ ಪ್ರಾಥಮಿಕ ಶಿಕ್ಷಣದ ಮೇಲೆ ಇತ್ತೀಚಿನ ದಿನಗಳಲ್ಲಿ ಬೀರಿರುವ ಪ್ರಭಾವವೆನ್ನಬಹುದು. ಆದರೂ ಅದು ತನ್ನ ಶುದ್ಧರೂಪದಲ್ಲಿ ದೇಶಾದ್ಯಂತ ಆಚರಣೆಗೆ ಬರಲೇಬೇಕೆಂದು ವಾದಿಸತಕ್ಕವರು ಇಂದಿಗೂ ಉಳಿದುಕೊಂಡೇ ಇರುವರು.