ರಾಗಿ ಲಕ್ಷ್ಮಣಯ್ಯ
ಸಿ.ಹೆಚ್. ಲಕ್ಷ್ಮಣಯ್ಯ | |
---|---|
ಜನನ | ಮೇ ೧೫, ೧೯೨೧ ಹಾರೋಹಳ್ಳಿ, ಮೈಸೂರು |
ಮರಣ | ಮೇ ೧೪, ೧೯೯೩ ಮೈಸೂರು |
ರಾಷ್ಟ್ರೀಯತೆ | ಭಾರತ |
Influences | ಗಾಂಧಿವಾದಿ |
ರಾಗಿ ಬ್ರಹ್ಮ ಎಂದು ಪ್ರಖ್ಯಾತರಾದ ಶ್ರೀ ಸಿ.ಹೆಚ್. ಲಕ್ಷ್ಮಣಯ್ಯನವರು , ಕರ್ನಾಟಕ ಕಂಡ ಜನಪ್ರಿಯ ಜನಾನುರಾಗಿ ಕೃಷಿ ವಿಜ್ಞಾನಿ. ಮೂಲತ: ಮೈಸೂರು ಜಿಲ್ಲೆಯ ಹಾರೋಹಳ್ಳಿಯವರಾದ ಅವರು ರಾಗಿ ಬೆಳೆಯ ಹಲವು ತಳಿಗಳನ್ನು ಜಗತ್ತಿಗೆ ಪರಿಚಯಿಸಿ "ರಾಗಿ ಬ್ರಹ್ಮ" ಎಂದು ಪ್ರಖ್ಯಾತಿ ಪಡೆದವರು. ಶ್ರೀಯುತರು ೧೯೯೩ ರಂದು ಮೂತ್ರಕೋಶ ಕ್ಯಾನ್ಸರ್ ನಿಂದ ಬಳಲಿ ಮರಣ ಹೊಂದಿದರು.
ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ ೧೯೨೧, ಮೇ ೧೫ ರಂದು ರಾಗಿ ಲಕ್ಷ್ಮಣಯ್ಯನವರ ಜನನ. ತಂದೆ ಶ್ರೀ ಚಲುವಯ್ಯ ಹಾಗು ತಾಯಿ ಶ್ರೀಮತಿ ಚನ್ನಮ್ಮ. ಲಕ್ಷ್ಮಣಯ್ಯನವರು ಈ ಕುಟುಂಬದ ಹಿರಿಯ ಪುತ್ರ. ಕಡು ಬಡತನದ ಜೊತೆಗೆ ತಂದೆತಾಯಿಯರ ವಾತ್ಸಲ್ಯದ ಸಿರಿತನದಿಂದ ಬೆಳೆದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ಮಾಧ್ಯಮಿಕ ಹಾಗು ಇಂಟರ್ ಮೀಡಿಯೆಟ್ ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣ ಪಡೆದದ್ದು ಹಾಸನದಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರೈಸಿದ ಅವರು ಕೆಲಕಾಲ ರೈಲ್ವೆ ಇಲಾಖೆಯಲ್ಲಿ ಗೂಡ್ಸ್ ಇನ್ಸ್‌ಪೆಕ್ಟರ್ ಹಾಗು ಬೀರೂರಿನ ಬೀಜೋತ್ಪಾದನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ, ಆ ಇಲಾಖೆಗಳಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿ ತಮ್ಮ ಹುಟ್ಟೂರಿಗೆ ಮರಳಿ ಅಭಿವೃದ್ಧಿ ಸಂಘ ಸ್ಥಾಪಿಸಿ ಗ್ರಾಮೋದ್ಧಾರಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದರು. ಆದರೆ ಕೃಷಿ ಇಲಾಖೆ ಅವರ ರಾಜೀನಾಮೆಯನ್ನು ಪುರಸ್ಕರಿಸದೆ ಅವರನ್ನು ಮಂಡ್ಯ ಬಳಿಯ ವಿ.ಸಿ.ಫಾರ್ಮ್ ಗೆ ಕಿರಿಯ ಸಹಾಯಕ ಸಸ್ಯ ವಿಜ್ಞಾನಿ ಹುದ್ದೆಗೆ ವರ್ಗಾಯಿಸಿತ್ತು. ಮರಳಿ ಸರ್ಕಾರಿ ಕೆಲಸಕ್ಕೆ ಹೋಗಬೇಕೋ ಅಥವಾ ಗ್ರಾಮೋದ್ಧಾರ ಸಂಘಕ್ಕೆ ದುಡಿಯಬೇಕೋ ಎಂಬ ಗೊಂದಲ ಅವರನ್ನು ಕಾಡಿದಾಗ, ಅವರ ಹಿತೈಷಿಗಳು ಹಾಗು ನಿಕಟವರ್ತಿಗಳ ಸಲಹೆಯ ಮೇರೆಗೆ ಮತ್ತೆ ಕೃಷಿ ಇಲಾಖೆಗೆ ಸೇರಿದರು. ಇಲ್ಲಿಂದ ಆರಂಭಗೊಂಡ ಅವರ ರಾಗಿಯ ಒಡನಾಟ, ಅವರ ನಿಧನದ ತನಕವೂ ಮುಂದುವರೆಯಿತು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶ ತನ್ನ ಬಳಿಗೆ ಅನಾಯಾಸವಾಗಿ ಬಂದಿದ್ದರೂ, ರಾಗಿ ಬೆಳೆಯಲಾರದ ಆ ದೇಶದಲ್ಲಿ ನಾನು ಮಾಡುವುದೇನಿದೆ ಎಂದು, ತುಂಬಾ ಪ್ರಯಾಸದಿಂದ ಆ ಅವಕಾಶವನ್ನು ತಪ್ಪಿಸಿಕೊಂಡು ರಾಗಿ ಸಂಶೋಧನೆಗೆ ತಮ್ಮನ್ನು ಮುಡುಪಾಗಿಟ್ಟ ರು. ಹೀಗೆ ರಾಗಿ ಅವರ ಬದುಕಿನ ಒಂದು ಭಾಗವಾಗದೇ ಪೂರ್ಣ ಬದುಕೇ ಆಯಿತು.
ನಮ್ಮ ರಾಜ್ಯದ ದಕ್ಷಿಣ ಗ್ರಾಮೀಣ ಭಾಗದ ಅವಿಭಾಜ್ಯ ಅಂಗವಾಗಿದ್ದ "ರಾಮಧಾನ್ಯ" ರಾಗಿಯ ಹಲವು ಹೈಬ್ರಿಡ್ ತಳಿಗಳನ್ನು, ಎಲ್ಲಾ ಕಾಲಮಾನಗಳಿಗೆ (ಮುಂಗಾರು, ಹಿಂಗಾರು, ಚಳಿಗಾಲ) ಹೊಂದುವಂತೆ ಸೃಷ್ಟಿಸಿ, ರಾಜ್ಯದ ಮನೆ ಮಾತಾದರು. ೧೯೫೧ ರಿಂದ ೧೯೬೪ ರವರೆಗೆ ನಮ್ಮ ದೇಶದ ವಿವಿಧ ರಾಗಿ ತಳಿಗಳಿಂದ ಹೈಬ್ರಿಡ್ ತಳಿಗಳನ್ನು ಸೃಷ್ಟಿಸಿದ್ದಲ್ಲದೇ, ೧೯೬೪ ರಿಂದ ೧೯೮೪ ರ ವರೆಗೆ ಭಾರತ ಹಾಗು ಆಫ್ರಿಕಾ ದೇಶದ ರಾಗಿ ತಳಿಗಳಿಂದ "ಇಂಡಾಫ್" ಹೈಬ್ರಿಡ್ ತಳಿಗಳನ್ನು ಸೃಷ್ಟಿಸಿದರು. ಅಲ್ಲದೇ ನಿವೃತ್ತಿಯ ನಂತರವೂ ಅವರ ಮಗನ ಒಡಗೂಡಿ ರಾಗಿ ಕೈಂಕರ್ಯವನ್ನು ಮುಂದುವರೆಸಿದರು.
ಸನ್ಮಾನ, ಪ್ರಶಸ್ತಿ ಹಾಗು ಗೌರವಗಳು
ಬದಲಾಯಿಸಿ- ೧. "ಕಾವೇರಿ" ತಳಿ ಅತ್ಯಧಿಕ ಇಳುವರಿ ನೀಡಿದ ಜ್ಞಾಪಕಾರ್ಥ ಶ್ರೀ ಹರಿ ಖೋಡೆಯವರಿಂದ ಸನ್ಮಾನ ಮತ್ತು ನಗದು ಪುರಸ್ಕಾರ - ೧೯೬೮
- ೨. ರಾಜ್ಯ ಪ್ರಶಸ್ತಿ , ಸಾರ್ವಜನಿಕಾ ಸೇವಾ ಪ್ರಶಸ್ತಿ - ೧೯೬೮
- ೩. ಕರ್ನಾಟಕ ಕೃಷಿಕ ಸಮಾಜದ ನಗದು ಪುರಸ್ಕಾರ, ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಂದ ಪ್ರದಾನ ಮತ್ತು ಸನ್ಮಾನ -೧೯೭೫
- ೪. ಕೃಷಿ ವಿಶ್ವವಿದ್ಯಾನಿಲಯದಿಂದ ನಗದು ಬಹುಮಾನ - ೧೯೭೭
- ೫. ರಾಜ್ಯ ಪ್ರಶಸ್ತಿ - ೧೯೮೨
- ೬. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ - ೧೯೮೯
- ೭. ಹಾಸನ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸನ್ಮಾನ - ೧೯೯೧
- ೮. "ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ" ರಚನೆ - ೧೯೯೪
- ೯. ನಾಗನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಸಭಾ ಭವನಕ್ಕೆ "ಡಾ. ಸಿ.ಹೆಚ್. ಲಕ್ಷ್ಮಣಯ್ಯ ಸಭಾಂಗಣ" ಎಂದು ನಾಮಕರಣ - ೨೦೦೩
- ೧೦. ಮಂಡ್ಯದ ವಿ.ಸಿ. ಫಾರಂ ರಸ್ತೆಗೆ "ರಾಗಿ ಲಕ್ಷ್ಮಣಯ್ಯ ರಸ್ತೆ" ಎಂದು ನಾಮಕರಣ -೨೦೦೪
- ೧೧. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಲಕ್ಷ್ಮಣಯ್ಯ ನವರ ಶಿಲಾಪ್ರತಿಮೆ ಸ್ಥಾಪನೆ ಹಾಗು ಅನಾವರಣ - ೨೦೦೫
- ೧೨. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ - ೨೦೧೦
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ೧. ತ್ರಿವಿಕ್ರಮ ಹೆಜ್ಜೆಗಳು ಪುಸ್ತಕ -ಸಂ: ಶ್ರೀ ಟಿ.ಆರ್.ಅನಂತರಾಮು
- ೨. ರಾಗಿ ಲಕ್ಷ್ಮಣಯ್ಯ ಪುಸ್ತಕ -ಲೇ: ಶ್ರೀ ಶರಣ ಬಸವೇಶ್ವರ ಅಂಗಡಿ
- ೩. ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ ಪುಸ್ತಕ - ಲೇ: ಪ್ರೋ. ಎಂ.ನಾರಾಯಣಸ್ವಾಮಿ, ರಮೇಶ್ ಸಂಕ್ರಾಂತಿ