ಸ್ವಾಮಿ ರಾಮಾನಂದ ತೀರ್ಥ
ಸ್ವಾಮಿ ರಾಮಾನಂದ ತೀರ್ಥರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ ರಂದು ಜನಿಸಿದರು.ಇವರ ತಂದೆ ಭವಾನರಾಯ ಬೇಡಗಿ. ರಾಮಾನಂದ ತೀರ್ಥರ ಹುಟ್ಟು ಹೆಸರು ವೆಂಕಟೇಶ. ತಮ್ಮ ಮೊದಲ ಹಂತದ ವಿದ್ಯಾಭ್ಯಾಸವನ್ನು ಇವರು ದೇವಳ ಗಾಣಗಾಪುರದಲ್ಲಿ ತಮ್ಮ ದೊಡ್ಡ ಅಕ್ಕ ಗಂಗಾಬಾಯಿಯ ಬಳಿಯಲ್ಲಿ ಮಾಡಿದರು. ಬಳಿಕ ಸೊಲ್ಲಾಪುರದ ನಾರ್ಥಕೋಟ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಗಾಂಧೀಜಿ ಹಾಗು ಲೋಕಮಾನ್ಯ ತಿಲಕರ ದರ್ಶನ ಪಡೆದರು.
ತಿಲಕ ವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಕಾರ್ಮಿಕ ಧುರೀಣ ಎನ್.ಎಮ್.ಜೋಶಿ ಅವರ ಕಾರ್ಯದರ್ಶಿಯಾಗಿ ದಿಲ್ಲಿಗೆ ತೆರಳಿದರು. ದಿಲ್ಲಿಯ ಹವಾಮಾನದಿಂದ ಬಳಲಿದ ವೆಂಕಟೇಶ ಅವರು ಹವಾ ಬದಲಾವಣೆಗೆಂದು ಉಸ್ಮಾನಾಬಾದ ಜಿಲ್ಲೆಯ ಹಿಪ್ಪರಗಾಕ್ಕೆ ಬಂದರು.ಅಲ್ಲಿ ಹೈದರಾಬಾದ ನಿಜಾಮನ ರಾಜ್ಯವಿತ್ತು. ಸಾಮಾನ್ಯ ಪ್ರಜೆಗಳ ಮೇಲೆ ನಿಜಾಮ ಆಡಳಿತ ನಡೆಯಿಸುತ್ತಿದ್ದ ಅತ್ಯಾಚಾರದ ವಿರುದ್ಧ ರಾಮಾನಂದರು ಪ್ರಜೆಗಳನ್ನು ಸಂಘಟಿಸಿದರು. ಹೈದರಾಬಾದ ಕಾಂಗ್ರೆಸ್ ಪಕ್ಷ ಕಟ್ಟಿದರು.ಅತ್ಯಾಚಾರದ ವಿರುದ್ಧ ಹೋರಾಟಕ್ಕಿಳಿದರು. ನಿಜಾಮ ಸರಕಾರ ರಾಮಾನಂದರನ್ನು ಬಂಧಿಸಿ ಚಂಚಲಗುಡ್ಡಾ ಸೆರೆಮನೆಗೆ ಕಳಿಯಿಸಿತು.
೧೯೪೮ ಸಪ್ಟಂಬರ ೧೧ ರಿಂದ ಸಪ್ಟಂಬರ ೧೭ ರವರೆಗೆ ಜರುಗಿದ ಹೈದರಾಬಾದ ವಿಮೋಚನಾ ಕಾರ್ಯಾಚರಣೆಯ ನಾಯಕತ್ವವನ್ನು ಇವರು ವಹಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಇವರನ್ನು ಪೂಜ್ಯ ಭಾವನೆಯಿಂದ ನೋಡುವ ಲಕ್ಷಾಂತರ ಜನರಿದ್ದಾರೆ. ಹೈದರಾಬಾದ್ ವಿಮೋಚನೆಯ ನಂತರ ರಾಜಕೀಯ ಸೇರದೆ, ಸ್ವಾಮಿ ರಾಮಾನಂದ ತೀರ್ಥರು ಆನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.
ಸ್ವಾಮಿ ರಾಮಾನಂದ ತೀರ್ಥರು ೧೯೭೨ ಜನೆವರಿ ೨೨ರಂದು ಹೈದರಾಬಾದಿನಲ್ಲಿ ನಿಧನರಾದರು. ಮಹಾರಾಷ್ಟ್ರದಲ್ಲಿ ಇವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.