ಕೆಲವೇ ಕಾಲ ಬದುಕಿ ತೀವ್ರವಾಗಿ ಬರೆದ ಕನ್ನಡದ ಆಧುನಿಕ ಕಾಲದ ಕವಿಗಳಲ್ಲಿ ರಮೇಶ ಹೆಗಡೆ ಒಬ್ಬರು. ತೀವ್ರ ಅನಾರೋಗ್ಯದ ನಡುವೆಯೂ ಜೀವನ ಪ್ರೀತಿಯಿಂದ ಬರೆದ ರಮೇಶರ ಹೆಸರು ಚಿರಸ್ಮರಣೀಯ.

ಉತ್ತರ ಕನ್ನಡದ ಶಿರಸಿಯಲ್ಲಿ ೧೯೮೦ ನೇ ಇಸವಿಯ ರಾಮನವಮಿಯಂದು ಜನನ. ತಂದೆ ಗೋವಿಂದ ಹೆಗಡೆ ಖಾಸಗಿ ಸಂಸ್ಥೆಯಲ್ಲಿ ನಿವೃತ್ತ ಗುಮಾಸ್ತರು, ತಾಯಿ ಶಕುಂತಲಾ ಹೆಗಡೆ, ಗೃಹಿಣಿ. ಓರ್ವ ಅಣ್ಣ ಮತ್ತು ಇಬ್ಬರು ಅಕ್ಕಂದಿರು. ಬಾಲ್ಯದ ಕೆಲಕಾಲದ ನಂತರ ರಮೇಶರನ್ನು ಅನಾರೋಗ್ಯ ಬಾಧಿಸತೊಡಗಿತು. ಸಹೋದರನ ದುಡಿಮೆಯೊಂದೇ ಕುಟುಂಬದ ಆಧಾರವಾಗಿತ್ತು. ಶಿರಸಿಯಲ್ಲಿನ ದೊಡ್ಡ ಸಂಖ್ಯೆಯ ಸಾಹಿತಿ,ಕವಿಗಳ ವಾತಾವರಣ ಆಗಾಗ ರಮೇಶ ಹೆಗಡೆಯವರಿಗೆ ದೊರಕುತ್ತಿತ್ತು. ಒಸ್ಟಿಯೋ ಜಿನೆಸಿಸ್ ಇಂಪರ್ಫೆಕ್ಟಾ ಎಂಬುದೊಂದು ವಿರಳಾತೀತ ಖಾಯಿಲೆ ಹಸುಗೂಸು ರಮೇಶ್ ಹೆಗಡೆಯವರನ್ನು ಆವರಿಸಿತ್ತು. ಅಸಮರ್ಪಕ ಮೂಳೆಯ ಬೆಳವಣಿಗೆಯಿಂದ ಬಾಲ್ಯಕಾಲದಲ್ಲೇ ಮೂಳೆಗಳ ನಡುವೆ ಬಿರುಕು ಕಾಣಿಸಿಕೊಳ್ಳುವುದು, ಮೂಳೆಸವೆತ ಇದರ ಪ್ರಮುಖ ಲಕ್ಷಣ. ಬರುಬರುತ್ತ ಇದು ಹೆಚ್ಚಾಗುತ್ತಾ ಹೋಗುತ್ತದೆ. ಮೊದಲು ಇಬ್ಬರು ಅಕ್ಕಂದಿರ, ಅಣ್ಣ, ಅಪ್ಪ ಅಮ್ಮನ ಸಹಾಯದಿಂದ ಮನೆಯೊಳಗೆ ಓಡಾಟ ನಡೆಸುತ್ತಿದ್ದರು. ಕಾನೂನಿನ ತೊಡಕಿನಿಂದ ಶೈಕ್ಷಣಿಕ ಶಿಕ್ಷಣ ಸಾಧ್ಯವಾಗಲಿಲ್ಲ. ಹಾಸಿಗೆಯ ಮೇಲೆ ಮಲಗಿಯೇ ಹೊರ ಜಗತ್ತು ಕಾಣಲು ಪುಸ್ತಕಗಳು, ಗೆಳೆಯರು ಸಹಾಯಕವಾದವು. ಚುಟುಕು,ಕವಿತೆ,ಗಜಲ್ ಸೇರಿದಂತೆ ಒಟ್ಟು ಒಂಭತ್ತು ಪುಸ್ತಕಗಳನ್ನು ರಮೇಶ್ ಹೆಗಡೆಯವರು ಬರೆದಿದ್ದಾರೆ.

ಪುಸ್ತಕಗಳು

ಬದಲಾಯಿಸಿ

#ಮನದಲ್ಲಿ ಮನೆಯ ಮಾಡಿ- ಕವನಗಳ ಗುಚ್ಛ

#ಕಾವ್ಯ ಚಿಗುರು- ಕವನಗಳು

#ಚಿಣ್ಣ-ಚಿನ್ನಾಟ- ಮಕ್ಕಳ ಪದ್ಯಗಳು

#ನೋವಿನಲ್ಲಿ ನವಿಲುಗರಿ- ಗಜಲ್ ಸಂಕಲನ

#ಕಲರವ- ಮಕ್ಕಳ ಪದ್ಯಗಳು

#ಕಿಟಕಿಯೊಳಗಿನ ಕಣ್ಣು- ಚುಟುಕುಗಳು

#ಖರ್ಚಾಗದ ಪದ್ಯಗಳು

#ಒಲವ ಸೊಲ್ಲನು ದಾಟಿ- ಗಜಲ್ ಸಂಕಲನ

ರಮೇಶ ಹೆಗಡೆಯವರನ್ನು ಬರೆಯಲೇಬೇಕೆಂಬ ಇಚ್ಚೆ ಕಾಡುತ್ತಿತ್ತು. ಪ್ರತಿದಿನ ಗಜಲ್, ಕವಿತೆಗಳನ್ನು ಬರೆದು ಗೆಳೆಯರಿಗೆ ಕಳಿಸುತ್ತಿದ್ದರು. ಪ್ರತಿಕ್ರಿಯೆಗಾಗಿ ಹಂಬಲಿಸುತ್ತಿದ್ದರು. ಜಯಂತ್ ಕಾಯ್ಕಿಣಿ, ಶ್ರೀಧರ ಬಳಗಾರ, ನಾಗೇಶ ಹೆಗಡೆ, ರಾಜು ಹೆಗಡೆ,ಸುಬ್ರಾಯ ಮತ್ತೀಹಳ್ಳಿ ಮುಂತಾದವರ ಸಾಂಗತ್ಯ ರಮೇಶ ಹೆಗಡೆಯವರಿಗೆ ಸಿಗುತ್ತಿತ್ತು. ಅಲ್ಲದೆ ಅವರಿಗೆ ಎಲ್ಲ ವಲಯದಲ್ಲೂ ಗೆಳೆಯರ ಬಳಗ ಇತ್ತು. ಇದರಿಂದ ಅವರಲ್ಲಿ ಲವಲವಿಕೆ ಹೆಚ್ಚಲು ಸಹಕಾರಿಯಾಯಿತು. ರಮೇಶರ ಎಲ್ಲ ಕವಿತೆಗಳೂ ಜೀವನ್ಮುಖಿಯಾಗಿರುತ್ತಿದ್ದವು. ಎದ್ದು ಓಡಾಡಲಾಗದಿದ್ದರೂ ಅವರು ಪುಸ್ತಕ, ಗೆಳೆಯರ ಸಹಾಯದಿಂದ ಜಗತ್ತನ್ನು ಅರ್ಥಮಾಡಿಕೊಳ್ಳುತ್ತಿದ್ದರು.

ಪ್ರಶಸ್ತಿ ಪುರಸ್ಕಾರ

ಬದಲಾಯಿಸಿ

#ಉತ್ತರ ಕನ್ನಡ ಜಿಲ್ಲಾ ಯುವ ರಾಜ್ಯೋತ್ಸವ ಪ್ರಶಸ್ತಿ

#ಬಂಗಾರಮಕ್ಕಿ ದೇವಸ್ಥಾನದಿಂದ ಸನ್ಮಾನ

#ಲಯನ್ಸ್ ಕದ್ರಿಯವರಿಂದ ಕಲಕ ರತ್ನ ಜಿಲ್ಲಾ ಯುವ ಕೃತಿ ಪುರಸ್ಕಾರ

#ಲಯನ್ಸ್ ಸಂಸ್ಥೆ, ಹವ್ಯಕ ಮಹಾಸಭೆ

#ಶರಣ ಸುಹಾಸಿನಿಯರ ಬಳಗದಿಂದ ಸನ್ಮಾನ

೨೦೧೯ ರ ರಾಮನವಮಿಯಂದು ರಮೇಶ ಹೆಗಡೆಯವರು ಇಹಲೋಕ ತ್ಯಜಿಸಿದರು. ಮಹಾಕಾವ್ಯ ರಚಿಸಬೇಕೆಂಬ ಅವರ ಆಸೆ ಹಾಗೆಯೇ ಉಳಿಯಿತು. ತಮ್ಮ ಜೀವನ ಪ್ರೀತಿಯಿಂದಲೇ ಸದಾಕಾಲ ಅವರು ಸಾಹಿತ್ಯದ ಅಂಗಳದಲ್ಲಿ ಹಸಿರಾಗಿದ್ದಾರೆ. “ದೈಹಿಕ ಅಡೆತಡೆ ಸವಾಲು ಮೀರಿ ಅದ್ಭುತ ಸ್ಪಂದನಶೀಲ ವ್ಯಕ್ತಿಯಾಗಿ ಬಾಳಿದ ಅಪರೂಪದ ಮಾದರಿ ರಮೇಶ ಹೆಗಡೆ. ಜಡದ ಮೇಲೆ ಚೇತನದ ಚೇತನದ ಗೆಲುವು ಅವನ ಪ್ರಖರ ಬಾಳು.ಕವಿತೆಗಳನ್ನೇ ಕಿಟಕಿಯಾಗಿಸಿಕೊಂಡು ಯಾವತ್ತೂ ಪಸಿಟಿವ್ ಆಗಿ ಉಳಿದ ರಮೇಶರನ್ನು ಮುಕ್ತಮನಸ್ಸಿನಿಂದ ಕೃತಜ್ಷತೆಯಿಂದ ಬೀಳ್ಕೊಡೋಣ.. ಎಲ್ಲಾ ಇದ್ದೂ ಗೋಳಾಡುವವರಿಗೆ, ಸಿನಿಕರಿಗೆ, ಸೋಮಾರಿಗಳಿಗೆ, ಬರವಣಿಗೆಯನ್ನು ಬರಿ ಟೈಪಿಂಗ್ ಅಂದುಕೊಂಡವರಿಗೆ ಆತ್ಮವ್ಯಾಮೋಹಿಗಳಿಗೆ ಒಂದು ದಿವ್ಯ ಉತ್ತರದಂತೆ ಬೆಳಗಿದ ಬಾಳ್ವೆ ಅವರದು” - ಜಯಂತ್ ಕಾಯ್ಕಿಣಿ ( ರಮೇಶ ಹೆಗಡೆಯವರು ಇಹಲೋಕ ತ್ಯಜಿಸಿದಾಗ ಅವರ ಗೆಳೆಯ ಜಯಂತ್ ಕಾಯ್ಕಿಣಿಯವರ ಪ್ರತಿಕ್ರಿಯೆ)

ಉಲ್ಲೇಖಗಳು

ಬದಲಾಯಿಸಿ

http://www.udayavani.com/suppliments/multifaceted/humanity-is-bigger-than-literature http://www.prajavani.net/stories/stateregion/poet-ramesh-hegde-no-more-628445.html