ರಾಜಾದಿತ್ಯ
ಹೊಯ್ಸಳರ ಕಾಲದಲ್ಲಿ ಸಂಸ್ಕೃತ ಹಾಗು ಕನ್ನಡದಲ್ಲಿ ಹೆಚ್ಚಿನ ಸಾಹಿತ್ಯ ರಚನೆಯಾಯಿತು. ಈ ಸಾಹಿತ್ಯ ಕೃತಿಗಳು ಅಂದಿನ ಕಾಲದ ಸಾಮಾಜಿಕ ಸಾಂಸ್ಕೃತಿಕ ವಿಚಾರಗಳ ಬಗೆಗೆ ಬೆಳಕು ಚೆಲ್ಲುವುದಲ್ಲದೇ ಇತಿಹಾಸದ ದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಪಡೆದಿವೆ. ಹೊಯ್ಸಳರ ಕಾಲದ ಪ್ರಮುಖ ಕವಿಗಳಲ್ಲಿ ರಾಜಾದಿತ್ಯನೂ ಒಬ್ಬ. [೧]
ಕಾಲ: ಕ್ರಿ.ಶ 1120
ರಾಜಾದಿತ್ಯನು ಜೈನ ಧರ್ಮಾವಲಂಬಿಯಾಗಿದ್ದ, ಹೊಯ್ಸಳರ ವಿಷ್ಣುವರ್ಧನನ ಸಮಕಾಲೀನನಾಗಿದ್ದ ಎಂದು ತಿಳಿದು ಬರುತ್ತದೆ. ಈತ ಹಳಗನ್ನಡದಲ್ಲಿ ದೈನಂದಿನ ವ್ಯವಹಾರಕ್ಕಾಗಿ ಗಣಿತ ಎಂಬ ಅರ್ಥದಲ್ಲಿ ವ್ಯವಹಾರ ಗಣಿತ ಕೃತಿಯನ್ನು ರಚಿಸಿದ್ದ. ಅಲ್ಲದೇ ಲೀಲಾವತಿ ಗಣಿತ, ಕ್ಷೇತ್ರಗಣಿತ, ವ್ಯವಹಾರತನ, ಚಿತ್ರಹಾಸುಗೆ, ಜೈನ ಗಣಿತ ಸೂತ್ರೋದ್ಧಾರಣ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ಆ ಕಾಲದಲ್ಲಿ ಗಣಿತದ ಬಗೆಗಿನ ಜ್ಞಾನ ಎಷ್ಟಿತ್ತು, ಅಂದಿನ ಜನ ವಿಜ್ಞಾನ ವಿಷಯದಲ್ಲಿ ಎಷ್ಟು ಮುಂದುವರಿದಿದ್ದರು ಎಂಬುದು ಆತನ ಕೃತಿಗಳಿಂದ ತಿಳಿದುಬರುತ್ತದೆ. ಈತ ಬರೆದ ವ್ಯವಹಾರ ಗಣಿತದಲ್ಲಿ ಉಲ್ಲೇಖಿಸಲಾಗಿರುವ ಸೂತ್ರಗಳ ಸಹಾಯದಿಂದ ಸಮುದ್ರದಲ್ಲಿ ಲಂಗರು ಹಾಕಿರುವ ಹಡಗಿನಲ್ಲಿ ಇರುವ ಸರಕನ್ನು ನಿಖರವಾಗಿ ಹೇಳಬಹುದು. [೨]
ಅಲ್ಲದೇ ಈತನ ಕೃತಿಗಳಲ್ಲಿ ಎರಡನೇ ವೀರಬಲ್ಲಾಳ ಹಾಗೂ ಸೇವುಣ ರಾಜ ಐದನೇ ಭಿಲ್ಲಮನ ನಡುವೆ ನಡೆದ ಸೂರಟೂರು ಯುದ್ಧದ ಉಲ್ಲೇಖ ಸಿಗುತ್ತದೆ. ಭಿಲ್ಲಮನು 20,000 ಪದಾತಿ ದಳವನ್ನು, 42000 ಅಶ್ವದಳವನ್ನು ತೆಗೆದುಕೊಂಡು ಇಮ್ಮಡಿ ಬಲ್ಲಾಳನ ಮೇಲೆ ಯುದ್ಧ ಕೈಗೊಂಡ ಎಂಬುದು ರಾಜಾದಿತ್ಯನ ಕೃತಿಯಿಂದ ತಿಳಿದುಬರುತ್ತದೆ.[೩]