ಯೋಹಾನ್ ಯೋಸೆಫ್ ಫಾನ್ ಗರೆಸ್
1776-1849. ಸುಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಜರ್ಮನ್ ಲೇಖಕ.
ಈತನ ಬದುಕು
ಬದಲಾಯಿಸಿಕೊಬ್ಲೆಂಜ್ ಎಂಬ ಊರಿನಲ್ಲಿ ಜನಿಸಿದ. ತನ್ನ ಉದಾತ್ತ ಸ್ವಭಾವ, ಸೌಜನ್ಯಗಳಿಂದಲೂ ಚೈತನ್ಯಶಾಲಿ ವ್ಯಕ್ತಿತ್ವದಿಂದಲೂ ಈತ ಆ ಯುಗದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯೆನಿಸಿದ. ಮೊದಲಿನಿಂದಲೂ ಸ್ವಾತಂತ್ರ್ಯಪ್ರಿಯನಾದ ಈತ ಇನ್ನೂ ಶಾಲಾವಿದ್ಯಾರ್ಥಿಯಾಗಿರುವಾಗ ಆರಂಭವಾಗಿದ್ದ ಫ್ರಾನ್ಸಿನ ಮಹಾಕ್ರಾಂತಿಯ ಬಗ್ಗೆ ತುಂಬ ಭರವಸೆಯಿಟ್ಟುಕೊಂಡು ಆಶಾಗೋಪುರಗಳನ್ನು ಕಟ್ಟತೊಡಗಿದ. ಮುಂದೆ ರೆಯ್ನಿ ಪ್ರಾಂತಗಳ ಪರವಾಗಿ ರಾಜಕೀಯ ಸಂಧಾನ ನಡೆಸಲು ಪ್ಯಾರಿಸ್ಸಿಗೆ ಹೋಗಿಬಂದಮೇಲೆ ಮಹಾಕ್ರಾಂತಿಯ ಬಗ್ಗೆ ಈತನಿಗೆ ಇದ್ದ ಭ್ರಮೆಯೆಲ್ಲ ಹಾರಿ ಹೋಯಿತು. ನಿರಾಸೆ ಕವಿಯಿತು. 1797ರಲ್ಲಿ ಡಾಸ್ ರೋಟೆ ಬ್ಲಟ್ ಎಂಬ ರಾಷ್ಟ್ರೀಯ ಪತ್ರಿಕೆಯನ್ನು ಆರಂಭಿಸಿ ಅದರ ಪ್ರಥಮ ಸಂಪಾದಕನಾದ. ಅನಂತರ ಗರೆಸ್ ರಾಜಕೀಯ ಜೀವನವನ್ನು ತ್ಯಜಿಸಿ ಕೊಬ್ಲೆಂಜ್ನಲ್ಲಿ ಅಧ್ಯಾಪಕನಾದ. 1806 ರಿಂದ 1808ರ ವರೆಗೆ ಹೈಡೆಲ್ಬರ್ಗ್ನಲ್ಲಿ ಜರ್ಮನಿಯ ರಮ್ಯ ಸಾಹಿತ್ಯವಾದಿಗಳಾಗಿದ್ದ ಆಷಿಂ ಫಾನ್ ಅರ್ನಿಮ್ ಮತ್ತು ಕ್ಲೆಮೆನ್ಸ್ ಬೆಂಟ್ಯಾನೊ ಎಂಬವರ ಜೊತೆಗೂಡಿ ಟ್ಲೈಟುಂಗ್ ಫ್ಯೂರೆ ಐನ್ಸೀಡ್ಲೆರ್ ಎಂಬ ಪತ್ರಿಕೆಯ ಸಂಪಾದಕನಾಗಿ ಜರ್ಮನಿಯ ಭವ್ಯ ಪರಂಪರೆಯನ್ನು ಪ್ರಸಾರಮಾಡುತ್ತ ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿದ. 1807ರಲ್ಲಿ ತನ್ನ ಫೊಲ್ಕ್ಸ್ ಬ್ಯೂಷೆರ್ ಎಂಬ ಗ್ರಂಥದ ಮೊದಲ ಭಾಗವನ್ನು ಪ್ರಕಟಿಸಿದ. 1810ರಲ್ಲಿ ಮೈಥೆನ್ ಗೆಷಿಷ್ಟೆ ಡೆರ್ ಅಸಿಯಾಟಿಷೆನ್ ವೆಲ್ಟ್ ಎಂಬ ಏಷ್ಯದ ಪುರಾಣಗಳನ್ನು ಕುರಿತ, ಗ್ರಂಥವನ್ನು ಬರೆದು ಪ್ರಕಟಿಸಿದ. ಏಷ್ಯದ ಧರ್ಮ, ಸಂಸ್ಕೃತಿಗಳ ಬಗೆಗೆ ಜರ್ಮನಿಯ ಯುವಕರಿಗಿದ್ದ ಆಸ್ಥೆಯನ್ನಿದು ತೋರಿಸುತ್ತದೆ.
1814ರಲ್ಲಿ ಫ್ರಾನ್ಸಿನಲ್ಲಿ ನೆಪೋಲಿಯನ್ನನ ನಿರಂಕುಶಾಧಿಕಾರ ಉಚ್ಛ್ರಾಯ ಸ್ಥಿತಿಗೇರಿದಾಗ ರೈನಿಷೆರ್ ಮೆರ್ಕೂರ್ ಎಂಬ ತೀವ್ರಸ್ವಾತಂತ್ರ್ಯವಾದಿ ಪತ್ರಿಕೆಯನ್ನು ಆರಂಭಿಸಿದ. ಅದರಲ್ಲಿ ಪ್ರಕಟವಾಗುತ್ತಿದ್ದ ನಿರಂಕುಶ ಪ್ರಭುತ್ವ ವಿರುದ್ಧವಾದ ಅಗ್ರಲೇಖನಗಳ ಉಗ್ರತೆ ನೆರೆರಾಜ್ಯಗಳಿಗೂ ತಟ್ಟಿತು. ಚಕ್ರವರ್ತಿ ನೆಪೋಲಿಯನ್ ವ್ಯಗ್ರನಾಗಿ ಈ ಪತ್ರಿಕೆಯನ್ನು ಪಂಚಮಶಕ್ತಿ ಎಂದು ಕರೆದ. ಗರೆಸ್ನ ಜನತಾ ಸ್ವಾತಂತ್ರ್ಯ ಪರವಾದ ನಿಷ್ಠುರ ಲೇಖನಗಳು ನೆಪೋಲಿಯನ್ನನ ಪತನಾನಂತರ ಜರ್ಮನಿಯಲ್ಲಿ ಅಸ್ತಿತ್ವಕ್ಕೆ ಬಂದ ಪ್ರಷ್ಯನ್ ಸರ್ಕಾರದ ದಬ್ಬಾಳಿಕೆಯನ್ನೂ ಖಂಡಿಸತೊಡಗಿದ್ದಕ್ಕಾಗಿ ಸರ್ಕಾರ 1816ರಲ್ಲಿ ಕ್ರಮ ಕೈಗೊಂಡು ಪತ್ರಿಕೆಯನ್ನು ನಿಲ್ಲಿಸಿಬಿಟ್ಟಿತು. ಗರೆಸ್ ತಾನು ಬರೆದ ಟುಟ್ಷ್‌ಲ್ಯಾಂಡ್ ಉಂಟ್ ಡಿ ರೆವೊಲ್ಯೂಷನ್ (ಜರ್ಮನಿ ಮತ್ತು ಕ್ರಾಂತಿ) ಎಂಬ ಪ್ರಚಾರ ಲೇಖದ ಪರಿಣಾಮವಾಗಿ ದೇಶ ಬಿಟ್ಟು ಓಡಿಹೋಗಬೇಕಾಯಿತಲ್ಲದೆ ಸ್ವಿಟ್ಜರ್ಲೆಂಡಿನಲ್ಲಿ ಹಲವಾರು ವರ್ಷ ಕಡು ಬಡತನದ ಬವಣೆಯಲ್ಲಿ ಬೇಯಬೇಕಾಗಿ ಬಂತು. 1824ರಲ್ಲಿ ಗರೆಸ್ ತಾನು ಹಿಂದೊಮ್ಮೆ ಕಡೆಗಣಿಸಿದ್ದ ರೋಮನ್ ಕ್ಯಾಥೊಲಿಕ್ ಚರ್ಚಿಗೆ ಸೇರಿಕೊಂಡ. 1827ರಲ್ಲಿ ಬವೇರಿಯದ ಮೊದಲು ಲೂದ್ವಿಷ್ ದೊರೆಯ ಆಹ್ವಾನವನ್ನು ಒಪ್ಪಿ ಇತಿಹಾಸದ ಪ್ರಧ್ಯಾಪಕನಾಗಿ ಮ್ಯೂನಿಕ್ ವಿಶ್ವವಿದ್ಯಾಲಯಕ್ಕೆ ಬಂದ. ಧಾರ್ಮಿಕವಾದ ವಿವಾದಗಳೆದ್ದಾಗಲೆಲ್ಲ ರೋಮನ್ ಕೆಥೋಲಿಕ್ ಪಂಥದ ವೀರಬೆಂಬಲಿಗನಾಗಿ ತನ್ನ ವಾಗ್ಝರಿಯನ್ನು ಹರಿಸಿದ.
1836ರಿಂದ 1842ರ ಅವಧಿಯಲ್ಲಿಯೇ ಈತನ ಮಹಾಕೃತಿಯೆನಿಸಿರುವ ಕ್ರೈಸ್ಟ್‌ಲಿಷ್ ಮಿಸ್ಟಿಕ್ ಎಂಬ ಗ್ರಂಥದ ರಚನೆಯಾಯಿತು. 1848ರಲ್ಲಿ ಈತ ಮ್ಯೂನಿಕ್ ನಗರದಲ್ಲಿ ವಿಧಿವಶನಾದ.
ಈತನ ಕೊಡುಗೆ
ಬದಲಾಯಿಸಿಪ್ರಜಾಸ್ವಾತಂತ್ರ್ಯಕ್ಕಾಗಿ ಈತ ತೋರಿದ ನಿರಂತರ ಉತ್ಸಾಹ, ನಡೆಸಿದ ಪ್ರಾಮಾಣಿಕ ವಾದ ಹೋರಾಟ ಚಿರಸ್ಮರಣೀಯವಾದುವು. ಸತ್ತ್ವಶಾಲಿಯಾದ ಶೈಲಿ, ಅಮೋಘವಾದ ಭಾಷಾವೈಖರಿಗಳಿಂದ ಕೂಡಿದ ಲೇಖನಗಳಿಂದ ತುಂಬ ಪ್ರಭಾವವನ್ನು ಬೀರಿದ ಮಹಾವ್ಯಕ್ತಿಯೆಂದು ಈತ ವಿಖ್ಯಾತನಾದ. 1876ರಲ್ಲಿ ರೋಮನ್ ಕೆಥೋಲಿಕ್ ಧರ್ಮವನ್ನು ಕುರಿತ ವಿಶೇಷ ಅಧ್ಯಯನಕ್ಕೂ ಸಂಶೋಧನೆಗೂ ಮೀಸಲಾದ ಗರೆಸ್-ಗಸ್ಸೆಲ್ಸ್ ಸಂಸ್ಥೆಯೊಂದು ಸ್ಥಾಪಿತವಾಯಿತು. ಗರೆಸ್ನ ಮರಣಾನಂತರವೂ ಆತನ ಹೆಸರಿನ ಪ್ರಭಾವ ಎಷ್ಟಿತ್ತು ಎಂಬುದಕ್ಕೆ ಇದೊಂದು ನಿದರ್ಶನ. ಈ ಅಧ್ಯಯನ ಸಂಸ್ಥೆ ಈಗ ದೊಡ್ಡದಾಗಿ ಬೆಳೆದು ರೋಮ್, ಮ್ಯಾಡ್ರಿಡ್, ಜೆರೂಸಲೆಮ್ ನಗರಗಳಲ್ಲಿ ಶಾಖೆಗಳನ್ನು ತೆರೆದಿದೆ. ಇದರ ಆಶ್ರಯದಲ್ಲಿ ಹಲವಾರು ನಿಯತಕಾಲಿಕ ಧಾರ್ಮಿಕ ಪತ್ರಿಕೆಗಳು ಹೊರಡುತ್ತಿವೆ. ಈತನ ರಾಜಕೀಯ ಲೇಖನಗಳನ್ನೆಲ್ಲ ಸಂಗ್ರಹಿಸಿ ಗೆಸಾಮ್ಮೆಲ್ಟೆಪ್ರಿಫ್ಟೆನ್ ಎಂಬ ಹೆಸರಿಟ್ಟು 6 ಸಂಪುಟಗಳಲ್ಲಿ ಪ್ರಕಟಿಸಿದೆ. (1854-60). ಪ್ರಮುಖ ಪತ್ರಗಳನ್ನೆಲ್ಲ ಸಂಗ್ರಹಿಸಿ 3 ಸಂಪುಟಗಳಲ್ಲಿ (1858-74) ಮತ್ತು 1960ರಲ್ಲಿ ಈತನ ಎಲ್ಲ ಬರೆಹಗಳನ್ನೂ ಒಟ್ಟುಗೂಡಿಸಿ 16 ಸಂಪುಟಗಳಲ್ಲಿ ಪ್ರಕಟಿಸಿದೆ.