ಯಾಂಗೊನ್

(ರಂಗೂನ್ ಇಂದ ಪುನರ್ನಿರ್ದೇಶಿತ)

ಯಾಂಗೊನ್- ಮಯನ್ಮಾರ್ ನ ರಾಜಧಾನಿ ಮತ್ತು ಮಹಾನಗರ. ಹಿಂದಿನ ಬರ್ಮಾ ದೇಶವನ್ನು ಮಯನ್ಮಾರ್ ಎಂದೂ ರಾಜಧಾನಿ ರಂಗೂನ್ ನಗರವನ್ನು ಯಾಂಗೊನ್ ಎಂದೂ 1989 ಜೂನ್ 18 ರಿಂದ ಕರೆಯಲಾಗಿದೆ. ನಗರ ದೇಶದ ಅತ್ಯಂತ ದಕ್ಷಿಣದಲ್ಲಿ ಮರಟಬಾನ್ ಕೊಲ್ಲಿಯಿಂದ ಸುಮಾರು 32 ಕಿಮೀ ಉತ್ತರದಲ್ಲಿದ್ದು ಸಮುದ್ರದಿಂದ 40 ಕಿಮೀ ದೂರದಲ್ಲಿ ಯಾಂಗೊನ್ ನದಿಯ ಎಡದಂಡೆಯ ಮೇಲೆ ಉ. ಅ. 160 47 - ಪೂ. ರೇ. 960 13 ನಲ್ಲಿದೆ ಜನಸಂಖ್ಯೆ ಸುಮಾರು 25,13,023 (1996).

ಈ ನಗರದ ಜನರ ಮುಖ್ಯ ಕಸಬು ಹಡಗುಗಳ ನಿರ್ಮಾಣ, ತೈಲ ಶುದ್ಧೀಕರಣ, ಅರಣ್ಯೋತ್ಪನ್ನಗಳ ಹಾಗೂ ಮರಗಳನ್ನವಲಂಬಿಸಿದ ಕೈಗಾರಿಕೆಗಳಾಗಿವೆ. ಅಕ್ಕಿ ಮತ್ತು ತೇಗದ ಮರ ಇಲ್ಲಿಯ ಪ್ರಮುಖ ರಫ್ತುಗಳಾಗಿವೆ. ನಗರದ ದಕ್ಷಿಣ ಮತ್ತು ಪೂರ್ವಭಾಗಗಳಲ್ಲಿ ಹತ್ತಿ ಬಟ್ಟೆ ಮತ್ತು ರೇಷ್ಮೇ ಉದ್ಯಮಗಳು ಕೇಂದ್ರಿಕೃತವಾಗಿದೆ. ಈಗ ನಗರ ಆಧುನಿಕವಾಗಿ ಬೆಳೆದು ಉತ್ತಮ ರಸ್ತೆ, ರೈಲು ವಿಮಾನ ಮುಂತಾದವುಗಳ ಸಕಲ ಸೌಕರ್ಯಗಳನ್ನು ಪಡೆದಿದೆ. ಇಡೀ ದೇಶ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕøತಿಕ ಕೇಂದ್ರವಾಗಿದೆ. ಬೌದ್ಧಧರ್ಮ ಪ್ರಮುಖವೆನಿಸಿದರೂ ನಗರದಲ್ಲಿ ನಾನಾ ಧರ್ಮಗಳ ಜನರಿದ್ದಾರೆ. ಇಲ್ಲಿನ ವಿಶ್ವವಿದ್ಯಾಲಯ 1920ರಲ್ಲಿ ಸ್ಥಾಪನೆಯಾಗಿ ಮುಂದೆ ನಾನಾ ಕ್ಷೇತ್ರಗಳಲ್ಲಿ ವಿಸ್ತರಿಸುತ್ತಾ ಬೆಳೆಯಿತು. ಹಾಗೆ ಬೆಳೆದ ವಿವಿಧ ಬಗೆಯ ವಿಜ್ಞಾನ, ತಾಂತ್ರಿಕ ವಿಷಯಗಳ ಸ್ವತಂತ್ರವಾದ ಅನೇಕ ವಿಶ್ವವಿದ್ಯಾಲಯಗಳಿವೆ. ಈ ನಗರ ಬೌದ್ಧ ದೇವಾಲಯಗಳಿಗೆ ಪ್ರಸಿದ್ಧ. ಸುಮಾರು 2500 ವರ್ಷಗಳಿಗೂ ಹಳೆಯದಾದ ಚಿನ್ನದ ಸ್ತೂಪವಿರುವ ಶ್ವೆಡಾಗನ್ ಪಗೋಡ 112 ಮೀ ಎತ್ತರವಿದೆ. ಕಗಆಯೆ ಎಂಬ ಮತ್ತೊಂದು ಪ್ರಸಿದ್ಧ ಪಗೋಡವೂ ಇದೆ. ನಗರದಲ್ಲಿ ಬ್ಯಾಂಕುಗಳೂ ವಾಣಿಜ್ಯ ಮಳಿಗೆಗಳೂ ಇದ್ದು ವ್ಯಾಪಾರಾಭಿವೃದ್ಧಿಗೆ ಅನುಕೂಲವಾಗಿದೆ. ಯಂಗನ್ ಇಂದು ಒಂದು ದೊಡ್ಡ ಹಡಗು ವ್ಯಾಪಾರ ಕೇಂದ್ರವೂ ಆಗಿದೆ. ಬರ್ಮ ಎಂದು ಕರೆಯುತ್ತಿದ್ದ ಈಗಿನ ಮ್ಯಾನ್‍ಮಾರ್ ದೇಶ 1896 ರಿಂದ 1948 ರವರೆಗೂ ಬ್ರಿಟಿಷರ ಆಳ್ವಿಕೆಗೆ ಸೇರಿತ್ತು. ಸಾಮಾನ್ಯ ಗ್ರಾಮದಂತಿದ್ದ ಈ ನಗರಕ್ಕೆ ಆಗಿನ ಅರಸ ಅಲಂಗಪಾಯ 1750ರಲ್ಲಿ ರಂಗೂನ್ ಎಂದು ಹೆಸರಿಟ್ಟ. 1851ರಲ್ಲಿ ಅಗ್ನಿ ಅನಾಹುತದಿಂದಾಗಿ ನಗರ ಬಹಳಷ್ಟು ನಷ್ಟವಾಗಿ ಮುಂದೆ 1948ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಅಭಿವೃದ್ಧಿಯಾಯಿತು.

ಇರವಾಡಿ ನದಿ ಅರ್ಕಾನ್‍ಯೋಮ ಮತ್ತು ಷಾನ್ ಪ್ರಸ್ಥಭೂಮಿಗಳ ನಡುವೆ ಇರುವ ಪೆಗು ಖಾರಿಗೆ ಮೆಕ್ಕಲು ರಾಶಿಯನ್ನು ತಂದು ತುಂಬುವುದು. ಹೀಗೆ ನಿಕ್ಷೇಪಗೊಂಡ ಸಿಹಿನೀರಿನ ಮೆಕ್ಕಲು ಸಹಸ್ರಾರು ವರ್ಷಗಳ ಅನಂತರ ಮರಳು ಶಿಲೆ ಜೇಡು ಶಿಲೆಯುಕ್ತವಾದ ಜಲಜಶಿಲೆಗಳಾಗಿ ಮಾರ್ಪಡುತ್ತದೆ. ಈ ಶಿಲೆಗಳಲ್ಲಿರುವ ಜೀವ್ಯವಶೇಷ ಹಾಗೂ ಕಲ್ಲಿದ್ದಲು ನಿಕ್ಷೇಪವನ್ನು ಒಳಗೊಂಡಿರುವ ಶಿಲಾ ಸಮುದಾಯಕ್ಕೆ ಪೆಗುಶಿಲಾಸಮುದಾಯ ಎಂದು ಹೆಸರು. ಇಲ್ಲಿಯ ಶಿಲಾಸ್ತರಗಳ ದಪ್ಪ ಸುಮಾರು 7000 ಮೀ. ಇದರ ವಯೋಮಿತಿಯನ್ನು ಆಲಿಗೋಸೀನ್‍ನಿಂದ ಮಯೊಸೀನ್ ಕಾಲದ ತನಕದ ಅವಧಿ ಎಂದು ನಿರ್ಧರಿಸಿದ್ದಾರೆ. ಈ ಶಿಲಾಸಮುದಾಯ ಯಾಂಗೊನ್ ನ ಆಗ್ನೇಯದಲ್ಲಿ ವಿಸ್ತರಿಸಿಕೊಂಡಿದೆ. ಮ್ಯನ್‍ಮಾರ್‍ನ ಬಹುತೇಕ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಮ್ ನಿಕ್ಷೇಪಗಳೂ ಖನಿಜಗಳೂ ಪೆಗು ಮರಳು ಶಿಲೆಯಲ್ಲಿ ದೊರೆಯುತ್ತವೆ. ಪೆಗುಶಿಲಾ ಸಮುದಾಯದ ಇತರ ಸಹ ಸಂಬಂಧಿಗಳೆಂದರೆ ಅಸ್ಸಾಮ್ ಶಿಲಾಸ್ತೋಮ, ಸಿವಾಲಿಕ್ ಶಿಲಾಸಮುದಾಯ ಮತ್ತು ಸಿಂಧ್‍ನ ಮಂಚಾರ್ ಶ್ರೇಣಿಗಳು. ಪೆಗುಶಿಲೆಗಳಿಗಿಂತಲೂ ಹಲೆಯದಾದ ಶಿಲೆಗಳಿಂದ ಸೀಸ ಮತ್ತು ಸತುವು ಲೋಹದ ಅದಿರುಗಳ ಗಣಿಗಾರಿಕೆ ನಡೆಯುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಯಾಂಗೊನ್&oldid=816456" ಇಂದ ಪಡೆಯಲ್ಪಟ್ಟಿದೆ