ರಾಲ್ಫ್‌ ಲಿಲಿ ಟರ್ನರ್

ಬ್ರಿಟನ್ ಮೂಲದ ಭಾರತೀಯ ಭಾಷಾಶಾಸ್ತ್ರಜ್ಞ

ರಾಲ್ಫ್‌ ಲಿಲಿ ಟರ್ನರ್ ( 1888-1983). ಭಾರತೀಯ ಸಾಹಿತ್ಯ, ಕಲೆ, ಭಾಷೆಗಳಲ್ಲಿ ವಿಶೇಷ ಆಸ್ಥೆ ತಳೆದು ಕೆಲಸ ಮಾಡಿದ ಬ್ರಿಟಿಷ್ ಪಂಡಿತರಲ್ಲೊಬ್ಬರು. ನೇಪಾಳಿ ಭಾಷೆಯನ್ನೂ ಇಂಡೋ-ಆರ್ಯನ್ ಭಾಷೆಗಳನ್ನೂ ಕೂಲಂಕಷ ಅಭ್ಯಾಸ ಮಾಡಿ, ಭಾಷಾಭ್ಯಾಸದಲ್ಲಿ ಚಿರಸ್ಥಾಯಿಯಾದ ನೇಪಾಳಿ, ಆರ್ಯ ಭಾಷೆಗಳ ತುಲಾನಾತ್ಮಕ ನಿಘಂಟುಗಳನ್ನು ಕೊಟ್ಟಿದ್ದಾರೆ.

ಬದುಕು ಮತ್ತು ಸಾಧನೆ

ಬದಲಾಯಿಸಿ

ಟರ್ನರ್ ಹುಟ್ಟಿದ್ದು ಕಾರ್ಲ್‍ಟನ್‍ನಲ್ಲಿ. ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಇಂಗ್ಲಿಷ್ ಹಾಗೂ ಸಂಸ್ಕೃತಗಳಲ್ಲಿ ಪಾಂಡಿತ್ಯ ಗಳಿಸಿ ಇಂಡಿಯನ್ ಆರ್ಮಿ ರಿಜರ್ವ್‍ನ 2/3 ನೆಯ ಗೂರ್ಖ ರೈಫಲ್ಸನಲ್ಲಿ ಸೇವೆ ಸಲ್ಲಿಸಿದರು. ವಾರಾಣಸಿಹಿಂದೂ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಲಂಡನ್ ವಿಶ್ವವಿದ್ಯಾಲಯದಲ್ಲಿ ಸಂಸ್ಸ್ಕೃತದ ಪ್ರಾಧ್ಯಾಪಕರೂ ಆಮೇಲೆ ಗೌರವ ಪ್ರಾಧ್ಯಾಪಕರೂ ಆಗಿ ಕೆಲಸ ಮಾಡಿದರು. ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್‍ನ ನಿರ್ದೇಶಕರಾಗಿದ್ದು ಮುಂದೆ ಅದರ ಗೌರವ ಫೆಲೋ ಆದರು. ಸದ್ಯಕ್ಕೆ ಪುಣೆಯ ಡೆಕ್ಕನ್ ಕಾಲೇಜಿನ ಫೆಲೋ ಆದುದಲ್ಲದೆ ಪ್ರಪಂಚದ ಅನೇಕ ಪಂಡಿತ ಸಂಘ ಸಂಸ್ಥೆಗಳ ಸದಸ್ಯರಾಗಿದ್ದಾರೆ. ತುಲನಾತ್ಮಕ ಭಾಷಾಶಾಸ್ತ್ರದಲ್ಲಿ ಇವರದು ಎತ್ತಿದ ಕೈ. ಹತ್ತೊಂಬತ್ತನೆಯ ಶತಮಾನದ ಕೊನೆಗೆ ಜನಿಸಿ, 20ನೆಯ ಶತಮಾನದ ಆದಿಭಾಗದಲ್ಲಿ ಶಿಕ್ಷಣಪಡೆದು ಭಾಷಾವಿಜ್ಞಾನದಲ್ಲಿ ಹಳೆಯ ಭಾಷಾ ಶಾಸ್ತ್ರಜ್ಞರ ಗುಂಪಿಗೆ ಸೇರಬಹುದಾಗಿದ್ದರೂ ಟರ್ನರ್ ಆಯಾ ಕಾಲದ ಹೊಸ ಭಾಷಾವಿಜ್ಞಾನದ ಪ್ರಜ್ಞೆಗೆ ತಮ್ಮನ್ನು ಅಳವಡಿಸಿಕೊಳ್ಳುತ್ತ ನಡೆದುದರಿಂದ ಇಂದಿನ ತುಲನಾತ್ಮಕ ಭಾಷಾವಿಜ್ಞಾನಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ಇತ್ತೀಚಿನ ಕೃತಿ, ಫೋನೆಟಿಕ್ ಅನ್ಯಾಲಿಸಿಸ್ ಸಂಪುಟ 1971ರಲ್ಲಿ ಅಂದರೆ ಇವರ 83ನೆಯ ವಯಸ್ಸಿನಲ್ಲಿ ಪ್ರಕಟವಾಯಿತು. ಸಾಹಿತ್ಯವಿಮರ್ಶೆಗೆ ರಿಚಡ್ರ್ಸ್, ತತ್ತ್ವಜ್ಞಾನಕ್ಕೆ ರಸೆಲ್‍ರು ಹೇಗೋ ಹಾಗೆ ಭಾಷಾವಿಜ್ಞಾನಕ್ಕೆ-ಅದರಲ್ಲೂ ಇಂಡೋ-ಆರ್ಯನ್ ಭಾಷಾವಿಜ್ಞಾನಕ್ಕೆ-ಟರ್ನರ್ ಹೆಸರಾದವರು. ಇವರ ಸೇವೆಪಾಂಡಿತ್ಯಗಳಿಗೆ ಕಾಣಿಕೆಯಾಗಿ ಭಾರತೀಯ ಭಾಷಾವಿಜ್ಞಾನ ಸಂಘ ಇವರ 71ನೆಯ ಜನ್ಮ ಮಹೋತ್ಸವದ ಅಂಗವಾಗಿ ಗೌರವ ಗ್ರಂಥವನ್ನು (ಟರ್ನರ್ ಜೂಬಿಲಿ ವಾಲ್ಯೂಂ 1) ಪ್ರಕಟಿಸಿತು (1958).

ಕೃತಿಗಳು

ಬದಲಾಯಿಸಿ

ಟರ್ನರರ ಪ್ರಸಿದ್ಧ ಕೃತಿಗಳಿವು : ಗುಜರಾತಿಯನ್ನು ಕುರಿತ ಗುಜರಾತಿ ಫೋನಾಲಜಿ (1921). ದಿ ಪೊಸಿಷನ್ ಆಫ್ ರೋಮಾನಿ ಇನ್ ಇಂಡೊ-ಆರ್ಯನ್ (1927). ಎ ಕಂಪ್ಯಾರಟಿವ್ ಅಂಡ್ ಎಟಿಮಾಲಾಜಿಕಲ್ ಡಿಕ್ಷನರಿ ಆಫ್ ನೇಪಾಲಿ ಲ್ಯಾಂಗ್‍ವೇಜ್ (1931), ದಿ ಗವಿಮಠ್ ಇನ್ಸ್‍ಕ್ರಿಷ್ಷನ್ ಆಫ್ ಅಶೋಕ (1932), ಸಮ್ ಪ್ರಾಬ್ಲಮ್ಸ್ ಆಫ್ ಸೌಂಡ್ ಚೇಂಜ್ ಇನ್ ಇಂಡೊ-ಆರ್ಯನ್ (1960), ಎ ಕಂಪ್ಯಾರಟಿವ್ ಡಿಕ್ಷನರಿ ಆಫ್ ಇಂಡೊ-ಆರ್ಯನ್ ಲ್ಯಾಂಗ್‍ವೇಜಸ್ (1966). ನಿಘಂಟುಗಳಿಗೆ ಸಂಬಂಧಿಸಿದ ಇಂಡೆಕ್ಸಸ್ ವಾಲ್ಯೂಮ್ (1969), ಫೋನೆಟಿಕ್ ಅನ್ಯಾಲಿಸಿಸ್ ವಾಲ್ಯೂಮ್ (1971).